ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರೆಕಾಯಿಗೆ ಕೀಟಬಾಧೆ: ರೈತ ಕಂಗಾಲು

Last Updated 6 ಜನವರಿ 2018, 10:16 IST
ಅಕ್ಷರ ಗಾತ್ರ

ತಾವರಗೇರಾ: ಉತ್ತಮ ಫಸಲು ಕಂಡಿದ್ದ ಅವರೆಕಾಯಿಗೆ ಕೀಟಬಾಧೆ ಎದುರಾಗಿದ್ದು , ರೈತರು ಸಂಕಷ್ಟಕ್ಕೀಡಾಗಿದ್ದಾರೆ. ತಾವರಗೇರಾ ಹೋಬಳಿಯ ಕೆಂಪು ಮಿಶ್ರಿತ ಮತ್ತು ಕಪ್ಪು ಮಣ್ಣಿನ ಫಲವತ್ತತೆ ಹೊಂದಿರುವ ಭೂಮಿಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ಅಂದಾಜಿನ ಪ್ರಕಾರ 6250 ಎಕರೆ ಪ್ರದೇಶದಲ್ಲಿ ಅವರೆಕಾಯಿ ಬಿತ್ತನೆ ಮಾಡಲಾಗಿದೆ.

ಹೋಬಳಿವ್ಯಾಪ್ತಿಯ ಗ್ರಾಮಗಳಲ್ಲಿ ಪ್ರತಿ ವರ್ಷವು ಮುಂಗಾರು ಬಿತ್ತನೆ ವೇಳೆಯಲ್ಲಿ ರೈತರು ಸಜ್ಜೆ, ನವಣೆ , ತೊಗರಿ, ಹೆಸರು ಜೊತೆಗೆ ಅವರೆಕಾಯಿ ಬೆಳೆಯುತ್ತಾರೆ. ಆದರೆ ಈ ವರ್ಷ ಹೆಚ್ಚು ಬಿತ್ತನೆ ಮಾಡಿರುವ ರೈತರು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ ಈಗ ಅವರೆಕಾಯಿಗೆ ಕೀಟಬಾಧೆ ಎದುರಾಗಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ.

‘ಜಮೀನಿನ ಅರ್ಧ ಭಾಗದಲ್ಲಿ ಸಜ್ಜಿ ನವಣೆ ಜೊತೆಗೆ ತೊಗರಿ, ಅವರೆ, ಹೆಸರು ಹೀಗೆ ಮಿಶ್ರ ಬೆಳೆ ಬಿತ್ತನೆ ಮಾಡಿದ್ದೆ. ಈ ವರ್ಷ ಅವರೆಕಾಯಿಯನ್ನು ಹೆಚ್ಚಾಗಿ ಬಿತ್ತನೆ ಮಾಡಿದ್ದೆ. ಉತ್ತಮ ಫಸಲು ಬಂದಿತ್ತು. ಆದರೆ ಹೂ ಬಿಡುವ ಸಮಯದಲ್ಲಿ ಮಳೆ ಕೈಕೊಟ್ಟು ಕಾಯಿಕೊರಕ ಬಾಧೆಗೆ ಬೆಳೆ ಒಣಗಿದೆ. ಉತ್ತಮವಾಗಿ ಬೆಳೆದ ಫಸಲು ನೋಡಿ ಆದಾಯದ ನಿರೀಕ್ಷೆಯೂ ಹುಸಿಯಾಗಿದೆ’ ಎಂದು ಹುಲಿಯಾಪುರ ಗ್ರಾಮದ ರೈತ ಹನಮಪ್ಪ ಕಂಪ್ಲಿ ಹೇಳುತ್ತಾರೆ.

‘6 ವರ್ಷಗಳಿಂದ ಇಂತಹ ಅವರೆ ಬೆಳೆ ಕಂಡಿಲ್ಲ. ಈ ವರ್ಷ ಉತ್ತಮ ಇಳುವರಿ ಬಂದಿತ್ತು. 10 ಚೀಲದಷ್ಟು ಅವರೆಕಾಳು ಸಿಗುತ್ತದೆ ಎಂಬ ಕನಸು ಹುಸಿಯಾಗಿದೆ. ಆದಾಯ ಹೋಗಲಿ, ಕೂಲಿ ಹಣವೂ ಇದರಿಂದ ಸಿಗುಬ ಭರವಸೆ ಇಲ್ಲ’ ಎಂದು ಅವರು ಅಳಲು ತೋಡಿಕೊಂಡರು.

‘ಈ ಬಾರಿ ಕಪ್ಪು ಮಣ್ಣಿನಲ್ಲಿ ಎಕರೆಗೆ 5 ಕ್ವಿಂಟಲ್ ಮತ್ತು ಕೆಂಪು ಮಣ್ಣಿನಲ್ಲಿ ಬೆಳೆಯುವ ಅವರೆಕಾಯಿ ಬೆಳೆಯಿಂದ ಎಕರೆಗೆ 3 ಕ್ವಿಂಟಲ್ ಫಸಲು ಬರಬೇಕಿದೆ. ಆದರೆ ಈಗ ಬೆಳೆಗೆ ರೋಗಬಾಧೆಯಿಂದ ರೈತರು ನಷ್ಟ ಅನುಭವಿಸುವ ಭೀತಿ ಇದೆ’ ಎಂದು ಸಹಾಯಕ ಕೃಷಿ ಅಧಿಕಾರಿ ಬಾಲಪ್ಪ ಜಲಗೇರಿ ಹೇಳಿದರು.

* * 

ಈ ವರ್ಷ ಮುಂಗಾರು ಸಮಯದಲ್ಲಿ ಮಳೆ ಸುರಿದು ಬಿತ್ತನೆ ಮಾಡಲಾಗಿದ್ದ ಅವರೆ ಬೆಳೆಗೆ ರೋಗ ತಗುಲಿದೆ. ವಾತಾವರಣ ಬದಲಾವಣೆಯಿಂದ ಉತ್ತಮ ಫಸಲಿನ ಕೊರತೆಯಿಂದ ರೈತರು ನಷ್ಟ ಅನುಭವಿಸುವಂತಾಗಿದೆ
ಬಾಲಪ್ಪ ಜಲಗೇರಿ, ಸಹಾಯಕ ಕೃಷಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT