ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯದ ನೆರಳಲ್ಲಿ ಮಲೆಕುಡಿಯರ ಬದುಕು!

ಕುದುರೆಮುಖ ರಾಷ್ಟ್ರೀಯ ಉದ್ಯಾ–ಎಎನ್‌ಎಫ್‌ ಸಿಬ್ಬಂದಿಯಿಂದ ಸ್ಥಳೀಯರಿಗೆ ಕಿರುಕುಳ: ಆರೋಪ
Last Updated 6 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್‌) ಸಿಬ್ಬಂದಿಯ ಕಿರುಕುಳ ಈಗಲೂ
ಇದೆ. ಇಲ್ಲಿನ ಮಲೆಕುಡಿಯರ ಮನೆಗಳಲ್ಲಿ ನೆಂಟರಿಗಾಗಿ ಒಂದಿಷ್ಟು ಅನ್ನ ಹೆಚ್ಚು ಮಾಡಿಟ್ಟುಕೊಂಡರೂ ವಿಚಾರಣೆ, ಕಿರುಕುಳ ಅನುಭವಿಸಬೇಕಾಗಿದೆ...

ಮಲೆಕುಡಿಯರ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರಗೌಡ ಅವರು ಬುಡಕಟ್ಟು ಹಾಗೂ ಆದಿವಾಸಿ ಜನರ ಪರಿಸ್ಥಿತಿ ಬಿಚ್ಚಿಟ್ಟಿದ್ದು ಹೀಗೆ.

2006ರ ಅರಣ್ಯ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಕುರಿತು ಇಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಕಾರ್ಕಳ ತಾಲ್ಲೂಕಿನ ಕಬ್ಬಿನಾಲೆಯಲ್ಲಿ 9 ವರ್ಷಗಳ ಹಿಂದೆ ಸದಾಶಿವ ಮಲೆಕುಡಿಯ ಎಂಬುವವರ ಮೃತದೇಹ ಮರಕ್ಕೆ ಕಟ್ಟಿಹಾಕಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಕ್ಸಲರ ಮಾಹಿತಿದಾರನೆಂಬ ಕಾರಣಕ್ಕೆ ಆತನನ್ನು ಎಎನ್‌ಎಫ್‌ನವರು ಕೊಂದರೋ ಅಥವಾ ಪೊಲೀಸ್‌ ಮಾಹಿತಿದಾರನೆಂದು ಶಂಕಿಸಿ ನಕ್ಸಲರು ಕೊಂದರೋ ಎಂಬ ಸತ್ಯಾಂಶ ಇನ್ನೂ ಹೊರಗೆ ಬಂದಿಲ್ಲ ಎಂದರು.

‘ಸದಾಶಿವ ಅವರ ವೃದ್ಧ ತಾಯಿ ಗೋಪಿ ಈದುವಿನಲ್ಲಿದ್ದ ಮನೆ ಮತ್ತು 5 ಎಕರೆ ಭೂಮಿ ತೊರೆದು ಮಗಳ ಮನೆಯಲ್ಲಿ ನೆಲೆಸಿದ್ದಾರೆ.
ಆ ಕುಟುಂಬಕ್ಕೆ ಪುನರ್ವಸತಿ ಸೌಲಭ್ಯವೂ ಸಿಕ್ಕಿಲ್ಲ. ಎಎನ್‌ಎಫ್‌ ದಬ್ಬಾಳಿಕೆಯಿಂದ ಮಲೆಕುಡಿಯ ಕುಟುಂಬಗಳು ಭಯದ ನೆರಳಿನಲ್ಲಿ ಬದುಕುತ್ತಿವೆ’ ಎಂದು ಸಮಸ್ಯೆ ತೆರೆದಿಟ್ಟರು.

ಸುಬ್ರಹ್ಮಣ್ಯದಲ್ಲಿರುವ 70 ಮಲೆಕುಡಿಯ ಕುಟುಂಬಗಳು ಅಲ್ಲಿನ ದೇವಸ್ಥಾನ ಆಡಳಿತ ಮಂಡಳಿಯ ನಿಯಂತ್ರಣದಲ್ಲಿ ಬದುಕುತ್ತಿವೆ. ಇದರಲ್ಲಿ ಶೇ 80ರಷ್ಟು ಮಂದಿ ಅರೆಕಾಲಿಕ ನೌಕರರಾಗಿ ದೇವಸ್ಥಾನದ ಚಾಕರಿ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿದರೆ ನೆಲೆ ಕಳೆದುಕೊಳ್ಳುವ ಭಯ ಅವರಲ್ಲಿದೆ. ಅಧ್ಯಯನದ ವೇಳೆ ಈ ಅಂಶ ಕಂಡುಬಂದಿವೆ ಎಂದು ಸಮುದಾಯದ ಪ್ರತಿನಿಧಿಗಳು ಗಮನ ಸೆಳೆದರು.

‘ಮೌಢ್ಯಾಚರಣೆಗಳ ವಿರುದ್ಧ ಮಲೆಕುಡಿಯರಲ್ಲಿ ಜಾಗೃತಿ ಮೂಡಿಸಬೇಕು. ದೇವಸ್ಥಾನದ ಆಡಳಿತ ಮಂಡಳಿಯ ಕೈಗೊಂಬೆಗಳಾಗಲು ಬಿಡಬಾರದು’ ಎಂದು ಸಮಾಜ ಕಲ್ಯಾಣ ಇಲಾಖೆ ಸಲಹೆಗಾರ ಡಾ.ಈ.ವೆಂಕಟಯ್ಯ ಸಲಹೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ ಗಿರಿಜನರು ಅರಣ್ಯ ಹಕ್ಕು ಕಾಯ್ದೆಯಡಿ 2015ರಿಂದ ಸಲ್ಲಿಸಿದ ಅರ್ಜಿಗಳನ್ನು ಯಾವುದೇ ಕಾರಣ ನೀಡದೆ ಉಪವಿಭಾಗಾಧಿಕಾರಿತಿರಸ್ಕರಿಸುತ್ತಿದ್ದಾರೆ ಎಂದು ಮುಖಂಡ ಬೀಕಯ್ಯ ದೂರಿದರು.

ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಹಲಸರು ನಿಕೃಷ್ಟ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಶಿವಮೊಗ್ಗ, ಶಿಕಾರಿಪುರ, ಸಾಗರ, ಸೊರಬ ಭಾಗದಲ್ಲಿ ಹಸಲರಿಗೆ ಅರ್ಧ ಗುಂಟೆಯಿಂದ ಗರಿಷ್ಠ ಎರಡುಗುಂಟೆ ಮಾತ್ರ ಭೂಮಿಯನ್ನು ಮಂಜೂರು ಮಾಡಿದ್ದಾರೆ. ಇಷ್ಟು ಭೂಮಿಯಲ್ಲಿ ಜೀವನ ಮಾಡಲು ಸಾಧ್ಯವೇ ಎಂದು ಕರ್ನಾಟಕ ಅರಣ್ಯ ಬುಡಕಟ್ಟು ಸಂಘದ ರಾಜ್ಯ ಅಧ್ಯಕ್ಷ ರಾಮಣ್ಣ ಪ್ರಶ್ನಿಸಿದರು.

‘ಅರಣ್ಯ ಕಿರು ಉತ್ಪನ್ನ ಸಂಗ್ರಹಿಸಲು ಅರಣ್ಯ ಪ್ರವೇಶಿಸಿದರೆ ಅರಣ್ಯಾಧಿಕಾರಿಗಳು ದೂರು ದಾಖಲಿಸಿ, ಕಿರುಕುಳ ನೀಡುತ್ತಿದ್ದಾರೆ’ ಎಂದು ದೂರಿದರು.

ಅಹವಾಲು ತೋಡಿಕೊಳ್ಳುವಾಗ ಅತ್ತರು

ಕಾಫಿ ಎಸ್ಟೇಟ್‌ ಮಾಲೀಕರೊಬ್ಬರು ರಸ್ತೆ ಬಿಡದೆ ಭದ್ರಾ ನದಿಯ ತಟದವರೆಗೂ ಬೇಲಿ ಹಾಕಿಕೊಂಡು ಕಿರುಕುಳ ನೀಡುತ್ತಿದ್ದಾರೆ ಎಂದು ಅಹವಾಲು ತೋಡಿಕೊಳ್ಳುವಾಗ ಮೂಡಿಗೆರೆ ತಾಲ್ಲೂಕಿನ ಹಾದೋಣಿಯ ಆದಿವಾಸಿ ಸತೀಶ್‌ ಗದ್ಗದಿತರಾದರು. 22 ಸದಸ್ಯರಿರುವ ಅವರ ಅವಿಭಕ್ತ ಕುಟುಂಬ ಅಲ್ಲಿನ ಅರಣ್ಯದಲ್ಲಿ ವಾಸಿಸುತ್ತಿದೆ.

‘ಮಕ್ಕಳನ್ನು ಶಾಲೆಗೆ ಕಳುಹಿಸಲು ಮತ್ತು ಪೇಟೆಗೆ ಹೋಗಲು ಬಿದಿರಿನ ತೆಪ್ಪದಲ್ಲಿ ನದಿ ದಾಟಬೇಕು.  ತೆಪ್ಪ ಮುಳುಗಿ ಕುಟುಂಬದ ಇಬ್ಬರು ಸದಸ್ಯರು ಜೀವ ಕಳೆದುಕೊಂಡಿದ್ದಾರೆ’ ಎಂದು ಹಿಂದಿನ ಘಟನೆ ನೆನೆದು ಕಣ್ಣೀರು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT