ದಲಿತರು, ಮುಸ್ಲಿಮರು ಒಂದಾದರೆ ಸ್ವಾತಂತ್ರ್ಯ

7

ದಲಿತರು, ಮುಸ್ಲಿಮರು ಒಂದಾದರೆ ಸ್ವಾತಂತ್ರ್ಯ

Published:
Updated:
ದಲಿತರು, ಮುಸ್ಲಿಮರು ಒಂದಾದರೆ ಸ್ವಾತಂತ್ರ್ಯ

ಮಡಿಕೇರಿ: ‘ರಾಜ್ಯದಲ್ಲಿ ದಲಿತರು ಹಾಗೂ ಮುಸ್ಲಿಮರು ಒಂದೇ ವೇದಿಕೆಯಲ್ಲಿ ಹೋರಾಟ ನಡೆಸಿದರೆ ಮಾತ್ರ ಕೆಲವರ ದಬ್ಬಾಳಿಕೆಯಿಂದ ಮುಕ್ತಿ ಪಡೆದು ಸ್ವಾತಂತ್ರ್ಯರಾಗಬಹುದು’ ಎಂದು ಮುಸ್ಲಿಂ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಖಾಸಿಂ ಎಚ್ಚರಿಸಿದರು.

ನಗರದ ಗಾಂಧಿ ಮೈದಾನದಲ್ಲಿ ಕೊಡಗು ಜಿಲ್ಲಾ ಸಮಾನ ಮನಸ್ಕರ ವೇದಿಕೆ ವತಿಯಿಂದ ಶನಿವಾರ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

‘ಫ್ಯಾಸಿಸಂ ಶಕ್ತಿಗಳ ವಿರುದ್ಧ ಹೋರಾಟ ನಡೆಸುವ ಅಗತ್ಯವಿದೆ. 1947ರಲ್ಲಿ ರಾಷ್ಟ್ರಕ್ಕೆ ಸ್ವಾತಂತ್ರ್ಯ ಲಭಿಸಿತು. ಆದರೆ, ಸಂಘಿ ಹಾಗೂ ಬಜರಂಗಿಗಳಿಂದ ಇನ್ನೂ ನಮಗೆ ಮುಕ್ತಿ ಸಿಕ್ಕಿಲ್ಲ. ಈ ಸ್ವಾತಂತ್ರ್ಯಕ್ಕಾಗಿ ನಾವೆಲ್ಲಾ ಒಂದಾಗಿ ಹೋರಾಟ ಮಾಡೋಣ’ ಎಂದು ಕರೆ ನೀಡಿದರು.

‘ಶೇ 20ರಷ್ಟಿರುವ ಮುಸ್ಲಿಮರು, ಶೇ 28ರಷ್ಟಿರುವ ದಲಿತರು ಒಂದೇ ವೇದಿಕೆ ಮೂಲಕ ಹೋರಾಟ ನಡೆಸಬೇಕಿದೆ. ನಮ್ಮಲ್ಲಿ ಮತವೆಂಬ ಶಕ್ತಿಯಿದೆ. ಅದನ್ನು ಬಳಸಿಕೊಳ್ಳುವತ್ತ ಚಿತ್ತಹರಿಸಬೇಕು. ನಮ್ಮ ಮತ ನಮಗೇ ಎಂದು ಪ್ರತಿಪಾದಿಸಬೇಕು. ಈ ಸಮುದಾಯ ಏಳಿಗೆಗೆ ಶ್ರಮಿಸುವ ಮಂದಿಗೆ ಮಾತ್ರ ಮತ ಹಾಕಿ. ಜಾತ್ಯತೀತರು ಎಂದು ಮೊಸಳೆ ಕಣ್ಣೀರು ಸುರಿಸುವ ವ್ಯಕ್ತಿಗಳನ್ನು ದೂರವಿಡಿ’ ಎಂದು ಎಚ್ಚರಿಸಿದರು.

ಒಕ್ಕೂಟದ ವಕ್ತಾರ ಅಮೀನ್‌ ಮೊಹಿಸಿನ್‌ ಮಾತನಾಡಿ, ‘ವಿಜಯಪುರದಲ್ಲಿ ನಡೆದಿದ್ದ ದಲಿತ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ ಖಂಡಿಸಿ ನಡೆದ ಈ ಸಭೆಗೆ ನೂರಾರು ಮಂದಿ ಪಾಲ್ಗೊಳ್ಳುವ ಮೂಲಕ ಬಿಜೆಪಿಯ ಪರಿವರ್ತನಾ ಯಾತ್ರೆಗಿಂತಲೂ ಯಶಸ್ವಿಯಾಗಿದೆ. ದಿಡ್ಡಳ್ಳಿಯ ಮೂಲಕ ಆರಂಭವಾಗಿರುವ ಹೋರಾಟ ಇಲ್ಲಿಯ ತನಕ ಬಂದಿದೆ. ಈ ಹೋರಾಟ ಸ್ಥಗಿತಗೊಳ್ಳದೇ ಮುಂದುವರಿಯಲಿ’ ಎಂದು ಆಶಿಸಿದರು.

‘ವಿದ್ಯಾರ್ಥಿನಿ ಅತ್ಯಾಚಾರ ಹೀನಕೃತ್ಯ. ಮಹಿಳೆಯ ಕಲ್ಯಾಣ ಎನ್ನುವ ಘೋಷಣೆ ಮೊಳಗಿಸುವ ಬಿಜೆಪಿ ಪಕ್ಷದ ಕಾರ್ಯಕರ್ತರೇ ಬಾಲಕಿಯ ಮೇಲೆ ಎರಗಿದ್ದಾರೆ. ಆ ಕ್ರೂರಿಗಳ ವಿರುದ್ಧದ ಹೋರಾಟವನ್ನು ಬಿಜೆಪಿ, ಎಸ್‌ಸಿ ಮೋರ್ಚಾಕ್ಕೆ ಮೀಸಲಿಟ್ಟಿತು’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಹೋರಾಟದ ಕಿಚ್ಚು ಶಾಶ್ವತವಾಗಿ ಉಳಿಯಬೇಕು. ನಾವೆಲ್ಲಾ ಬೀದಿಗಳಿದು ಹೋರಾಟ ನಡೆಸದಿದ್ದರೆ ದಬ್ಬಾಳಿಕೆ ನಿಲ್ಲುವುದಿಲ್ಲ’ ಎಂದು ಅಮೀನ್‌ ಎಚ್ಚರಿಸಿದರು. ವಿಜಯಪುರದಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ತ್ವರಿತ ನ್ಯಾಯಾಲಯಕ್ಕೆ ವಹಿಸಬೇಕು. ಸಿಐಡಿ ತನಿಖೆಯು ಪಾರದರ್ಶಕವಾಗಿ ನಡೆಯಬೇಕು ಎಂದು ಒತ್ತಾಯಿಸಿದರು.

‘ಗೌರಿ ಲಂಕೇಶ್‌, ಎಂ.ಎಂ. ಕಲಬುರ್ಗಿ ಅವರನ್ನು ಕೆಲವು ಶಕ್ತಿಗಳು ಕೊಂದಿರಬಹುದು. ಆದರೆ, ಅವರ ವಿಚಾರಧಾರೆಗಳನ್ನು ಎಂದಿಗೂ ಕೊಲ್ಲಲು ಸಾಧ್ಯವಿಲ್ಲ. ಹೋರಾಟಗಾರರನ್ನೇ ನಂಬಿರುವ ಶೋಷಿತರ ಪರವಾಗಿ ನಾವು ಧ್ವನಿಯೆತ್ತಬೇಕಿದೆ. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಸಮಾಜ ದಿಕ್ಕು ತಪ್ಪಿಸುತ್ತಿರುವ ರೋಗಿಗಳಿಗೆ ಮದ್ದು ಕೊಡುವ ಕೆಲಸ ಮಾಡಬೇಕು’ ಎಂದು ಹೇಳಿದರು.

ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಪ್ರೇಮ್‌ಕುಮಾರ್‌, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಎಸ್‌. ನಿರ್ವಾಣಪ್ಪ, ಪಿಎಫ್‌ಐ ಜಿಲ್ಲಾ ಅಧ್ಯಕ್ಷ ಹ್ಯಾರೀಸ್‌, ಮೋಹನ್‌ ಮೌರ್ಯ, ಅಬ್ದುಲ್‌ ಅಡ್ಕರ್‌, ಕಾವೇರಿ, ಅಪ್ಪು, ಕೆ.ಜಿ. ಪೀಟರ್‌, ರಾಜು, ಮೊಣ್ಣಪ್ಪ, ದಿವಾಕರ್‌, ಜೆಡಿಎಸ್‌ ರಾಜ್ಯ ಕಾರ್ಯದರ್ಶಿ ಮನ್ಸೂರ್‌, ಅನಿತಾ, ನಾಗರತ್ನಮ್ಮ, ಪಾಲೇಮಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಸುಮಾ, ಅಣ್ಣಯ್ಯ ಹಾಜರಿದ್ದರು.

ಅದಕ್ಕೂ ಮೊದಲು ಸುದರ್ಶನ ವೃತ್ತದಿಂದ ಆರಂಭವಾದ ಮೆರವಣಿಗೆ, ಜನರಲ್‌ ತಿಮ್ಮಯ್ಯ ವೃತ್ತ, ಕಾವೇರಿ ಕಲಾಕ್ಷೇತ್ರ, ಖಾಸಗಿ ಬಸ್‌ ನಿಲ್ದಾಣದ ಮೂಲಕ ಗಾಂಧಿ ಮೈದಾನ ತಲುಪಿತು.

* * 

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಸಂವಿಧಾನದ ಬದಲಾವಣೆ ಹೇಳಿಕೆ ಖಂಡನೀಯ. ಸಮಾನತೆ ನೀಡಿರುವ ಸಂವಿಧಾನದ ಬದಲಾವಣೆ ಸಾಧ್ಯವೇ ಇಲ್ಲ.

ಖಾಸಿಂ, ಅಧ್ಯಕ್ಷ, ಮುಸ್ಲಿಂ ಒಕ್ಕೂಟ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry