ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿ’

Last Updated 7 ಜನವರಿ 2018, 9:44 IST
ಅಕ್ಷರ ಗಾತ್ರ

ಮುರ್ಡೇಶ್ವರ (ಭಟ್ಕಳ): ‘ಬೃಹತ್ ಕೈಗಾರಿಕೆಗಳಿಂದಾಗಿ ಇಲ್ಲಿನ ಪರಿಸರಕ್ಕೆ ಹಾನಿಯುಂಟಾಗಿ ಮಾಲಿನ್ಯದ ಸಮಸ್ಯೆ ತಲೆದೂರಬಹುದು. ಹೀಗಾಗಿ ಇರುವ ನೈಸರ್ಗಿಕ ಸಂಪನ್ಮೂಲವನ್ನೇ ಬಳಿಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಮೂಲಕ ಜಿಲ್ಲೆಯಲ್ಲಿ ಉದ್ಯೋಗವಾಕಾಶ ಸೃಷ್ಟಿಸುತ್ತಿದ್ದೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಅವರು ಇಲ್ಲಿನ ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ಶನಿವಾರ ಅಂತರರಾಷ್ಟ್ರೀಯ ಸ್ಕೂಬಾ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಅದು ದೊಡ್ಡ ಸಮಸ್ಯೆಯಾಗಿ ತಲೆದೂರಿದೆ. ಕನಿಷ್ಠ ವಿದ್ಯಾರ್ಹತೆ ಹೊಂದಿರುವವರಿಗೂ ಪ್ರವಾಸೋದ್ಯಮದಲ್ಲಿ ಉದ್ಯೋಗವಾಕಾಶ ನೀಡಬಹುದಾಗಿದ್ದು, ಈ ಬಗ್ಗೆ ಚಿಂತನೆ ನಡೆಸಬೇಕಿದೆ’ ಎಂದು ಹೇಳಿದರು.

‘ನೇತ್ರಾಣಿಯಲ್ಲಿ ಅಂತರಾಷ್ಟ್ರೀಯ ಸ್ಕೂಬಾ ಉತ್ಸವವನ್ನು ಆಯೋಜಿಸಬೇಕು ಎಂಬ ಆಸೆ ಬಹಳ ವರ್ಷದಿಂದ ಇತ್ತು. ಅದನ್ನು ಈಗಿನ ಜಿಲ್ಲಾಧಿಕಾರಿ ಆಸಕ್ತಿ ವಹಿಸಿ, ಎಲ್ಲರ ಸಹಕಾರದೊಂದಿಗೆ ನೆರವೇರಿಸಿದ್ದಾರೆ. ಇಲ್ಲಿನ ಸ್ಕೂಬಾ ಉತ್ಸವ ಪ್ರತೀ ವರ್ಷ ನಡೆಯಬೇಕು. ಅದಕ್ಕಾಗಿ ಒಂದು ದಿನವನ್ನು ನಿಗದಿಪಡಿಸಿ, ಪ್ರತೀ ವರ್ಷ ಅದನ್ನು ಆಚರಿಸಬೇಕು’ ಎಂದು ತಿಳಿಸಿದರು.

‘ಪ್ರವಾಸೋದ್ಯಮಕ್ಕೆ ಪೂರಕವಾದ ವಾತಾವರಣ ಕಲ್ಪಿಸಿದಾಗ, ಚಟುವಟಿಕೆಗಳನ್ನು ಕೈಗೊಂಡಾಗ ಮಾತ್ರ ಇಲ್ಲಿಗೆ ಪ್ರವಾಸಿಗರು ಬರಲು ಸಾಧ್ಯ. ಅದರಂತೆ ಜೊಯಿಡಾದ ಕೆನೊಪಿ ವಾಕ್‌ ರಚನೆಯಾದಾಗ ಅದಕ್ಕೆ ಅನೇಕರಿಂದ ಟೀಕೆಗಳು ಬಂದವು. ನಾಡಿನ ಹಾಗೂ ಜನರ ಹಿತಕ್ಕಾಗಿ ಅಭಿವೃದ್ಧಿಗಳು ಆಗಬೇಕು. ಅದರ ವಿರುದ್ಧವಾದಾಗ ಮಾತ್ರ ಟೀಕೆಗಳನ್ನು ಮಾಡಬೇಕು. ಆದರೆ ಒಳ್ಳೆಯ ಕಾರ್ಯಗಳಿಗೆ ಸದಾ ಬೆಂಬಲ ನೀಡಬೇಕು’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ ಮಾತನಾಡಿ, ‘ಪ್ರವಾಸೋದ್ಯಮದ ಅಭಿವೃದ್ಧಿಗಾಗಿ, ಪ್ರವಾಸಿ ಸ್ಥಳಗಳ ಅಭಿವೃದ್ಧಿಗಾಗಿ ಇಂಥ ಚಟುವಟಿಕೆಗಳು ಸದಾ ನಡೆಯುತ್ತಿರಬೇಕು. ಇದು ಇಲ್ಲಿನ ಸ್ಥಳೀಯರಿಗೆ ಅನುಕೂಲವಾಗಲಿದೆ’ ಎಂದರು.

ಹೊನ್ನಾವರ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ ವಸಂತರೆಡ್ಡಿ, ಜಿಲ್ಲೆಯ ಕರಾವಳಿ ತೀರಗಳಲ್ಲಿ ಕಂಡು ಬರುವ ಕಡಲಾಮೆಗಳ ವಿಶೇಷ ತಳಿಗಳನ್ನು ಹಾಗೂ ಪುಣೆಯ ಫಿನ್‌ಕಿಕ್‌ ಅಡ್ವೆಂಚರ್ಸ್‌ನ ವೀವನ್, ಸ್ಕೂಬಾ ಡೈವಿಂಗ್‌ನ ವೇಳೆ ಕಂಡು ಬರುವ ವಿವಿಧ ಜಲಚರಗಳ ಮಾಹಿತಿಯನ್ನು ದೃಶ್ಯಾವಳಿಗಳ ಮೂಲಕ ಪರಿಚಯಿಸಿದರು.

ನೆಲಸಿರಿ ಉದ್ಘಾಟನೆ: ಇಲ್ಲಿನ ಕಡಲತೀರದಲ್ಲಿ ನಿರ್ಮಾಣವಾಗಿರುವ ಉತ್ತರಕನ್ನಡ ಉತ್ಪನ್ನಗಳ ಮಳಿಗೆ ‘ನೆಲಸಿರಿ’ಯನ್ನು ಸಚಿವ ದೇಶಪಾಂಡೆ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ನಾಯಕ, ಕುಮಟಾ ಶಾಸಕಿ ಶಾರದಾ ಶೆಟ್ಟಿ ಇದ್ದರು.

150 ಮಂದಿ ಭಾಗಿ: ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಸಂಘ– ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಈ ಅಂತರಾಷ್ಟ್ರೀಯ ಸ್ಕೂಬಾ ಉತ್ಸವದ ಸಂಪೂರ್ಣ ಜವಾಬ್ದಾರಿಯನ್ನು ಪುಣೆಯ ಫಿನ್‌ಕಿಕ್‌ ಅಡ್ವೆಂಚರ್ಸ್‌ ಸಂಸ್ಥೆ ವಹಿಸಿಕೊಂಡಿತ್ತು.

ಬೆಂಗಳೂರು, ಪುಣೆ, ಮುಂಬೈ, ದೆಹಲಿ, ಯುರೋಪ್, ಅಮೇರಿಕಾ, ಜರ್ಮನಿ ಹಾಗೂ ನೆದರ್‌ಲ್ಯಾಂಡ್ ಮೂಲದ ಸುಮಾರು 150 ಮಂದಿ ಉತ್ಸವದಲ್ಲಿ ಪಾಲ್ಗೊಂಡರು. ಡೈವ್‌ ಗೋವಾ, ಮುಂಬೈನ ವೆಸ್ಟ್‌ ಕೋಸ್ಟ್‌ ಮತ್ತು ಮುರ್ಡೇಶ್ವರದ ನೇತ್ರಾಣಿ ಅಡ್ವೆಂಚರ್ ಸಂಸ್ಥೆಯ ಸ್ಕೂಬಾ ಇನ್‌ಸ್ಟ್ರಕ್ಟರ್‌ಗಳು ಅವರನ್ನು ಕರೆದೊಯ್ದು, ಸಮುದ್ರದಾಳದ ಜೀವಿ ಪ್ರಪಂಚವನ್ನು ಪರಿಚಯಿಸಿದವು.

ಸ್ಥಳೀಯ ಸಮುದಾಯ, ಮೀನುಗಾರರು, ಆಳಸಮುದ್ರ, ಕಡಲತೀರದ ಕುರಿತ ಕಿರು ಚಿತ್ರ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಸ್ನೋರ್ಕಲಿಂಗ್‌ ಹಾಗೂ ಜಲ ಕ್ರೀಡೆಗಳು ನಡೆದವು.

ಕಡಲತೀರ ಸ್ವಚ್ಛಗೊಳಿಸಿದ ಅಧಿಕಾರಿಗಳು

ವೆರ್ಸೋವಾ ಕಡಲತೀರ ಸ್ವಚ್ಛತಾ ತಂಡ ಬೆಳಿಗ್ಗೆ ಆಯೋಜಿಸಿದ್ದ ಸ್ವಚ್ಛತಾ ಕಾರ್ಯದಲ್ಲಿ ಡಿಸಿಎಫ್ ವಸಂತರೆಡ್ಡಿ ಕೆ.ವಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಭಟ್ಕಳ ಉಪವಿಭಾಗಾಧಿಕಾರಿ ಎಂ.ಎನ್.ಮಂಜುನಾಥ ಸೇರಿದಂತೆ ಅನೇಕರು ಸುಮಾರು 600 ವಿದ್ಯಾರ್ಥಿಗಳು ಹಾಗೂ 200 ಅಧಿಕಾರಿಗಳು ಇಲ್ಲಿನ ದೇವಸ್ಥಾನದಿಂದ ಕಡಲತೀರದವರೆಗೆ ಎರಡು ತಾಸುಗಳವರೆಗೆ ಸ್ವಚ್ಛತೆ ಕೈಗೊಂಡರು.

ಸ್ಕೂಬಾ ಡೈವಿಂಗ್ ಮಾಡಿದ ಸಚಿವ

ಕಡಲತೀರದಿಂದ ಬೋಟಿನಲ್ಲಿ ನೇತ್ರಾಣಿ ದ್ವಿಪಕ್ಕೆ ತೆರಳಿದ ಸಚಿವ ಆರ್.ವಿ.ದೇಶಪಾಂಡೆ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಜಿಲ್ಲಾ ಪಂಚಾಯ್ತಿ ಸಿಇಒ ಎಲ್.ಚಂದ್ರಶೇಖರ ನಾಯಕ ಸೇರಿದಂತೆ ವಿವಿಧ ಅಧಿಕಾರಿಗಳು ಅಲ್ಲಿ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಸಮುದ್ರದಾಳದ ಅಪರೂಪದ ಜೀವಿ ಪ್ರಪಂಚಗಳನ್ನು ಕಣ್ತುಂಬಿಕೊಂಡರು.

* * 

ವಿಶ್ವವನ್ನೇ ಆಕರ್ಷಿಸುವ ಶಕ್ತಿ ಉತ್ತರಕನ್ನಡ ಜಿಲ್ಲೆಗಿದೆ. ಸಿಆರ್‌ಝೆಡ್ ನಿಯಮ ಸಡಿಲಿಕೆಯಾದರೆ ಜಿಲ್ಲೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾಣಲಿದೆ. ಅದಕ್ಕಾಗಿ ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭಾನುವಾರ ಭೇಟಿ ಮಾಡಿ ಚರ್ಚಿಸಲಿದ್ದೇನೆ
ಆರ್.ವಿ.ದೇಶಪಾಂಡೆ
ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT