‘ಗೆಲ್ಲುವುದರಲ್ಲಿ ಖುಷಿಯಿಲ್ಲ ಎನಗೆ...’

7

‘ಗೆಲ್ಲುವುದರಲ್ಲಿ ಖುಷಿಯಿಲ್ಲ ಎನಗೆ...’

Published:
Updated:
‘ಗೆಲ್ಲುವುದರಲ್ಲಿ ಖುಷಿಯಿಲ್ಲ ಎನಗೆ...’

ಚಿಕ್ಕವನಾಗಿದ್ದಾಗ ನನ್ನ ಅಣ್ಣನಿಗೆ ನಮ್ಮ ಪ್ರಾಚೀನ ಸಂಸ್ಕೃತಿಯ ಬಗ್ಗೆ ಆಳವಾದ ಆಸಕ್ತಿ ಇತ್ತು. ದೇವರು, ಎಲ್ಲ ಬಗೆಯ ಆಚರಣೆಗಳು ಮತ್ತು ಅವುಗಳ ಪ್ರಾಮುಖ್ಯ ಏನು ಎಂಬುದನ್ನು ಅರಿಯಲು ಆತ ಬಯಸುತ್ತಿದ್ದ. ಆ ವಿಚಾರಗಳ ಕುರಿತ ವಿವರಣೆಗಳನ್ನೆಲ್ಲ ಆತ ಮನನ ಮಾಡಿಕೊಂಡು ನಂತರ ನನ್ನ ಜೊತೆ ಹಂಚಿಕೊಳ್ಳುತ್ತಿದ್ದ. ಸರಳವಾಗಿಯೂ, ನೇರವಾಗಿಯೂ ಇರುತ್ತಿದ್ದ ನನ್ನ ಸಹೋದರನ ವಿವರಣೆಗಳು ನನ್ನಲ್ಲಿ ಆಸಕ್ತಿ ಹೆಚ್ಚಿಸುತ್ತಿದ್ದವು. ‘ಕುತೂಹಲ’ ಎಂಬುದು ನನ್ನ ಗುಣವೂ ಆಗಿದ್ದ ಕಾರಣ, ನಾನೂ ಅವನಲ್ಲಿ ನೂರೆಂಟು ಪ್ರಶ್ನೆಗಳನ್ನು ಕೇಳುತ್ತಿದ್ದೆ. ಅವನಿಂದ ತಾರ್ಕಿಕ ಉತ್ತರಗಳನ್ನು ಬಯಸುತ್ತಿದ್ದೆ. ನನ್ನನ್ನು ಒಪ್ಪಿಸುವುದು ಅಷ್ಟು ಸುಲಭವೇನೂ ಆಗಿರುತ್ತಿರಲಿಲ್ಲ. ಆದರೆ, ನನ್ನ ಸಹೋದರನ ವಾದಗಳನ್ನು ನಾನು ಎಲ್ಲ ಸಂದರ್ಭಗಳಲ್ಲೂ ಒಪ್ಪಿಕೊಳ್ಳುತ್ತಿದ್ದೆ.

ನಮ್ಮ ಮನೆಯಲ್ಲಿ ಚಿಕ್ಕ ಗ್ರಂಥಾಲಯವಿತ್ತು. ಅಲ್ಲಿನ ಪುಸ್ತಕಗಳ ಪಟ್ಟಿಯೊಂದನ್ನು ನಾವು ಸಿದ್ಧಪಡಿಸಿದ್ದೆವು, ನೆರೆಹೊರೆಯ ಮಕ್ಕಳು ಅಲ್ಲಿಂದ ಒಯ್ದ ಪುಸ್ತಕಗಳ ಹೆಸರನ್ನು ಅದರಲ್ಲಿ ನಮೂದಿಸಿಕೊಳ್ಳುತ್ತಿದ್ದೆವು. ಈ ಮೂಲಕ ಪಿತಾಜಿಯು ನಮ್ಮ ದೇಶ, ಇಲ್ಲಿನ ಜನ ಮತ್ತು ಸಂಪ್ರದಾಯಗಳ ಬಗ್ಗೆ ಮಕ್ಕಳು ಓದಲು, ಅರಿಯಲು ಪ್ರೇರಣೆ ನೀಡುತ್ತಿದ್ದರು.

ಸಾಧು– ಸಂತರ ಕಥೆಗಳನ್ನು ಪಿತಾಜಿ ನಮಗೆ ಹೇಳುತ್ತಿದ್ದರು. ನಂತರ ಅವರಂತೆಯೇ ತಾವು ಅಭಿನಯಿಸಿ ಖುಷಿಪಡುತ್ತಿದ್ದರು. ನಾವು ನಮ್ಮ ಗ್ರಂಥಾಲಯದಲ್ಲಿನ ಪುಸ್ತಕಗಳ ಸಹಾಯದಿಂದ ಸಾಧು–ಸಂತರ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತಿದ್ದೆವು. ನನ್ನ ಸಹೋದರ ಆ ಸಾಧು–ಸಂತರ ವ್ಯಕ್ತಿತ್ವ ಚಿತ್ರಿಸುತ್ತಿದ್ದ, ಅವರಿಗೆ ಸಂಬಂಧಿಸಿದ ಸಂಭಾಷಣೆಗಳನ್ನು ಬರೆಯುತ್ತಿದ್ದ. ನಂತರ, ದೊಡ್ಡವರೆಲ್ಲ ಮಧ್ಯಾಹ್ನದ ನಿದ್ರೆಯಲ್ಲಿರುತ್ತಿದ್ದ ಹೊತ್ತಿನಲ್ಲಿ ನಾವು ನಮ್ಮ ಜಯನಗರದ ಮನೆಯ ಟೆರೇಸ್ ಮೇಲೆ ಆ ನಾಟಕವನ್ನು ಮಾಡುತ್ತಿದ್ದೆವು. ‘ಮನೆಯಲ್ಲಿ ತುಸು ಶಾಂತಿ ಇರಲಿ ಎಂದು ನಾವು ನಿಮ್ಮನ್ನು ಮೇಲ್ಗಡೆ ಕಳುಹಿಸಿದ್ದೇವೆ. ಆದರೆ, ಟೆರೇಸ್‌ ಮೇಲಿನ ಗಲಾಟೆಯ ಕಾರಣದಿಂದಾಗಿ ನಮಗೆ ಕಣ್ಣು ಮುಚ್ಚಲೂ ಆಗುತ್ತಿಲ್ಲ! ಏನು ಮಾಡುತ್ತೀರಿ ನೀವೆಲ್ಲ?’ ಎಂದು ನನ್ನ ಅಮ್ಮ ದೂರುತ್ತಿದ್ದಳು.

ಟೆರೇಸ್‌ ಮೇಲಿನ ಬಿಸಿ ನಮಗೆ ಒಂಚೂರೂ ಸಮಸ್ಯೆ ಆಗುತ್ತಿರಲಿಲ್ಲ. ಒಣಗಲು ಹಾಕುತ್ತಿದ್ದ ಟವೆಲ್‌ಗಳನ್ನು ನಾವು ವೇಷಭೂಷಣವಾಗಿ ಬಳಸುತ್ತಿದ್ದೆವು. ನನ್ನ ಸಹೋದರ ಬುದ್ಧನಂತೆ ವೇಷ ಹಾಕಿಕೊಳ್ಳುತ್ತಿದ್ದ. ನಾನು ಮತ್ತು ನಮ್ಮ ಸ್ನೇಹಿತರು ‘ಬುದ್ಧಂ ಶರಣಂ ಗಚ್ಛಾಮಿ’ ಎನ್ನುತ್ತ ಅವನ ಸುತ್ತ ಸಾಗುತ್ತಿದ್ದೆವು. ನಮ್ಮ ನಗು ಅದೆಷ್ಟಿರುತ್ತಿತ್ತೆಂದರೆ, ನಮ್ಮನ್ನು ನೋಡಿಯೂ ನಗು ತಡೆದುಕೊಳ್ಳುವುದು ಬುದ್ಧನಿಗೂ ಕಷ್ಟವಾಗುತ್ತಿತ್ತು! ಕೆಲವು ಸಂದರ್ಭಗಳಲ್ಲಿ ನನ್ನ ಸಹೋದರ, ತಲೆಗೆ ಕಿತ್ತಳೆ ಬಣ್ಣದ ಒಂದು ಬಟ್ಟೆ ಸುತ್ತಿಕೊಂಡು, ಕೈಯಲ್ಲಿ ಒಂದು ದಂಡ ಹಿಡಿದು, ಆದಿ ಶಂಕರರನ್ನು ಅನುಕರಿಸುತ್ತಿದ್ದ. ನಾವು ‘ಹರ ಹರ ಶಂಕರ, ಜಯ ಜಯ ಶಂಕರ’ ಎನ್ನುತ್ತ ಅವನನ್ನು ಹಿಂಬಾಲಿಸುತ್ತಿದ್ದೆವು. ನಾನು ಜ್ಞಾನವನ್ನು ಬಯಸಿ ‘ಶಂಕರ’ರ ಬಳಿ ಹೋಗುತ್ತಿದ್ದೆ. ಆಗೆಲ್ಲ ನನಗೆ ಸಿಗುತ್ತಿದ್ದುದು ಅವನ ಕೈಯಲ್ಲಿ ಇರುತ್ತಿದ್ದ ದಂಡದಿಂದ ನನ್ನ ತಲೆಯ ಮೇಲೆ ಒಂದು ಪುಟ್ಟ ಏಟು. ಈ ಚಿಕ್ಕ ಚಿಕ್ಕ ಆಟಗಳು ಬಹಳ ಖುಷಿಕೊಡುತ್ತಿದ್ದವು. ನಾವು ಹಲವು ಜನ ಸಂತರ ಬಗ್ಗೆ ಬಹಳಷ್ಟು ವಿಚಾರಗಳನ್ನು ತಿಳಿದುಕೊಂಡೆವು.

ಈ ಎಲ್ಲ ಸಂತರ ಜನ್ಮದಿನಗಳನ್ನು ನನ್ನ ಸಹೋದರ ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದ. ಆ ದಿನಗಳಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ. ಆ ಪದ್ಧತಿ ಇಂದಿಗೂ ಮುಂದುವರಿದಿದೆ. ಸಹೋದರ ವರ್ಷದ ಪ್ರತಿ ದಿನವೂ ಒಬ್ಬನಲ್ಲದಿದ್ದರೆ ಇನ್ನೊಬ್ಬ ವ್ಯಕ್ತಿಯ ಜನ್ಮದಿನ ಆಚರಿಸುತ್ತಾನೆ. ಸಂತರದ್ದು ಮಾತ್ರವಲ್ಲ; ನಾವು ರಾಜ, ರಾಣಿ, ದೇವಿ, ದೇವತೆಗಳಂತೆಯೂ ಅಭಿನಯ ಮಾಡುತ್ತಿದ್ದೆವು. ನಮ್ಮ ಸಂಬಂಧಿ ವಸಂತಾ, ನಮಗಾಗಿ ಕಷ್ಟಪಟ್ಟು ಹೊಲಿದುಕೊಡುತ್ತಿದ್ದ ವೇಷಭೂಷಣ ತೊಡುವುದು ಅಂದರೆ ಬಹಳ ಖುಷಿ. ನಾವು ಆ ವೇಷಭೂಷಣ ಧರಿಸುವುದು ವಸಂತಾ ಅವರಿಗೆ ಖುಷಿಯ ಸಂಗತಿಯಾಗಿತ್ತು – ಅವರು ನಮ್ಮನ್ನು ನೋಡುತ್ತ ತಮ್ಮ ಸೃಜನಶೀಲತೆಯ ಬಗ್ಗೆ ಹೆಮ್ಮೆಪಡುತ್ತಿದ್ದರು.

***

ಪ್ರತಿ ವರ್ಷ ಗಣೇಶ ಚತುರ್ಥಿಯಂದು ಜೇಡಿಮಣ್ಣಿನ ಗಣಪನನ್ನು ನಮ್ಮ ಮನೆಗೆ ಪೂಜೆಗೆ ತರಲಾಗುತ್ತಿತ್ತು. ಪೂಜೆ ಮುಗಿದ ನಂತರ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸಲಾಗುತ್ತಿತ್ತು. ನಾಲ್ಕು ವರ್ಷದ ಚಿಕ್ಕ ಬಾಲಕನಾಗಿದ್ದ ನನ್ನ ಸಹೋದರ, ಹೂವುಗಳಿಂದ ಅಲಂಕೃತವಾಗಿದ್ದ ಪುಟ್ಟ ಗಣೇಶ ಮೂರ್ತಿಯನ್ನು ತೆಗೆದು ಒಂದು ಬುಟ್ಟಿಯಲ್ಲಿ ಇಟ್ಟುಕೊಂಡ, ಅದನ್ನು ತನ್ನ ಮಡಿಲಲ್ಲಿ ಇರಿಸಿಕೊಂಡ.  ಅಪಾರವಾದ ಪ್ರೀತಿಯಿಂದ ಆತ ಆ ಮೂರ್ತಿಯನ್ನು ಇರಿಸಿಕೊಂಡಿದ್ದ, ಅದನ್ನು ಬಿಟ್ಟುಕೊಡಲು ಸಿದ್ಧನಿರಲಿಲ್ಲ. ತನ್ನ ‘ಪುರಾರು’ವನ್ನು ಇಟ್ಟುಕೊಳ್ಳಲು ಅವಕಾಶ ಕೊಡುವಂತೆ ಅಮ್ಮನಲ್ಲಿ ದೈನ್ಯದಿಂದ ಕೇಳಿಕೊಂಡ. ಆತ ಆ ಮೂರ್ತಿಯ ಜೊತೆ ಹೊಂದಿದ್ದ ಸಂಬಂಧ ನೋಡಿ ಅಮ್ಮನ ಮನಸ್ಸು ಕರಗಿತು. ಆಕೆಗೆ ಸಂಪ್ರದಾಯವನ್ನೂ ಉಳಿಸಿಕೊಳ್ಳಬೇಕಿತ್ತು. ಆದರೆ ಈ ಸಂಪ್ರದಾಯ ಏಕೆ ಅಗತ್ಯ ಎಂಬುದನ್ನು ವಿವರಿಸುವುದು ಸುಲಭವಾಗಿರಲಿಲ್ಲ. ‘ಪುರಾರು’ವನ್ನು ಈಗ ಹೋಗಲು ಬಿಟ್ಟರೆ ಮಾತ್ರ ಅದು ಮುಂದಿನ ವರ್ಷ ಪುನಃ ಬರುತ್ತದೆ ಎಂದು ಅಮ್ಮ ಪುಟ್ಟ ರವಿಗೆ ಹೇಳಲು ಯತ್ನಿಸಿದರು.

ದೇವರು ನಮ್ಮಲ್ಲಿಯೇ ಇದ್ದಾನೆಯಾದರೂ, ನಮ್ಮ ಮನಸ್ಸಿಗೆ ತನ್ನ ಭಾವನೆಗಳನ್ನು ಹೇಳಿಕೊಳ್ಳಲು ಬಾಹ್ಯ ರೂಪವೊಂದರ ಅಗತ್ಯ ಇರುತ್ತದೆ ಎಂದು ನಂತರದ ದಿನಗಳಲ್ಲಿ ಗುರುದೇವ ವಿವರಿಸಿದ್ದಾರೆ. ದೈವಿ ಶಕ್ತಿಯು ಮೂರ್ತಿಯ ಭಾಗ ಎಂದು ನಾವು ಭಾವಿಸಿ ಅದಕ್ಕೆ ಹೂವು, ಹಣ್ಣು, ನೈವೇದ್ಯ ಸಮರ್ಪಿಸಿ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ಪೂಜೆ ಪೂರ್ಣಗೊಂಡ ನಂತರ ಆ ದೈವಿ ಶಕ್ತಿಯನ್ನು ನಮ್ಮ ಹೃದಯದೊಳಗೆ ಪುನಃ ಆವಾಹಿಸಿಕೊಳ್ಳುತ್ತೇವೆ, ಮೂರ್ತಿಯನ್ನು ನೀರಿಗೆ ಬಿಡುತ್ತೇವೆ. ದೈವಿ ಶಕ್ತಿಗೆ ನಮ್ಮ ಹೃದಯವೇ ಉತ್ತಮವಾದ ಸ್ಥಳ ಎಂಬುದರಲ್ಲಿ ಅನುಮಾನವಿಲ್ಲ!

***

ಭಿಕ್ಷುಕರು ನಮಗೆ ನಿಗೂಢವಾಗಿ ಕಾಣಿಸುತ್ತಿದ್ದರು. ‘ಅವರು ಏಕೆ ಭಿಕ್ಷೆ ಬೇಡುತ್ತಿದ್ದಾರೆ’ ಎಂದು ಪುಟ್ಟ ರವಿ ಒಮ್ಮೆ ಅಮ್ಮನನ್ನು ಕೇಳಿದ. ‘ಅವರು ಬಡವರು, ಹಾಗಾಗಿ’ ಎಂದು ಅಮ್ಮ ಉತ್ತರಿಸಿದ್ದಳು. ‘ಆದರೆ, ಅವರು ಏಕೆ ಬಡವರು’ ಎಂದು ನನ್ನ ಸಹೋದರ ಪುನಃ ಕೇಳಿದ. ಆಗ ಮಧ್ಯಪ್ರವೇಶಿಸಿದ ಪಿತಾಜಿ, ‘ದೇವರು ಅವರನ್ನು ಬಡವರನ್ನಾಗಿಸಿದ’ ಎಂದರು. ‘ಭಿಕ್ಷುಕರನ್ನು ಸೃಷ್ಟಿಸಬೇಡ ಎಂದು ನಾನು ದೇವರಲ್ಲಿ ಕೇಳಿಕೊಳ್ಳುತ್ತೇನೆ’ ಎಂದು ಪುಟ್ಟ ರವಿ ಹೇಳಿದ್ದ. ಈ ಮಾತುಕತೆಯನ್ನು ಪಿತಾಜಿ ಆಗಾಗ ನೆನಪಿಸಿಕೊಳ್ಳುತ್ತಿದ್ದರು. ‘ಎಳೆಯ ಬಾಲಕ ಅದೆಂತಹ ತೀರ್ಮಾನ ತೆಗೆದುಕೊಂಡಿದ್ದ’ ಎಂದು ಹೆಮ್ಮೆಯಿಂದ ಹೇಳುತ್ತಿದ್ದರು.

ನನ್ನ ಸಹೋದರನಲ್ಲಿ ಜನ, ಸಸ್ಯ, ಪ್ರಾಣಿಗಳು ಸೇರಿದಂತೆ ಎಲ್ಲರ ಬಗ್ಗೆಯೂ ಕಾಳಜಿಯ ಮನೋಭಾವ ಮತ್ತು ಸೂಕ್ಷ್ಮ ಮನಸ್ಸು ಇತ್ತು. ಆತ ಪ್ರಾಣಿಗಳ ಜೊತೆಯೂ ಸುಲಭವಾಗಿ ಸ್ನೇಹ ಸಂಪಾದಿಸುತ್ತಿದ್ದ. ನಾಯಿ, ಬೆಕ್ಕು ಮಾತ್ರವಲ್ಲದೆ ಆನೆಗಳ ಜೊತೆಯೂ ಆತ ಸ್ನೇಹ ಸಾಧಿಸುತ್ತಿದ್ದ ಎಂಬುದು ಇಂದಿಗೂ ಕಾಣುತ್ತದೆ. ಬೆಂಗಳೂರಿನ ಆಶ್ರಮದಲ್ಲೇ ಇರುವ ಮಹೇಶ್ವರ ಎನ್ನುವ ಆನೆಯ ಜೊತೆ ಗುರುದೇವ ಆಟವಾಡುವುದನ್ನು ಗಮನಿಸಿದರೆ, ಇ‌ಬ್ಬರ ನಡುವೆ ಅದೆಂತಹ ಸಂಬಂಧ ಎಂದು ಆಶ್ಚರ್ಯವಾಗಬಹುದು. ಗುರುದೇವನಲ್ಲಿ ವ್ಯಕ್ತವಾಗುವ ಭಾವನೆಗಳನ್ನು ನೋಡುವುದೇ ಖುಷಿಯ ವಿಚಾರ. ನಾವು ಚಿಕ್ಕವರಿದ್ದಾಗ, ಆನೆಗಳು ಇರುವ ದೇವಸ್ಥಾನಕ್ಕೆ ಅಪ್ಪ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದರು. ಆನೆಗಳನ್ನು ಮುಟ್ಟಬೇಕು ಎಂದು ಸಹೋದರ ಬಯಸುತ್ತಿದ್ದ. ಆದರೆ ನಾನು ಅವುಗಳ ಬಗ್ಗೆ ಆಲೋಚನೆ ಮಾಡಿದರೂ ಕಿರುಚಿಕೊಳ್ಳುತ್ತಿದ್ದೆ! ಹಾಗಿದ್ದರೂ ಆನೆಯೊಂದು ನನಗೆ ಆಶೀರ್ವಾದ ಮಾಡುವಂತೆ ಅಪ್ಪ ನೋಡಿಕೊಂಡಿದ್ದರು. ಹಾಗೆ ಮಾಡಿಸದೆ ಇದ್ದರೆ ನಾನು ನಂತರ ಪೀಡಿಸುತ್ತೇನೆ ಎಂಬುದು ಅಪ್ಪನಿಗೆ ಗೊತ್ತಿತ್ತು. ನನ್ನ ಸಹೋದರ ಏನೇ ಮಾಡಿದರೂ, ನಾನೂ ಅದನ್ನು ಮಾಡಬೇಕಿತ್ತು. ನಾನು ಮತ್ತು ಸಹೋದರ ಅಷ್ಟು ಗಾಢವಾಗಿ ಅಂಟಿಕೊಂಡಿರುತ್ತಿದ್ದೆವು, ನಮ್ಮಿಬ್ಬರ ನಡುವೆ ಸ್ಪರ್ಧೆಯಿರುತ್ತಿರಲಿಲ್ಲ. ನನ್ನ ಸಹೋದರನ ವಿಚಾರದಲ್ಲಿ ನನಗೆ ‘ಸ್ಪರ್ಧೆ’ ಎಂಬ ಪದದ ವ್ಯಾಖ್ಯಾನ ಅಥವಾ ಆ ಪದ ಹೊರಹೊಮ್ಮಿಸುವ ಭಾವನೆಗಳಾಗಲಿ ಗೊತ್ತಿರಲಿಲ್ಲ.

***

ವಯಸ್ಸಾದ ನಂತರ ಜನ ಸಾಯುತ್ತಾರೆ ಎಂಬುದು ಪುಟ್ಟ ರವಿಗೆ ಒಂದು ದಿನ ಗೊತ್ತಾಯಿತು. ಅತ್ತಯ್ಯಮ್ಮ ಅವರು ನಮ್ಮ ಕುಟುಂಬದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದ ಕಾರಣ ಅವರು ಮೊದಲು ಸಾಯುತ್ತಾರೆ ಎಂದು ರವಿ ಭಾವಿಸಿದ. ರವಿ ಅವರ ಜೊತೆ ಬಹಳ ಸಲುಗೆಯಿಂದ ಇದ್ದ. ಹಾಗಾಗಿ, ಈ ಆಲೋಚನೆ ಆತನನ್ನು ಚಿಂತಾಕ್ರಾಂತನನ್ನಾಗಿಸಿತು. ರವಿ ಅತ್ತಯ್ಯಮ್ಮನ ಜೊತೆ ಕೋಣೆಯಲ್ಲಿ ಮಲಗುತ್ತಿದ್ದ. ಎಲ್ಲರೂ ನಿದ್ರಿಸಿದ ನಂತರ ರವಿ ಎಚ್ಚರಗೊಂಡು, ಅತ್ತಯ್ಯಮ್ಮ ಉಸಿರಾಡುತ್ತಿದ್ದಾರೆಯೇ ಎಂಬುದನ್ನು ನೋಡುತ್ತಿದ್ದ. ಉಸಿರಾಟದ ಜೊತೆಯಲ್ಲೇ ಅವರ ಹೊಟ್ಟೆ ಏರಿಳಿತ ಕಾಣುವುದನ್ನು ನೋಡುತ್ತಿದ್ದ, ಅವರು ಗಟ್ಟಿಯಾಗಿ ಗೊರಕೆಹೊಡೆಯುವಷ್ಟು ಹೊತ್ತು ಆತ ಖುಷಿಯಾಗಿರುತ್ತಿದ್ದ.

ಭಾನುಮತಿ ನರಸಿಂಹನ್

ಗೊರಕೆ ನಿಂತಾಗಲೆಲ್ಲ ರವಿ ಅತ್ತಯ್ಯಮ್ಮ ಅವರನ್ನು ಎಬ್ಬಿಸುತ್ತಿದ್ದ. ಬೆಳಗಿನ ಜಾವದ ನಾಲ್ಕು ಗಂಟೆಯ ವೇಳೆಗೆ ರವಿ ನಿದ್ದೆಗೆ ಜಾರುತ್ತಿದ್ದ. ಅಲ್ಲಿಯವರೆಗೂ ಹೀಗೇ ಆಗುತ್ತ ಇರುತ್ತಿತ್ತು. ಅತ್ತಯ್ಯಮ್ಮ ಅವರು ಏನಾದರೂ ಸತ್ತುಹೋದರೆ, ತಾನು ಸ್ಪರ್ಶಿಸಿದ ತಕ್ಷಣ ಅವರು ಎದ್ದುಬರುತ್ತಾರೆ ಎಂದು ರವಿ ಕನಸು ಕಂಡಿದ್ದ. ಇದು ತಿಂಗಳುಗಳ ಕಾಲ ಹೀಗೇ ಮುಂದುವರಿಯಿತು. ರವಿ ಹಗಲು ಹೊತ್ತಿನಲ್ಲಿ ನಿದ್ದೆಗೆ ಜಾರುತ್ತಿದ್ದ. ಕೊನೆಗೊಂದು ದಿನ ಅತ್ತಯ್ಯಮ್ಮ ಕಾಲವಾದರು. ಆಗ ನಾನು ಏಳನೆಯ ತರಗತಿಯಲ್ಲಿ ಇದ್ದೆ. ಅವರು ಮೃತಪಟ್ಟ ಸಮಯದಲ್ಲಿ ನಮಗೆ ಪರೀಕ್ಷೆ ಇತ್ತು. ಅತ್ತಯ್ಯಮ್ಮ ಅವರು ಪುನಃ ಜೀವಂತವಾದರೆ ಎಂಬ ಭಯದಿಂದ ರವಿ ಅವರನ್ನು ಸ್ಪರ್ಶಿಸಲಿಲ್ಲ ಎಂಬುದು ನನ್ನ ನೆನಪಿನಲ್ಲಿ ಇದೆ.

***

ಸ್ನೇಹಿತರು ಮತ್ತು ಶಿಕ್ಷಕರ ನಡುವೆ ನನ್ನ ಸಹೋದರ ಬಹಳ ಪ್ರೀತಿ ಗಳಿಸಿದ್ದ. ಆತ ಮೃದುಭಾಷಿ ಮಗುವಾಗಿದ್ದ. ಆತನಲ್ಲಿದ್ದ ಅಸಾಮಾನ್ಯ ಪ್ರತಿಭೆಯನ್ನು ಗುರುತಿಸಿದ ಶಾಲೆಯು, ಅವನನ್ನು ಒಂದನೆಯ ತರಗತಿಯಿಂದ ನೇರವಾಗಿ ಮೂರನೆಯ ತರಗತಿಗೆ ಕಳುಹಿಸಿತು. ಆದರೆ, ಬೇರೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ವಿಷಯಗಳ ಬಗ್ಗೆ ಮಾತನಾಡಲು ಸಹೋದರನಿಗೆ ಸಾಧ್ಯವಾಗುತ್ತಿರಲಿಲ್ಲ. ಕ್ರೀಡೆ ಮತ್ತು ಸಿನಿಮಾ ಆತನಿಗೆ ಅಷ್ಟೇನೂ ತಟ್ಟುತ್ತಿರಲಿಲ್ಲ. ಜೀವನದ ಉದ್ದೇಶ ಮತ್ತು ಅರ್ಥದ ಬಗ್ಗೆ, ಜಗತ್ತಿನ ಬಗ್ಗೆ, ದೈವತ್ವದ ಬಗ್ಗೆ ಬೇರೆಯವರು ಆಲೋಚಿಸುತ್ತಿರುವಂತೆ ಕಾಣುವುದಿಲ್ಲವೇಕೆ ಎಂದು ಸಹೋದರ ಯೋಚಿಸುತ್ತಿದ್ದ.

ರವಿ ಯುವಕನಾಗಿದ್ದಾಗ ಫುಟ್‌ಬಾಲ್‌ ಆಡಲು ಸಾಧ್ಯವಾಗುತ್ತಿರಲಿಲ್ಲ. ‘ನಾನು ಒಂದು ಚೆಂಡನ್ನು ಕಂಡು, ನನ್ನ ಕಾಲುಗಳನ್ನೂ ಕಂಡು, ಈ ಕಾಲುಗಳಿಂದ ನಾನು ಏನನ್ನೂ ಒದೆಯಲಾರೆ ಎಂದು ಆಲೋಚಿಸುತ್ತಿದ್ದೆ. ನನ್ನ ಕಾಲುಗಳು ಚಲನೆಯನ್ನೇ ತೋರುತ್ತಿರಲಿಲ್ಲ.’ ಕ್ರೀಡೆಗಳ ಬಗ್ಗೆ ನನ್ನ ಸಹೋದರನಿಗೆ ಆಸಕ್ತಿ ಇಲ್ಲದಿದ್ದನ್ನು ಕಂಡು ಅಮ್ಮ ಚಿಂತಿತರಾಗಿದ್ದರು. ‘ನನಗೆ ಗೆಲ್ಲುವುದರಲ್ಲಿ ಖುಷಿಯಿಲ್ಲ. ಬೇರೊಬ್ಬರು ಸೋಲುವುದನ್ನು ಕಂಡಾಗಲೂ ನನಗೆ ಖುಷಿ ಆಗುವುದಿಲ್ಲ. ಯಾರೋ ಒಬ್ಬರು ಸೋಲುತ್ತಾರೆ ಎಂದಾಗ ನನಗೆ ಸಂತೋಷ ಆಗುವುದಿಲ್ಲ. ಬೇರೆಯವರು ಖುಷಿಯಾಗಿರುವುದನ್ನು ಕಂಡಾಗಲೇ ನನಗೆ ಖುಷಿಯಾಗುತ್ತದೆ’ ಎಂದು ಆತ ಅಮ್ಮನಿಗೆ ಹೇಳಿದ್ದ.

(ಅನುವಾದ: ವಿಜಯ್ ಜೋಷಿ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry