ನೋಟಿಸ್‌ ತಲುಪಿಸದ ಪೊಲೀಸರು: ‘ಸುಪ್ರೀಂ’ ಅಚ್ಚರಿ

7

ನೋಟಿಸ್‌ ತಲುಪಿಸದ ಪೊಲೀಸರು: ‘ಸುಪ್ರೀಂ’ ಅಚ್ಚರಿ

Published:
Updated:

ನವದೆಹಲಿ: ಮಾಜಿ ಸಚಿವ ವಿ.ಸೋಮಣ್ಣ ಅವರ ಪತ್ನಿ ಶೈಲಜಾ ಅವರ ಶಿಕ್ಷಣ ಸಂಸ್ಥೆಗಾಗಿ ಜಮೀನು ಡಿನೋಟಿಫಿಕೇಶನ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನಿನ ಮೂಲ ಮಾಲೀಕರಿಗೆ ಜಾರಿ ಮಾಡಿದ್ದ ನೋಟಿಸ್‌ ತಲುಪಿಸುವಲ್ಲಿ ವಿಫಲರಾಗಿರುವ ರಾಜ್ಯ ಪೊಲೀಸರ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ಅಚ್ಚರಿ ವ್ಯಕ್ತಪಡಿಸಿತು.

2009ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ನಾಗದೇವನಹಳ್ಳಿ ಬಳಿಯ 20 ಗುಂಟೆ ಜಮೀನಿನ ಡಿನೋಟಿಫೈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ಪೀಠ, ‘ಕಳೆದ ಸೆಪ್ಟೆಂಬರ್‌ 4ರಂದು ನ್ಯಾಯಾಲಯ ಜಾರಿ ಮಾಡಿರುವ ನೋಟಿಸ್‌ ಭೂಮಾಲೀಕ ಲಿಂಗರಾಜು ಅವರಿಗೆ ತಲುಪಿಸುವಲ್ಲಿ ಪೊಲೀಸರೇ ವಿಫಲವಾದರೆ ಮತ್ತೆ ಯಾರು ತಲುಪಿಸುತ್ತಾರೆ’ ಎಂದು ಪ್ರಶ್ನಿಸಿತು.

‘ಮತ್ತೆ ನೋಟಿಸ್‌ ಜಾರಿ ಮಾಡಿ ಅಧೀನ ನ್ಯಾಯಾಲಯದ ಮೂಲಕ ತಲುಪಿಸಬಹುದು’ ಎಂದು ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ದೇವದತ್ತ ಕಾಮತ್‌ ಮನವಿ ಮಾಡಿದರು.

ಈ ಮನವಿಯನ್ನು ತಳ್ಳಿ ಹಾಕಿದ ಪೀಠ, ಈ ಹಿಂದೆ ಹೊರಡಿಸಲಾದ ಸಮನ್ಸ್‌ಗಳನ್ನು ಹೈಕೋರ್ಟ್‌ ರದ್ದುಪಡಿಸಿರುವುದರಿಂದ ಪ್ರಕರಣ ಬಾಕಿ ಇಲ್ಲ ಎಂದು ಹೇಳಿತಲ್ಲದೆ, ಹೊಸದಾಗಿ ನೋಟಿಸ್‌ ಜಾರಿ ಮಾಡಿ ಪೊಲೀಸರ ಮೂಲಕ ತಲುಪಿಸುವಂತೆ ಸೂಚಿಸಿತು.

ಲೋಕಾಯುಕ್ತಕ್ಕೆ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾ ರೆಡ್ಡಿ, ಮಾಜಿ ಸಚಿವ ವಿ.ಸೋಮಣ್ಣ ಅವರು ಅಧಿಕಾರ ದುರ್ಬಳಕೆ ಮಾಡಿ

ಕೊಂಡು ನಾಗದೇವನಹಳ್ಳಿ ಬಳಿ ತಮ್ಮ ಪತ್ನಿ ಶೈಲಜಾ ಅವರ ಶಿಕ್ಷಣ ಸಂಸ್ಥೆಗೆ 22 ಗುಂಟೆ ಜಮೀನನ್ನು ಡಿನೋಟಿಫೈ ಮಾಡಿಸಿದ್ದಾರೆ ಎಂದು ಆರೋಪಿಸಿದ್ದರು.

ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದೂ ಆರೋಪಿಸಿದ್ದರು. ಲೋಕಾಯುಕ್ತ ನಿರ್ದೇಶನದ ಮೇರೆಗೆ ತನಿಖೆ ನಡೆಸಿದ್ದ ಪೊಲೀಸರು ಆರೋಪ ಸಾಬೀತುಪಡಿಸುವ ಯಾವುದೇ ಆಧಾರಗಳಿಲ್ಲ ಎಂದು ತಿಳಿಸಿ ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿದ್ದರು. ಆದರೂ ನ್ಯಾಯಾಲಯ ಆ ವರದಿಯನ್ನು ತಿರಸ್ಕರಿಸಿ ಆರೋಪಿಗಳಿಗೆ ಸಮನ್ಸ್‌ ಜಾರಿಗೊಳಿಸಿತ್ತು. ಆ ಸಮನ್ಸ್‌ ಹೈಕೋರ್ಟ್‌ 2017ರ ಜನವರಿ 2ರಂದು ರದ್ದುಪಡಿಸಿ ಆದೇಶ ಹೊರಡಿಸಿತ್ತು.

ಆ ಆದೇಶ ಪ್ರಶ್ನಿಸಿ ಲೋಕಾಯುಕ್ತವು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry