‘ಸಮ್ಮೇಳನಗಳಿಂದ ನಾಡಿನಲ್ಲಿ ಶಾಂತಿ ಸಾಧ್ಯ’

7

‘ಸಮ್ಮೇಳನಗಳಿಂದ ನಾಡಿನಲ್ಲಿ ಶಾಂತಿ ಸಾಧ್ಯ’

Published:
Updated:
‘ಸಮ್ಮೇಳನಗಳಿಂದ ನಾಡಿನಲ್ಲಿ ಶಾಂತಿ ಸಾಧ್ಯ’

ಬ್ಯಾಡಗಿ: ಮಕ್ಕಳ ಮೇಲಿನ ಅತ್ಯಾಚಾರ, ಕೊಲೆಗಳಂತಹ ಪ್ರಕರಣಗಳಿಂದ ನಮ್ಮ ನಾಡು ತತ್ತರಿಸಿ ಹೋಗಿದ್ದು, ನಾಡಿನಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸಾಹಿತಿ ಪ್ರೊ. ಚಂದ್ರಶೇಖರ ವಸ್ತ್ರದ ಹೇಳಿದರು.

ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ವತಿಯಿಂದ ಶುಕ್ರವಾರ ನಡೆದ ನಾಲ್ಕನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ನಾಡಿಗೆ ಅನ್ನ ನೀಡಿ ಸಲುಹಿದರೆ, ಸಾಹಿತಿಗಳು ಬುದ್ಧಿಯನ್ನು ನೀಡಿ ಸಲಹುತ್ತಾರೆ. ಹೀಗಾಗಿ, ರೈತರು ಹಾಗೂ ಸಾಹಿತಿಗಳು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಎಂದರು.

 ಕೋಮುವಾದಿ ಹಾಗೂಸಾಹಿತಿ ಸಂಕಮ್ಮ ಸಂಕಣ್ಣನವರ  ಮಾತನಾಡಿ, ‘ಸಾಹಿತಿಗಳಿಗೆ ಮಾತ್ರ ಸೀಮಿತವಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನಗಳು ಇಂದು ನುಡಿ ಸಂಭ್ರಮದ ಜಾತ್ರೆಗಳಾಗಿ ಪರಿವರ್ತನೆಗೊಂಡಿವೆ. ಮೂಲಭೂತವಾದಿಗಳಿಂದ ದೇಶದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಿವೆ. ಅವುಗಳನ್ನು ನಿಗ್ರಹಿಸಲು ಸಮಾಜದ ಮುಖ್ಯ ಪಾತ್ರಧಾರಿಗಳಾಗಿರುವ ಸಾಹಿತಿಗಳಿಂದ ಮಾತ್ರ ಸಾಧ್ಯ’ ಎಂದರು.

ಕಾಂಗ್ರೆಸ್‌ ಮುಖಂಡ ಎಸ್‌.ಆರ್‌.ಪಾಟೀಲ ಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದರು. ಬಿಜೆಪಿ ಮುಖಂಡ ವಿರೂಪಾಕ್ಷಪ್ಪ ಬಳ್ಳಾರಿ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರು ಛತ್ರದ ಮಾತನಾಡಿದರು. ಪ್ರೊ.ಎಸ್‌.ಡಿ.ಬಾಲಾಜಿರಾವ್‌ ಅನುವಾದಿತ ಕೃತಿಯನ್ನು ಸಂಕಮ್ಮ ಬಿಡುಗಡೆ ಮಾಡಿದರು.

ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿ ಇರಲಿ: ‘ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿಯೇ ನೀಡುವುದು ಅಗತ್ಯವಾಗಿದ್ದು, ಪ್ರತಿಯೊಬ್ಬ ಕನ್ನಡಿಗರು ಭಾಷಾಭಿಮಾನವನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ’ ಎಂದು ಬಾಲಚಂದ್ರ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷ ಬಾಲಚಂದ್ರ ಪಾಟೀಲ ಹೇಳಿದರು. ಸಮ್ಮೇಳನದ ಮೆರವಣೆಗೆಗೆ ಚಾಲನೆ ನೀಡಿ ಬಳಿಕ ಅವರು ಮಾತನಾಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸವಿತಾ ಸುತ್ತಕೋಟಿ, ನಿವೃತ್ತ ಪ್ರಾಚಾರ್ಯ ಎಸ್‌.ಬಿ.ತವರದ, ಪುರಸಭೆ ಅಧ್ಯಕ್ಷ ಬಸವಣ್ಣೆಪ್ಪ ಛತ್ರದ, ಸದಸ್ಯ ಮುರಿಗೆಪ್ಪ ಶೆಟ್ಟರ, ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಇದ್ದರು.

ಮೆರವಣಿಗೆ ಮೆರುಗು

ಪಟ್ಟಣದ ನೆಹರು ನಗರದಿಂದ ಆರಂಭವಾದ ಸಮ್ಮೇಳನದ ಅಧ್ಯಕ್ಷ ಡಾ.ಪ್ರೇಮಾನಂದ ಲಕ್ಕಣ್ಣನವರ ಹಾಗೂ ಪತ್ನಿ ಶಶಿಕಲಾ ಹಾಗೂ ಭುವನೇಶ್ವರಿದೇವಿ ಭಾವಚಿತ್ರದ ಮೆರವಣೆಗೆಯು ಪ್ರಮುಖ ಬೀದಿಗಳಲ್ಲಿ ಸಾಗಿತು.

ಮೆರವಣಿಗೆಯುದ್ದಕ್ಕೂ ಕುಂಭ ಹೊತ್ತ ಮಹಿಳೆಯರು, ಮೋಟೆಬೆನ್ನೂರ ಗ್ರಾಮದ ನವೋದಯ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಗೊಂಬೆಗಳು, ಮಂಗಳಮುಖಿಯರ ನೃತ್ಯ, ಸಮಾಳ, ಡೊಳ್ಳು ಕುಣಿತ ವಿಶೇಷ ಗಮನ ಸೆಳೆದವು. ಕನ್ನಡ ಹಾಡುಗಳಿಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿದ್ದು ಆಕರ್ಷಕವಾಗಿತ್ತು.

* * 

ಕನ್ನಡ ಸಾಹಿತ್ಯದ ಮೂಲಕ ನೂತನ ತಾಯ್ತನವನ್ನು ಜಾಗೃತಗೊಳಿಸುವ ಕೆಲಸವಾಗಬೇಕಿದೆ.

ಪ್ರೊ.ಚಂದ್ರಶೇಖರ ವಸ್ತ್ರದ

ಸಾಹಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry