ಶನಿವಾರ, ಜೂಲೈ 11, 2020
28 °C

‘ಕೆಐಒಸಿಎಲ್‌ಗೆ ₹200 ಕೋಟಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ‘ಕುದುರೆಮುಖ ಕಬ್ಬಿಣ ಅದಿರು ಕಂಪೆನಿಯ (ಕೆಐಒಸಿಎಲ್‌) ಅಧುನೀಕರಣ ಹಾಗೂ ವಿಸ್ತರಣಾ ಚಟುವಟಿಕೆಗಾಗಿ ಕೇಂದ್ರ ಸರ್ಕಾರ ₹200 ಕೋಟಿ ಮಂಜೂರು ಮಾಡಿದ್ದು, ಶೀಘ್ರದಲ್ಲಿಯೇ ಮಂಗಳೂರು ಘಟಕದಲ್ಲಿ ಮತ್ತೆ ಕಬ್ಬಿಣದ ಉಂಡೆ ತಯಾರಿಕೆ ಹಾಗೂ ಮೆದು ಕಬ್ಬಿಣ ತಯಾರಿಕೆ ಆರಂಭವಾಗಲಿದೆ’ ಎಂದು ಕೇಂದ್ರ ಉಕ್ಕು ಖಾತೆ ರಾಜ್ಯ ಸಚಿವ ಚೌಧರಿ ಬೀರೇಂದ್ರ ಸಿಂಗ್‌ ತಿಳಿಸಿದರು. ಶನಿವಾರ ನಗರದ ಕೆಐಒಸಿಎಲ್‌ ಘಟಕಕ್ಕೆ ಭೇಟಿ ನೀಡಿ, ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಕೆಐಒಸಿಎಲ್‌ ಇಲ್ಲಿಗೆ ಸೀಮಿತ ಆಗುವುದು ಬೇಡ ಎಂಬ ಉದ್ದೇಶದಿಂದ ಚಟುವಟಿಕೆಗಳನ್ನು ದೇಶದ ವಿವಿಧೆಡೆ ವಿಸ್ತರಿಸಲು ನಿರ್ಧರಿಸಲಾಗಿದೆ. ಇದರ ಭಾಗವಾಗಿ ಬಳ್ಳಾರಿಯ ದೇವದಾರಿ ವಲಯದಲ್ಲಿ 470 ಹೆಕ್ಟೇರ್‌ ಪ್ರದೇಶದಲ್ಲಿ ಕಂಪೆನಿಯು ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ರಾಜ್ಯ ಸರ್ಕಾರದಿಂದ ಕೆಲ ಪ್ರಕ್ರಿಯೆಗಳು ಬಾಕಿ ಉಳಿದಿವೆ’ ಎಂದರು.

‘ನಂಜನಗೂಡಿನ ಉದೂರು ಬಳಿ ಚಿನ್ನದ ನಿಕ್ಷೇಪದ ಶೋಧ ಕಾರ್ಯವನ್ನು ಕೆಐಒಸಿಎಲ್‌ಗೆ ವಹಿಸಲಾಗಿದೆ. ವಿಶಾಖಪಟ್ಟಣದ ರಾಷ್ಟ್ರೀಯ ಇಸ್ಪಾತ್‌ ನಿಗಮ ಲಿಮಿಟೆಡ್‌ (ಆರ್‌ಐಎನ್‌ಎಲ್‌) ಜತೆಗೆ ಕೆಐಒಸಿಎಲ್‌ ಒಪ್ಪಂದ ಮಾಡಿಕೊಂಡಿದ್ದು, ವಿಶಾಖ ಪಟ್ಟಣದಲ್ಲಿ ಕಬ್ಬಿಣದ ಉಂಡೆಗಳ ತಯಾರಿಕೆ ಘಟಕವನ್ನು ಸ್ಥಾಪಿಸಲಿದೆ. ಇಲ್ಲಿ ಉತ್ಪಾದಿಸುವ ಕಬ್ಬಿಣವನ್ನು ಆರ್‌ಐಎನ್‌ಎಲ್‌ಗೆ ಒದಗಿಸಲಾಗುತ್ತಿದ್ದು, ಹೆಚ್ಚಿನ ಕಬ್ಬಿಣವನ್ನು ವಿದೇಶಗಳಿಗೆ ರಫ್ತು ಮಾಡಲಾಗುವುದು’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರದ ಉಕ್ಕು ನೀತಿ 2017 ರ ಅಡಿಯಲ್ಲಿ ಮಂಗಳೂರಿನ ಕೆಐಒಸಿಎಲ್‌ ಘಟಕದಲ್ಲಿ ಡಕ್ಟೈಲ್‌ ಐರನ್‌ (ಡಿಐ) ಪೈಪ್‌ಗಳನ್ನು ಉತ್ಪಾದಿಸಲು ತೀರ್ಮಾನಿಸಲಾಗಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.