ದೀಪಕ್ ಕೊಲೆ ಖಂಡಿಸಿ ಪ್ರತಿಭಟನೆ

7

ದೀಪಕ್ ಕೊಲೆ ಖಂಡಿಸಿ ಪ್ರತಿಭಟನೆ

Published:
Updated:

ಮಸ್ಕಿ: ಮಂಗಳೂರಿನ ಸುರತ್ಕಲ್ ಸಮೀಪದ ಕಾಟಿಪಳ್ಳ ಕೈಕಂಬದಲ್ಲಿ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್‌ ಕೊಲೆ ಪ್ರಕರಣ ಸಂಬಂಧ ನೈತಿಕ ಹೊಣೆ ಹೊತ್ತು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಇಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಬಸವೇಶ್ವರ ವೃತ್ತದಲ್ಲಿನ ಪಕ್ಷದ ಕಚೇರಿಯಿಂದ ಮೆರವಣಿಗೆಯಲ್ಲಿ ಬಂದ ಬಿಜೆಪಿ ಕಾರ್ಯಕರ್ತರು ಹಳೆಯ ಬಸ್‌ ನಿಲ್ದಾಣದ ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು. ಇದರಿಂದ ಕೆಲ ಕಾಲ ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು.

ಪಕ್ಷದ ಮುಖಂಡ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ, ಆರ್‌.ಬಸನಗೌಡ, ಪಕ್ಷದ ನಗರ ಘಟಕದ ಅಧ್ಯಕ್ಷ ಅಪ್ಪಾಜಿಗೌಡ, ಜಿಲ್ಲಾ ಕಾರ್ಯದರ್ಶಿ ಸಂಗಮೇಶ ಹತ್ತಿಗುಡ್ಡ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶಿವಪುತ್ರಪ್ಪ ಅರಳಹಳ್ಳಿ ಮಾತನಾಡಿದರು.

ಕರಾವಳಿಯಲ್ಲಿ ಬಿಜೆಪಿ ಕಾರ್ಯಕರ್ತರ ಕೊಲೆ ಪ್ರಕರಣಗಳು ಹೆಚ್ಚುತ್ತಿವೆ. ರಾಜ್ಯ ಸರ್ಕಾರ ಹತ್ಯೆಗಳನ್ನು ತಡೆಯುವಲ್ಲಿ ವಿಫಲವಾಗಿದೆ. ಗೃಹ ಸಚಿವ ರಾಮಲಿಂಗಾರೆಡ್ಡಿ ಹಾಗೂ ಬೇಜವಾಬ್ದಾರಿ ಹೇಳಿಕೆ ನೀಡಿದ ಸಚಿವ ಯು.ಟಿ. ಖಾದರ್‌ ರಾಜಿನಾಮೆ ನೀಡಬೇಕು ಎಂದು ಪ್ರತಿಭಟನಕಾರರು ಉಪ ತಹಶೀಲ್ದಾರ್‌ ಪ್ರಕಾಶ ಬುಳ್ಳಾ ಅವರಿಗೆ ಮನವಿ ಸಲ್ಲಿಸಿದರು.

ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ, ದುರಗೇಶ ವಕೀಲ. ಯುವ ಮೊರ್ಚಾ ಅಧ್ಯಕ್ಷ ಶರಣಯ್ಯ ಸ್ವಾಮಿ, ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮೌನೇಶ ನಾಯಕ, ಬಸನಗೌಡ ಮುದಬಾಳ, ನಿರುಪಾದಿ ಬಳಗಾನೂರು, ನಾಗರಾಜ ಯಂಬಲದ್, ಕೃಷ್ಣ ಚಿಗರಿ, ಶಂಕರ್‌ ಎನ್‌ಜೆಡಿ, ರಾಕೇಶ ಪಾಟೀಲ ಸೇರಿದಂತೆ ಬಿಜೆಪಿಯ ಪುರಸಭೆ ಸದಸ್ಯರು, ಬಿಜೆಪಿ ಯುವ ಮೊರ್ಚಾ ಕಾರ್ಯಕರ್ತರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry