ಬುಧವಾರ, ಆಗಸ್ಟ್ 5, 2020
21 °C

ವಿಶ್ವ ನಾಯಕರ ಟ್ವಿಟರ್‌ ಖಾತೆ ನಿರ್ಬಂಧ ಸಾಧ್ಯವಿಲ್ಲ: ಟ್ವಿಟರ್ ನಿಲುವು ಪ್ರಕಟ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ವಿಶ್ವ ನಾಯಕರ ಟ್ವಿಟರ್‌ ಖಾತೆ ನಿರ್ಬಂಧ ಸಾಧ್ಯವಿಲ್ಲ: ಟ್ವಿಟರ್ ನಿಲುವು ಪ್ರಕಟ

ಸ್ಯಾನ್‌ ಫ್ರಾನ್ಸಿಸ್ಕೊ: ಸಾಮಾಜಿಕ ಮಾಧ್ಯಮ ಸಂಪರ್ಕ ತಾಣದಲ್ಲಿ ಜಾಗತಿಕ ವಿಶ್ವ ನಾಯಕರಿಗೆ ಸೇರಿದ ಖಾತೆಗಳಿಗೆ ವಿಶೇಷ ಸ್ಥಾನವಿದ್ದು, ಅವರ ಖಾತೆಗಳನ್ನು ನಿಷೇಧಿಸುವುದು ಅಥವಾ ಪ್ರಕಟಣೆಗಳಿಗೆ ನಿರ್ಬಂಧ ಹೇರುವುದು ಸಾಧ್ಯವಿಲ್ಲ ಎಂಬ ನಿಲುವನ್ನು ಶುಕ್ರವಾರ ಟ್ವಿಟರ್‌ ಪುನರುಚ್ಚರಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟ್ವಿಟರ್‌ ಖಾತೆ ನಿಷೇಧಿಸುವಂತೆ ಟ್ವಿಟರ್‌ ಬಳಕೆದಾರರು ಅಭಿಯಾನ ಪ್ರಾರಂಭಿಸಿದ್ದರ ಬೆನ್ನಲೇ ಸಂಸ್ಥೆ ತನ್ನ ಬ್ಲಾಗ್‌ನಲ್ಲಿ ನಿಲುವು ಪ್ರಕಟಿಸಿದೆ.

‘ಟ್ವಿಟರ್‌ನಲ್ಲಿ ವಿಶ್ವ ನಾಯಕರನ್ನು ನಿರ್ಬಂಧಿಸುವುದು, ಇಲ್ಲವೇ ಅವರ ವಿವಾದಾತ್ಮ ಟ್ವೀಟ್‌ಗಳನ್ನು ತೆಗೆದುಹಾಕಿದರೆ ಜನರಿಗೆ ತಲುಪಬೇಕಾದ ಮುಖ್ಯವಾದ ಮಾಹಿತಿಗೆ ಹಾಗೂ ಅದನ್ನು ಗಮನಿಸಿ ನಡೆಯುವ ಚರ್ಚೆಗೆ ತಡೆಯೊಡ್ಡಿದಂತೆ ಆಗುತ್ತದೆ’ ಎಂದಿದೆ.

ಟ್ವಿಟರ್‌ ಖಾತೆ ನಿಷೇಧಿಸುವ ಮುನ್ನ, ಟ್ವೀಟ್‌ನ ಪ್ರಕಟಣಾ ಅರ್ಹತೆ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಗಮನಿಸಲಾಗುತ್ತದೆ ಎಂದು ಕಳೆದ ವರ್ಷ ಸೆ‍ಪ್ಟೆಂಬರ್‌ನಲ್ಲಿಯೇ ಸಂಸ್ಥೆ ಸ್ಪಷ್ಟಪಡಿಸಿತ್ತು.

‘ನನ್ನ ಬಳಿ ಇರುವ ಅಣ್ವಸ್ತ್ರ ಬಟನ್‌ ಅತ್ಯಂತ ದೊಡ್ಡದು ಮತ್ತು ಪ್ರಬಲವಾಗಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅವರಿಗೆ ತಿರುಗೇಟು ನೀಡುವ ಧಾಟಿಯಲ್ಲಿ  ಬುಧವಾರ ಟ್ವೀಟ್‌ ಮಾಡಿದ್ದರು.

ಈ ಟ್ವೀಟ್‌ ಸಂಬಂಧಿಸಿದಂತೆ ಟ್ರಂಪ್‌ ವಿರುದ್ಧ ಟೀಕೆ ವ್ಯಕ್ತವಾಗಿತ್ತು. ‘ಟ್ರಂಪ್‌ ಅವರು ಇಲ್ಲಿ ಮುಂದುವರಿಯುವುದರಿಂದ ವಿಶ್ವಕ್ಕೆ ಅಪಾಯ ಎದುರಾಗಬಹುದು ಹಾಗೂ ಅಶಾಂತಿಯನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿ ಟ್ವಿಟರ್ ಸಂಸ್ಥೆಯ ಗಮನಸೆಳೆಯಲಾಗಿತ್ತು. ಟ್ವಿಟರ್‌ನ ಸ್ಯಾನ್‌ ಫ್ರಾನ್ಸಿಕೊ ಮುಖ್ಯಕಚೇರಿಯಲ್ಲಿ ಕೆಲವು ಟ್ವಿಟರ್‌ ಬಳಕೆದಾರರು ಪ್ರತಿಭಟನೆಯನ್ನೂ ನಡೆಸಿದ್ದರು.

ನಿಷ್ಪಕ್ಷಪಾತ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗಿ ಕಾರ್ಯನಿರ್ವಹಿಸುವುದಾಗಿ ಸಂಸ್ಥೆ ಪ್ರಕಟಿಸಿಕೊಂಡಿದೆ.

ಟ್ವಿಟರ್‌ ಪ್ರಕಟಣೆ ಲಿಂಕ್‌: bit.ly/2CYOdLw

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.