ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ದಿನದಲ್ಲಿ 1,400 ಪ್ರಕರಣ ದಾಖಲು

ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಳೆದ ಕೆಲ ದಿನಗಳಿಂದ ನಗರದಲ್ಲಿ ಹೆಲ್ಮೆಟ್‌ ಧರಿಸದೆ ಬೈಕ್‌ ಸವಾರಿ ಮಾಡುವವರ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿರುವ ಸಂಚಾರ ಪೊಲೀಸರು, ಕಳೆದ ನಾಲ್ಕು ದಿನಗಳಲ್ಲಿ 1,400 ಪ್ರಕರಣ ದಾಖಲಿಸಿ, ₹ 1.40 ಲಕ್ಷ ದಂಡ ವಸೂಲಿ ಮಾಡಿದ್ದಾರೆ.

ಡಿಸೆಂಬರ್‌ನಲ್ಲಿ 10 ದಿನ ನಗರದಲ್ಲಿ ಸಂಚಾರ ಪೊಲೀಸರು ಆಟೊ ಪ್ರಚಾರದ ಮೂಲಕ ಹೆಲ್ಮೆಟ್‌ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದರು. ಜತೆಗೆ ಮುಖ್ಯ ರಸ್ತೆಗಳಲ್ಲಿ ‘ಹೆಲ್ಮೆಟ್ ಬಳಸಿ-, ಜೀವ ಉಳಿಸಿ’ ಎಂಬ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಅದಾದ ನಂತರವಷ್ಟೇ ಪೊಲೀಸರು ರಸ್ತೆಗಿಳಿದು ಕಾರ್ಯಾಚರಣೆ ಶುರುವಿಟ್ಟುಕೊಂಡಿದ್ದಾರೆ.

ಸದ್ಯ ಎಂ.ಜಿ ರಸ್ತೆ, ಗಂಗಮ್ಮ ಗುಡಿ ರಸ್ತೆ, ಬಿ.ಬಿ ರಸ್ತೆ, ಅಂಬೇಡ್ಕರ್‌ ವೃತ್ತ ಸೇರಿದಂತೆ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬೆಳಿಗ್ಗೆ 9ರಿಂದ ಸಂಜೆ 6ರ ವರೆಗೆ ಹೆಲ್ಮೆಟ್‌ ತಪಾಸಣೆ ನಡೆಸುತ್ತಿದ್ದಾರೆ. ಹೆಲ್ಮೆಟ್ ಧರಿಸದ ಸವಾರರ ವಿರುದ್ಧ ಪ್ರಕರಣ ದಾಖಲಿಸಿ, ₹ 100 ದಂಡ ವಸೂಲಿ ಮಾಡುತ್ತಿದ್ದಾರೆ.

ಇದರಿಂದ ನಾಲ್ಕು ದಿನಗಳಲ್ಲಿಯೇ ನಗರದ ಸವಾರರ ಪೈಕಿ ಶೇ 50ರಷ್ಟು ಜನರು ಹೆಲ್ಮೆಟ್‌ ಧರಿಸಿಯೇ ಪ್ರಯಾಣಿಸುವುದು ಕಾಣುತ್ತಿದೆ. ಇನ್ನೊಂದೆಡೆ ನಗರದ ಮಾರುಕಟ್ಟೆಯಲ್ಲಿ ಹೆಲ್ಮೆಟ್‌ ಮಾರಾಟ ವಹಿವಾಟು ಬಿರುಸುಗೊಂಡಿದೆ.

‘ಅಪಘಾತದ ಸಂದರ್ಭದಲ್ಲಿ ಉಂಟಾಗಬಹುದಾದ ಪ್ರಾಣಹಾನಿ ತಡೆಗಟ್ಟುವ ಉದ್ದೇಶದಿಂದ ಸಾರಿಗೆ ಇಲಾಖೆ ಹೆಲ್ಮೆಟ್‌ ಕಡ್ಡಾಯಗೊಳಿಸಿದೆ. ಆದರೆ ಅದರ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇದೆ. ನಾವು ಕಾರ್ಯಾಚರಣೆ ನಡೆಸುವ ಮೂಲಕ ಜನರಲ್ಲಿ ಹೆಲ್ಮೆಟ್‌ ಕುರಿತು ಜಾಗೃತಿ ಮತ್ತು ಎಚ್ಚರಿಕೆ ಮೂಡಿಸಲು ಉದ್ದೇಶಿಸಿದ್ದೇವೆ’ ಎಂದು ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಅನಿಲ್‌ ಕುಮಾರ್‌ ತಿಳಿಸಿದರು.

‘ಫೆಬ್ರುವರಿಯಿಂದ ಐಎಸ್‌ಐ ಮಾರ್ಕ್‌ ಹೆಲ್ಮೆಟ್‌ ಕಡ್ಡಾಯಗೊಳಿಸುತ್ತೇವೆ. ಸವಾರರು ತಮ್ಮ ಬಳಿ ಚಾಲನಾ ಪರವಾನಗಿ, ವಾಹನ ನೋಂದಣಿ ದಾಖಲೆ, ವಿಮೆ ದಾಖಲೆಗಳ ನಕಲು ಪ್ರತಿಯನ್ನು ಕಡ್ಡಾಯವಾಗಿ ಇಟ್ಟುಕೊಂಡಿರಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದರು.

‘ಮುಂದಿನ ತಿಂಗಳಲ್ಲಿ ಶೇ 100 ರಷ್ಟು ಪ್ರಗತಿ ಸಾಧಿಸಲು ಗುರಿ ಇಟ್ಟುಕೊಂಡಿದ್ದೇವೆ. ಹೀಗಾಗಿ ಈ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತದೆ. ಶಾಲಾ–ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ಜತೆಗೆ ರಸ್ತೆ ಸುರಕ್ಷತಾ ಅಭಿಯಾನದ ಅಂಗವಾಗಿ ಬೈಕ್‌ ರ‍್ಯಾಲಿ ಆಯೋಜಿಸಲಾಗುತ್ತದೆ’ ಎಂದರು.

ಪೊಲೀಸರು ಹಾಕುವ ದಂಡದ ಭಯಕ್ಕೆ ಹೆದರಿ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ತಮ್ಮ ಮಕ್ಕಳನ್ನು ಶಾಲಾ–ಕಾಲೇಜಿಗೆ ಬಿಡಲು, ಕರೆತರಲು ಹೋಗುವ ಪೋಷಕರು ಪೊಲೀಸರ ಕಣ್ತಪ್ಪಿಸಿ ಓಡಾಡುವ ಪರಿಸ್ಥಿತಿ ಉಂಟಾಗಿದೆ. ಪೊಲೀಸರ ಕೈಗೆ ಸಿಗದಂತೆ ವಿದ್ಯಾರ್ಥಿಗಳು, ಯುವಕರು ನಡೆಸುವ ಬಗೆ ಬಗೆ ಸರ್ಕಸ್‌ ಅಲ್ಲಲ್ಲಿ ಕಾಣುತ್ತದೆ. ಈ ಕಾರ್ಯಾಚರಣೆ ಅರಿವಿಲ್ಲದೆ ಸಾಮಾನ್ಯ ದಿನಗಳಂತೆ ಹಳ್ಳಿಯಿಂದ ಮಾರುಕಟ್ಟೆಗೆ ಬೈಕ್‌ನಲ್ಲಿ ಬರುವ ರೈತರಿಗೆ ಕೂಡ ದಂಡದ ಬಿಸಿ ತಟ್ಟುತ್ತಿದೆ.

‘ಪೊಲೀಸರು ಮಾಡುತ್ತಿರುವುದು ಒಳ್ಳೆಯ ಕೆಲಸ. ಆದರೆ ಇದು ತೋರಿಕೆಗಾಗಿ ಮಾಡುವದಾಗಬಾರದು. ನಿರಂತರವಾಗಿ ನಡೆದರೆ ಜನರಲ್ಲಿ ಹೆಲ್ಮೆಟ್ ಬಗ್ಗೆ ಅರಿವು ಜಾಗೃತವಾಗಿರುತ್ತದೆ. ಜತೆಗೆ ರಸ್ತೆ ಅಪಘಾತದಲ್ಲಿ ಆಗುವ ಜೀವ ಹಾನಿ ಪ್ರಮಾಣ ಕೂಡ ಕಡಿಮೆಯಾಗುತ್ತದೆ. ಕೆಲವೇ ದಿನಗಳಷ್ಟೇ ಚುರುಕಾಗಿ ಕಾರ್ಯಾಚರಣೆ ನಡೆಸಿ ಮತ್ತೆ ವರ್ಷಪೂರ್ತಿ ಸುಮ್ಮನಿರುವುದರಿಂದ ಏನೂ ಪ್ರಯೋಜನವಾಗುವುದಿಲ್ಲ’ ಎಂದು ವಾಪಸಂದ್ರ ನಿವಾಸಿ ಪ್ರಶಾಂತ್‌ ಹೇಳಿದರು.

* * 

ಸದ್ಯಕ್ಕೆ ಹೆಲ್ಮೆಟ್ ಧರಿಸದ ಮುಂಬದಿಯ ಸವಾರರಿಗೆ ದಂಡ ವಿಧಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಹಿಂಬದಿಯ ಸವಾರರಿಗೂ ದಂಡ ವಿಧಿಸಲಾಗುತ್ತದೆ
ಅನಿಲ್‌ ಕುಮಾರ್‌ ಸಂಚಾರ ಠಾಣೆ ಇನ್‌ಸ್ಪೆಕ್ಟರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT