ಉತ್ತರ ಪ್ರದೇಶ: ತೀವ್ರ ಶೀತಗಾಳಿಗೆ 70ಕ್ಕೂ ಹೆಚ್ಚು ನಿರಾಶ್ರಿತರು, ಬಡವರು ಸಾವು

7

ಉತ್ತರ ಪ್ರದೇಶ: ತೀವ್ರ ಶೀತಗಾಳಿಗೆ 70ಕ್ಕೂ ಹೆಚ್ಚು ನಿರಾಶ್ರಿತರು, ಬಡವರು ಸಾವು

Published:
Updated:
ಉತ್ತರ ಪ್ರದೇಶ: ತೀವ್ರ ಶೀತಗಾಳಿಗೆ 70ಕ್ಕೂ ಹೆಚ್ಚು ನಿರಾಶ್ರಿತರು, ಬಡವರು ಸಾವು

ಲಕ್ನೋ: ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಶನಿವಾರ ತೀವ್ರ ಶೀತಗಾಳಿ ಪರಿಸ್ಥಿತಿ ಉಂಟಾಗಿದ್ದು, ಇದರಿಂದಾಗಿ 70ಕ್ಕೂ ಹೆಚ್ಚು ನಿರಾಶ್ರಿತರು ಮತ್ತು ಬಡವರು ಸಾವಿಗೀಡಾಗಿದ್ದಾರೆ.

ರಾಜ್ಯದ ಬಂದೇಲ್‌ಖಂಡ್‌ ಭಾಗದಲ್ಲಿ 28, ಪೂರ್ವಾಂಚಲ ಪ್ರದೇಶದಲ್ಲಿ 22, ಅಲಹಾಬಾದ್‌ನಲ್ಲಿ 11, ಬಾರಾಬಂಕಿಯಲ್ಲಿ 2 ಮತ್ತು ಬ್ರಿಜ್‌, ಬರೇಲಿ ಪ್ರದೇಶಗಳಲ್ಲಿ ತಲಾ 3 ಜನ ಮೃತಪಟ್ಟಿದ್ದಾರೆ. ಅಂಬೇಡ್ಕರ್‌ನಗರ ಜಿಲ್ಲೆ, ಫೈಜಾಬಾದ್‌, ರಾಯ್‌ ಬರೇಲಿಯ ಮಖದೂಮ್‌ಪುರ್‌ ಹಾಗೂ ಉಂಛಹಾರ್‌ನಲ್ಲಿ ತಲಾ ಒಬ್ಬರು ಸಾವಿಗೀಡಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.

ಸಾವಿಗೀಡಾಗಿರುವವರಲ್ಲಿ ಹೆಚ್ಚಿನವರು ನಿರಾಶ್ರಿತರಾಗಿರುವುದರಿಂದ ಅವರಿಗೆ ಆಶ್ರಯ ಕಲ್ಪಿಸುವ ಯೋಜನೆಗಳ ಲಾಭ, ಮಂತ್ರಿಗಳು ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರ ಪಾಲಾಗಿವೆ ಎಂಬ ಆರೋಪಗಳು ಕೇಳಿಬಂದಿವೆ.

(ಸಾಂದರ್ಭಿಕ ಚಿತ್ರ)

ಈ ಬಗ್ಗೆ ನಗರ ಆಯುಕ್ತರನ್ನು ವರದಿ ಕೇಳವಂತೆ ಸಾಮಾಜಿಕ ಗುಂಪುಗಳು ಹಾಗೂ ಸಾರ್ವಜನಿಕರು ಲಖನೌ ಮೇಯರ್‌ ಸನ್ಯಕ್ತಾ ಭಾಟಿ ಅವರನ್ನು ಒತ್ತಾಯಿಸಿದ್ದಾರೆ.

ಸುಲ್ತಾನ್ಪುರ್‌ ಜಿಲ್ಲೆಯಲ್ಲಿ ಕಳೆದ 24ಗಂಟೆ ಅವಧಿಯಲ್ಲಿ ಉಷ್ಣಾಂಶ 2.8 ಡಿಗ್ರಿಗೆ ಕುಸಿದಿದೆ. ಲಖನೌನಲ್ಲಿ 3 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದು, ಶುಕ್ರವಾರ ಈ ಋತುವಿನ ಅತ್ಯಂತ ಶೀತ ದಿನ ಎನ್ನಲಾಗಿದೆ. ಸದ್ಯ ಬಹ‌್ರಿಚ್‌ನಲ್ಲಿ 3.4, ಮುಜಾಫಿರ್‌ನಗರದಲ್ಲಿ 4.9, ಕಾನ್ಪುರದಲ್ಲಿ 4.2, ಬಾರಾಬಂಕಿಯಲ್ಲಿ 3.4 ಹಾಗೂ ವಾರಣಾಸಿ, ಮೀರತ್‌, ಲಕ್ಷ್ಮೀಪುರಗಳಲ್ಲಿ 5 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗಿದೆ.

ಮುಂದಿನ ಹಲವು ದಿನಗಳವರೆಗೆ ಇದೇ ವಾತಾವರಣ ಮುಂದುವರಿಯಲಿದ್ದು, ಜನವರಿ 10ರ ನಂತರ ಪರಿಸ್ಥಿತಿ ಸುಧಾರಣೆಗೊಳ್ಳಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry