ಶ್ರೀಮಂತರ ಕೈಯಲ್ಲಿ ಶೇ 50ರಷ್ಟು ಸಂಪತ್ತು

7

ಶ್ರೀಮಂತರ ಕೈಯಲ್ಲಿ ಶೇ 50ರಷ್ಟು ಸಂಪತ್ತು

Published:
Updated:
ಶ್ರೀಮಂತರ ಕೈಯಲ್ಲಿ ಶೇ 50ರಷ್ಟು ಸಂಪತ್ತು

ಮಂಡ್ಯ: ‘ಸಂಪತ್ತಿನ ಅಸಮಾನ ಹಂಚಿಕೆಯಿಂದಾಗಿ ದೇಶ ಹಲವು ಸಮಸ್ಯೆ ಎದುರಿಸುತ್ತಿದೆ. ಶೇ 50ರಷ್ಟು ಸಂಪತ್ತನ್ನು ಶೇ 1ರಷ್ಟಿರುವ ಶ್ರೀಮಂತರು ಅನುಭವಿಸುತ್ತಿದ್ದಾರೆ. ಶೇ 24ರಷ್ಟು ಸಂಪತ್ತು ಶೇ 9ರಷ್ಟು, ಶೇ 26ರಷ್ಟು ಸಂಪತ್ತು ಶೇ 90ರಷ್ಟು ಜನರಲ್ಲಿ ಹಂಚಿಕೆಯಾಗಿದೆ’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ ದಾಸ್‌ ಹೇಳಿದರು.

ನಗರದ ಹೊರವಲಯದಲ್ಲಿರುವ ಮೈಸೂರು ವಿವಿ, ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದಲ್ಲಿ ಶುಕ್ರವಾರ ‘ಯೋಜನಾ ವೇದಿಕೆ, ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ’ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತ ದೇಶ ಶ್ರೀಮಂತವಾಗಿದ್ದರೂ ಹಸಿವು, ಬಡತನ, ನಿರುದ್ಯೋಗ, ರೈತರ ಆತ್ಮಹತ್ಯೆ ಮುಂತಾದ ಸಮಸ್ಯೆಗಳಿಂದ ಬಳಲುತ್ತಿದೆ. ಇದಕ್ಕೆ ಸಂಪತ್ತಿನ ಅಸಮಾನ ಹಂಚಿಕೆಯೇ ಕಾರಣ. ಕಳೆದ ಒಂದು ಶತಮಾನದಲ್ಲಿ ವಿಜ್ಞಾನ ಕ್ಷೇತ್ರ ಅಗಾಧ ಪ್ರಗತಿ ಕಂಡಿದೆ. ಇದರ ಪರಿಣಾಮವಾಗಿ ದೇಶ ಆರ್ಥಿಕವಾಗಿ ಉನ್ನತ ಸಾಧನೆ ಮಾಡಿದೆ. ಆದರೆ ಆರ್ಥಿಕ ನೀತಿ, ವ್ಯವಸ್ಥೆ ಒಂದಕ್ಕೊಂದು ಸಂಬಂಧವಿಲ್ಲದ ಕಾರಣ ದೇಶದ ಸಮಸ್ಯೆಗಳು ಬಗೆಹರಿದಿಲ್ಲ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯುವಜನರು ಚಿಂತನೆ ನಡೆಸಬೇಕು’ ಎಂದರು.

‘ನಮ್ಮ ರೈತರು ರಕ್ತವನ್ನು ಬೆವರು ಮಾಡಿ ದುಡಿದು ಜಗತ್ತಿಗೆ ಅನ್ನ ನೀಡುತ್ತಾರೆ. ಆದರೆ ರೈತರ ಮೇಲಿನ ಶೋಷಣೆ ನಿರಂತವಾಗಿ ನಡೆಯುತ್ತದೆ. ಅವರಿಂದ ಕಿತ್ತುಕೊಂಡು ಅವರಿಗೇ ಮಾರಾಟ ಮಾಡುವ ವ್ಯವಸ್ಥೆ ನಿರ್ಮಾಣವಾಗಿದೆ. ಇದು ಆರ್ಥಿಕ, ನೈತಿಕ, ಸಾಂಸ್ಕೃತಿಕ ದಿವಾಳಿಯ ಸಂಕೇತವಾಗಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ಹುಡುಕಿ, ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡಬೇಕಾಗಿದೆ’ ಎಂದು ಹೇಳಿದರು.

ಶಿಕ್ಷಣ ಮೂಲ ಅವಶ್ಯಕತೆ : ‘20ನೇ ಶತಮಾನದಲ್ಲಿ ಶಿಕ್ಷಣ ಮೂಲ ಅವಶ್ಯಕತೆಯಾಯಿತು. ಶಿಕ್ಷಣ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಯಿತು. ಸಂವಿಧಾನ ರಚನೆಗೊಂಡಾಗ ಶಿಕ್ಷಣ ಮೂಲಭೂತ ಹಕ್ಕು ಆಗಿರಲಿಲ್ಲ. 45ನೇ ಅನುಚ್ಛೇದದಲ್ಲಿ ಶಿಕ್ಷಣ ನೀಡುವ ಪ್ರಯತ್ನ ಮಾಡಬೇಕು ಎಂದಷ್ಟೇ ಹೇಳಲಾಗಿತ್ತು. 2002ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು 25ಎ ಅನುಚ್ಛೇದ ಸೇರಿಸಿ 6–14 ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ ಶಿಕ್ಷಣ ಹಕ್ಕನ್ನು ನೀಡಲಾಯಿತು. ಆದರೆ ಕಡ್ಡಾಯ ಶಿಕ್ಷಣ ಹಕ್ಕು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿದ್ದು 2012ರಲ್ಲಿ. ಇಷ್ಟಾದರೂ ಖಾಸಗಿ ಶಿಕ್ಷಣ ಸಂಸ್ಥೆಗಳು ಕಡ್ಡಾಯ ಶಿಕ್ಷಣ ಹಕ್ಕನ್ನು ಜಾರಿಗೊಳಿಸಲು ಮೀನಾಮೇಷ ಎಣಿಸುತ್ತಿರುವುದು ದುರದೃಷ್ಟಕರ’ ಎಂದು ಹೇಳಿದರು.

ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಡಾ.ಸುಧಾಕರ ಹೊಸಳ್ಳಿ ಮಾತನಾಡಿ ‘ಶೈಕ್ಷಣಿಕ ವ್ಯವಸ್ಥೆಯನ್ನು ಕಾಡುತ್ತಿರುವ ಸಮಸ್ಯೆಗಳನ್ನು ಸುಧಾರಿಸುವ ಉದ್ದೇಶದಿಂದ ಸಮಿತಿ ರಚನೆ ಮಾಡಲಾಗಿದೆ. ವಿಶ್ವವಿದ್ಯಾಲಯಗಳಲ್ಲಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ಅತಿಥಿ ಉಪನ್ಯಾಸಕರು ನರಕ ಅನುಭವಿಸುತ್ತಿದ್ದಾರೆ. ಸಾಂವಿಧಾನಿಕ ಮಿತಿಯ ನೆಪದಲ್ಲಿ ಶಿಕ್ಷಣ ವ್ಯವಸ್ಥೆಯ ಮೇಲೆ ನಿತ್ಯ ಹಲ್ಲೆ ನಡೆಯುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಮಿತಿ ಪ್ರಮುಖ ಪಾತ್ರ ವಹಿಸಲಿದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿಕ್ಷಣ ತಜ್ಞ ಶಿವಾನಂದ ಸಿಂದನಕೇರ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ.ಎಚ್‌.ಆರ್‌.ಉಮಾ, ಸಂಯೋಜಕ ಡಾ.ಪ್ರೇಮ್‌ ಕುಮಾರ್‌, ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಗುರುಬಸವರಾಜಸ್ವಾಮಿ ಪಂಡಿತ್‌ ಹಾಜರಿದ್ದರು.

ಉನ್ನತ ಶಿಕ್ಷಣದಿಂದ ಸ್ವಾವಲಂಬನೆ

‘ದೇಶದ ಯುವಜನರು ಉನ್ನತ ಶಿಕ್ಷಣ ಪಡೆದ ಫಲವಾಗಿ ಇಂದು ನಾವು ಹಲವು ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಿದೆ. ಆಹಾರ ಉತ್ಪಾದನೆ, ಉಪಗ್ರಹ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಇಂಧನ ಕ್ಷೇತ್ರದಲ್ಲಿ ಭಾರತ ಉನ್ನತ ಸಾಧನೆ ಮಾಡಿದ 10 ದೇಶಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. ಇದಕ್ಕೆ ಉನ್ನತ ಶಿಕ್ಷಣವೇ ಕಾರಣ’ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಹೇಳಿದರು.

‘ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಕೇವಲ 50 ಮಿಲಿಯನ್‌ ಟನ್‌ ಆಹಾರ ಧಾನ್ಯದ ಉತ್ಪಾದನೆ ಆಗುತ್ತಿತ್ತು. ಈಗ ದೇಶ 400 ಮಿಲಿಯನ್‌ ಟನ್‌ ಆಹಾರ ಧಾನ್ಯ ಉತ್ಪಾದಿಸುತ್ತಿದೆ. ಇದು ಉನ್ನತ ಶಿಕ್ಷಣ, ಸಂಶೋಧನೆಯ ಪ್ರತಿಫಲ. ಮುಂದಿನ ಪೀಳಿಗೆಗೆ ಗುಣಾತ್ಮಕ ಹಾಗೂ ಸಮಾನ ಶಿಕ್ಷಣ ಸಿಗಬೇಕು. ಆಗ ದೇಶದ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry