ಕಬ್ಬು ಸಾಗಣೆ: ಸಂಚಾರಕ್ಕೆ ತೊಂದರೆ

7

ಕಬ್ಬು ಸಾಗಣೆ: ಸಂಚಾರಕ್ಕೆ ತೊಂದರೆ

Published:
Updated:

ಮುಧೋಳ: ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭವಾಗಿ ಎರಡು ತಿಂಗಳಾಗಿದೆ. ರಸ್ತೆಗಳಲ್ಲಿ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರಿಸಬೇಕಾದ ಅನಿವಾರ್ಯ ಬಂದೊದಗಿದೆ.

ಪ್ರತಿ ವರ್ಷ ಜಿಲ್ಲೆಯಲ್ಲಿ ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ಗಳಿಗೆ ಸಿಲುಕಿ, ಬಡೆದು ನೂರಾರು ಜನರು ಸಾವಿಗೀಡಾಗುವುದು ಸಾಮಾನ್ಯ ವಾಗಿದೆ. ಕಬ್ಬು ಹೊತ್ತು ಸಾಗಿಸುವ ಟ್ರ್ಯಾಕ್ಟರ್‌ಗಳು ಭಾರ ಎಳೆಯಲಾರದೆ ಏಕಾಏಕಿ ಉರಳಿ ಬೀಳುವುದರಿಂದ, ಚಾಲನೆ ಬಾರದವರು ಟ್ರ್ಯಾಕ್ಟರ್‌ಗಳನ್ನು ಅಡ್ಡಾದಿಡ್ಡಿ ಓಡಿಸುವುದರಿಂದ ಅಥವಾ ಟ್ರ್ಯಾಕ್ಟರ್‌ಗಳ ಟ್ರೇಲರ್ ಬಡೆಯುವುದು ಸೇರಿದಂತೆ ಒಂದಿಲ್ಲೊಂದು ಕಾರಣದಿಂದ ಜೀವ ಹಾನಿ, ಕೈಕಾಲು ಮುರಿದುಕೊಂಡು ಸಮಸ್ಯೆ ಅನುಭವಿಸುತ್ತಾರೆ. ನಿತ್ಯ ಒಂದಿಲ್ಲೊಂದು ರಸ್ತೆಯಲ್ಲಿ 108 ವಾಹನದ ಸದ್ದು ಕೇಳುತ್ತಲೇ ಇರುತ್ತದೆ.

ಜಿಲ್ಲೆಯ ಬಹುತೇಕ ಕಾರ್ಖಾನೆಗಳು ಇರುವುದು ಮುಧೋಳ ಹಾಗೂ ಜಮಖಂಡಿ ತಾಲ್ಲೂಕು ವ್ಯಾಪ್ತಿಯಲ್ಲಿ. ಹೀಗಾಗಿ ಅಪಘಾತ ಸಂಭವಿಸುವುದು ಈ ಎರಡು ತಾಲ್ಲೂಕು ವ್ಯಾಪ್ತಿಯಲ್ಲೇ ಹೆಚ್ಚು. ಶೇ 90 ರಷ್ಟು ಕಬ್ಬು ಕಾರ್ಖಾನೆಗಳಿಗೆ ಟ್ರ್ಯಾಕ್ಟರ್‌ಗಳ ಮೂಲಕ ಬರುತ್ತದೆ.

ಟ್ರ್ಯಾಕ್ಟರ್‌ಗಳಿಗೆ ಎರಡು ಟ್ರೇಲರ್‌ಗಳನ್ನು ಜೋಡಿಸಲಾಗಿರುತ್ತದೆ. ಪ್ರತಿ ಟ್ರೇಲರ್‌ನಲ್ಲಿ 8 ರಿಂದ 15 ಟನ್‌ವರೆಗೆ ಕಬ್ಬನ್ನು ತುಂಬಲಾಗುತ್ತದೆ. ಕಬ್ಬಿನ ಹಂಗಾಮು ಆರಂಭವಾದಂತೆ ಟ್ರಾಫಿಕ್ ಸಮಸ್ಯೆ ಎದುರಾಗುತ್ತದೆ. ಟ್ರಾಫಿಕ್ ನಿಯಂತ್ರಿಸಲು ಪೊಲೀಸರರು ಹರಸಹಾಸ ಪಡುತ್ತಾರೆ. ಸಂಜೆಯಾಗುತ್ತಿದ್ದಂತೆ ಟ್ರ್ಯಾಕ್ಟರ್‌ಗಳನ್ನು ಮುಖ್ಯ ರಸ್ತೆ ಅಕ್ಕಪಕ್ಕದಲ್ಲಿ ನಿಲ್ಲಿಸಿ ಡಾಬಾಗಳಿಗೆ ಹೋಗುತ್ತಾರೆ. ಇದರ ಜೊತೆಗೆ ಕೆಟ್ಟುಹೋದ ಟ್ರ್ಯಾಕ್ಟರ್‌ಗಳು ಹಾಗೂ ಸರಿಪಡಿಸುವ ಕಾರ್ಯಗಳು ರಸ್ತೆಯಲ್ಲೇ ನಡೆಯುತ್ತದೆ.

‘ಬಹುತೇಕ ಟ್ರ್ಯಾಕ್ಟರ್‌ ಹಾಗೂ ಟ್ರೇಲರ್‌ಗಳಿಗೆ ನಿಲುಗಡೆ ದೀಪ ಹಾಗೂ ರೇಡಿಯಂ ಸ್ಟಿಕ್ಕರ್ ಹಚ್ಚಿರುವುದಿಲ್ಲ. ಇದರಿಂದ ಅಪಘಾತಗಳು ಸಂಭವಿಸುತ್ತವೆ. ಈ ಸಂಬಂಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಹಿರಿಯ ವಕೀಲ, ಬಿಜೆಪಿ ಬಾಗಲಕೋಟೆ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಎಚ್.ಪಂಚಗಾಂವಿ, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಆರ್.ಮಾಚಪ್ಪನವರ ಆಗ್ರಹಿಸುತ್ತಾರೆ.

‘ಕಾರ್ಖಾನೆಗಳು ಕಬ್ಬು ಪೂರೈಸಲು ಟ್ರ್ಯಾಕ್ಟರ್‌ ಮಾಲೀಕರೊಂದಿಗೆ ಕರಾರು ಮಾಡಿಕೊಂಡಿರುತ್ತಾರೆ. ಟ್ರ್ಯಾಕ್ಟರ್‌ಗಳು ಹಾಗೂ ಟ್ರೇಲರ್‌ಗಳಿಗೆ ನಿಲುಗಡೆ ದೀಪ ಹಾಗೂ ರಿಪ್ಲೆಕ್ಟರ್ ಅಥವಾ ರೇಡಿಯಂ ಸ್ಟಿಕ್ಕರ್ ಅಳವಡಿಸುವುದು ಕಡ್ಡಾಯವೆಂದು ಕಟ್ಟು ನಿಟ್ಟಾಗಿ ಪಾಲಿಸಿದರೆ ಸಾಕಷ್ಟು ಅಮಾಯಕರ ಜೀವ ಉಳಿಸಬಹುದು. ಇದಕ್ಕೆ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಪಡೆಯಬಹುದು’ ಎಂದು ಸಲಹೆ ನೀಡುತ್ತಾರೆ ಯುವ ಮೋರ್ಚಾ ಅಧ್ಯಕ್ಷ ಪ್ರದೀಪ ನಿಂಬಾಳಕರ ಹಾಗೂ ಪ್ರಕಾಶ ಚಿತ್ತರಗಿ.

ಶಬ್ದ ಮಾಲಿನ್ಯ ತಡೆಯಿರಿ: ‘ಟ್ರ್ಯಾಕ್ಟ ರ್‌ಗಳಲ್ಲಿ ಏನಿಲ್ಲವೆಂದರೂ ಟೇಪ್ ರೆಕಾರ್ಡ್‌ಗಳು ಇದ್ದೇ ಇರು ತ್ತವೆ. ಮನಸೋಇಚ್ಛೆ ಸೌಂಡ್‌ ಕೊಡು ವುದರಿಂದ ಸಾರ್ವಜನಿಕರಿಗೆ ಕಿರಿ ಕಿರಿ ಉಂಟಾಗುತ್ತದೆ. ಅಲ್ಲದೆ, ಹಿಂದು ಗಡೆಯಿಂದ ಬರುವ ವಾಹನಕ್ಕೆ ರಸ್ತೆ ಬಿಡುವುದಿಲ್ಲ. ಹೆಚ್ಚಿನ ಶಬ್ದದಿಂದ ಶಾಲೆ, ಕಾಲೇಜು ಹಾಗೂ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ತೊಂದರೆಯಾಗುತ್ತಿದೆ. ಟೇಪ್ ರೇಕಾರ್ಡ್ ಬಳಿಸುವುದಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು. ಅಲ್ಲದೆ, ಪರವಾನಿಗೆ ಇಲ್ಲದೆ ಚಾಲನೆ ಮಾಡುವವರಿಗೆ ಶಿಕ್ಷೆ ವಿಧಿಸಬೇಕು. ಸಾಮೂಹಿಕ ಡ್ರೈವಿಂಗ್ ಲೈಸನ್ಸ್ ನೀಡಬೇಡಿ, ಸುರಕ್ಷತೆಯ ಬಗ್ಗೆ ಜಾಗೃತಿಯನ್ನೂ ಮೂಡಿಸಬೇಕು’ ಎನ್ನುತ್ತಾರೆ ಕಾಂಗ್ರೆಸ್ ಮುಖಂಡ ಹಣಮಂತ ಅಡವಿ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಮಾರ ಹುಲಕುಂದ.

* * 

ಮುಂಜಾಗ್ರತೆ ಕೊರತೆಯಿಂದ ಪ್ರತಿ ಹಂಗಾಮಿನಲ್ಲಿ ಸಾಕಷ್ಟು ಅಪಘಾತ ಸಂಭವಿಸುತ್ತವೆ. ಅನೇಕರು ಜೀವ ಕಳೆದುಕೊಂಡಿದ್ದಾರೆ. ಜತೆಗೆ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ

ಬಿ.ಎಚ್.ಪಂಚಗಾಂವಿ, ಹಿರಿಯ ವಕೀಲ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry