ಮಂಗಳವಾರ, ಆಗಸ್ಟ್ 4, 2020
22 °C

ಮಾತೃಪೂರ್ಣ ಯೋಜನೆ; ಸಮರ್ಪಕ ಆಹಾರ ಪೂರೈಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಮಾತೃಪೂರ್ಣ ಯೋಜನೆ ಬಗ್ಗೆ ಅಪಸ್ವರ, ಮಳೆ ಮಾಪನಗಳ ಅಸಮರ್ಪಕ ಕಾರ್ಯ ನಿರ್ವಹಣೆ ಬಗ್ಗೆ ಆಕ್ಷೇಪ, ಕ್ಯಾರೆಟ್‌ ಬೆಳೆಗಾರರಿಗೆ ಉಪಕರಣ ವಿತರಣೆಗೆ ಆಗ್ರಹ... ಇವು ತಾಲ್ಲೂಕು ಪಂಚಾಯ್ತಿಯಲ್ಲಿ ಶುಕ್ರವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳು.

ಕಾರ್ಯಕ್ರಮದ ಆರಂಭದಲ್ಲಿ ಮಳೆ ಮಾಪನಗಳ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ವಾಡಿಕೆಗಿಂತ ಅಧಿಕ ಮಳೆ ಎಂದು ಅಂಕಿ ಅಂಶ ಹೇಳುತ್ತವೆ. ಆದರೆ, ಕೆರೆ ಕಟ್ಟೆಗಳು ತುಂಬಿಲ್ಲ. ಸರಿಯಾಗಿ ಪರಿಶೀಲಿಸಿ ಎಂದು ಅಧ್ಯಕ್ಷ ವೇಣುಗೋಪಾಲ್ ಕೃಷಿ ಅಧಿಕಾರಿಗೆ ಸೂಚಿಸಿದರು.

ಕೃಷಿ ಸಹಾಯಕ ನಿರ್ದೇಶಕ ವೆಂಕಟೇಶ್ ಪ್ರತಿಕ್ರಿಯಿಸಿ,  ಮಾಪನಗಳು ಸರಿ ಇವೆ. ಎಲ್ಲ ಆಟೊಮ್ಯಾಟಿಕ್  ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.   ರಾಜ್ಯ ಮಟ್ಟದಿಂದಲೇ ಅವುಗಳನ್ನು ನಿವರ್ಹಣೆ ಮಾಡುತ್ತಾರೆ. ಹಾಗಾಗಿ ಅವುಗಳ ಬಗ್ಗೆ ಸಂಶಯಬೇಡ ಎಂದರು.

ಜಿಲ್ಲೆಯ ವಾಡಿಕೆ ಮಳೆ 534 ಮಿಮೀ. ಕಳೆದ ವರ್ಷ 637 ಮಿಮೀ ಬಂದಿದೆ. ಅಂದರೆ ಶೇ 19ರಷ್ಟು ಅಧಿಕ ಮಳೆಯಾಗಿದೆ. ಚಿತ್ರದುರ್ಗ ತಾಲೂಕಿನಲ್ಲಿ ವಾಡಿಕೆ ಮಳೆ 605 ಮಿ.ಮೀ. 674 ಮಿ.ಮೀ ಬಂದಿದೆ. ಶೇ 11 ರಷ್ಟು ಹೆಚ್ಚು ಮಳೆಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಕಳೆದ ವರ್ಷ ಅಕ್ಟೋಬರ್ ತಿಂಗಳು ಹೊರತುಪಡಿಸಿ ಯಾವ ತಿಂಗಳಲ್ಲೂ ಉತ್ತಮ ಮಳೆಯಾಗಿಲ್ಲ. ಕೊಳವೆಬಾವಿಯಿಂದ ನೀರು ತೆಗೆದಷ್ಟು ಮಳೆ ನೀರನ್ನು ಭೂಮಿಗೆ ಇಂಗಿಸುತ್ತಿಲ್ಲ. ಇದರಿಂದ ಎಷ್ಟು ಮಳೆ ಬಂದರೂ ಅಂತರ್ಜಲ ಹೆಚ್ಚುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಸೌಲಭ್ಯ ಸರಿಯಾಗಿ ತಲುಪುತ್ತಿಲ್ಲ ಎಂಬ ಸರಿಯಾಗಿ ತಲುಪುತ್ತಿಲ್ಲ ಎಂಬ ಆರೋಪಗಳಿವೆ ಎಂದು ಸದಸ್ಯರೊಬ್ಬರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ವೇಣುಗೋಪಾಲ್,  ಅಂಥ ಆರೋಪಿವಿರುವ ಅಂಗನವಾಡಿ  ಕೇಂದ್ರಗಳಿಗೆ ನಿರಂತರ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ ಸೂಪರ್‌ವೈಸರ್‌ಗಳಿಗೆ ಸೂಚನಬ=

ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿ, ಬಾಣಂತಿಯರಿಗೆ ಒಂದೇ ರೀತಿ ಪೌಷ್ಠಿಕಾಂಶಗಳನ್ನು ಕೊಡಬೇಕಾಗಿದ್ದು, ಕೇಂದ್ರಗಳಲ್ಲೇ ಮಾತೃಪೂರ್ಣ ಯೋಜನೆ ಫಲಾನುಭವಿಗಳಿಗೂ ಆಹಾರ ಪೂರೈಕೆ ಮಾಡುತ್ತಿದ್ದೇವೆ ಎಂದು ಶಿಶು ಅಭಿವೃದ್ಧಿ ಕಲ್ಯಾಣ ಇಲಾಖೆ ಸೂಪರ್ ವೈಸರ್ ಉತ್ತರಿಸಿದರು.

ಇದಕ್ಕೆ ತೃಪ್ತರಾಗದ ಅಧ್ಯಕ್ಷ,‘ಫಲಾನುಭವಿಗಳು ಗೈರಾದರೂ, ಹಾಜರಿ ಪುಸ್ತಕದಲ್ಲಿ ಮಾತ್ರ ಆಹಾರ ನೀಡಿರುವುದಾಗಿ ನಮೂದಿಸುತ್ತಿರುವುದು  ಗಮನಕ್ಕೆ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಂಥ ಕೇಂದ್ರಗಳ ಕಾರ್ಯಕರ್ತೆಯರಿಗೆ ನೋಟಿಸ್ ನೀಡಲಾಗಿದೆ’ ಎಂದು ಅಧಿಕಾರಿ ಮರು ಉತ್ತರಿಸಿದರು. ನೋಟಿಸ್ ನೀಡಿದರೆ ಪ್ರಯೋಜನವಿಲ್ಲ. ಕಾನೂನು ರೀತ್ಯ ಶಿಸ್ತುಕ್ರಮ ಕೈಗೊಳ್ಳಿ’ ಎಂದು  ಎಚ್ಚರಿಕೆ ನೀಡಿದರು.

ಕಾರ್ಯನಿರ್ವಾಹಕ ಅಧಿಕಾರಿ ಬಿ. ಲಕ್ಷ್ಮೀಪತಿ ತಾಲ್ಲೂಕಿನಲ್ಲಿ ಹಿಂದಿನ ವರ್ಷದ ಏಪ್ರಿಲ್‌ ನಿಂದ ಡಿಸೆಂಬರ್ ಅಂತ್ಯದವರೆಗೆ ಎಷ್ಟು ಕೊಳವೆಬಾವಿ ಕೊರೆಸಿದ್ದೀರಿ ಎಂದು ಗ್ರಾಮ ಪಂಚಾಯ್ತಿವಾರು ಮಾಹಿತಿ ನೀಡಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗೆ ಸೂಚಿಸಿದರು.

ಶಿಕ್ಷಣ ಇಲಾಖೆ ಪ್ರಗತಿ ಬಗ್ಗೆ ಮಾಹಿತಿ ನೀಡಿದ ಬಿಇಒ ನಾಗಭೂಷಣ್, ಸರ್ಕಾರಿ ಶಾಲೆ ಮಕ್ಕಳಲ್ಲಿ ಇಂಗ್ಲಿಷ್ ಭಾಷೆ ಉತ್ತಮಪಡಿಸಲು ತಾಲೂಕಿನ 309 ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಫೆಸ್ಟ್ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.

ಆರೋಗ್ಯ ಇಲಾಖೆ ಅಧಿಕಾರಿ ಮಾತನಾಡಿ,  ಡಿಸೆಂಬರ್ ತಿಂಗಳಲ್ಲಿ ತಾಲ್ಲೂಕಿನಲ್ಲಿ ತಲಾ 24 ಚಿಕನ್‌ಗುನ್ಯ ಮತ್ತು ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಯಾವುದೇ ಸಮಸ್ಯೆಯಾಗಿಲ್ಲ. ರೋಗ ನಿಯಂತ್ರಣದಲ್ಲಿದೆ ಎಂದು ತಿಳಿಸಿದರು.

ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ, ಕ್ಯಾರೆಟ್ ಬೆಳೆಯನ್ನು ಕೊಯ್ಲಿನ ನಂತರ ಶುದ್ಧೀಕರಿಸಲು ಅಗತ್ಯವಾದ ಯಂತ್ರಗಳನ್ನು ಪರಿಚಯಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ತೋಟಗಾರಿಕೆ ಅಧಿಕಾರಿಗೆ ಸಲಹೆ ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಕೆ.ಶೋಭಾ ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಬೋರಯ್ಯ, ಸಹಾಯಕ ನಿರ್ದೇಶಕ ಹನುಮಂತಪ್ಪ, ವ್ಯವಸ್ಥಾಪಕ ಹನುಮಂತರಾಯಪ್ಪ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.