ಮೆನನ್‌ ಮತ್ತು ಮಾಲಿವುಡ್‌ ಮೌನ

7

ಮೆನನ್‌ ಮತ್ತು ಮಾಲಿವುಡ್‌ ಮೌನ

Published:
Updated:
ಮೆನನ್‌ ಮತ್ತು ಮಾಲಿವುಡ್‌ ಮೌನ

ಪುರುಷ ಪ್ರಧಾನವೇ ಆದರೂ ನಮ್ಮ ಸಮಾಜದ ಒಂದು ಚಿಕ್ಕ ಭಾಗ ಹೆಣ್ಣು ಮಾತಾಡಲೆಂದು ಬಯಸುತ್ತದೆ. ಅದಕ್ಕೆ ತಾನೇ ಬೆನ್ನುತಟ್ಟಿ ಪ್ರೋತ್ಸಾಹವನ್ನೂ ಕೊಡುತ್ತದೆ. ಆದರೆ, ಚಿಕ್ಕ ಭಾಗದೊಳಗೂ ಒಂದು ‘ಗಂಡು ಮನಸ್ಥಿತಿ’ ಇದೆಯಲ್ಲ, ಅದು ಹೆಣ್ಣು ಏನನ್ನು ಮಾತಾಡಬೇಕು, ಎಷ್ಟು ಮಾತಾಡಬೇಕು ಅನ್ನುವುದನ್ನು ನಿರ್ಧರಿಸುತ್ತ ಇರುತ್ತದೆ. ಆ ಕಾರಣಕ್ಕೇ ಬಹುಶಃ ಹೆಣ್ಣುಗಳು ರಾಜಕಾರಣ, ಕೋಮುವಾದ, ಫ್ಯಾಸಿಸಂ ಎಂದೆಲ್ಲ ಮಾತಾಡಿ; ಧರ್ಮ, ಸಂಸ್ಕೃತಿ, ರಾಷ್ಟ್ರಪ್ರೇಮ ಅಂತೆಲ್ಲ ಭಾಷಣ ಬಿಗಿದು ಟ್ರೋಲ್‍ಗೆ ಒಳಗಾದಾಗ ಆಯಾ ಚಿಂತನೆಗಳ ಸಮರ್ಥಕರು ಅಖಾಡಕ್ಕೆ ಇಳಿಯುತ್ತಾರೆ.

ಮಾತನಾಡುವ ಹೆಣ್ಣುಮಗಳ ಪರವಹಿಸಿ ವಾಗ್ಯುದ್ಧವನ್ನೇ ಘೋಷಿಸಿ ಬಿಡುತ್ತಾರೆ. ಆದರೆ, ಅದೇ ಹೆಣ್ಣುಗಳು ಒಟ್ಟು ಸಮಾಜದೊಳಗೆ ಹಾಸುಹೊಕ್ಕಾಗಿರುವ ಸ್ತ್ರೀದ್ವೇಷದ ವಿರುದ್ಧ, ಗಂಡಸರ ಶೋಷಣೆ ವಿರುದ್ಧ, ದಬ್ಬಾಳಿಕೆ ವಿರುದ್ಧ ಮಾತಾಡಿದಾಗ ಅವರ ಬೆಂಬಲಕ್ಕೆ ಬರುವವರು ಬೆರಳೆಣಿಕೆಯಷ್ಟು ಜನ. ಗಂಡಸರ ಅಸೂಕ್ಷ್ಮತೆ, ಸಂವೇದನಾಹೀನತೆ ನಮ್ಮ ಸಮಾಜಕ್ಕೊಂದು ಚರ್ಚೆಯ ವಸ್ತುವೇ ಅಲ್ಲ. ಅವನ್ನು ಪ್ರಶ್ನಿಸಲು ಹೆಣ್ಣುಮಕ್ಕಳಿಗೆ ಅಧಿಕಾರವೂ ಇಲ್ಲ. ಅದು ಅವಶ್ಯಕವೂ ಅಲ್ಲ! ಬೆನ್ನುತಟ್ಟಿ ಪ್ರೋತ್ಸಾಹಿಸುವ ‘ಚಿಕ್ಕ ಭಾಗ’ವೂ ಕೂಡ ಈ ವಿಷಯದಲ್ಲಿ ನಿರ್ಲಿಪ್ತ. ಸ್ತ್ರೀಯರನ್ನು ಮೊದಲ ದರ್ಜೆಯ ಮನುಷ್ಯರನ್ನಾಗಿ ಕಾಣದ ಹೊರತು ಸಮಾಜೋರಾಜಕೀಯ ಸುಧಾರಣೆ ಸಾಧ್ಯವೆ? ಸ್ತ್ರೀಸಮಾನತೆ, ಸ್ವಾತಂತ್ರ್ಯ ಕುರಿತು ಮಾತನಾಡುವ ಗಂಡಸರು ಪ್ರಾಯೋಗಿಕವಾಗಿ ಅದನ್ನು ಎತ್ತಿ ಹಿಡಿಯುವ ಸಂದರ್ಭ ಬಂದಾಗ ಕಣ್ಣು ಮುಚ್ಚಿಕೊಳ್ಳುವುದು ಯಾಕೆ?

ಕೇರಳದ ಬಹುಭಾಷಾ ನಟಿ ಪಾರ್ವತಿ ಮೆನನ್ ಅವರು ಸದ್ಯಕ್ಕೆ ಅನುಭವಿಸುತ್ತಿರುವ ಪರಿಸ್ಥಿತಿ ಈ ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿದೆ. ಪಾರ್ವತಿ ಮೆನನ್ ಟ್ರೋಲ್‍ಗೆ ಒಳಗಾಗಿದ್ದು, ದೂರಿನನ್ವಯ ಟ್ರೋಲರ್‌ಗಳಲ್ಲಿ ಒಬ್ಬನನ್ನು ಬಂಧಿಸಿ ಪೊಲೀಸರು ಜೈಲಿಗೆ ತಳ್ಳಿದ್ದು, ಇವೆಲ್ಲ ಈಗಾಗಲೇ ಸುದ್ದಿಯಾಗಿರುವ ಸಂಗತಿಗಳು.

ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪಾರ್ವತಿ ಮೆನನ್, ಈ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕೆಂದು ಪ್ರತಿಪಾದಿಸುತ್ತಾ, ‘ದುರದೃಷ್ಟವಶಾತ್ ನಾನೊಂದು ಸಿನಿಮಾ ನೋಡಿದೆ. ಇಷ್ಟೊಂದು ಸ್ತ್ರೀದ್ವೇಷವನ್ನು ನಮ್ಮ ಸಿನಿಮಾಗಳಲ್ಲಿ ಯಾಕೆ ತೋರಿಸಲಾಗುತ್ತೆ? ನನಗೆ ವಿಪರೀತ ನಿರಾಶೆಯಾಯಿತು’ ಎಂದು ಪ್ರತಿಕ್ರಿಯಿಸಿದ್ದರು.

ಎಷ್ಟೇ ಇಲ್ಲವೆಂದರೂ ಜನರು ಸಿನಿಮಾಗಳಿಂದ, ಅದರಲ್ಲೂ ತಾವು ಆರಾಧಿಸುವ ಸ್ಟಾರ್‌ಗಳಿಂದ ಪ್ರಭಾವಿತರಾಗುತ್ತಾರೆ. ಇಂತಹ ಸಂಭಾಷಣೆಗಳು ದುಷ್ಪರಿಣಾಮ ಬೀರುತ್ತವೆ ಮತ್ತು ಸಮಾಜಕ್ಕೊಂದು ಕೆಟ್ಟ ಸಂದೇಶ ನೀಡುತ್ತವೆ ಅನ್ನೋದು ಅವರ ಕಳಕಳಿಯಾಗಿತ್ತು. ಸಿನಿಮಾ ತಂಡ ಹಾಗೂ ನಟರ ಬಗ್ಗೆ ಗೌರವವಿಟ್ಟುಕೊಂಡೇ ಈ ಆಕ್ಷೇಪ ಎಂದೂ ಅವರು ಸ್ಪಷ್ಟಪಡಿಸಿದ್ದರು. ಅವರು ಹೇಳಿದ್ದು, ಕಳೆದ ವರ್ಷ ಬಿಡುಗಡೆಯಾದ ‘ಕಸಬಾ’ ಚಿತ್ರದ ಬಗ್ಗೆ.

ಮೆನನ್ ಹೇಳಿಕೆಯಲ್ಲಿ ಯಾವ ಪ್ರಮಾದವೂ ಇರಲಿಲ್ಲ. ಆದರೆ ಕಸಬಾ ಚಿತ್ರದ ನಾಯಕ ನಟ ಮಮ್ಮುಟ್ಟಿಯ ಉಗ್ರಾಭಿಮಾನಿಗಳು ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಹಿಸಲಿಲ್ಲ. ಆಕೆಯ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳುವುದಿರಲಿ, ಆಕೆಯ ಹೇಳಿಕೆಯನ್ನು ಕೇಳದೆ ಪ್ರತಿಕ್ರಿಯಿಸಿದವರ ಸಂಖ್ಯೆಯೇ ಬಹಳವಿತ್ತು! ಟ್ವಿಟರ್, ಫೇಸ್‍ಬುಕ್‌ನಲ್ಲಿ ಪಾರ್ವತಿ ಮೆನನ್ ಮೇಲೆ ಅವಾಚ್ಯ, ಅಶ್ಲೀಲ ಟ್ರೋಲ್‍ಗಳ ಸುರಿಮಳೆ. ಸಿ.ಎಸ್. ಪಿಂಟೋ ಎಂಬಾತನಂತೂ ಆಕೆಯ ಮುಖಕ್ಕೆ ಆಸಿಡ್ ಎರಚಿ ಅತ್ಯಾಚಾರ ಮಾಡುವುದಾಗಿ ಬರೆದುಕೊಂಡಿದ್ದ.ಪಾರ್ವತಿ ಮೆನನ್

ಪಾರ್ವತಿ ಮೆನನ್ ವಿಶ್ವಾಸ ಕುಗ್ಗಿ ಸುಮ್ಮನೆ ಕೂರಲಿಲ್ಲ. ಟ್ರೋಲ್‍ಗಳನ್ನು ತೆಗೆದುಕೊಂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪಿಂಟೋನ ಬಂಧನವೂ ಆಯಿತು. ಇತ್ತೀಚೆಗೆ ‘ವಿಮೆನ್ ಇನ್ ಸಿನಿಮಾ ಕಲೆಕ್ಟಿವ್’ (ಡಬ್ಲ್ಯು.ಸಿ.ಸಿ.) ಹೆಸರಲ್ಲಿ ಸಂಘಟಿತರಾಗಿರುವ ಮಲಯಾಳಂ ಚಿತ್ರರಂಗದ ನಟಿಯರು ಮೆನನ್ ಬೆನ್ನಿಗೆ ಅಷ್ಟಿಷ್ಟು ನಿಂತರು. ಆದರೆ, ಈ ಒಟ್ಟು ಸನ್ನಿವೇಶದಲ್ಲಿ ಮಲಯಾಳಂ ಚಿತ್ರರಂಗದ ‘ಗಂಡಸರು’ ನಡೆದುಕೊಂಡ ರೀತಿ ಒಟ್ಟು ಸಮಾಜದ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿತ್ತು. ಇದರಲ್ಲಿ ಸ್ವತಃ ಮಮ್ಮುಟ್ಟಿಯೂ ಸೇರಿದ್ದಾರೆ ಅನ್ನುವುದು ಮತ್ತಷ್ಟು ಬೇಸರದ ಸಂಗತಿ.

ಪಾರ್ವತಿ ಮೆನನ್ ಹೇಳಿಕೆಗೆ ಅಂಧಾಭಿಮಾನಿಗಳು ಅಸಹ್ಯಕರ ಪ್ರತಿಕ್ರಿಯೆಗಳನ್ನು ಕಾರತೊಡಗಿದಾಗ, ಅವರು ಆಕೆ ಹೇಳಿದ ಮಾತುಗಳನ್ನು ಸಾಬೀತು ಮಾಡುತ್ತಿದ್ದರೇ ಹೊರತು ಮತ್ತೇನಲ್ಲ. ತಾವು ಆರಾಧಿಸುವ ನಟ ತೆರೆಯ ಮೇಲೆ ಮಹಿಳಾ ಪೊಲೀಸ್ ಪಾತ್ರಧಾರಿಗೆ ‘ಬಾರಿಸಿದರೆ ಮುಟ್ಟಿನ ರಕ್ತ ಒಸರಬೇಕು’ ಅನ್ನುವಂಥ ಸಂಭಾಷಣೆ ಹೇಳುವಾಗ, ಅಂಧಾಭಿಮಾನಿಗಳು ಅತ್ಯಾಚಾರದ ಮಾತನ್ನಾಡುವುದು ಅಚ್ಚರಿಯ ಸಂಗತಿಯೇನಲ್ಲ.

ಆದರೆ, ಮಮ್ಮುಟ್ಟಿ ನಟಿಸಿದ್ದು ನಾಯಕ ಪಾತ್ರದಲ್ಲಿ. ಹಿರಿಯ, ಗೌರವಾನ್ವಿತ ನಟರಾಗಿ ಮಮ್ಮುಟ್ಟಿ ಅವರಿಗೆ ಅಂತಹ ಸಂಭಾಷಣೆಗಳನ್ನು ಹೇಳಲು ನಿರಾಕರಿಸುವ ಎಲ್ಲ ಸ್ವಾತಂತ್ರ್ಯವೂ ಇತ್ತು. ಕೊನೆಪಕ್ಷ ಪಾರ್ವತಿ ಮೆನನ್ ಮೇಲೆ ಅಶ್ಲೀಲ ಟ್ರೋಲ್ ದಾಳಿ ನಡೆಯುವಾಗ ಅವರು ಮಧ್ಯಪ್ರವೇಶಿಸಬಹುದಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಒಂದಷ್ಟು ಚರ್ಚೆ ನಡೆದ ನಂತರ ಮಮ್ಮುಟ್ಟಿ, ವೆಬ್‍ಸೈಟ್ ಒಂದಕ್ಕೆ ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವುದು ನನ್ನ ಜವಾಬ್ದಾರಿಯಲ್ಲ’ ಎಂದು ಉತ್ತರಿಸಿದ್ದರು!

ತಮ್ಮ ಕ್ಷೇತ್ರದ ಹೆಣ್ಣುದನಿಗೆ ಮಾಲಿವುಡ್‍ನ ಗಂಡುಗಳು ಸೂಕ್ಷ್ಮವಾಗಿ ಕಿವಿಗೊಡಬೇಕಿತ್ತು. ಆಗಿದ್ದು ತದ್ವಿರುದ್ಧ. ಕಸಬಾ ಚಿತ್ರದ ನಿರ್ದೇಶಕ ನಿತಿನ್ ರೆಂಜಿ ಪಣಿಕ್ಕರ್, ನಿರ್ಮಾಪಕ ಜೊಬಿ ಜಾರ್ಜ್, ಮತ್ತೊಬ್ಬ ನಿರ್ದೇಶಕ ಜ್ಯೂಡ್ ಆಂಥೋನಿ ಜೋಸೆಫ್, ಹಿರಿಯ ನಟ ಸಿದ್ದಿಕ್ ಮೊದಲಾದ ಘಟಾನುಘಟಿಗಳೂ ಪಾರ್ವತಿ ಮೆನನ್‍ ಅವರನ್ನು ಟ್ರೋಲ್ ಮಾಡುವಲ್ಲಿ ಹಿಂದೆ ಬೀಳಲಿಲ್ಲ.

ಕೇರಳ, ಹೊರ ನಿಂತು ನೋಡುವಾಗ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ರಾಜ್ಯ. ಹೊರ ರಾಜ್ಯಗಳ ದಮನಿತ ದನಿಗಳಿಗೆ ಕೇರಳದಲ್ಲಿ ವೇದಿಕೆ ದೊರೆಯುತ್ತದೆ. ಆದರೆ, ಖುದ್ದು ಕೇರಳದ ಹೆಣ್ಣುಮಗಳು ಆಡಲೇಬೇಕಾಗಿದ್ದ ಮಾತುಗಳನ್ನು ಆಡಿದಾಗಲೂ ಆಕೆಗೆ ರಾಜಕೀಯ ಅಥವಾ ಸಾಮಾಜಿಕ ಬೆಂಬಲ ಯಾಕೆ ದೊರೆಯಲಿಲ್ಲ? ಸಿನಿಮಾ ಕ್ಷೇತ್ರದಲ್ಲಿ ಹೆಣ್ಣುಮಕ್ಕಳ ಪಾಲ್ಗೊಳ್ಳುವಿಕೆಯ ಕಳಕಳಿಯೊಂದಿಗೆ, ತೆರೆಯ ಮೇಲೆ ಹೆಣ್ಣನ್ನು ಬಿಂಬಿಸುವ ಬಗ್ಗೆ ಪಾರ್ವತಿ ಮೆನನ್ ಪ್ರಶ್ನೆ ಎತ್ತಿದ್ದರು. ಅದಕ್ಕೆ ಹರಿದುಬಂದ ಪ್ರತಿಕ್ರಿಯೆಗಳು ಖಂಡಿತ ನಗಣ್ಯವಲ್ಲ.

ಪ್ರಕಾಶ್ ರಾಜ್, ಕಮಲ್ ಹಾಸನ್, ವಿಜಯ್ ಈ ಹಿಂದೆ ವಿವಿಧ ಕಾರಣಗಳಿಗೆ ಟ್ರೋಲ್ ಹಾಗೂ ಬೆದರಿಕೆ ಎದುರಿಸಿದ್ದಂತೆಯೇ ಮೆನನ್ ಕೂಡ ಎದುರಿಸಿದರು. ಆದರೆ, ಆ ನಟರಿಗೆ ನೀಡಿದ ಬೆಂಬಲವನ್ನು ಕೇರಳದ ರಾಜಕೀಯ ಹಾಗೂ ಸಾಮಾಜಿಕ ವಲಯಗಳು ಪಾರ್ವತಿಗೆ ನೀಡಲಿಲ್ಲ ಯಾಕೆ? ಪ್ರಜ್ಞಾವಂತಿಕೆ ಅಂದರೆ ನಿರ್ದಿಷ್ಟ ಸಂಗತಿ ಬಗ್ಗೆ ಚರ್ಚೆ ಮಾಡುವುದು ಮಾತ್ರವೇ? ಫ್ಯಾಸಿಸಂನಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಹಾನಿಕಾರಕವಾದ, ಸಮಾಜೋರಾಜಕೀಯ ವಿಪ್ಲವಗಳನ್ನು ತಂದೊಡ್ಡುವ ‘ಪೌರುಷ ನಡವಳಿಕೆ’ಯ ವಿಷಯ ಬಂದಾಗ ಬುದ್ಧಿಜೀವಿಗಳು ಮೌನದ ಮೊರೆ ಹೋಗುವುದು ಯಾಕೆ?

ಕುರುಡು ಅಭಿಮಾನಿಗಳಿಗಿಂತ ಜಾಣಕುರುಡರ ಮೌನ ಈ ಹೊತ್ತು ಚರ್ಚೆಯಾಗಬೇಕಿದೆ. ಪಾರ್ವತಿ ಮೆನನ್ ವಿಷಯದಲ್ಲಿ ಹೊಮ್ಮಿದ ಈ ಪ್ರತಿಕ್ರಿಯೆ ಸಿನಿಮಾ ರಂಗದ ಹೆಣ್ಣುಗಳನ್ನು ಒಂದಷ್ಟು ಅಭದ್ರತೆಗೆ ನೂಕುವುದಂತೂ ಖಚಿತ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry