ಬುಧವಾರ, ಜೂಲೈ 8, 2020
21 °C

ವೈದ್ಯಕೀಯ ಆಯೋಗ ಮಸೂದೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮಸೂದೆಯು ವೈದ್ಯಕೀಯ ಶಿಕ್ಷಣದ ವ್ಯಾಪಾರೀಕರಣಕ್ಕೆ ಕುಮ್ಮಕ್ಕು ನೀಡುವಂತಿದೆ. ಜತೆಗೆ ವೈದ್ಯಕೀಯ ಕ್ಷೇತ್ರವನ್ನು ಜಾಗತಿಕ ಸರಕನ್ನಾಗಿಸುವ ಹುನ್ನಾರ ಹೊಂದಿದೆ ಎಂದು ಆರೋಪಿಸಿ ಎಐಡಿಎಸ್‌ಒ ಸಂಘಟನೆ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.

‘ಲೋಕಸಭೆಯು ಸದನ ಸಮಿತಿಗೆ ಎನ್‌ಎಂಸಿ ಮಸೂದೆಯನ್ನು ಪುನರ್ ಪರಿಶೀಲನೆಗೆ ಕಳುಹಿಸಿದೆ. ಆದರೂ ಈ ಮಸೂದೆ ರದ್ದಾಗಬೇಕು. ಈ ಹಿಂದೆ ಇದ್ದ ಎಂಸಿಐ (ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ) ಚುನಾಯಿತ ಸ್ವಾಯತ್ತ ಸಂಸ್ಥೆಯಾಗಿ ಮುಂದುವರೆಯಲಿ’ ಎಂದು ಶರಣು ಗೋನಾವರ ಆಗ್ರಹಿಸಿದರು.

‘ಎಂಸಿಐ ಜಾಗದಲ್ಲಿ ಕೇಂದ್ರ ಸರ್ಕಾರ ನಾಮನಿರ್ದೇಶಿತ ಸದಸ್ಯರೇ ಬಹುಸಂಖ್ಯೆಯಲ್ಲಿರುವ ಆಡಳಿತಶಾಹಿ ಸಂಸ್ಥೆಯಾದ ಎನ್.ಎಂ.ಸಿಯನ್ನು ಸ್ಥಾಪಿಸಲಾಗುತ್ತಿದೆ. ಎಲ್ಲಾ ನಿರ್ಧಾರಗಳು ಕೇಂದ್ರ ಸರ್ಕಾರದ ಮೂಗಿನ ನೇರಕ್ಕೆ ನಡೆದು, ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ವ್ಯಾಪಾರಿಕರಣಕ್ಕೆ ಇನ್ನಷ್ಟು ಕುಮ್ಮಕ್ಕು ದೊರೆಯುವಂತಾಗುತ್ತದೆ’ ಎಂದರು.

‘ಮಸೂದೆ ಮೂಲಕ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ 40ರಷ್ಟು ಮಾತ್ರ ಸರ್ಕಾರಿ ಕೋಟಾದಡಿ ತುಂಬಲು ನೀತಿ ರೂಪಿಸಿದೆ. ಇದರಿಂದ ವೈದ್ಯಕೀಯ ಸೀಟುಗಳ ವ್ಯಾಪಾರಕ್ಕೆ ಪುಷ್ಟಿ ನೀಡಿದೆ. ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗಿದ್ದ ಅಲ್ಪಸ್ವಲ್ಪ ಅವಕಾಶವನ್ನೂ ಕೇಂದ್ರ ಸರ್ಕಾರ ಕಿತ್ತುಕೊಂಡಿದೆ’ ಎಂದು ಆರೋಪಿಸಿದರು.

ಎಐಡಿಎಸ್‌ಒ ಜಂಟಿ ಕಾರ್ಯದರ್ಶಿ ಮಹಾಂತೇಶ ಮಾತನಾಡಿ, ‘ದೇಶದ ಆಸ್ಪತ್ರೆಗಳಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಲಿಚ್ಛಿಸುವ ಅಭ್ಯರ್ಥಿಗಳಿಗೆ ಅಗತ್ಯವಿದ್ದ ಸ್ಕ್ರೀನಿಂಗ್‌ ಟೆಸ್ಟ್‌ ಅನ್ನು ಕೇಂದ್ರ ರದ್ದುಗೊಳಿಸಿದೆ. ಇದರ ಬದಲು ಬಹು ಆಯ್ಕೆಯ ಹಾಗೂ ಸುಲಭವಾದ ಲೈಸೆನ್ಸಿಯೇಟ್‌ ಪರೀಕ್ಷೆ ಬರೆದರೆ ಸಾಕು ಎಂದಿದೆ. ಆ ಮೂಲಕ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ವಿದೇಶಿ ಅಭ್ಯರ್ಥಿಗಳನ್ನು ಸುಲಭವಾಗಿ ದೊರಕಿಸುವುದು ಕೇಂದ್ರದ ಉದ್ದೇಶವಾಗಿದೆ’ ಎಂದು ಅವರು ದೂರಿದರು.

ಉದ್ದೇಶಿತ ಮಸೂದೆಯ ಪ್ರತಿಯನ್ನು ದಹಿಸಿ ಘೋಷಣೆ ಕೂಗಿದರು. ಅಕ್ಷಯ ತಳಕಲ್ಲ, ರಣಜಿತ್‌ ದೂಪದ್‌, ಕೆ.ಸಿಂಧೂ, ಕಿರಣ ಮಾಳಗಿ, ಸಂತೋಷ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.