ಕೃಷಿಯಲ್ಲಿ ಖುಷಿ ಕಂಡ ನಾಗೂರ ದಂಪತಿ

7

ಕೃಷಿಯಲ್ಲಿ ಖುಷಿ ಕಂಡ ನಾಗೂರ ದಂಪತಿ

Published:
Updated:
ಕೃಷಿಯಲ್ಲಿ ಖುಷಿ ಕಂಡ ನಾಗೂರ ದಂಪತಿ

ಔರಾದ್: ತಾಲ್ಲೂಕಿನ ನಾಗೂರ (ಎಂ) ಗ್ರಾಮದ ದಂಪತಿ ತರಕಾರಿ ಬೆಳೆಗಳನ್ನು ಬೆಳೆದು ಯಶಸ್ಸು ಗಳಿಸುವ ಮೂಲಕ ಕೃಷಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.ಗ್ರಾಮದ ಸಿದ್ರಾಮ –ಸವಿತಾ ಮಾನೂರೆ ಕೃಷಿಯಲ್ಲಿ ಯಶಸ್ಸು ಕಂಡ ದಂಪತಿ. ತರಕಾರಿ ಬೆಳೆಗಳಾದ ಟೊಮೊಟೊ, ಮೆಣಸಿನಕಾಯಿ, ಸೌತೆಕಾಯಿ, ಬದನೆಕಾಯಿ, ಹಿರೇಕಾಯಿ, ಈರುಳ್ಳಿ ಬೆಳೆದು ಪ್ರತಿ ವರ್ಷ ₹ 2 ಲಕ್ಷ ಆದಾಯ ಗಳಿಸಿದ್ದಾರೆ.

‘ಎಂಟು ಎಕರೆ ಜಮೀನು ಇದ್ದರೂ ಮನೆಯಲ್ಲಿ ಸಮಾಧಾನ ಇರಲಿಲ್ಲ. ಪ್ರತಿ ವರ್ಷ ಸಾಲ ಮಾಡುವುದು ಅನಿವಾರ್ಯವಾಗಿತ್ತು. ತೆರೆದ ಬಾವಿ ಕೊರೆದು ಅದರಿಂದ ತರಕಾರಿ ಬೆಳೆಯಲು ಆರಂಭಿಸಿದೆವು. ಅಂದಿನಿಂದ ಸ್ವಲ್ಪ ನೆಮ್ಮದಿ ಸಿಕ್ಕಿತ್ತು. ತೋಟಗಾರಿಕೆ ಇಲಾಖೆ ಸಹಕಾರದಿಂದ ₹ 1 ಲಕ್ಷ ಖರ್ಚು ಮಾಡಿ ಎರಡೂವರೆ ಎಕರೆ ಜಮೀನಿಗೆ ಹನಿ ನೀರಾವರಿ ಸೌಲಭ್ಯ ಕಲ್ಪಿಸಲಾಯಿತು. ಇದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಬರಲಾರಂಭಿಸಿತು. ಇದರ ಪ್ರೇರಣೆ ಫಲವಾಗಿ ವರ್ಷದ 12 ತಿಂಗಳು ತರಕಾರಿ ಬೆಳೆಸಲು ತೊಡಗಿಸಿಕೊಂಡೆವು’ ಎಂದು ಸಿದ್ರಾಮ ಮಾನೂರೆ ಹೇಳುತ್ತಾರೆ.

‘ಪತಿ–ಪತ್ನಿ ಇಬ್ಬರು ಪೂರ್ಣವಾಗಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇವೆ. ದಿನದ 12 ಗಂಟೆ ಹೊಲದಲ್ಲೇ ಕಾಲ ಕಳೆಯುತ್ತೇವೆ. ಎರಡು ಎಮ್ಮೆಗಳಿದ್ದು ಅವುಗಳಿಂದ ನಿತ್ಯ ₹ 500 ಹಾಲು ಮಾರುತ್ತೇವೆ. ನಮ್ಮ ದುಡಿಮೆಯ ಫಲವಾಗಿ ಸುಮಾರು 8 ಲಕ್ಷ ಸಾಲ ತೀರಿಸಿದ್ದೇವೆ. 10 ಲಕ್ಷ ಖರ್ಚು ಮಾಡಿ ಮನೆ ಕಟ್ಟಿಸಿದ್ದೇವೆ. ಒಬ್ಬ ಮಗಳು ಬಿ.ಕಾಂ, ಮತ್ತೊಬ್ಬ ಮಗ ಪಿಯುಸಿ ಓದುತ್ತಿದ್ದಾರೆ’ ಎಂದು ಅವರು ಕೃಷಿಯಲ್ಲಿ ಮಾಡಿದ ಸಾಧನೆಯನ್ನು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಕೈಹಿಡಿದ ಟೊಮೊಟೊ: ಕಳೆದ ಮೂರು ವರ್ಷಗಳಿಂದ ಇವರು ಯುಎಸ್‌–440 ತಳಿಯ ಟೊಮೊಟೊ ಬೆಳೆಯುತ್ತಿದ್ದಾರೆ. ಇದು ದೇಸಿ ಟೊಮೊಟೊ ತಳಿಗಿಂತ ಹೆಚ್ಚಿನ ಇಳುವರಿ ಬರುತ್ತದೆ. ಬೇಗ ಕೀಟ ಬಾಧೆಗೆ ಒಳಗಾಗುವುದಿಲ್ಲ. ಜತೆಗೆ ಈ ಹಣ್ಣು ಬೇಗ ಕೆಡುವುದೂ ಇಲ್ಲ. ನಾಟಿ ಮಾಡಿದ ಎರಡೂವರೆ ತಿಂಗಳಲ್ಲಿ ಕಟಾವಿಗೆ ಬರುತ್ತದೆ. ಎಕರೆಗೆ 100 ಟನ್ ಖಚಿತ. ಈ ಬೀಜದ ತಳಿ ಮಹಾರಾಷ್ಟ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಕೃಷಿ ಕಷ್ಟದಾಯಕ ಕಾಯಕವಾದರೂ ಸಂತೃಪ್ತಿ ಇದೆ. ಹವಮಾನ ವೈಪರಿತ್ಯ ಮತ್ತು ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗದೆ ರೈತ ಕಷ್ಟ ಎದುರಿಸುವುದು ಸಹಜ. ಆದರೂ ಕಷ್ಟಪಟ್ಟು ಬೆವರು ಸುರಿಸುವ ರೈತ ದೃತಿಗೆಡುವು ಅಗತ್ಯವಿಲ್ಲ’ ಎಂದು ಮಹಿಳೆ ಸವಿತಾ ಮಾನೂರೆ ಅಭಿಪ್ರಾಯಪಡುತ್ತಾರೆ.

* * 

ನಾಗೂರ ರೈತ ಸಿದ್ರಾಮ ದಂಪತಿ ಕಷ್ಟಪಟ್ಟು ದುಡಿದು ತರಕಾರಿ ಬೆಳೆಯುತ್ತಾರೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಇಲಾಖೆಯಿಂದ ಅವರಿಗೆ ಆರ್ಥಿಕ ನೆರವು ನೀಡಲಾಗಿದೆ.

ಮಾರುತಿ

ಸಹಾಯಕ ತೋಟಗಾರಿಕೆ ಅಧಿಕಾರಿ, ಔರಾದ್‌

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry