ಗುರುವಾರ , ಜೂಲೈ 9, 2020
26 °C

ಕೃಷಿಯಲ್ಲಿ ಒಂದು ದೇಶ ಒಂದು ಬೆಲೆ ಅಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷಿಯಲ್ಲಿ ಒಂದು ದೇಶ ಒಂದು ಬೆಲೆ ಅಸಾಧ್ಯ

ಹಾವೇರಿ: ‘ಒಂದು ದೇಶ ಒಂದು ಬೆಲೆ’ಯು ಕೃಷಿಯಲ್ಲಿ ಅಸಾಧ್ಯ. ಭೌಗೋಳಿಕತೆ, ಆರ್ಥಿಕತೆ, ಹವಾಮಾನ ಮತ್ತಿತರ ವಿಚಾರಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಬೆಂಬಲ ಬೆಲೆ (ಎಂ.ಎಸ್.ಪಿ) ನಿಗದಿ ಪಡಿಸಬೇಕು’ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಎನ್. ಕಮ್ಮರಡಿ ಇಲ್ಲಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಅಲ್ಲದೇ, ಎಂ.ಎಸ್‌.ಪಿ.ಗೂ ಎಂ.ಆರ್.ಪಿ. (ಗರಿಷ್ಠ ಚಿಲ್ಲರೆ ದರ)ಯಂತೆ ಕಾನೂನು ಬಲ ನೀಡುವ ಕಾಯ್ದೆ ಸಿದ್ಧಗೊಳ್ಳುತ್ತಿದೆ. ಕಾಯ್ದೆ ಪ್ರಕಾರ ಎಂ.ಎಸ್.ಪಿ.ಗಿಂತ ಮಧ್ಯವರ್ತಿ ಅಥವಾ ವ್ಯಾಪಾರಿ ಕಡಿಮೆಗೆ ಖರೀದಿಸಿದರೆ ಅಪರಾಧ ಆಗಲಿದೆ’ ಎಂದರು.

‘₹5 ಸಾವಿರ ಕೋಟಿಗೂ ಹೆಚ್ಚು ಬೆಲೆ ಸ್ಥಿರೀಕರಣ ನಿಧಿಯನ್ನು ಮೀಸಲು ಇಡಬೇಕು. ರೈತರಿಮದ ಖರೀದಿಸಿದ ತಿಂಗಳೊಳಗೆ ಹಣ ಪಾವತಿಸದಿದ್ದರೆ ಬಡ್ಡಿಯನ್ನೂ ನೀಡಬೇಕು. ಗುಣಮಟ್ಟವನ್ನು ಹೊಲದಲ್ಲೇ ನಿರ್ಧರಿಸಬೇಕು. ಸಾಗಾಣಿಕೆ ವೆಚ್ಚವನ್ನು ಸರ್ಕಾರ ಭರಿಸಬೇಕು. ಅಡಮಾನ ಸಾಲ ವ್ಯವಸ್ಥೆ ವ್ಯಾಪಕಗೊಳಿಸಬೇಕು ಎಂಬ ಶಿಫಾರಸುಗಳನ್ನು ನೀಡಲಾಗಿದ್ದು, ಬಜೆಟ್‌ನಲ್ಲಿ ಜಾರಿಗೊಳಿಸುವ ಭರವಸೆ ಇದೆ’ ಎಂದರು.

ಸರ್ಕಾರಕ್ಕೆ ವರದಿ: ‘ವಾರದ ಹಿಂದೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಬೆಳೆಗಳ ಉತ್ಪಾದನಾ ವೆಚ್ಚದಿಂದ ಮಾರುಕಟ್ಟೆ ಬೆಲೆ ತನಕದ ರಾಜ್ಯ, ದೇಶ, ವಿಶ್ವದ ವಸ್ತುಸ್ಥಿತಿಯನ್ನು ಸಲ್ಲಿಸಲಾಗಿದೆ. ಪ್ರಮುಖ 26 ಬೆಳೆಗಳ ಏಪ್ರಿಲ್‌ ತನಕದ ಬೆಲೆ ಮುನ್ಸೂಚನೆಯನ್ನು ಮಾರುಕಟ್ಟೆವಾರು ನೀಡಲಾಗಿದೆ’ ಎಂದರು.

ಮೈಕ್ರೋಸಾಫ್ಟ್‌ ಸಂಸ್ಥೆ ಸಹಯೋಗದಲ್ಲಿ ‘ಬೆಲೆ ಮುನ್ಸೂಚನೆ’ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಿದ್ದೇವೆ. ಇದು ಬಹುತೇಕ ನಿಖರ ಬೆಲೆಯನ್ನು ನೀಡುತ್ತದೆ. ಆದರೆ, ಪ್ರಕೃತಿ ವಿಕೋಪ, ಯುದ್ಧ ಮತ್ತಿತರ ಬಾಹ್ಯ ವಿಚಾರಗಳು ಪ್ರಭಾವ ಬೀಳಬಹುದು’ ಎಂದ ಅವರು, ‘ನೋಟು ರದ್ಧತಿ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.)ಯಿಂದಾಗಿ ಮಾರುಕಟ್ಟೆಯಲ್ಲಿ ಸಹಜ ರೀತಿಯ ವಹಿವಾಟು ನಡೆಯುತ್ತಿಲ್ಲ. ಇದೂ ಕೃಷಿ ಉತ್ಪನ್ನಗಳ ಬೆಲೆ ಮೇಲೆ ಪ್ರಭಾವ ಬೀರುತ್ತಿದೆ’ ಎಂದರು.

ದತ್ತು ಸ್ವೀಕಾರ: ಬ್ಯಾಡಗಿ ತಾಲ್ಲೂಕಿನ ಖರ್ದು ವೀರಾಪುರ ಗ್ರಾಮವನ್ನು ದತ್ತು ಸ್ವೀಕರಿಸಲಾಗಿದ್ದು, ಕೃಷಿ ಆದಾಯ ಮತ್ತು ರೈತರ ಕಲ್ಯಾಣ ವೃದ್ಧಿ ಬಗ್ಗೆ ಪ್ರಯೋಗ ನಡೆಯುತ್ತಿದೆ. ಇಲ್ಲಿನ ರೈತರ ಆರೋಗ್ಯ, ಆದಾಯ, ಕಲ್ಯಾಣ, ಭವಿಷ್ಯದ ಆರೋಗ್ಯದ ಕುರಿತು ತಳಮಟ್ಟದ ವರದಿ ಸಿದ್ಧಪಡಿಸಿದ್ದೇವೆ ಎಂದು ಹೇಳಿದರು. ಇಲ್ಲಿ ಹೊಸ ಬೆಳೆ ಪದ್ಧತಿ, ಅರಣ್ಯ ಕೃಷಿ, ಉಪ ಕೃಷಿ ಇತ್ಯಾದಿ ಪ್ರಯೋಗದ ಜೊತೆ, ಅಡಮಾನ ಸಾಲ ವ್ಯವಸ್ಥೆ ಹೆಚ್ಚಳಕ್ಕೂ ಸೂಚಿಸಿದ್ದೇವೆ ಎಂದರು.

ಫಲಿತಾಂಶ: ‘ಆಯೋಗವು ಕಳೆದ ಮೂರು ವರ್ಷಗಳಲ್ಲಿ ನೀಡಿದ ವರದಿಯ ಫಲಿತಾಂಶವು ಸರ್ಕಾರದ ನಿರ್ಧಾರಗಳಲ್ಲಿ ಕಂಡುಬಂದಿದೆ. ಇದು ರಾಜ್ಯದ ಶೇ 90 ರೈತರ ಬದುಕಿನ ಮೇಲೆ ಬೀರಿದೆ’ ಎಂದ ಅವರು, ‘ಬೆಲೆ ನಿರ್ಣಯಕ್ಕೆ ಪೂರಕವಾದ ಉತ್ಪಾದನಾ ವೆಚ್ಚದ ಅಧ್ಯಯನವನ್ನು ಆಯೋಗ ಮಾಡಿದೆ’ ಎಂದರು.

ನಮ್ಮ ವರದಿ ಆಧಾರದಲ್ಲಿ ಕೇಂದ್ರ ಸರ್ಕಾರವು ಕಾಳು ಮೆಣಸು ಆಮದಿನ ಮೇಲೆ ಕೆ.ಜಿ.ಗೆ ಕನಿಷ್ಠ ₹ 500 ದರ ಹಾಗೂ ಶೇ 3 ಶುಲ್ಕ ವಿಧಿಸಿದೆ. ಮೂರು ವರ್ಷಗಳಲ್ಲಿ 4.5 ಲಕ್ಷ ರೈತರಿಂದ ಒಟ್ಟು (ಎಲ್ಲ ಬೆಳೆಗಳು) 2.05 ಕೋಟಿ ಕ್ವಿಂಟಲ್ ಕೃಷಿ ಉತ್ಪನ್ನವನ್ನು ಸರ್ಕಾರ ಖರೀದಿಸಿದೆ ಎಂದರು.

ರಾಗಿ ಮತ್ತು ತೊಗರಿಗೆ ಕೇಂದ್ರ ಸರ್ಕಾರ ಘೋಷಿಸಿದ ಬೆಲೆಯು ಉತ್ಪಾದನಾ ವೆಚ್ಚಕ್ಕೆ ಸಮವಿಲ್ಲ. ಹೀಗಾಗಿ ರಾಜ್ಯ ಸರ್ಕಾರವು ರಾಗಿಗೆ ₹2,300 ಹಾಗೂ ಜೋಳಕ್ಕೆ ₹2,100 ಬೆಂಬಲ ಬೆಲೆ ನಿಗದಿ ಮಾಡಿದೆ. ಅಲ್ಲದೇ, 20 ಲಕ್ಷ ಕ್ವಿಂಟಲ್ (2014–15) ರಾಗಿ ಹಾಗೂ 35.22 ಲಕ್ಷ ಕ್ವಿಂಟಲ್ (2015–16) ತೊಗರಿಯನ್ನು ಸರ್ಕಾರವೇ ಖರೀದಿಸಿದೆ ಎಂದರು.

ಭವಿಷ್ಯ: ಭತ್ತ, ಹತ್ತಿ, ಕಡಲೆ, ದ್ರಾಕ್ಷಿ ಮತ್ತು ಸಾಂಬಾರ ಬೆಳೆಗಳನ್ನು ಹೊರತು ಪಡಿಸಿದರೆ, ಉಳಿದವುಗಳ ಧಾರಣೆ ಇಳಿಮುಖ ಕಾಣುವ ಸಾಧ್ಯತೆ ಇದೆ ಎಂದರು.

ಎಪಿಎಂಸಿ: ಕೃಷಿ ಉತ್ಪನ್ನಗಳ ವಹಿವಾಟು ಶೇ 36ರಷ್ಟು ಮಾತ್ರ ಎಪಿಎಂಸಿ ಮೂಲಕ ನಡೆಯುತ್ತಿದ್ದು, ಬೆಲೆ ನಿಗದಿಯೂ ಕ್ಲಿಷ್ಟಕರವಾಗಿದೆ. ಹಣ್ಣು ಮತ್ತು ತರಕಾರಿ ಪ್ರಮಾಣ ತೀರಾ ಕಡಿಮೆ ಇದೆ ಎಂದು ಅವರು ತಿಳಿಸಿದರು.

ಕಡಿಮೆ ಉತ್ಪಾದನೆ ಹಾಗೂ ಅಧಿಕ ಉತ್ಪಾದನಾ ವೆಚ್ಚಗಳ ಕಾರಣ ಕೃಷಿ ಲಾಭದಾಯಕವಾಗಿಲ್ಲ. ಅದಕ್ಕಾಗಿ ಯಾಂತ್ರೀಕರಣ, ಅಡಮಾನ ಸಾಲ, ವಿಕೇಂದ್ರೀಕರಣ  ಸಲಹೆಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

ಮೆಕ್ಕೆ ಜೋಳ ಸಿರಿಧಾನ್ಯ!

‘ಮೆಕ್ಕೆ ಜೋಳವನ್ನು ಎಂ.ಎಸ್. ಸ್ವಾಮಿನಾಥನ್ ವರದಿಯಲ್ಲಿ ‘ಸಿರಿಧಾನ್ಯ’ ಎಂದು ಪರಿಗಣಿಸಲಾಗಿದ್ದು, ರಾಜ್ಯ ಸರ್ಕಾರವು ಪಡಿತರದಲ್ಲೇ ವಿತರಿಸಬೇಕು’ ಎಂದು ಕೇಂದ್ರ ಸರ್ಕಾರ ಷರತ್ತು ವಿಧಿಸಿದೆ. ಆದರೆ, ಸ್ವಾಮಿನಾಥನ್ ವರದಿಯು ‘ಜೋಳ’ವನ್ನು ಸಿರಿಧಾನ್ಯ ಎಂದು ಉಲ್ಲೇಖಿಸಿರುವುದನ್ನು ಕೇಂದ್ರವು ತಪ್ಪಾಗಿ ಅರ್ಥೈಸಿಕೊಂಡಿದೆ.

ಈ ಕುರಿತು 10 ಬಾರಿ ಪತ್ರ ಬರೆದರೂ ಪ್ರತಿಕ್ರಿಯೆ ಬಂದಿಲ್ಲ. ಇದರಿಂದಾಗಿ ₹1,425 ಬೆಂಬಲ ಬೆಲೆ ಘೋಷಿಸಿದರೂ, ಮೆಕ್ಕೆ ಜೋಳ ಖರೀದಿಯು ರಾಜ್ಯ ಸರ್ಕಾರಕ್ಕೆ ಕಷ್ಟವಾಗಿದೆ. ಆದರೂ, ರೈತರ ಹಿತದೃಷ್ಟಿಯಿಂದ ಮಧ್ಯಂತರ ವ್ಯವಸ್ಥೆ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು’ ಎಂದು ಪ್ರಕಾಶ್ ಎನ್‌. ಕಮ್ಮರಡಿ ಹೇಳಿದರು.

* * 

ಉತ್ಪಾದನಾ ವೆಚ್ಚ, ಕೆ.ಜಿ. ದರ ಇತ್ಯಾದಿಗಳನ್ನು ರೈತರು ಹೊಲದಲ್ಲೇ ನಿರ್ಧರಿಸಲು ಸಾಧ್ಯವಾದ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ

ಪ್ರಕಾಶ್ ಎನ್. ಕಮ್ಮರಡಿ

ಅಧ್ಯಕ್ಷರು, ಕೃಷಿ ಬೆಲೆ ಆಯೋಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.