ಜಿಡಿಪಿ ವೃದ್ಧಿ ದರ ಶೇ 6.5

7

ಜಿಡಿಪಿ ವೃದ್ಧಿ ದರ ಶೇ 6.5

Published:
Updated:
ಜಿಡಿಪಿ ವೃದ್ಧಿ ದರ ಶೇ 6.5

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ (2017–18) ಆರ್ಥಿಕ ಬೆಳವಣಿಗೆ ದರವು (ಜಿಡಿಪಿ) ಶೇ 6.5ರಷ್ಟಾಗಲಿದ್ದು, ನರೇಂದ್ರ ಮೋದಿ ಸರ್ಕಾರದ ಅಧಿಕಾರಾವಧಿಯಲ್ಲಿನ ಇದುವರೆಗಿನ ಅತ್ಯಂತ ಕನಿಷ್ಠ ಮಟ್ಟ ಇದಾಗಿದೆ.

ರಾಷ್ಟ್ರೀಯ ವರಮಾನಕ್ಕೆ ಸಂಬಂಧಿಸಿದ ಈ ವರ್ಷದ ಮೊದಲ ಅಂದಾಜು ಇದಾಗಿದೆ. ಹಿಂದಿನ ವರ್ಷದ (2016–17) ಶೇ 7.1ರಷ್ಟಕ್ಕೆ ಹೋಲಿಸಿದರೆ ಈ ಬಾರಿ ಆರ್ಥಿಕ ವೃದ್ಧಿ ದರವು ಶೇ 6.5ರಷ್ಟು ಇರುವ ಅಂದಾಜು ಮಾಡಲಾಗಿದೆ ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿ (ಸಿಎಸ್‌ಒ) ಪ್ರಕಟಿಸಿದೆ.

ಹಿಂದಿನ ಎರಡು ವರ್ಷಗಳಲ್ಲಿ ‘ಜಿಡಿಪಿ’ಯು ಕ್ರಮವಾಗಿ ಶೇ 7.1 ಮತ್ತು ಶೇ 8ರಷ್ಟು ಮತ್ತು 2014–15ರಲ್ಲಿ ಶೇ 7.5ರಷ್ಟು ದಾಖಲಾಗಿತ್ತು. ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು 2014ರ ಮೇ ತಿಂಗಳಿನಲ್ಲಿ ಅಧಿಕಾರವಹಿಸಿಕೊಂಡಿತ್ತು.

ವೃದ್ಧಿ ದರ ಕುಂಠಿತಗೊಳ್ಳಲು ಜಿಎಸ್‌ಟಿ ಕಾರಣ ಎನ್ನುವುದನ್ನು ಮುಖ್ಯ ಸಾಂಖ್ಯಿಕ ಅಧಿಕಾರಿ ಟಿ.ಸಿ.ಎ ಅನಂತ್‌ ಅವರು ಒಪ್ಪಿಕೊಂಡಿದ್ದಾರೆ. ರಕ್ಷಣೆ, ವ್ಯಾಪಾರ, ಸಾರಿಗೆ, ಸಂವಹನ, ವಿದ್ಯುತ್‌, ಹಣಕಾಸು, ರಿಯಲ್‌ ಎಸ್ಟೇಟ್‌ ಮತ್ತಿತರ ಸೇವಾ ವಲಯಗಳು ಶೇ 7ಕ್ಕಿಂತ ಹೆಚ್ಚು ಬೆಳವಣಿಗೆ ಕಂಡಿವೆ ಎಂದು ಹೇಳಿದ್ದಾರೆ.

ನೈಜ ಒಟ್ಟು ಮೌಲ್ಯವರ್ಧನೆಯು (ಜಿವಿಎ), ಹಿಂದಿನ ವರ್ಷದ ಶೇ 6.6ಕ್ಕೆ ಹೋಲಿಸಿದರೆ ಈ ಬಾರಿ ಶೇ 6.1ರಷ್ಟು ಇರಲಿದೆ. 2016ರ ನವೆಂಬರ್‌ 8ರಂದು ಪ್ರಕಟಿಸಿದ ಗರಿಷ್ಠ ಮುಖ ಬೆಲೆಯ ನೋಟುಗಳ ರದ್ದತಿ ಮತ್ತು 2017ರ ಜುಲೈನಲ್ಲಿ ಜಾರಿಗೆ ತಂದ ಹೊಸ ಪರೋಕ್ಷ ವ್ಯವಸ್ಥೆ ‘ಜಿಎಸ್‌ಟಿ’ ಕಾರಣಕ್ಕೆ ಆರ್ಥಿಕ ಚಟುವಟಿಕೆಗಳು ಕುಂಠಿತಗೊಂಡಿವೆ.

ತಯಾರಿಕಾ ಮತ್ತು ಕೃಷಿ ವಲಯಗಳಲ್ಲಿನ ಕಳಪೆ ಸಾಧನೆಯು ವೃದ್ಧಿ ದರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ತಯಾರಿಕಾ ರಂಗವು 2016–17ರಲ್ಲಿ ಶೇ 7.9ರಷ್ಟು ಬೆಳವಣಿಗೆ ಕಂಡಿದ್ದರೆ, ಈ ವರ್ಷ ಅದರ ಪ್ರಗತಿ ಶೇ 4.6ಕ್ಕೆ ಕುಸಿದಿದೆ. ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ವಲಯಗಳಲ್ಲಿನ ಚಟುವಟಿಕೆಗಳು ಹಿಂದಿನ ವರ್ಷಕ್ಕಿಂತ (ಶೇ 4.9) ಕಡಿಮೆ (ಶೇ 2.1) ಪ್ರಮಾಣದಲ್ಲಿ ದಾಖಲಾಗಿವೆ.

ತಲಾ ವರಮಾನ ವೃದ್ಧಿ ಶೇ 8.3: ಜನರ ಜೀವನಮಟ್ಟದ ಮಾನದಂಡವಾಗಿರುವ ದೇಶಿ ತಲಾ ವರಮಾನವು (₹ 1,11,782) ಕೂಡ 2017–18ರಲ್ಲಿ ನಿಧಾನ ಪ್ರಗತಿ (ಶೇ 8.3) ದಾಖಲಿಸಿದೆ. 2016–17ರಲ್ಲಿ ಇದು (₹ 1,03,219) ಶೇ 9.7ರಷ್ಟು ಬೆಳವಣಿಗೆ ಕಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry