ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆ: ಕುಷ್ಟಗಿ ಬಂದ್‌ ಯಶಸ್ವಿ

Last Updated 6 ಜನವರಿ 2018, 10:19 IST
ಅಕ್ಷರ ಗಾತ್ರ

ಕುಷ್ಟಗಿ: ವಿವಿಧ ಬೇಡಿಕೆ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪಟ್ಟಣದ ಪ್ರಗತಿಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ‘ಕುಷ್ಟಗಿ ಬಂದ್‌’ ಸಂಪೂರ್ಣ ಯಶಸ್ವಿಯಾಯಿತು. ಮಹದಾಯಿ ನೀರು ಹಂಚಿಕೆ, ವಿಜಯಪುರದ ಬಾಲಕಿ ಅತ್ಯಾಚಾರ, ಕೊಲೆ ಮತ್ತು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ರಾಜೀನಾಮೆಗೆ ಒತ್ತಾಯಿಸಿ ಬಂದ್‌ಗೆ ಕರೆ ನೀಡಲಾಗಿತ್ತು.

ಶಾಲಾ ಕಾಲೇಜುಗಳು, ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ಕೈಯಲ್ಲಿ ಬಡಿಗೆ ಹಿಡಿದ ಯುವಕರ ಗುಂಪು ಕೆಲ ಸರ್ಕಾರಿ ಕಚೇರಿಗಳನ್ನು ಬಲವಂತದಿಂದ ಬಂದ್‌ ಮಾಡಿಸಿತು. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಎರಡು, ಮೂರು ಕಿ.ಮೀ ದೂರದಲ್ಲಿ ವಾಹನಗಳನ್ನು ನಿಲ್ಲಿಸಿದ್ದರಿಂದ ಮಹಿಳೆಯರು, ಮಕ್ಕಳು, ವೃದ್ಧರು ಸಾಮಗ್ರಿಗಳನ್ನು ಹೊತ್ತುಕೊಂಡು ನಡೆಯಲಾಗದೆ ಪರದಾಡಿದರು.

ಮಿನಿವಿಧಾನಸೌಧದ ಮುಖ್ಯದ್ವಾರ ವನ್ನೇ ಕೆಲ ಹೊತ್ತು ಪ್ರತಿಭಟನಾಕಾರರು ಮುಚ್ಚಿಸಿದ್ದರು. ಬಳಿಕ ಪೊಲೀಸರು ಬಾಗಿಲು ತೆರೆಯಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಬಿಆರ್‌ಸಿ ಕೇಂದ್ರದ ಮುಖ್ಯದ್ವಾರಕ್ಕೆ ಹಾಕಿದ್ದ ಬೀಗ ತೆರೆಯಲಿಲ್ಲ. ನಾಲ್ಕು ರಾಜ್ಯ ಹೆದ್ದಾರಿಗಳನ್ನು ಪ್ರತಿಭಟನಾಕಾರರು ಬಂದ್‌ ಮಾಡಿದ್ದರು.

ಮಕ್ಕಳ ಪರದಾಟ: ಯಾವುದೇ ಸೂಚನೆ ನೀಡದ ಕಾರಣ ಶಾಲಾ ಕಾಲೇಜುಗಳು ಎಂದಿನಂತೆ ಬಾಗಿಲು ತೆರೆದಿದ್ದವು. ಪ್ರತಿಭಟನಾಕಾರರು ಶಾಲೆಗಳನ್ನೂ ಬಂದ್‌
ಮಾಡಿಸಿದರು. ಹಳ್ಳಿಗಳಿಂದ ಶಾಲೆಗೆ ಬಂದ ಸಾವಿರಾರು ಮಕ್ಕಳು ಊರಿಗೆ ಮರಳಲು ವಾಹನ ವ್ಯವಸ್ಥೆ ಇಲ್ಲದೆ ಪರದಾಡಿದರು.

‘ರಜೆ ಘೋಷಿಸುವ ಅಧಿಕಾರ ಜಿಲ್ಲಾಧಿಕಾರಿಗೆ ಮಾತ್ರ ಇದ್ದು, ಈ ವಿಷಯವನ್ನು ಅವರ ಗಮನಕ್ಕೆ ತರಲಾಗಿತ್ತು. ಆದರೆ ನಮಗೆ ಯಾವುದೇ ಸೂಚನೆ ಬಂದಿರಲಿಲ್ಲ’ ಎಂದು ಶಿಕ್ಷಣಾಧಿಕಾರಿ ಹೇಳಿದರು. ನಂತರ ಮಲ್ಲಯ್ಯ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘಟನೆಗಳ ಕಾರ್ಯಕರ್ತರು ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನಜೀರ್‌ಸಾಬ್‌ ಮೂಲಿಮನಿ, ನಾಗರಾಜ ಮೇಲಿನಮನಿ, ರಮೇಶ್‌ ಮೇಲಿನಮನಿ, ಅಜ್ಜಪ್ಪ ಕರಡಕಲ್‌, ಉಮೇಶ ಮಂಗಳೂರು, ಟಿ.ಕೃಷ್ಣಮೂರ್ತಿ, ಬಾಳಪ್ಪ ಬೇವಿನಕಟ್ಟಿ, ಮಂಜುನಾಥ ನಾಲಗಾರ ನೇತೃತ್ವ ವಹಿಸಿದ್ದರು. ಡಿವೈಎಸ್‌ಪಿ ಸಂತೋಷ ಬನ್ನಟ್ಟಿ, ಸರ್ಕಲ್‌ ಇನ್‌ಸ್ಪೆಕ್ಟರ್‌ ಸುರೇಶ ತಳವಾರ, ಸಬ್‌ ಇನ್‌ಸ್ಪೆಕ್ಟರ್‌ ವಿಶ್ವನಾಥ ಹಿರೇಗೌಡರ ಬಂದೋಬಸ್ತ್‌ ವ್ಯವಸ್ಥೆ ಕೈಗೊಂಡಿದ್ದರು.

ಯಾರಿಗಾಗಿ ಬಂದ್‌?
‘ಹಳೆಯ ಮತ್ತು ಜನರು ಮರೆತಿರುವ ಕೆಲ ವಿಷಯಗಳನ್ನು ಮುಂದಿಟ್ಟುಕೊಂಡು ಬಂದ್‌ ನಡೆಸಿರುವುದು ಸರಿಯಲ್ಲ. ಇದಕ್ಕೆ ತಾಲ್ಲೂಕಿನ ಅಧಿಕಾರಿಗಳು ಅವಕಾಶ ನೀಡಿದ್ದು ಸರಿಯಲ್ಲ. ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿವೆ. ತಾಲ್ಲೂಕಿನ ಶೈಕ್ಷಣಿಕ ಪ್ರಗತಿ ಹೇಳಿಕೊಳ್ಳುವಂತಿಲ್ಲ. ಶಾಲೆಗಳನ್ನು ಬಲವಂತವಾಗಿ ಮುಚ್ಚಿಸಿದ್ದು ಖಂಡನೀಯ. ಯಾರಿಗಾಗಿ ಬಂದ್‌ ನಡೆಸಲಾಗಿದೆ ಎಂಬುದು ತಿಳಿಯದಾಗಿದೆ’ ಎಂದು ವೀರನಗೌಡ, ಪ್ರಭುರಾಜ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT