ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವು ಮುಕ್ತ ವಿಶ್ವ ನಿರ್ಮಾಣಕ್ಕೆ ಸಲಹೆ

Last Updated 6 ಜನವರಿ 2018, 9:13 IST
ಅಕ್ಷರ ಗಾತ್ರ

ಧಾರವಾಡ: ‘ಬದಲಾದ ಹವಾಮಾನ ಹಾಗೂ ಪೌಷ್ಟಿಕ ಆಹಾರದ ಕೊರತೆಯನ್ನು ನೀಗಿಸಲು ಯುವ ವಿಜ್ಞಾನಿಗಳು ಹೆಚ್ಚು ಕಾರ್ಯಪ್ರವೃತ್ತರಾಗಬೇಕು’ ಎಂದು ಡಾ. ನಾರ್ಮನ್ ಬೋರ್ಲಾಗ್‌ ಅವರ ಪುತ್ರಿ, ಬೋರ್ಲಾಗ್‌ ಗ್ಲೋಬಲ್‌ ರಸ್ಟ್ ಇನ್ಶಿಯೇಟಿವ್‌ ಅಧ್ಯಕ್ಷೆ ಡಾ. ಜಿನಿ ಬೋರ್ಲಾಗ್ ಲೂಬ್‌ ಹೇಳಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪನೆಗೊಂಡ ಡಾ. ನಾರ್ಮನ್ ಬೋರ್ಲಾಗ್‌ ಕೃಷಿ ಅಭಿವೃದ್ಧಿ ಕುರಿತ ಅಂತರರಾಷ್ಟ್ರೀಯ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಜಗತ್ತು ಸಾಕಷ್ಟು ಮುಂದುವರೆದಿದ್ದರೂ, ಇಂದಿಗೂ ಏಳು ಶತಕೋಟಿ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 2050ರ ಹೊತ್ತಿಗೆ ಇದು 9 ಶತಕೋಟಿಗೆ ತಲುಪುವ ಸಾಧ್ಯತೆ ಇದೆ. ಇಂಥ ಸಂದರ್ಭದಲ್ಲಿ ಯುವ ಸಮುದಾಯ ಒಟ್ಟಾಗಿ ಅಪೌಷ್ಟಿಕತೆ ವಿರುದ್ಧ ಹೋರಾಡಬೇಕಿದೆ. ಆ ಮೂಲಕ ಹಸಿವು ಮುಕ್ತ ಜಗತ್ತನ್ನು ನಿರ್ಮಾಣ ಮಾಡಬೇಕಿದೆ’ ಎಂದರು.

‘ನೀವೇ ಮುಂದಿನ ಜಗತ್ತು. ನನ್ನ ತಂದೆ ಕಂಡ ಕನಸನ್ನು ಯುವ ಜನತೆ ನನಸು ಮಾಡಬೇಕು. ಇಂದಿನ ಎಲ್ಲಾ ರೀತಿಯ ತಂತ್ರಜ್ಞಾನಗಳನ್ನು ಬಳಸಿಕೊಂಡು ಹಸಿವು ಮುಕ್ತ ಜಗತ್ತನ್ನು ನಿರ್ಮಾಣ ಮಾಡಬೇಕು’ ಎಂದು ಹೇಳಿದರು.

‘60ರ ದಶಕದಲ್ಲಿ ನನ್ನ ತಂದೆ ಡಾ. ಬೋರ್ಲಾಗ್ ಅವರು ಹಸಿವು ಮುಕ್ತ ಜಗತ್ತಿನ ಕನಸ ಕಂಡಿದ್ದರು. ಆ ಸಂದರ್ಭದಲ್ಲಿ ಏಷ್ಯಾ ಹಾಗೂ ಆಫ್ರಿಕಾ ಖಂಡಗಳು ಹಸಿವಿನಿಂದ ತತ್ತರಿಸಿದ್ದವು. ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅವರು ಪರಿಚಯಿಸಿದ ಹೊಸ ತಳಿಗಳು ಹಾಗೂ ನವೀನ ಕೃಷಿ ಪದ್ಧತಿಗಳು ಆಗಿನ ವಿಜ್ಞಾನಿಗಳಲ್ಲಿ ವಿಶ್ವಾಸ ಮೂಡಿಸಿರಲಿಲ್ಲ. ಆದರೆ, ಅದರ ಫಲಿತಾಂಶವನ್ನು ಕಂಡ ಜನರು ಹಾಗೂ ವಿಜ್ಞಾನಿಗಳು ನಂತರ ಡಾ. ಬೋರ್ಲಾಗ್ ಅವರನ್ನು ಬಿಡಲೇ ಇಲ್ಲ’ ಎಂದರು.

‘ಇಂಥ ಪ್ರಯತ್ನ ಭಾರತದಲ್ಲೂ ಅವರು ಮಾಡಿದರು. ಇಲ್ಲಿನ ಯುವ ವಿಜ್ಞಾನಿಗಳು ಎಂದರೆ ಅವರಿಗೆ ಅಚ್ಚುಮೆಚ್ಚು. ಡಾ. ಎಂ.ಎಸ್‌.ಸ್ವಾಮಿನಾಥನ್ ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. 1960ಕ್ಕೆ ಹೋಲಿಸಿದಲ್ಲಿ ಇಂದಿನ ಭಾರತವನ್ನು ಹಾಗೂ ಈ ಉತ್ಸಾಹಿ ಯುವ ಸಮುದಾಯವನ್ನು ಕಂಡಿದ್ದರೆ ಅತೀವ ಸಂತಸಪಡುತ್ತಿದ್ದರು’ ಎಂದು ಜೀನ್ ಹೇಳಿದರು.

ಕಲಾವಿದ ಬಿ.ಮಾರುತಿ ಕೈಯಲ್ಲಿ ಅರಳಿದ ಡಾ. ನಾರ್ಮಲ್ ಬೋರ್ಲಾಗ್ ಅವರ ಕಂಚಿನ ಪ್ರತಿಮೆಯನ್ನು ಡಾ.ಜಿನಿ ಅನಾವರಣಗೊಳಿಸಿದರು. ಕಾರ್ನಿಯಲ್ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ರಾನಿ ಕಾಫ್ಮನ್‌, ಡೀನ್‌ ಡಾ. ಮ್ಯಾಕ್ಸ್‌ ಪೆಫೆರ್‌, ಡಾ. ಕೆ.ವಿ.ರಮಣ, ಟೆಕ್ಸಾಸ್‌ ವಿವಿ ನಿರ್ದೇಶಕ ಡಾ. ಭೀಮು ಪಾಟೀಲ, ಧಾರವಾಡ ಕೃಷಿ ವಿವಿ ಕುಲಪತಿ ಡಾ. ಡಿ.ಪಿ.ಬಿರಾದರಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT