ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನಲು ಬೆಳಕಿನ ವಾಲಿಬಾಲ್‌ ನಾಳೆಯಿಂದ

Last Updated 7 ಜನವರಿ 2018, 6:27 IST
ಅಕ್ಷರ ಗಾತ್ರ

ವಿಜಯಪುರ: ಜಗದ್ವಿಖ್ಯಾತ ಗುಮ್ಮಟ ನಗರಿ 63ನೇ ರಾಷ್ಟ್ರಮಟ್ಟದ 14 ವರ್ಷದೊಳಗಿನ ಶಾಲಾ ಬಾಲಕ–ಬಾಲಕಿಯರ ವಾಲಿಬಾಲ್ ಪಂದ್ಯಾವಳಿಗೆ ಆತಿಥ್ಯ ವಹಿಸಲು ಸಜ್ಜುಗೊಂಡಿದೆ. ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ಪಂದ್ಯಾವಳಿಗಾಗಿ ಮೂರು ಅಂಕಣ ಸಿದ್ಧಪಡಿಸಿದ್ದು, ಅಂತಿಮ ಹಂತದ ಸ್ಪರ್ಶ ನೀಡುವ ಕೆಲಸ ಶನಿವಾರ ಭರದಿಂದ ನಡೆಯಿತು.

ಜ 8ರ ಸೋಮವಾರ ಪಂದ್ಯಾವಳಿ ಚಾಲನೆ ಪಡೆದುಕೊಳ್ಳಲಿದೆ. 12ರ ಶುಕ್ರವಾರ ರಾತ್ರಿ ಅಂತಿಮ ಪಂದ್ಯ ನಡೆಯಲಿದೆ. 300ಕ್ಕೂ ಹೆಚ್ಚು ದೈಹಿಕ ಶಿಕ್ಷಣ ಶಿಕ್ಷಕರು ಈ ಪಂದ್ಯಾವಳಿಯ ಯಶಸ್ಸಿಗಾಗಿ ನಾಲ್ಕೈದು ದಿನಗಳಿಂದ ಅಹೋರಾತ್ರಿ ಶ್ರಮಿಸುತ್ತಿದ್ದಾರೆ ಎಂದು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಟಿ.ಎಚ್‌.ಮೇಲಿನಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಂದ್ಯಾವಳಿಗಾಗಿ ಮೂರು ಅಂಕಣ, ತರಬೇತಿಗಾಗಿ ಎರಡು ಅಂಕಣ ಸಿದ್ಧಗೊಂಡಿವೆ. ಇಚಲ ಕರಂಜಿಯ ಗುತ್ತಿಗೆದಾರ 10000 ಆಸನ ಸಾಮರ್ಥ್ಯದ ಪ್ರೇಕ್ಷಕರ ಗ್ಯಾಲರಿ ನಿರ್ಮಿಸುತ್ತಿದ್ದಾರೆ. ಭಾನುವಾರ ರಾತ್ರಿಯೊಳಗೆ ಸಕಲ ಸಿದ್ಧತೆ ಪೂರ್ಣ ಗೊಳಿಸುತ್ತೇವೆ’ ಎಂದು ಹೇಳಿದರು.

‘ಸೋಮವಾರ ಸಂಜೆ ಉದ್ಘಾಟನಾ ಸಮಾರಂಭ ನಡೆಯಲಿದೆ. ನಂತರ ಪಂದ್ಯಾವಳಿಗೆ ಅಧಿಕೃತ ಚಾಲನೆ ದೊರಕಲಿದೆ. ನಿತ್ಯ ಸಂಜೆ 5ರಿಂದ ರಾತ್ರಿ 10ರವರೆಗೆ ವಿವಿಧ ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ. ಅಂತಿಮ ಪಂದ್ಯವನ್ನು ಗುರುವಾರ ರಾತ್ರಿ 8.30ರೊಳಗೆ ಮುಗಿಸುವ ನಿರೀಕ್ಷೆಯಿದೆ’ ಎಂದು ಮಾಹಿತಿ ನೀಡಿದರು.

50 ತಂಡಗಳ ನೋಂದಣಿ: ‘ಈಗಾಗಲೇ ವಿವಿಧ ರಾಜ್ಯಗಳ ಬಾಲಕ–ಬಾಲಕಿಯರ ಒಟ್ಟು 50 ತಂಡಗಳು ನೋಂದಣಿಯಾಗಿವೆ. ಉತ್ತರ ಪ್ರದೇಶದ ಬಾಲಕ–ಬಾಲಕಿಯರು ಶನಿವಾರ ಮುಂಜಾನೆಯೇ ವಿಜಯಪುರಕ್ಕೆ ಬಂದಿಳಿದಿದ್ದಾರೆ.

ಸ್ಕೂಲ್‌ ಗೇಮ್ಸ್‌ ಆಫ್‌ ಫೆಡರೇಷನ್‌ ಇಂಡಿಯಾ (ಎಸ್‌ಜಿಎಫ್ಐ) ವೆಬ್‌ಸೈಟ್‌ ನಲ್ಲಿ ಒಂದು ತಿಂಗಳ ಹಿಂದಿನಿಂದಲೇ ಪಂದ್ಯಾವಳಿಯ ಕುರಿತಂತೆ ಸಕಲ ಮಾಹಿತಿ ಒದಗಿಸಲಾಗಿದೆ.ನಮ್ಮ ನಿರೀಕ್ಷೆ ಯಂತೆ 60ರಿಂದ 70 ತಂಡಗಳು ಪಾಲ್ಗೊಳ್ಳಬಹುದು. ಆಟಗಾರರು, ವ್ಯವಸ್ಥಾಪಕರು, ತರಬೇತುದಾರರು ಸೇರಿದಂತೆ ಒಟ್ಟು 1500 ಕ್ರೀಡಾಪಟು ಭಾಗಿಯಾಗಬಹುದು’ ಎಂದು ಮೇಲಿನಕೇರಿ ಹೇಳಿದರು.

‘ಬಾಲಕರಿಗೆ ಹೊಟೇಲ್‌ ಆದಿಲ್‌ಶಾಹಿ ಅನೆಕ್ಸ್‌ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಬಾಲಕಿಯರಿಗೆ ದರಬಾರ ಪ್ರೌಢಶಾಲಾ, ಲೊಯೊಲಾ ಪ್ರೌಢಶಾಲಾ, ಸ್ನೇಹ ಸಂಗಮ ಶಾಲೆಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಕ್ರೀಡಾಪಟುಗಳಿಗೆ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಊಟ–ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಆಯಾ ರಾಜ್ಯದ ಕ್ರೀಡಾಪಟುಗಳಿಗೆ ಮೆನು ನೀಡಲಾಗಿದ್ದು, ಅವರು ಯಾವುದನ್ನು ಸೂಚಿಸುತ್ತಾರೆ ಆ ಮಾದರಿಯ ಊಟ ನೀಡುವ ವ್ಯವಸ್ಥೆ ಮಾಡಿದ್ದೇವೆ’ ಎಂದು ತಿಳಿಸಿದರು.

ನವದೆಹಲಿಯ ತಂತ್ರಜ್ಞರು

ಸ್ಕೂಲ್‌ ಗೇಮ್ಸ್‌ ಆಫ್‌ ಫೆಡರೇಷನ್‌ ಇಂಡಿಯಾ ಪಂದ್ಯಾವಳಿಗಾಗಿ ನವ ದೆಹಲಿಯಿಂದ ವೀಕ್ಷಕ, ತಾಂತ್ರಿಕ ವೀಕ್ಷಕ, ಫೀಲ್ಡ್‌ ವೀಕ್ಷಕರನ್ನಾಗಿ ತಲಾ ಒಬ್ಬರಂತೆ ಮೂವರನ್ನು ನಿಯೋಜಿಸಿದೆ. ಇದರ ಜತೆ ಇಬ್ಬರು ರೆಫ್ರಿಗಳು ಬರಲಿದ್ದಾರೆ.

ಉಳಿದಂತೆ ಪಂದ್ಯಾವಳಿಯ ನಿರ್ಣಾಯಕರಾಗಿ ಕೆಲಸ ನಿರ್ವಹಿಸಲು ರಾಜ್ಯದ ವಿವಿಧ ಜಿಲ್ಲೆಗಳ 30 ನಿರ್ಣಾಯಕರು, ಸ್ಥಳೀಯ 20 ನಿರ್ಣಾಯಕರು ಸಜ್ಜಾಗಿದ್ದಾರೆ. ಇವರೆಲ್ಲರಿಗೂ ಲಾಡ್ಜ್‌ಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ದೈಹಿಕ ಶಿಕ್ಷಣ ಶಿಕ್ಷಕರು ಪಂದ್ಯಾವಳಿಯ ಯಶಸ್ಸಿಗಾಗಿ 12 ಸಮಿತಿ ರಚಿಸಿಕೊಂಡು, ಅಹರ್ನಿಶಿ ದುಡಿಯುತ್ತಿದ್ದಾರೆ. ಶನಿವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಎತ್ತ ನೋಡಿದರೂ ಸ್ವಯಂ ಸೇವಕ ದೈಹಿಕ ಶಿಕ್ಷಣ ಶಿಕ್ಷಕರೇ ಗೋಚರಿಸಿದರು. ಕೈಯಲ್ಲಿ ಪರಕೆ ಹಿಡಿದು ಸ್ವಚ್ಛಗೊಳಿಸುವ ಕೆಲಸದಲ್ಲಿ ಕೆಲವರಿದ್ದರೆ, ಉಳಿದವರು ತಮ್ಮ ತಮ್ಮ ಸಮಿತಿಯ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದರು. ರೋಲರ್‌ ಮೈದಾನ ಸಮತಟ್ಟುಗೊಳಿಸುವ ಜತೆ, ಗಟ್ಟಿ ಮಾಡುವ ಕೆಲಸ ನಿರ್ವಹಿಸಿತು.

₹ 20 ಲಕ್ಷ ಬಿಡುಗಡೆ

ಪಂದ್ಯಾವಳಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ₹ 20 ಲಕ್ಷ ಬಿಡುಗಡೆ ಮಾಡಿದೆ. ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ₹ 30 ಲಕ್ಷ ವೆಚ್ಚ ಅಂದಾಜಿಸಿದೆ. 2013–14ರಲ್ಲಿ 17 ವರ್ಷದೊಳಗಿನವರ ಶಾಲಾ ಬಾಲಕ–ಬಾಲಕಿಯರ ರಾಷ್ಟ್ರ ಮಟ್ಟದ ವಾಲಿಬಾಲ್‌ ಪಂದ್ಯಾವಳಿ ವಿಜಯಪುರದಲ್ಲಿ ನಡೆದಿತ್ತು. ಈ ಸಂದರ್ಭ ಉಳಿದಿದ್ದ ₹ 3 ಲಕ್ಷ ಮೊತ್ತವನ್ನು ಬಳಸಿಕೊಳ್ಳಲು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಅನುಮತಿ ನೀಡಿದ್ದಾರೆ. ಉಳಿದ ವೆಚ್ಚ ಸರಿ ಹೊಂದಿಸಲು ಪ್ರಾಯೋಜಕರು, ಜಾಹೀರಾತುದಾರರನ್ನು ಸಂಪರ್ಕಿಸಿದ್ದೇವೆ. ಪಂದ್ಯಾವಳಿಗೆ ಹಣಕಾಸಿನ ಕೊರತೆಯಾಗದು ಎಂದು ಮೇಲಿನಕೇರಿ ಭರವಸೆ ವ್ಯಕ್ತಪಡಿಸಿದರು.

ಸಹಾಯವಾಣಿ ಸ್ಥಾಪನೆ

ದೇಶದ ವಿವಿಧ ಭಾಗಗಳಿಂದ ಬರುವ ರಾಜ್ಯ ತಂಡಗಳಿಗೆ ನೆರವಾಗಲು ಸಹಾಯವಾಣಿ ಆರಂಭಿಸಲಾಗಿದೆ. ಆನ್‌ಲೈನ್‌ನಲ್ಲೂ ಮಾಹಿತಿ ನೀಡುತ್ತಿದ್ದೇವೆ. ನೆರೆಯ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ 10 ದೈಹಿಕ ಶಿಕ್ಷಣ ಶಿಕ್ಷಕರ ನೇತೃತ್ವದ ಸಹಾಯವಾಣಿ ತಂಡ ಈಗಾಗಲೇ ಕಾರ್ಯನಿರತವಾಗಿದೆ. ಈ ತಂಡ ಕ್ರೀಡಾಪುಟಗಳಿಗೆ ನಿಖರ ಮಾಹಿತಿ ಒದಗಿಸುತ್ತಿದೆ. ಇದೇ ರೀತಿ ವಿಜಯಪುರ ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣದಲ್ಲೂ ಸಹಾಯವಾಣಿ ತಂಡ ನಿಯೋಜಿಸಲಾಗಿದೆ ಎಂದು ಪಂದ್ಯಾವಳಿಯ ಸಂಘಟಕರು ತಿಳಿಸಿದರು.

* * 

ಪಂದ್ಯಾವಳಿಯ ಯಶಸ್ಸಿಗಾಗಿ ದೈಹಿಕ ಶಿಕ್ಷಣ ಶಿಕ್ಷಕರ ಪಡೆ ಅವಿರತವಾಗಿ ಶ್ರಮಿಸುತ್ತಿದೆ. ಅಂಕಣ ಸಿದ್ಧಗೊಳ್ಳುತ್ತಿವೆ. ಗ್ಯಾಲರಿ ನಿರ್ಮಾಣ ಅಂತಿಮ ಹಂತದಲ್ಲಿದೆ
ಟಿ.ಎಚ್‌.ಮೇಲಿನಕೇರಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT