‘ಅನರ್ಹರ ಸೇರ್ಪಡೆ; ವರದಿಗೆ ಸೂಚನೆ’

7

‘ಅನರ್ಹರ ಸೇರ್ಪಡೆ; ವರದಿಗೆ ಸೂಚನೆ’

Published:
Updated:

ಬಾಗಲಕೋಟೆ: ‘ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಕೈ ಬಿಡುವುದು, ತಿದ್ದುಪಡಿ, ವರ್ಗಾವಣೆ ಹಾಗೂ ಆಕ್ಷೇಪಣೆ ಸ್ವೀಕರಿಸುವ ದಿನಾಂಕವನ್ನು ಚುನಾವಣಾ ಆಯೋಗ ಜನವರಿ 12ರವರೆಗೆ ವಿಸ್ತರಿಸಿದೆ’ ಎಂದು ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮುಧೋಳ ತಾಲ್ಲೂಕಿನಲ್ಲಿ ಅನರ್ಹರನ್ನು ಮತದಾರರ ಪಟ್ಟಿಗೆ ಸೇರಿಸಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತಾದ ದೂರು ನನಗೂ ಸಲ್ಲಿಕೆಯಾಗಿದೆ. ಬೂತ್‌ಮಟ್ಟದ ಅಧಿಕಾರಿಗಳಿಂದ ವಿವರಣೆ ಪಡೆದು ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿರುವುದಾಗಿ’ ಹೇಳಿದರು.

ಅವಧಿ ವಿಸ್ತರಣೆ: ಈ ಮೊದಲು ಮತದಾರರ ಪಟ್ಟಿಗೆ ಸೇರ್ಪಡೆ ಹಾಗೂ ಆಕ್ಷೇಪಣೆ ಸಲ್ಲಿಕೆ ದಿನಾಂಕ ಡಿಸೆಂಬರ್ 31ಕ್ಕೆ ಪೂರ್ಣಗೊಂಡಿತ್ತು. ಆದರೆ ಅರ್ಹರಿಗೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನೆರವಾಗಲು ಪರಿಷ್ಕರಣಾ ಅವಧಿಯನ್ನು ಚುನಾವಣಾ ಆಯೋಗ ವಿಸ್ತರಿಸಿದೆ ಎಂದರು.

ನೂತನ ವೇಳಾಪಟ್ಟಿಯಂತೆ ಮತದಾರರ ಪಟ್ಟಿಯ ಕುರಿತಂತೆ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿಯನ್ನು ಜನವರಿ 31ರೊಳಗೆ ಮಾಡಬೇಕಿದೆ. ಫೆಬ್ರುವರಿ 15ರೊಳಗೆ ಡಾಟಾಬೇಸ್ ತಯಾರಿ ಹಾಗೂ 20ರೊಳಗೆ ಅಂತಿಮ ಮತದಾರರ ಪಟ್ಟಿ ಪ್ರಕಟಣೆಗೆ ಅವಕಾಶ ನೀಡಿದೆ ಎಂದರು.

26 ಸಾವಿರ ಹೊಸ ಮತದಾರರು:

ಡಿಸೆಂಬರ್ 29ರವರೆಗೆ ನಡೆದಿರುವ ನೋಂದಣಿ ಪ್ರಕ್ರಿಯೆಯಲ್ಲಿ ಜಿಲ್ಲೆಯಲ್ಲಿ 26,510 ಹೊಸ ಮತದಾರರು ಹೆಸರು ಸೇರ್ಪಡೆ ಮಾಡಿದ್ದಾರೆ. 13,711 ಮಂದಿಯ ಹೆಸರು ಕೈ ಬಿಡಲಾಗಿದೆ. 5,507 ಮಂದಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದಾರೆ. 1,032 ಮಂದಿ ಬೇರೆ ಕಡೆ ವರ್ಗಾವಣೆಗೆ ಮನವಿ ಸಲ್ಲಿಸಿದ್ದಾರೆ. ತೇರದಾಳ ಕ್ಷೇತ್ರದ ವ್ಯಾಪ್ತಿಯಲ್ಲಿ ಅತಿ ಹೆಚ್ಚು (6,062) ಮಂದಿ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಮುಧೋಳ ತಾಲ್ಲೂಕಿನಲ್ಲಿ 2,651 ಮಂದಿ ಮಾತ್ರ ಹೊಸದಾಗಿ ಸೇರಿದ್ದಾರೆ.

14 ಲಕ್ಷ ಮತದಾರರು:

ಈ ಮೊದಲು ನಿಗದಿಪಡಿಸಿದ್ದ ಡಿಸೆಂಬರ್‌ 31ರ ಕಾಲಮಿತಿಯಲ್ಲಿ ನೋಂದಣಿ ಪೂರ್ಣಗೊಂಡ ನಂತರ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಒಟ್ಟು 14,72,700 ಮತದಾರರು ಇದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲಿ ಅತಿ ಹೆಚ್ಚು 2,27,779 ಮತದಾರರು ಇದ್ದು, ಮುಧೋಳ ಕ್ಷೇತ್ರದಲ್ಲಿ 1,91,735 ಮತದಾರರಿದ್ದಾರೆ ಎಂದು ಕಳಸದ ಮಾಹಿತಿ ನೀಡಿದರು.

ವಿ.ವಿ.ಪ್ಯಾಟ್ ಅಳವಡಿಕೆ: ಮತದಾನಕ್ಕೆ ಇವಿಎಂ ಯಂತ್ರ ಬಳಸುವ ಕಾರಣ ಮತದಾರರು ತಾವು ಯಾರಿಗೆ ಮತ ಹಾಕಿದ್ದೇವೆ ಎಂಬುದನ್ನು ದೃಢೀಕರಿಸಿಕೊಳ್ಳಲು ಇದೇ ಮೊದಲ ಬಾರಿಗೆ ಮತಯಂತ್ರಕ್ಕೆ ವಿ.ವಿ.ಪ್ಯಾಟ್ ತಾಂತ್ರಿಕತೆ ಅಳವಡಿಸುವುದಾಗಿ ತಿಳಿಸಿದರು.

ಸ್ವೀಪ್ ಕಾರ್ಯಕ್ರಮ: ಮತದಾರ ಪಟ್ಟಿಗೆ ಹೆಸರು ಸೇರ್ಪಡೆಗೆ ಕಾಲಾವಕಾಶ ವಿಸ್ತರಿಸುವುದರಿಂದ ಸ್ವೀಪ್ ಕಾರ್ಯಕ್ರಮದಡಿ ಮೊದಲ ಹಂತದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಹರ ಮನವೊಲಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ್ ಇದೇ ವೇಳೆ ತಿಳಿಸಿದರು.

ಬೀದಿ ನಾಟಕ, ಭಿತ್ತಿಪತ್ರ ಹಂಚಿಕೆ, ಕಾಲೇಜು ವಿದ್ಯಾರ್ಥಿಗಳು, ಗ್ರಾಮ ಪಂಚಾಯ್ತಿ ಆಡಳಿತ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತರನ್ನು ಬಳಸಿಕೊಂಡು ಜಾಗೃತಿ ಮೂಡಿಸುವುದಾಗಿ ಹೇಳಿದರು.

‘ಕಳೆದ ವರ್ಷ ಮತಪತ್ರ ತಲುಪದೇ ಸೈನಿಕರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂಬ ದೂರುಗಳು ಬಂದಿರುವ ಕಾರಣ, ಸೇನೆಯಲ್ಲಿ ಕೆಲಸ ಮಾಡುತ್ತಿರುವ ಜಿಲ್ಲೆಯ ಯುವಕರ ಕುಟುಂಬದವರನ್ನು ಸಂಪರ್ಕಿಸಿ ಅವರಿಂದ ವಿಳಾಸ ಪಡೆದು ನಿಗದಿತ ಸಮಯದಲ್ಲಿಯೇ ಮತಪತ್ರ ತಲುಪುವಂತೆ ಕ್ರಮ ಕೈಗೊಳ್ಳುವುದಾಗಿ’ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry