ಬುಧವಾರ, ಜೂಲೈ 8, 2020
22 °C

ಇಲ್ಲಿ ರೈತರ ಕೊಳೆವೆಬಾವಿಗೆ ಉಚಿತ ಟಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಲ್ಲಿ ರೈತರ ಕೊಳೆವೆಬಾವಿಗೆ ಉಚಿತ ಟಿಸಿ

ತುಮಕೂರು: ‘ವೋಲ್ಟೇಜ್ ಇಲ್ಲ. ವಿದ್ಯುತ್ ಪರಿವರ್ತಕ (ಟಿಸಿ) ಸುಟ್ಟು ಹೋಗಿದೆಯಂತೆ. ಅಯ್ಯೋ, ದುರಸ್ತಿ ಆಗುವುದಕ್ಕೆ ಇನ್ನೆಷ್ಟು ದಿನ ಆಗುತ್ತೊ ಏನ್ ಕತೆಯೊ. ಹಾಗಾದರೆ ಬೆಳೆ ಗತಿ ಏನು’?

’ಬೆಳೆ ನೀರಿಲ್ಲದೇ ಒಣಗಿ ಬಿಡುತ್ತದೆಯಲ್ಲ ಎಂಬ ಸಂಕಟದಲ್ಲಿ ವೋಲ್ಟೇಜ್ ಏರಿಳಿತದಲ್ಲಿಯೇ ಪಂಪ್ ಶುರು ಮಾಡಿದೆ. ಮೋಟಾರ್ ಸುಟ್ಟು ಹೋಯ್ತಪ್ಪ, ಏನ್ ಮಾಡೋದು? ಈ ನಮ್ಮ ಗೋಳಾಟಕ್ಕೆ ಕೊನೆಯೇ ಇಲ್ಲವೇ’?

ರೈತರ ಇಂಥ  ಗೋಳಾಟಗಳು  ತುಮಕೂರು ತಾಲ್ಲೂಕಿನಲ್ಲಿ ಈಗ ಕೇಳಿ ಬರುತ್ತಿಲ್ಲ.ವೋಲ್ಟೇಜ್ ಸಮಸ್ಯೆಯ ಕಿರಿಕಿರಿಯೂ ಇಲ್ಲ.ಕೇಂದ್ರ ಸರ್ಕಾರದ ಸಹ ಭಾಗಿತ್ವದಲ್ಲಿ ಜಾರಿಯಾದ ಎಚ್‌ವಿಡಿಎಸ್‌ ಯೋಜನೆಯ ಪರಿಣಾಮ ಇದಾಗಿದೆ ಎನ್ನುತ್ತಾರೆ ಇಲ್ಲಿನ ರೈತರು.

’ಒಟ್ಟು ₹400 ಕೋಟಿ ಮೊತ್ತದ ಈ ಯೋಜನೆ 2013ರ  ಜಾರಿಯಾಯಿತು. ಈವರೆಗೂ  15 ಸಾವಿರ ರೈತರ ಕೊಳವೆಬಾವಿಗಳಿಗೆ ಉಚಿತ ಟಿಸಿ ಅಳವಡಿಸಲಾಗಿದೆ’ ಎಂದು ಬೆಸ್ಕಾಂ ಅಧಿಕಾರಿಗಳು ವಿವರಿಸುತ್ತಾರೆ.

ಪ್ರತಿ ಕೊಳವೆಬಾವಿಗೂ ಪ್ರತ್ಯೇಕ ಟಿಸಿ ಅಳವಡಿಸಿದ ಬಳಿಕ ಪಂಪ್‌ ಮೋಟಾರು ಸುಡುವುದು ಅಪರೂಪ ಎನ್ನುವಷ್ಟರ ಮಟ್ಟಿಗೆ ಆಗಿದೆ. ರೈತ ಸಮುದಾಯಕ್ಕೆ ಸಾಕಷ್ಟು ಅನುಕೂಲವಾಗಿದೆ ಎಂದು ಬೆಸ್ಕಾಂನ ಎಂಜಿನಿಯರ್‌ ಒಬ್ಬರು ತಿಳಿಸಿದರು.

’ರೈತರ ಕೃಷಿ ಪಂಪ್ ಸೆಟ್‌ಗೆ 25 ಕೆ.ವಿ. ಟಿಸಿ ಅಳವಡಿಸುವ ಮುನ್ನ ಕ್ಷೇತ್ರದಲ್ಲಿ ನೂರಾರು ಜನರು ಮೋಟಾರ್ ವೈಂಡಿಂಗ್ ಕೆಲಸ ಮಾಡುತ್ತಿದ್ದರು. ದುರಸ್ತಿಗೆ ಕೊಟ್ಟ ಟಿಸಿ ಬೇಗ ದುರಸ್ತಿಪಡಿಸಿಕೊಡುವಲ್ಲಿ ವಿಳಂಬವಾಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಮೋಟಾರ್ ಸುಡುವುದಿಲ್ಲ’ ಎಂದು ಕಲ್ಲುಪಾಳ್ಯ ಗ್ರಾಮದ ಮೆಕ್ಯಾನಿಕ್ ಆನಂದ ’ಪ್ರಜಾವಾಣಿ’ಗೆ ವಿವರಿಸಿದರು.

ಮೋಟಾರ್ ದುರಸ್ತಿ ಮಾಡುವವರು ಮಾಗಡಿ, ನೆಲಮಂಗಲ, ರಾಮನಗರ ಜಿಲ್ಲೆಗಳ ಕಡೆಗೆ ತೆರಳಿದ್ದಾರೆ. ನಾನೂ ಕೂಡಾ ಅದೇ ಕೆಲಸ ಮಾಡುತ್ತಿದ್ದು, ಅದನ್ನು ಬಿಟ್ಟು ಈಗ ಅಡಿಕೆ ವ್ಯಾಪಾರ ಮಾಡುತ್ತಿದ್ದೇನೆ’ ಎಂದು ಅವರು ಹೇಳಿದರು.

ಅನುಕೂಲವಾಗಿದೆ

‘ಒಂದು ವರ್ಷದ ಹಿಂದೆ ನಮ್ಮ ತೋಟದಲ್ಲಿ 25 ಕೆ.ವಿ ಸಾಮರ್ಥ್ಯದ ಟಿಸಿ ಅಳವಡಿಸಲಾಯಿತು. ಈವರೆಗೆ ಒಮ್ಮೆಯೂ ತೊಂದರೆ ಆಗಿಲ್ಲ. ಸತತವಾಗಿ ಕಾರ್ಯನಿರ್ವಹಿಸಿದರೂ ರಿಪೇರಿಗೆ ಬಂದಿಲ್ಲ. ಇದರಿಂದ ಬಹಳಷ್ಟು ಅನುಕೂಲವಾಗಿದೆ’ ಎಂದು ಎ.ಕೆ. ಕಾವಲ್ ನ ರೈತ ನಾರಾಯಣಪ್ಪ ಹೇಳಿದರು.

’ಎಷ್ಟೋ ಬಾರಿ ತೋಟ, ಮನೆ, ಬಿಟ್ಟು ಟಿಸಿ ದುರಸ್ತಿ ಮಾಡಿಸಿಕೊಂಡು ಬರಲು ಹೋಗಿ ಬೆಸ್ಕಾಂ ಕಚೇರಿ ಮುಂದೆಯೇ ಮಲಗಿ ಬಂದಿದ್ದೇವೆ. ಈಗ ಅಂತಹ ಪರಿಸ್ಥಿತಿ ಇಲ್ಲ’ ಎಂದು  ಸಂಭ್ರಮ ವ್ಯಕ್ತಪಡಿಸಿದರು.

‘ಬೆಸ್ಕಾಂನ ಹೈ ವೊಲ್ಟೇಜ್ ಡಿಸ್ಟ್ರಿಬ್ಯೂಷನ್ ಯೋಜನೆಯಡಿ(ಎಚ್.ವಿ.ಡಿ.ಎಸ್) ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಆರ್.ಆರ್. ನಂಬರ್ ಹೊಂದಿರುವ ಪ್ರತಿಯೊಬ್ಬ ರೈತರಿಗೂ 25 ಕೆ.ವಿ. ಸಾಮರ್ಥ್ಯದ ಟಿಸಿಗಳನ್ನು ಅಳವಡಿಸಿಕೊಡಲಾಗಿದೆ’ ಎಂದು ಶಾಸಕ ಬಿ.ಸುರೇಶ್‌ಗೌಡ ಹೇಳಿದರು. ’ಯೋಜನೆ  ಸಕ್ಸಸ್ ಆಗಿದೆ. ಅನುಷ್ಠಾನಗೊಂಡ ಬಳಿಕ ನನ್ನ ಕ್ಷೇತ್ರದಲ್ಲಿ ಒಂದೇ ಒಂದು ಟಿಸಿ ಕೂಡಾ ಸುಡುತ್ತಿಲ್ಲ. ಈ ಬಗ್ಗೆ ದೂರುಗಳು ಬರುತ್ತಿಲ್ಲ’ ಎಂದರು.

’ಕೃಷಿ ಪಂಪ್ ಸೆಟ್‌ಗೆ 300 ವೋಲ್ಟೇಜ್ ಅವಶ್ಯ. ಆದರೆ, ಕೇವಲ 150 ಪೂರೈಕೆಯಾಗುತ್ತಿತ್ತು. 63 ಕೆ.ವಿ ಟಿಸಿಯಲ್ಲಿ  10ರಿಂದ 15 ರೈತರ ಕೃಷಿ ಪಂಪ್ ಸೆಟ್‌ಗೆ ಪೂರೈಸಲಾಗುತ್ತಿತ್ತು’ ಎಂದು ಹೇಳಿದರು.

’ಇದರಿಂದ ಒತ್ತಡ ಹೆಚ್ಚಾಗಿ ಒಂದು ದಿನ ಕೇಬಲ್, ಇನ್ನೊಂದು ದಿನ ಸ್ಟಾರ್ಟರ್, ಮತ್ತೊಂದು ದಿನ ಪಂಪ್ ಸುಡುತ್ತಿತ್ತು. ಟಿಸಿ ಸುಟ್ಟರೆ ಬೇಗ ಸಿಗುತ್ತಿರಲಿಲ್ಲ. ಹೀಗಾಗಿ, ವರ್ಷದಲ್ಲಿ ಪ್ರತಿಯೊಬ್ಬ ರೈತ ಕನಿಷ್ಠ ₹ 1 ಲಕ್ಷ  ಈ ದುರಸ್ತಿಗೆ ಹಣ ಕಳೆದುಕೊಳ್ಳುತ್ತಿದ್ದರು.  ನೀರಿನ ಕೊರತೆಯಿಂದ ಉತ್ತಮ ಬೆಳೆಯು ಬರದೇ ಇನ್ನೊಂದಿಷ್ಟು ನಷ್ಟ ಅನುಭವಿ

ಸುತ್ತಿದ್ದರು’ ಎಂದು ವಿವರಿಸಿದರು.

‘ಈಗ 25 ಕೆ.ವಿ ಸಾಮರ್ಥ್ಯದ ಟಿಸಿ ಅಳವಡಿಸಿರುವುದರಿಂದ ಪ್ರತಿ ರೈತರಿಗೆ ವರ್ಷಕ್ಕೆ ₹ 1 ಲಕ್ಷ ಹಣ ಉಳಿತಾಯವಾಗಿದೆ. ಬೆಳೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ’ ಎಂದರು.‘ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಯೋಜನೆ ಅನುಷ್ಠಾನವಾಗಿದೆ.

ಸ್ವತಃ ನಾನೇ ನಿಂತು ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಿದ್ದೆ. ಪ್ರಾಯೋಗಿಕವಾಗಿ ಅನುಷ್ಠಾನದಲ್ಲಿ ಯಶಸ್ಸು ಕಂಡಿದೆ’ ಎಂದು ತಿಳಿಸಿದರು. ’ರಾಜ್ಯದ ಮೂಲೆ ಮೂಲೆಯಲ್ಲಿರುವ ಪ್ರತಿಯೊಬ್ಬ ರೈತರಿಗೂ ಕೂಡಾ ಈ ಸೌಲಭ್ಯ ಸಿಗಬೇಕು ಎಂಬುದು ನನ್ನ ಆಶಯವಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.