ಆರ್ಕಿಡ್‌ ಸ್ವರ್ಗ ‘ಹೊರಮುನಿ’ ಹುಡುಕಾಟ!

7

ಆರ್ಕಿಡ್‌ ಸ್ವರ್ಗ ‘ಹೊರಮುನಿ’ ಹುಡುಕಾಟ!

Published:
Updated:
ಆರ್ಕಿಡ್‌ ಸ್ವರ್ಗ ‘ಹೊರಮುನಿ’ ಹುಡುಕಾಟ!

ಯಳಂದೂರು: ಅಪರೂಪಕ್ಕೆ ಸುರಿದ ವರ್ಷಧಾರೆ ವನಸುಮಗಳ ಸಂತತಿಗೆ ಎದೆ ಹಾಲು ಉಣಿಸಿದೆ. ಬೆಟ್ಟ–ಗುಡ್ಡಗಳ ಮಣ್ಣಿನಲ್ಲಿ ಬಿದ್ದಿದ್ದ ಬೀಜ ಕಣಗಳ ಜೀವಕೋಶ ಈಗ ಕಣ್ಣು ತೆರೆದಿದೆ. ಮರೆಯಾಗಿದ್ದ ಆರ್ಕಿಡ್‌, ಡ್ರಾಸೆರ್, ಫರ್ನ್‌ ಹಾಗೂ ಲಿಲ್ಲಿಯಂ ಸಸ್ಯಲೋಕ ಪ್ರಕೃತಿ ಮಾತೆಯನ್ನು ಅಪ್ಪಿಕೊಂಡಿವೆ. ಬೇರೆಲ್ಲೂ ಕಾಣಸಿಗದ ಹೊರಮುನಿ ಸಸ್ಯ ಸಂಕುಲ ಈಗಷ್ಟೇ ಎಲೆಗಳನ್ನು ಹೊರ ಚಾಚಿದೆ.

ತಾಲ್ಲೂಕಿನ ಬಹುಪಾಲು ಪ್ರದೇಶದಲ್ಲಿ ಈ ಬಾರಿ ವರುಣ ಕೃಪೆ ತೋರಿದ್ದ. ಸಮುದ್ರಮಟ್ಟದಿಂದ ಹತ್ತು ಸಾವಿರ ಅಡಿ ಎತ್ತರದ ಪ್ರದೇಶಗಳಲ್ಲಿ ಒಣಗಿದ್ದ ಸಸ್ಯ ಪ್ರಭೇದಗಳು ಮಾಗಿಯ ಚಳಿಯಲ್ಲೂ ಹಸಿರನ್ನು ಹೊದ್ದು ನಳನಳಿಸುತ್ತಿವೆ. ಹೊರಮುನಿ ಮತ್ತು ಒಳಮುನಿ ಗಿಡಗಳು ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಬಲು ಬೇಡಿಕೆ ಇರುವ ಗಿಡಗಳು.

‘ಸಾಮಾನ್ಯವಾಗಿ ‘ಮುಟ್ಟಿದರೆ ಮುನಿ’ ಸಸ್ಯವನ್ನು ಸ್ಪರ್ಶಿಸಿದ ತಕ್ಷಣ ಎಲೆಗಳು ಮುದುಡುತ್ತವೆ. ಇದನ್ನು ಸ್ಥಳೀಯರು ‘ಒಳಮುನಿ’ ಎನ್ನುತ್ತಾರೆ. ಆದರೆ, ಇಲ್ಲಿ ಇದೇ ವಂಶಕ್ಕೆ ಸೇರಿದ ‘ಹೊರಮುನಿ’ ಸಸ್ಯ ಪ್ರಕಾರವಿದೆ. ಇದನ್ನು ಮುಟ್ಟಿದರೆ ಎಲೆಗಳು ಹೊರಮುಖವಾಗಿ ಮಡಚಿಕೊಳ್ಳುತ್ತವೆ. ಇವನ್ನು ಗಿರಿಜನರು ಸಂಗ್ರಹ ಮಾಡಿ ಔಷಧಿಯಾಗಿ ಬಳಸುತ್ತಾರೆ’ ಎನ್ನುತ್ತಾರೆ ಸಸ್ಯತಜ್ಞ ರಾಮಾಚಾರಿ.

ಆಯಾ ಪ್ರದೇಶದ ಮಣ್ಣಿನ ಗುಣ, ಮಳೆ ಪ್ರಮಾಣ, ತಾಪಮಾನ ಮತ್ತು ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ಇಂತಹ ಸಸ್ಯಜಾತಿ ರೂಪುಗೊಳ್ಳುತ್ತದೆ. ಸಸ್ಯತಜ್ಞರು, ಶಿಕ್ಷಕರು ಹಾಗೂ ನಾಟಿ ವೈದ್ಯರು ಇಂತಹ ಸಸ್ಯಗಳನ್ನು ಹುಡುಕಿ ಸಂರಕ್ಷಿಸಲು ನೆರವಾಗುತ್ತಾರೆ.

ಬಿಳಿಗಿರಿಬನದ ಸುತ್ತಮುತ್ತ ಆರು ನಮೂನೆಯ ಸಸ್ಯ ಸಂಪತ್ತಿದೆ. ಹತ್ತು ಡಿಗ್ರಿಗಿಂತ ಕಡಿಮೆ ತಾಪಮಾನ ಇರುವ ಮೂಲಕಿ ಶಿಖರದ ಎತ್ತರದಲ್ಲಿ ಆರ್ಕಿಡ್‌ ಸಂತತಿಗಳಿವೆ. ಕಲ್ಲಿನ ಅರೆಯ ನಡುವೆ ಇವು ಕೆಳಮುಖವಾಗಿ ಹೂ ಬಿಡುತ್ತವೆ. ನಾಗರಹಾವಿನ ಎಡೆ ಹೋಲುವ ವಿವಿಧ ಸಸ್ಯಗಳೂ ಬೆಳೆಯುತ್ತವೆ. ಬಹತೇಕ ವರ್ಷಗಳಿಂದ ಕಣ್ಮರೆಯಾಗಿದ್ದ ಇಂತಹ ನೂರಾರು ಕಿರು ಸಸ್ಯಗಳು ವೀಕ್ಷಕರ ಆಕರ್ಷಣೆಗೆ ಕಾರಣವಾಗಿದೆ.

ಪ್ರಪಂಚದಾದ್ಯಂತ ಕಾಣಬಹು ದಾದ ಆರ್ಕಿಡ್‌ ಪ್ರಭೇದಗಳಲ್ಲಿ 28 ಸಾವಿರ ಸಂಕುಲಗಳಿವೆ. ಪುಷ್ಪಗಳ ಬಣ್ಣ ಮತ್ತು ಸುವಾಸನೆಯೂ ಆಹ್ಲಾದಕವಾಗಿ ಇರುತ್ತವೆ. ವೆನಿಲ್ಲಾ, ಆರ್ಕಿಡ್‌, ಪೆಲೆನೋಫ್ಸಿಸ್ ಹಾಗೂ ಕ್ಯಾಟಿಯಾ ಕುಟುಂಬದ ಗಿಡಗಳು ಆರ್ಥಿಕ ಮೌಲ್ಯವನ್ನು ಪಡೆದಿವೆ. ಆದರೆ, ಬಿಆರ್‌ಟಿ ಪ್ರದೇಶದಲ್ಲಿ ಬೆಳೆಯುವ ನಿಸರ್ಗದತ್ತ ಪುಷ್ಪಗಳು ಮಾತ್ರ ಅಳಿವಿನಂಚು ತಲುಪಿವೆ.

ಆರ್ಕಿಡ್‌ ಅಭಯಾರಣ್ಯ: ಭಾರತದಲ್ಲಿ ಹಿಮಾಲಯ ಪಾದಬೆಟ್ಟಗಳ ಬಳಿ ಆರ್ಕಿಡ್‌ ಮತ್ತು ಅಳಿವಿನಂಚಿನ ಹೂ ಗಿಡಗಳ ಸಂರಕ್ಷಿತ ಪ್ರದೇಶವಿದೆ. ಆಂಧ್ರಪ್ರದೇಶ ಬಿಟ್ಟರೆ ಕರ್ನಾಟಕದ ಘಟ್ಟ ಪ್ರದೇಶಗಳಲ್ಲಿ ಕೆಲವೊಂದು ಪ್ರದೇಶಗಳಲ್ಲಿ ನಿಸರ್ಗದತ್ತವಾಗಿ ವೃದ್ಧಿಸುವ ಆರ್ಕಿಡ್‌ ನೆಲೆಗಳಿವೆ. ಅವುಗಳಲ್ಲಿ ಬಿಳಿಗಿರಿ ಕಾಡಿನ ಬೆರಳೆಣಿಕೆಯ ಸಂಕುಲವನ್ನು ಗುರುತಿಸಲಾಗಿದೆ.

‘ಬಹಳಷ್ಟು ಗಿಡಗಳು ದಟ್ಟಕಾಡಿನ ಪರಿಸರವನ್ನು ಅವಲಂಬಿಸಿವೆ. ಕಲ್ಲು ಮತ್ತು ಮಣ್ಣಿನ ಪದರಗಳ ಆಸರೆ ಇವುಗಳಿಗೆ ಅತ್ಯಗತ್ಯ. ಹುಲ್ಲುಗಾವಲು ಪ್ರದೇಶ ಹಾಗೂ ಹೆಚ್ಚು ಮಳೆ ಕಾಡಿನ ಭಾಗವಾಗಿದ್ದ ಇವುಗಳನ್ನು ಈಗ ಗುರುತಿಸಬಹುದು’ ಎನ್ನುತ್ತಾರೆ ಏಟ್ರೀ ಸಂಸ್ಥೆಯ ಡಾ.ಸಿ.ಮಾದೇಗೌಡ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry