ಶಿರಹಟ್ಟಿ: ನಿವೇಶನ ಹಂಚಿಕೆ ಫಲಾನುಭವಿಗಳ ಪಟ್ಟಿ ತಿರಸ್ಕೃತ

5

ಶಿರಹಟ್ಟಿ: ನಿವೇಶನ ಹಂಚಿಕೆ ಫಲಾನುಭವಿಗಳ ಪಟ್ಟಿ ತಿರಸ್ಕೃತ

Published:
Updated:

ಶಿರಹಟ್ಟಿ: ‘ಇಲ್ಲಿನ ಪಟ್ಟಣ ಪಂಚಾಯ್ತಿ ಸದಸ್ಯರು ರಾಜೀವ್ ಗಾಂಧಿ ವಸತಿ ಯೋಜನೆಯಡಿ ಸಿದ್ಧಪಡಿಸಿ ನೀಡಿದ್ದ ಫಲಾನುಭವಿಗಳ ಪಟ್ಟಿ ಜಿಲ್ಲಾಧಿಕಾರಿಯಿಂದ ತಿರಸ್ಕೃತಗೊಂಡಿದೆ’ ಎಂದು ಪಟ್ಟಣ ಕುಂದು ಕೊರತೆ– ಹೋರಾಟ ಸಮಿತಿ ಸದಸ್ಯ ಅಕ್ಬರ್ ಯಾದಗಿರಿ ಮಾಹಿತಿ ನೀಡಿದ್ದಾರೆ. ಫಲಾನುಭವಿಗಳನ್ನು ಗುರುತಿಸುವಲ್ಲಿ ಸದಸ್ಯರು ತಪ್ಪು ಮಾಡಿರುವುದು ಮಾಹಿತಿ ಹಕ್ಕಿನಡಿ ಅವರು ಪಡೆದ ವಿವರಗಳಿಂದ ಬಹಿರಂಗವಾಗಿದೆ.

‘ನಿಯಮದಂತೆ 220 ನಿವೇಶನಗಳ ಪೈಕಿ 60 ನಿವೇಶನಗಳನ್ನು ಪರಿಶಿಷ್ಟ ಜಾತಿಯವರಿಗೆ, 10ನ್ನು ಪರಿಶಿಷ್ಟ ಪಂಗಡದವರಿಗೆ ಮೀಸಲಿಡಬೇಕು. ಅಲ್ಲದೆ, ಅಂಗವಿಕಲರು ಹಾಗೂ ವಿಧವೆಯರಿಗೂ ನಿವೇಶನ ಹಂಚಿಕೆಯಲ್ಲಿ ಆದ್ಯತೆ ನೀಡಬೇಕು. ಆದರೆ, ಈ ನಿಯಮವನ್ನು ಉಲ್ಲಂಘಿಸಿ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗಿದೆ. ಇದರಿಂದ ನಿವೇಶನ ಹಂಚಿಕೆ ವಿಳಂಬವಾಗಿದೆ. ಈಗಾಗಲೇ ನಿವೇಶನ, ಮನೆ ಹಾಗೂ ಜಮೀನು ಹೊಂದಿರುವವರ ಹೆಸರನ್ನು ಸದಸ್ಯರು ಶಿಫಾರಸು ಮಾಡಿದ್ದಾರೆ’ ಎಂಬುದು ನಿವೇಶನ ಕೋರಿ ಅರ್ಜಿ ಸಲ್ಲಿಸಿದವರ ಆರೋಪ.

‘ಈ ಹಿಂದೆ ಪಟ್ಟಣದಲ್ಲಿ ಅಕಾಲಿಕ ಮಳೆಯಿಂದಾಗಿ ಮ್ಯಾಗೇರಿ, ಕೆಳಗೇರಿ ಸೇರಿ ಹಲವು ಕಡೆಗಳಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ನಿವೇಶನ ನೀಡಬೇಕು. ಗುಡಿಸಲುಗಳಲ್ಲಿ ವಾಸವಿರುವ ಜನರಿಗೆ ನಿವೇಶನ ಒದಗಿಸಬೇಕು. ಆದರೆ, ಪಟ್ಟಿಯಲ್ಲಿ ಅನರ್ಹರ ಹೆಸರು ಸೇರಿಕೊಂಡಿವೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ, ‘ಪಟ್ಟಣ ಪಂಚಾಯ್ತಿ ವತಿಯಿಂದ ಈವರೆಗೂ ನಿವೇಶನ ಹಂಚಿಕೆ ಮಾಡಿಲ್ಲ. ಫಲಾನುಭವಿಗಳ ಪಟ್ಟಿಯೂ ಅಂತಿಮಗೊಂಡಿಲ್ಲ. ಈ ಕುರಿತು ಯಾವದೇ ಠರಾವು ಕೂಡ ಪಾಸ್‌ ಮಾಡಿಲ್ಲ. ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ 132 ಕುಟುಂಬಗಳು ನಿವೇಶನ ಹೊಂದಿಲ್ಲ. 257 ಕುಟುಂಬಗಳಿಗೆ ನಿವೇಶನ ಇದ್ದರೂ ಮನೆ ಇಲ್ಲ. ನಿವೇಶನ ಇಲ್ಲದ ಅರ್ಹ ಕುಟುಂಬಗಳನ್ನು ಗುರುತಿಸಿ ವಿತರಣೆ ಮಾಡಲು 5 ಎಕರೆ ಜಮೀನು ಖರೀದಿ ಮಾಡಲಾಗಿದೆ. ಜಿಲ್ಲಾಧಿಕಾರಿ ಹಾಗೂ ಶಾಸಕರು ಅರ್ಹ ಫಲಾನುಭವಿಗಳನ್ನು ಗುರುತಿಸಿ, ವರದಿ ನೀಡುವಂತೆ ಸೂಚಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry