ಜಗಣ್ಣ

7

ಜಗಣ್ಣ

Published:
Updated:

ಬೇಸಿಗೆ ರಜೆ ಬಂದರೆ ಸಾಕು, ನಾನು ನನ್ನ ಅಕ್ಕ ಮತ್ತು ತಂಗಿ ಮಾಮಯ್ಯನ್ನು ಕರೆದುಕೊಂಡು ಚಿಕ್ಕಮ್ಮನ ಮನೆಯಲ್ಲಿ ವಾರಗಟ್ಟಲೇ ಠಿಕಾಣಿ ಹಾಕುತ್ತಿದ್ದೆವು. ನಮ್ಮ ಚಿಕ್ಕಮ್ಮನ ಊರು ತವಂದಿ. ಇದು ಒಂದು ಪುಟ್ಟ ಗ್ರಾಮ.

ಚಿಕ್ಕಮ್ಮನ ಊರು ನನಗೆ ಬಾಲ್ಯದಲ್ಲಿ ಅಷ್ಟೊಂದು ಆಪ್ತವಾಗಲು ಕಾರಣ ಚಿಕ್ಕಮ್ಮನ ಪ್ರೀತಿ. ಆಕೆಯು ಮಾಡುತ್ತಿದ್ದ ಮೊಸರನ್ನ, ಮಾವಿನಕಾಯಿ ಉಪ್ಪಿನ ಕಾಯಿ. ಇವೆಲ್ಲಕ್ಕಿಂತ ಮಿಗಿಲಾಗಿ ಅಣ್ಣ ಓಂಕಾರಣ್ಣಯ್ಯ. ಅವರು ಯಾವಾಗಲು ಒಂದು ಕ್ಯಾಮೆರಾವನ್ನು ಇಟ್ಟುಕೊಂಡಿರುತ್ತಿದ್ದರು. ಬೇಸಿಗೆ ರಜೆಯಲ್ಲಿ ದೀಪಾವಳಿ ಹಬ್ಬದಲ್ಲಿ ನಮ್ಮ ಪೋಟೊ ತೆಗೆದು ಮುಂದಿನ ಹಬ್ಬಕ್ಕೆ ನಾವು ಆ ಊರಿಗೆ ಹೋದಾಗ ಆ ಪೋಟೊಗಳನ್ನು ನಮಗೆ ತೋರಿಸುತ್ತಿದ್ದರು. ನಾವು ನಮ್ಮ ಕಪ್ಪು ಬಿಳುಪು ಚಿತ್ರಕಂಡು ಸಂತಸಪಡುತ್ತಿದ್ದೆವು.

ಹೀಗೆ ಒಂದು ಸಾರಿ ಬೇಸಿಗೆ ರಜೆಗೆ ತವಂದಿಗೆ ಹೋಗಿದ್ದಾಗ ನಾನು ‘ಅಣ್ಣಾ ನನ್ನದೊಂದು ಫೋಟೊ ತೆಗಿ’ ಎಂದು ಓಂಕಾರಣ್ಣಯ್ಯನನ್ನು ಗೋಗರೆದೆ. ಅದಕ್ಕೆ ‘ಈಗ ಸಂಜೆಯಾಗಿದೆ. ಬೆಳಗ್ಗೆ ತೋಟಕ್ಕೆ ಹೋಗೋಣ ಅಲ್ಲಿ ನಿಂದು, ಅವಂದು, ಇವಂದು ಎಲ್ಲರದೂ ತೆಗೆಯೋಣ ಆಯ್ತಾ?’ ಎಂದರು.

ಬೆಳಕು ಮೂಡಿದ ಆದ ತಕ್ಷಣ ನಾವೆಲ್ಲರೂ ಮುಖ ತೊಳೆದು ಬೆಲ್ಲದ ಟೀ ಕುಡಿದು ಓಂಕಾರಣ್ಣನ ಜೊತೆ ತೋಟದ ಕಡೆ ಪೇರಿ ಕಿತ್ತೆವು. ರಸ್ತೆಯಲ್ಲಿ ಬರುವ ಹೊಲಗಳಲ್ಲಿ ಇದ್ದ ತೊಗರಿ ಕಾಯಿಗಳನ್ನು, ಬೇಲಿ ಎಗರಿ ಕಿತ್ತು ತಿನ್ನುತ್ತಾ ತೋಟದತ್ತ ಸಾಗಿದೆವು.

ತೋಟದಲ್ಲಿ ಸುತ್ತಾಡಿ ದಣಿದ ನಾವೆಲ್ಲ ‘ಅಣ್ಣ ಹಸಿವಾಗುತ್ತಿದೆ’ ಎಂದೆವು. ಆಗ ಅಣ್ಣ ನಮ್ಮನ್ನೆಲ್ಲ ಗುಡಿಯ ಕಟ್ಟೆ ಮೇಲೆ ಸಾಲಾಗಿ ಕೂರಿಸಿ ‘ಈಗ ಮಾವಿನ ಹಣ್ಣು ಮರದಿಂದ ಬೀಳುತ್ತವಲ್ಲಾ ಅವನ್ನೆಲ್ಲಾ ಆಯ್ದುಕೊಂಡು ತಿನ್ನಿ’ ಎಂದು ಮರಕ್ಕೆ ಹಲವು ಬಾರಿ ಕಲ್ಲುಗಳನ್ನು ತೂರಿ ಹಣ್ಣು ಉದುರಿಸಿದರು. ಹಣ್ಣು ಉದುರುವುದೇ ತಡ ನಾ ಮುಂದು ತಾ ಮುಂದು ಎಂದು ಓಡಿ ಎಲ್ಲರೂ ಎತ್ತಿಕೊಂಡು ಸಾಕಷ್ಟು ತಿಂದೆವು.ಅಲ್ಲದೆ ಮಾಗಿದ ಹಣ್ಣು ಮರದಿಂದ ನಿಮಿಷಕ್ಕೂಂದು ಬೀಳುತ್ತಿದ್ದವು.

ಹಣ್ಣುಗಳನ್ನು ತಿನ್ನುತ್ತಾ ನಾನು ‘ಅಣ್ಣಾ ಫೋಟೊ’ ಎಂದೆ. ಹಾಗೇ ಕಟ್ಟೆ ಮೇಲೆ ಕುಳಿತ ಎಲ್ಲಾ ಹುಡುಗರ ಪೋಟೊ ತೆಗೆದರು.

ಅಷ್ಟರಲ್ಲಿ ನಮ್ಮಲ್ಲಿ ಒಬ್ಬ ‘ಅಣ್ಣಾ ಎಳನೀರು..’ ಎಂದ.

‘ಲೇ ಜಗಣ್ಣ ಎಳನೀರು ಕೀಳೋ’ ಎಂದು ತನ್ನ ತಮ್ಮನಿಗೆ ಹೇಳಿದರು.

ಅಣ್ಣ ಹೇಳುವುದನ್ನೆ ಕಾಯುತ್ತ ನಿಂತಿದ್ದ ಜಗಣ್ಣ ಸೊಂಟಕ್ಕೆ ಹರಿತವಾದ ಸಣ್ಣ ಮಚ್ಚು ಸಿಕ್ಕಿಸಿಕೊಂಡು ಕಾಲಿಗೆ ಕುಣಿಕೆ ತೊಡರಿಸಿಕೊಂಡು ಮರವನ್ನು ಕೋತಿಯಂತೆ ಸರಸರನೆ ಹತ್ತಿ ತೆಂಗಿನ ಮರದ ಸುಳಿಯನ್ನು ತಲುಪಿ ಅಲ್ಲಿಂದ ‘ಅಣ್ಣ ಈ ಗೊನೆ ಕೆಡವಲೇ ? ಆ ಗೊನೆ ಕೆಡವಲೇ ?’ ಎಂದು ತೋರಿಸುತ್ತಾ ಹೋದಾಗ ಅಣ್ಣ ತನ್ನ ಕಣ್ಣಿನ ಉಬ್ಬಿನ ಮೇಲೆ ಕೈ ಅಗಲಿಸಿಟ್ಟು ಕತ್ತು ಮೇಲಕೆಕ್ಕೆತ್ತಿ ’ಯಾವುದಾದರೂ ಒಂದು ಕೆಡವೋ ಬೇಗ’ ಎಂದು ಅವಸರಮಾಡಿದರು.

ಅಲ್ಲದೆ ಎಳೆನೀರು ಕೀಳಲು ಮರ ಹತ್ತಿರುವ ಜಗಣ್ಣನನ್ನು ತಲೆ ಎತ್ತಿಕೊಂಡು ಕುತೂಹಲದಿಂದ ನೋಡುತಿದ್ದ ನಮ್ಮನ್ನೆಲ್ಲಾ ದೂರ ಸರಿಸಿದರು. ತೆಂಗಿನ ಮರದ ಮೇಲೆ ಇದ್ದ ಜಗಣ್ಣ ಮರದ ಸುತ್ತ ಯಾರೂ ಇಲ್ಲದಿರುವುದ ಖಾತ್ರಿ ಪಡಿಸಿಕೊಂಡು ಪೂರ ಒಂದು ಎಳನೀರಿನ ಗೊನೆಯನ್ನು ಮಚ್ಚಿನಿಂದ ಕತ್ತರಿಸಿದ. ಗೊನೆ ‘ದಫ್’ ಎಂದು ಶಬ್ದಮಾಡುತ್ತ ನೆಲಕ್ಕೆ ಬಿದ್ದು ಕೆಲವು ಎಳನೀರು ಗೊನೆಯಿಂದ ಬೇರ್ಪಟ್ಟು ಚೆಲ್ಲಾಪಿಲ್ಲಿಯಾದವು. ಆಗ ನಾವುಗಳೆಲ್ಲಾ ಅವುಗಳನ್ನು ಒಂದಡೆ ತಂದು ಹಾಕುವಷ್ಟರಲ್ಲಿ ಜಗಣ್ಣ ಮರದಿಂದಿಳಿದು ನಮಗೆಲ್ಲಾ ಅಚ್ಚರಿಯುಂಟು ಮಾಡಿ ಎಳನೀರು ಕೆತ್ತಲು ಶುರುಮಾಡಿದ.

ಇನ್ನೇನು ನಾನು ಜಗಣ್ಣ ಕೆತ್ತಿಕೊಟ್ಟ ಎಳನೀರು ಕುಡಿಯಬೇಕು ಅಷ್ಟರಲ್ಲಿ ‘ಯಾರೋ ಅದು ಮನೆ ಹಾಳರು? ಗೊನೆಗಟ್ಟಲೇ ಎಳನೀರು ಕಿತ್ತವರು?’ ಎಂಬ ಜೋರು ಧ್ವನಿ ತೋಟದ ಬಾವಿಕಡೆಯಿಂದ ಬಂದದ್ದು ಕೇಳಿ ನಾವೆಲ್ಲ ಕಂಗಾಲಾದೆವು. ನೋಡಿದರೆ ನಮ್ಮ ತಾತ ಕೋಲು ಹಿಡಿದು ಸಿಟ್ಟಿನಿಂದ ಹೊಡೆಯುವ ತರಹ ಬರುತ್ತಿದ್ದಾರೆ. ‘ತೋಟ ಬಿಟ್ಟು ಹೊರ ನಡೆಯಿರೋ’ ಎಂದು ಕೋಲು ಬೀಸಿದರು. ನಾವೆಲ್ಲಾ ದಿಕ್ಕಾಪಾಲಾದೆವು. ಅಣ್ಣನಿಗೆ ತಾತನ ವರ್ತನೆ ಸರಿಕಾಣಲಿಲ್ಲ. ಈ ಅಜ್ಜ ಎಲ್ಲಿಂದ ವಕ್ಕರಿದ ಎಂದು ಗೊಣಗುತ್ತ ನಮ್ಮನ್ನೆಲ್ಲಾ ಊರ ಕಡೆಗೆ ಕರೆದುಕೊಂಡು ನಡೆದರು. ನಾವು ಬೇಸರದಿಂದ ಎಳನೀರಿನ ಗೊನೆಯನ್ನು ಆಸೆಯಿಂದ ತಿರುಗಿ ತಿರುಗಿ ನೋಡುತ್ತ ಅವರನ್ನು ಹಿಂಬಾಲಿಸಿದೆವು.

ತೋಟದಿಂದ ಊರ ಕಡೆಗೆ ಹೋಗುವಾಗ ದಾರಿಯಲ್ಲಿ ಹನುಮಂತನ ಗುಡಿ ಬರುತ್ತದೆ. ಅಲ್ಲಿಗೆ ನಮ್ಮನ್ನು ಅಣ್ಣ ಕರೆದುಕೊಂಡು ಹೋದರು. ಗುಡಿಯ ಒಳಹೋಗಿ ಹನುಮಂತನ ದರ್ಶನ ಪಡೆದು ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತೆವು.

ಅಷ್ಟರಲ್ಲಿ ನಮ್ಮನ್ನೆಲ್ಲಾ ತೋಟದಿಂದ ಹೊರಗಟ್ಟಿದ್ದ ನಮ್ಮ ತಾತ ನಾಲ್ಕು ಎಳನೀರುಗಳನ್ನು ಹಿಡಿದುಕೊಂಡು ಊರ ಕಡೆ ಮೆಲ್ಲಗೆ ನಡೆದು ಕೊಂಡು ಹೋಗುತ್ತಿದ್ದರು.ನಾವು ಮುಸಿಮುಸಿ ನಗಲು ಆಣ್ಣ ನಮ್ಮ ಕಡೆ ತಿರುಗಿ ‘ಗಪ್ ಚುಪ್’ ಎಂಬಂತೆ ಸನ್ನೆ ಮಾಡಿದರು.

ತಾತಾ ಮರೆಯಾಗುವುದನ್ನೆ ಕಾಯುತಿದ್ದ ಅಣ್ಣ ನಮ್ಮನ್ನು ಪುನಃ ತೋಟಕ್ಕೆ ಹೋಗೊಣ ಎಂದರು.

‘ಓಹೋ…’ ಎಂದು ಕೂಗುತ್ತ ತೋಟಕ್ಕೆ ಒಂದೇ ಉಸಿರಿಗೆ ಓಡತೊಡಗಿದೆವು.

ಆಗ ಜಗಣ್ಣ ಎಲ್ಲರಿಗೋ ಎಳನೀರು ಕೆತ್ತಿ ಕೊಟ್ಟ ನಾವೆಲ್ಲ ಹೊಟ್ಟೆ ತುಂಬಾ ಎಳನೀರು ಕುಡಿದು ‘ಗಡರ್’ ಎಂದು ತೇಗುತ್ತಾ ಅಣ್ಣನತ್ತ ನೋಡಿದರೆ ಅವರು ಖುಷಿಯಿಂದ ನಗುತ್ತ ‘ಹೊಟ್ಟೆ ತುಂಬಿತಾ?’ ಎಂದು ಕೇಳಿದರು. ನಾವೆಲ್ಲ ‘ಹೌದು’ ಎಂದೆವು. ನಂತರ ಎಲ್ಲರೂ ಊರ ಕಡೆ ದಾರಿ ಸವೆಸಿದೆವು.

ಈ ಘಟನೆ ನಡೆದು ಸುಮಾರು ವರ್ಷಗಳೇ ಸಂದಿವೆ. ಆದರೆ ಈ ಲೇಖನ ಮುಗಿಸುವಾಗ ಕಣ್ಣು ಮಂಜಾಗುತ್ತಿವೆ. ಏಕೆಂದರೆ ನಮಗೆಲ್ಲ ಎಳನೀರು ಕಿತ್ತು ಅವುಗಳನ್ನು ಕೆತ್ತಿ ಕೊಟ್ಟಿದ್ದ ನಮ್ಮ ಅಣ್ಣ ಜಗಣ್ಣ ಅದೇ ತೋಟದ ಖಾಲಿ ಇದ್ದ ಬಾವಿಯಲ್ಲಿ ಮೊನ್ನೆ ಬೇಸಗೆಯಲ್ಲಿ ಜಾರಿ ಬಿದ್ದ ಹೆಣವಾಗಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry