ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಷಾ ಬಂದಾಗಿನಿಂದ ರಾಜ್ಯದಲ್ಲಿ ರಕ್ತಪಾತ’: ರವಿವರ್ಮ ಕುಮಾರ್‌ ಆರೋಪ

Last Updated 5 ಜನವರಿ 2018, 19:48 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಬಂದು ಹೋದ ಬಳಿಕ ರಾಜ್ಯದಲ್ಲಿ ದಿನನಿತ್ಯ ರಕ್ತಪಾತ ನಡೆಯುತ್ತಿದೆ. ಅವರು ರಕ್ತಪಿಪಾಸು. ರಕ್ತದೋಕುಳಿಯಾಡಿ ಮತ ಗೆಲ್ಲುವವರು’ ಎಂದು ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

ಡಾ. ಬಿ.ಆರ್‌.ಅಂಬೇಡ್ಕರ್‌ ಮಹಾಪರಿನಿರ್ವಾಣ ಪ್ರಯುಕ್ತ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಜಾತಿವಾದಿ, ಕೋಮುವಾದಿಶಕ್ತಿ ವಿರೋಧಿ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆರ್‌ಎಸ್‌ಎಸ್‌ನವರಿಗೆ ಆಡಳಿತ ನಡೆಸುವುದು ಗೊತ್ತಿಲ್ಲ. ಅದು ಅವರಿಗೆ ಬೇಕಾಗಿಯೂ ಇಲ್ಲ. ದೇಶವನ್ನು ಒಡೆದು ಆಳುವುದಷ್ಟೇ ಅವರಿಗೆ ಮುಖ್ಯ. ದನಗಳ ಹೆಸರಿನಲ್ಲಿ ದಲಿತರು, ಮುಸ್ಲಿಮರನ್ನು ಹೊಡೆದು ಸಾಯಿಸುತ್ತಿದ್ದಾರೆ’ ಎಂದು ದೂರಿದರು.

‘ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು, ಈಗ ಅದರ ವಿರುದ್ಧವೇ ಮಾತನಾಡುವ ಮೂಲಕ ವಚನಭ್ರಷ್ಟರಾಗಿದ್ದಾರೆ. ಅವರನ್ನು ಆ ಸ್ಥಾನದಿಂದ ವಜಾ ಮಾಡುವಂತೆ ಚಳವಳಿ ಹಮ್ಮಿಕೊಳ್ಳಬೇಕಿದೆ’ ಎಂದರು.

‘ಅವರ ಕ್ಷೇತ್ರಕ್ಕೆ ಹೋಗಿ ಅಲ್ಲಿ ಬಿಜೆಪಿಯ ಒಬ್ಬ ವ್ಯಕ್ತಿಯೂ ಗೆಲ್ಲದಂತೆ ನೋಡಿಕೊಳ್ಳಬೇಕು ಎಂದು ನಿರ್ಧರಿಸಿದ್ದೇನೆ. ಬಿಜೆಪಿಗೆ ಒಂದೇ ಒಂದು ಮತ ಬೀಳದಂತೆ ನೋಡಿಕೊಳ್ಳುವ ಶಪಥವನ್ನು ಎಲ್ಲರೂ ಮಾಡಬೇಕು’ ಎಂದು ಹೇಳಿದರು.

ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದಕ್ಕಾಗಿಯೇ ನೋಟು ರದ್ದು ಮಾಡಲಾಯಿತು. ನೋಟು ರದ್ದತಿ ಮೂಲಕ ಬೇರೆ ಪಕ್ಷದವರ ಬಳಿ ಒಂದು ರೂಪಾಯಿ ಇಲ್ಲದಂತೆ ಮಾಡಿದರು. ಬಿಜೆಪಿಯವರು ದೆಹಲಿಯಿಂದ ದುಡ್ಡು ತಂದು ಹಂಚಿ ಗೆದ್ದು ಬಿಟ್ಟರು. ಆದರೆ, ಆ ಆಟ ಕರ್ನಾಟಕದಲ್ಲಿ ನಡೆಯುವುದಿಲ್ಲ ಎಂದರು.

ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್‌.ಸುದರ್ಶನ್‌, ‘ವಿಜಯಪುರದ ದಲಿತ ಹೆಣ್ಣು ಮಗಳ ಮೇಲಿನ ಅತ್ಯಾಚಾರ ಹಾಗೂ ಕೊಲೆಯನ್ನು ಮಾಧ್ಯಮಗಳು ಒಂದೆರಡು ಬಾರಿ ತೋರಿಸಿ ಸುಮ್ಮನಾದವು. ಆದರೆ, ಕೋಮು ಸಂಘರ್ಷದ ದಳ್ಳುರಿಯನ್ನು ದಿನದ 24 ಗಂಟೆಯೂ ತೋರಿಸುವ ಮೂಲಕ ಪ್ರಚೋದನೆ ನೀಡುತ್ತಿವೆ’ ಎಂದು ದೂರಿದರು.

ಒಕ್ಕಲಿಗರ ಮತ ಸೆಳೆಯಲು ಕುತಂತ್ರ: ‘ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಇದೇ 7ರಂದು ಭೇಟಿ ಮಾಡಲಿದ್ದಾರೆ. ನಾಥ ಪರಂಪರೆಯ ಹೆಸರಿನಲ್ಲಿ ಒಕ್ಕಲಿಗರ ಮತಗಳನ್ನು ಬಿಜೆಪಿಗೆ ಸೆಳೆಯುವ ಕುತಂತ್ರವನ್ನು ರೂಪಿಸಲಾಗಿದೆ’ ಎಂದು ಎನ್‌.ವಿ.ನರಸಿಂಹಯ್ಯ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT