ಕನ್ನಡದ ಬೆಳಕಲ್ಲಿ ಬದುಕು ಕಟ್ಟಿಕೊಳ್ಳಿ

5

ಕನ್ನಡದ ಬೆಳಕಲ್ಲಿ ಬದುಕು ಕಟ್ಟಿಕೊಳ್ಳಿ

Published:
Updated:

ಶ್ರೀನಿವಾಸಪುರ: ‘ಕನ್ನಡಿಗರು ಕನ್ನಡದ ಬೆಳಕಲ್ಲಿ ಬದುಕು ಕಟ್ಟಿಕೊಳ್ಳುವ ಕಾಲ ಬರಬೇಕು. ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕು’ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ವೈ.ವಿ.ವೆಂಕಟಾಚಲ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶನಿವಾರ ಏರ್ಪಡಿಸಿದ್ದ 9ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಶ್ರೀನಿವಾಸಪುರ ತಾಲ್ಲೂಕು ರಾಜ್ಯದಲ್ಲಿಯೇ ಭಾಷಾ ಸೌಹಾರ್ದತೆಗೆ ಹೆಸರಾಗಿದೆ. ಈ ನೆಲ ಕನ್ನಡವನ್ನು ಜೀವ ಭಾಷೆಯಾಗಿ ಸ್ವೀಕರಿಸಿದೆ. ತೆಲುಗು ಕನ್ನಡ ಗಂಧದ ಸೊಬಗನ್ನು ಪಡೆದುಕೊಂಡಿದೆ. ಅದಕ್ಕೆ ತಕ್ಕಂತೆ ಕಲೆ, ಸಾಹಿತ್ಯ, ಜಾನಪದ ಸಂಸ್ಕೃತಿ ಬೆಳೆದು ಬಂದಿವೆ’ ಎಂದು ಅಭಿಪ್ರಾಯಪಟ್ಟರು.

‘ಹಿಂದಿನ ಕೆಲವು ತೆಲುಗು ಕವಿಗಳ ಜೊತೆಗೆ, ಇಂದಿನ ಕನ್ನಡ ಕವಿಗಳು ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಜಾನಪದ ಕಲಾವಿದರಿಗೂ ಕೊರತೆಯಿಲ್ಲ. ಆದರೆ ಸಾಹಿತ್ಯ ಹಾಗೂ ಕಲೆಗೆ ಸಂಬಂಧಿಸಿದಂತೆ ನಿರೀಕ್ಷಿತ ಆಸಕ್ತಿ ಕಂಡುಬರುತ್ತಿಲ್ಲ. ಪ್ರೋತ್ಸಾಹದ ಕೊರತೆಯೂ ಇದೆ’ ಎಂದರು.

‘ಇಲ್ಲಿ ತುಂಡು ನೆಲದ ಬೇಸಾಯ ಕ್ಷೀಣಿಸುತ್ತಿದೆ. ಅದರ ಪರಿಣಾಮವಾಗಿ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಹೆಚ್ಚಿದೆ. ಜನರು ಹೊಟ್ಟೆಪಾಡಿಗಾಗಿ ವಲಸೆ ಹೊಗುತ್ತಿದ್ದಾರೆ. ಇದು ನಿಜಕ್ಕೂ ಖೇದಕರ ಸಂಗತಿಯಾಗಿದೆ’ ಎಂದು ಹೇಳಿದರು.

‘ತಾಲ್ಲೂಕಿನ ಗುಡ್ಡಗಾಡಲ್ಲಿ ಅಮೂಲ್ಯ ಮೂಲಿಕಾ ಸಸ್ಯಗಳಿವೆ. ಇದು ತಾಲ್ಲೂಕಿನ ಹೆಮ್ಮೆಯ ವಿಷಯವಾಗಿದೆ. ಆದರೆ ಜನರ ನಿರ್ಲಕ್ಷ್ಯದ ಪರಿಣಾಮವಾಗಿ ಬಹಳಷ್ಟು ಉಪಯುಕ್ತ ಸಸ್ಯಗಳು ಕಣ್ಮರೆಯಾಗುತ್ತಿವೆ. ಅವುಗಳನ್ನು ಸಂರಕ್ಷಿಸಬೇಕಾಗಿದೆ’ ಎಂದರು.

‘ಆರ್ಥಿಕ ಬೆಳೆ ಬೆಳೆಯುವ ಧಾವಂತದಲ್ಲಿ ಆರೋಗ್ಯಕ್ಕೆ ಪೂರಕವಾದ ಸಾಂಪ್ರದಾಯಿಕ ಬೆಳೆಗಳು ನೇಪಥ್ಯಕ್ಕೆ ಸರಿಯುತ್ತಿವೆ. ಅವುಗಳ ಪುನರಾಗಮನ ಇಂದಿನ ಅಗತ್ಯವಾಗಿದೆ. ಇಲ್ಲಿ ಹರಡಿಕೊಂಡಿರುವ ಅಪರೂಪದ ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸಬೇಕಾಗಿದೆ’ ಎಂದು ಹೇಳಿದರು.

‘ಇಲ್ಲಿನ ಕೃಷಿಕರ ಬದುಕು ಹಸನಾಗಲು ಶಾಶ್ವತ ನೀರಾವರಿ ಯೋಜನೆ ಜಾರಿಯಾಗಬೇಕು. ಆಗ ಮಾತ್ರ ಗಾಂಧೀಜಿ ಅವರು ಕಂಡ ಗ್ರಾಮ ಸ್ವರಾಜ್ಯದ ಕನಸು ನನಸಾಗುತ್ತದೆ. ವಲಸೆ ಹೋದ ರೈತರು ಹಿಂದಿರುಗುತ್ತಾರೆ. ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳ್ಳುವ ಮುನ್ನ, ಕೆರೆ, ಕುಂಟೆ, ರಾಜ ಕಾಲುವೆ ಮತ್ತು ಕಾಲುವೆಗಳ ಒತ್ತುವರಿ ತೆರವುಗೊಳಿಸಬೇಕು. ಹೂಳು ತೆಗೆಯಬೇಕು’ ಎಂದು ಸಲಹೆ ಮಾಡಿದರು.

‘ತಾಲ್ಲೂಕಿನ ಕನ್ನಡ ಕುಲದ ಜನರಂತೆಯೇ ನಾಡಿನ ಜನರು ನಡೆಯಬೇಕಾದ ದಾರಿ ಉದ್ದವಿದೆ. ಹಾಗೆಂದು ದಿಗಿಲು ಬೇಡ. ಬೆಳಕಿಗಾಗಿ ಹುಡುಕುವವನು ಎಂದಿಗೂ ದಣಿಯುವುದಿಲ್ಲ. ನಾವು ಕನ್ನಡದ ಬೆಳಕನ್ನು ಹುಡುಕೋಣ, ಹಿಡಿಯೋಣ, ಬದುಕೋಣ’ ಎಂದು ಹೇಳಿದರು.

* * 

‘ಕುಲ ಕಸುಬು ಹಾಗೂ ಕೃಷಿ ವಿಜ್ಞಾನವನ್ನು ಆಧುನಿಕ ಮತ್ತು ಆರ್ಥಿಕತೆಯ ನವೀಕರಣದೊಂದಿಗೆ ಯಶಸ್ಸುಗೊಳಿಸಬೇಕು. ರೈತರ ಬದುಕು ಸುಧಾರಿಸಬೇಕು’

ಡಾ.ವೈ.ವಿ.ವೆಂಕಟಾಚಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry