ರಾಜಕೀಯ ಕಾರಣಕ್ಕೆ ಕೊಲೆ ನಡೆದಿಲ್ಲ

7

ರಾಜಕೀಯ ಕಾರಣಕ್ಕೆ ಕೊಲೆ ನಡೆದಿಲ್ಲ

Published:
Updated:
ರಾಜಕೀಯ ಕಾರಣಕ್ಕೆ ಕೊಲೆ ನಡೆದಿಲ್ಲ

ಜಮಖಂಡಿ (ಬಾಗಲಕೋಟೆ ಜಿಲ್ಲೆ): ‘ರಾಜ್ಯದಲ್ಲಿ ರಾಜಕೀಯ ಕಾರಣಕ್ಕಾಗಿ 19 ಕೊಲೆಗಳು ನಡೆದಿವೆ ಎಂದು ಬಿಜೆಪಿಯವರು ಮಾಡುತ್ತಿರುವ ಆರೋಪ ಸುಳ್ಳು. ವೈಯಕ್ತಿಕ ದ್ವೇಷ, ಆಸ್ತಿ ವಿವಾದ ಹಾಗೂ ಕೋಮು ಗಲಭೆಗಳಿಂದ ಮಾತ್ರ ಕೊಲೆಗಳು ನಡೆದಿವೆಯೇ ಹೊರತು ರಾಜಕೀಯ ಕಾರಣಕ್ಕೆ ಅಲ್ಲ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ಇಲ್ಲಿ ಸ್ಪಷ್ಟಪಡಿಸಿದರು.

ತಾಲ್ಲೂಕಿನ ಲಿಂಗನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜ್ಯದಲ್ಲಿ 19 ಮಂದಿ ಹಿಂದೂಗಳ ಕೊಲೆಯಾಗಿದೆ. ಈ ಪೈಕಿ 11ರಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರು ಭಾಗಿಯಾಗಿದ್ದಾರೆ. ಉಳಿದ ಎಂಟರಲ್ಲಿ ಕೊಲೆಯಾದವರು ಮತ್ತು ಕೊಲೆ ಮಾಡಿದವರು ಇಬ್ಬರೂ ಹಿಂದೂಗಳೇ ಆಗಿದ್ದಾರೆ' ಎಂದರು.

‘ಒಂದು ಪ್ರಕರಣದಲ್ಲಿ ಕೊಲೆಯಾದ ವ್ಯಕ್ತಿಯ ತಂದೆ, ತಮ್ಮ ಮಗ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ ಎಂದು ಹೇಳಿಕೊಂಡಿದ್ದಾರೆ. ಎಲ್ಲಾ ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಕೊಲೆಗಳು ನಡೆದಿವೆ' ಎಂದರು.

‘ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆರು ಮಂದಿ ಪಿಎಫ್‌ಐ ಕಾರ್ಯಕರ್ತರ ಕೊಲೆ ಮಾಡಿದ್ದಾರೆ. ಕೊಲೆಗೆ ಪ್ರೇರಣೆ ನೀಡುವ ಮೂಲಕ ರಾಜಕೀಯ ಪಕ್ಷಗಳು, ಸಂಘಟನೆಗಳು ಸಮಾಜದ ಸಾಮರಸ್ಯ ಹಾಳು ಮಾಡಿ ವಿಷ ಬೀಜ ಬಿತ್ತುತ್ತಿವೆ’ ಎಂದು ದೂರಿದರು.

‘ಟಿಪ್ಪು ಸುಲ್ತಾನ್‌ ಜಯಂತಿಗೆ ಅನುಮತಿ ನೀಡಲಾಗುತ್ತದೆ. ಆದರೆ, ಹನುಮ ಜಯಂತಿ ಮತ್ತು ರಾಮ ಜಯಂತಿಗೆ ಅನುಮತಿ ನೀಡಿಲ್ಲ ಎಂದು ಆರೋಪಿಸುವುದರಲ್ಲಿ ಹುರುಳಿಲ್ಲ. ಸಾವಿರಾರು ವರ್ಷಗಳಿಂದ ರಾಮ ಜಯಂತಿ, ಹನುಮ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. ಅದಕ್ಕೆಲ್ಲ ಅನುಮತಿ ಏಕೆ ಬೇಕು’ ಎಂದು ಮರುಪ್ರಶ್ನೆ ಹಾಕಿದರು.

‘ನಾನು ಕೂಡ ಹಿಂದೂ. ಶ್ರದ್ಧಾಭಕ್ತಿಯಿಂದಲೇ ರಾಮ ಜಯಂತಿ, ಹನುಮ ಜಯಂತಿ ಆಚರಿಸುತ್ತೇನೆ. ಆದರೆ, ಮತ ಬ್ಯಾಂಕ್‌ ರಾಜಕೀಯ ಮಾಡುವ ಉದ್ದೇಶದಿಂದ ಕೆಲವರು ಹಿಂದೂಗಳು ಎಂದು ಹೇಳಿಕೊಳ್ಳುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಜಯಪುರ ದಲಿತ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ವಿಚಾರಣೆಯನ್ನು ತ್ವರಿತ ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಎಂದರು.

ಬಾಗಲಕೋಟೆ: ‘ಪಿಎಫ್ಐಗೆ ಕಾಂಗ್ರೆಸ್‌ ಯಾವತ್ತೂ ಬೆಂಬಲ ನೀಡಿಲ್ಲ. ಆದರೆ ಕಾಂಗ್ರೆಸ್ ಸೋಲಿಸುವುದಕ್ಕಾಗಿ, ಸಂಸದೆ ಶೋಭಾ ಕರಂದ್ಲಾಜೆ ಅವರ ಸ್ವಗ್ರಾಮ ದಕ್ಷಿಣ ಕನ್ನಡ ಜಿಲ್ಲೆ ಸವಣೂರಿನ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿಯೇ ಪಿಎಫ್ಐ ಜೊತೆ ಹೊಂದಾಣಿಕೆ ಮಾಡಿಕೊಂಡಿತ್ತು’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ಇಲ್ಲಿ ಆರೋಪಿಸಿದರು.

ಪಿಎಫ್‌ಐ ನಿಷೇಧಿಸುವಂತೆ ಒತ್ತಾಯಿಸುತ್ತಿರುವ ಬಿಜೆಪಿ ಅವಕಾಶವಾದಿ ರಾಜಕಾರಣ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಪಿಎಫ್ಐ ಸೇರಿದಂತೆ ಯಾವುದೇ ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸುವ ಪ್ರಸ್ತಾಪ ಸದ್ಯ ಸರ್ಕಾರದ ಮುಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸದಲ್ಲಿದ್ದು, ಅವರು ಬಂದ ಬಳಿಕ ಆ ಬಗ್ಗೆ ಚರ್ಚಿಸಲಾಗುವುದು ಎಂದರು.

‘ದೀಪಕ್ ರಾವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಿದ್ದು, ವಿಚಾರಣೆಗೊಳಪಡಿಸಲಾಗಿದೆ. ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಬಿಜೆಪಿಯವರು ದೂರುವಂತೆ ಕೊಲೆ ಮಾಡಿದವರು ಪಿಎಫ್ಐ ಸಂಘಟನೆಗೆ ಸೇರಿದ್ದಾರಾ? ಅಥವಾ ಇಲ್ಲವೋ ಎನ್ನುವುದು ತನಿಖೆಯಿಂದ ಬಹಿರಂಗವಾಗಲಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry