ಸೋಮವಾರ, ಆಗಸ್ಟ್ 3, 2020
25 °C

ಸೌಹಾರ್ದದ ಆಟ ; ಭರವಸೆಯ ನೋಟ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಸೌಹಾರ್ದದ ಆಟ ; ಭರವಸೆಯ ನೋಟ

‘ಇನ್ನು ಮುಂದಾದರೂ ನಮ್ಮ ದೇಶದ ನೆಲದಲ್ಲಿ  ಅಂತರರಾಷ್ಟ್ರೀಯ ಕ್ರಿಕೆಟ್ ನಡೆಯಲಿ. ಬೇರೆ ರಾಷ್ಟ್ರಗಳ ತಂಡಗಳು ಬಂದು ಆಡಲಿ’–  ಹೋದ ವರ್ಷ ಜೂನ್‌ನಲ್ಲಿ ಚಾಂಪಿಯನ್ಸ್‌ ಟ್ರೋಫಿ ಗೆದ್ದಿದ್ದ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹಮದ್ ಅವರು ವಿಶ್ವದ ಕ್ರಿಕೆಟ್ ತಂಡಗಳಿಗೆ ಮಾಡಿದ್ದ ಮನವಿ ಇದು. ಆದರೆ ಅದು ಇದುವರೆಗೂ ಈಡೇರಿಲ್ಲ.

ಅಂದು ಲಂಡನ್‌ನ ದ ಓವೆಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್‌ನಲ್ಲಿ ಭಾರತ ತಂಡವನ್ನು 180 ರನ್‌ಗಳಿಂದ ಸೋಲಿಸಿದ್ದ ಪಾಕ್ ತಂಡವು ಮೊದಲ ಬಾರಿಗೆ ಚಾಂಪಿಯನ್ ಆಗಿತ್ತು.  ಆ ದೇಶದ ಕ್ರಿಕೆಟ್‌ ಅಭಿಮಾನಿಗಳಲ್ಲಿ ಸಂಭ್ರಮ ಉಕ್ಕಿ ಹರಿದಿತ್ತು. ಭಾರತ ಮತ್ತು ಪಾಕ್ ತಂಡಗಳ ನಡುವಣ ದ್ವಿಪಕ್ಷೀಯ ಸರಣಿಗಳ ಆಯೋನೆಯ ಕನಸು ಕುಡಿಯೊಡೆದಿತ್ತು. ಆದರೆ, ಪಾಕ್‌ ಕ್ರೀಡಾಭಿಮಾನಿಗಳ ಆಶಯ ಇನ್ನೂ ಈಡೇರಿಲ್ಲ. ಉಭಯ ದೇಶಗಳ ಗಡಿಯಲ್ಲಿ ಭಯೋತ್ಪಾದಕರ ಉಪಟಳ ಕಮ್ಮಿಯಾಗಿಲ್ಲ. ಅಮಾಯಕರ ಮತ್ತು ಭದ್ರತಾ ಪಡೆಗಳ ನೆತ್ತರು ಹರಿಯುವುದು ನಿಂತಿಲ್ಲ.

ಅಮೆರಿಕದ ಅಧ್ಯಕ್ಷ ಟ್ರಂಪ್ ಕೂಡ ಈಚೆಗೆ ‘ಭಯೋತ್ಪಾದಕರಿಗೆ ಪ್ರಚೋದನೆ ಕೊಡುವುದನ್ನು ನಿಲ್ಲಿಸಿ’ ಎಂದು ಪಾಕ್‌ಗೆ ಎಚ್ಚರಿಕೆ ನೀಡಿದ್ದಾರೆ. ಪಾಕ್‌ ಮೇಲೆ ಮತ್ತಷ್ಟು ಒತ್ತಡ ಹೇರಲು ಭಾರತ ಸರ್ಕಾರವು. ‘ಗಡಿಯಲ್ಲಿ ಭಯೋತ್ಪಾದನೆ ನಿಲ್ಲುವವರೆಗೂ ಉಭಯ ದೇಶಗಳ ನಡುವೆ ಯಾವುದೇ ರೀತಿಯ ಕ್ರಿಕೆಟ್ ಸಂಬಂಧ ಇಲ್ಲ’ ಎಂದು ಸ್ಪಷ್ಟಪಡಿಸಿದೆ.

ಇದರಿಂದಾಗಿ  ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಕ್ರಿಕೆಟ್  ಮಂಡಳಿ ತೀವ್ರ ಮುಖಭಂಗ ಅನುಭವಿಸಿದೆ. 2009 ರಲ್ಲಿ ಪಾಕಿಸ್ತಾನದ ಲಾಹೋರ್‌ನಲ್ಲಿ ಸರಣಿ ನಡೆದ ಸಂದರ್ಭದಲ್ಲಿ ಶ್ರೀಲಂಕಾ ತಂಡ ಪ್ರಯಾಣಿಸುತ್ತಿದ್ದ ಬಸ್‌ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಆಗಿನಿಂದ ಇಲ್ಲಿಯವರೆಗೆ ಪ್ರಮುಖ ದೇಶಗಳ ಕ್ರಿಕೆಟ್ ತಂಡಗಳು ಪಾಕಿಸ್ತಾನದಲ್ಲಿ ಕ್ರಿಕೆಟ್  ಆಡಿಲ್ಲ. ಆಗಿನಿಂದ ದೇಶದಲ್ಲಿ ಕ್ರಿಕೆಟ್ ಚಟುವಟಿಕೆ ಹಿನ್ನಡೆ ಅನುಭವಿಸಿದೆ.

ನೆರೆಯ ಅಫ್ಗಾನಿಸ್ತಾನವು ತಾಲಿಬಾನ್ ಉಗ್ರರಿಂದ ಮುಕ್ತಿ ಪಡೆದ ನಂತರ ಕ್ರಿಕೆಟ್ ಲೋಕದಲ್ಲಿ ಸಾಧನೆಯ ಹೆಜ್ಜೆಗಳನ್ನು ಇಡುತ್ತಿದೆ. ಆ ಮೂಲಕ ಅಂತರರಾಷ್ಟ್ರೀಯ ವಲಯದಲ್ಲಿ ತನ್ನ ವರ್ಚಸ್ಸನ್ನು ಉತ್ತಮಪಡಿಸಿಕೊಳ್ಳುವತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಭಾರತದೊಂದಿಗೆ ಉತ್ತಮ ಬಾಂಧವ್ಯ ಬೆಸೆದುಕೊಂಡಿರುವ ಆಘ್ಗಾನಿಸ್ತಾನವು ಟೆಸ್ಟ್ ಮಾನ್ಯತೆಯನ್ನು ಪಡೆಯುವಲ್ಲಿಯೂ ಯಶಸ್ವಿಯಾಗಿದೆ.

ಶ್ರೀಮಂತ ಕ್ರೀಡಾ ಸಂಸ್ಥೆಯಾಗಿರುವ ಬಿಸಿಸಿಐ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್ (ಐಸಿಸಿ) ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಭಾರತವು ಕ್ರಿಕೆಟ್‌ಗೆ ದೊಡ್ಡ ಮಾರುಕಟ್ಟೆಯೂ ಹೌದು. ಅದರಲ್ಲೂ ಭಾರತ ಮತ್ತು ಪಾಕ್ ತಂಡಗಳ ನಡುವಣ ಕ್ರಿಕೆಟ್ ಪಂದ್ಯಗಳು ನಡೆದರೆ ಜಗದ ಕಣ್ಣು ನೆಟ್ಟಿರುತ್ತದೆ. ವಾಣಿಜ್ಯೋದ್ಯಮಿಗಳು ಪ್ರಾಯೋಜಕತ್ವಕ್ಕಾಗಿ ಮುಗಿ ಬೀಳುತ್ತಾರೆ.  ಎರಡೂ ದೇಶಗಳ ಮಂಡಳಿಗಳು ಪ್ರಾಯೋಜಕತ್ವದ ಲಾಭ ಪಡೆಯಲು ಸಾಧ್ಯವಿದೆ. ಆದರೆ, ಭಾರತದ ವಿರುದ್ಧ ಭಯೋತ್ಪಾದಕರನ್ನು ಪ್ರಚೋದಿಸುವ ಪಾಕ್‌ ರಾಜನೀತಿಯಿಂದಾಗಿ ಕ್ರಿಕೆಟ್ ಮೂಲಕ ಸಿಗಬಹುದಾದ ಬಹುಕೋಟಿ ಲಾಭವನ್ನು ಕಳೆದುಕೊಂಡಿದೆ.

‘ಭಾರತದ ಎದುರು ಆಡಿದರೆ ದುಡ್ಡು ಗಳಿಸಲು ಸಾಧ್ಯವಿದೆ. ಅದಕ್ಕಾಗಿಯೇ ಬಹಳಷ್ಟು ಕ್ರಿಕೆಟ್ ತಂಡಗಳು ಭಾರತದೊಂದಿಗೆ ಆಡಲು ಹಾತೊರೆಯುತ್ತಿವೆ’ ಎಂದು ಈಚೆಗೆ ಪಿಸಿಬಿಯ ನಿಜಾಮ್ ಸೇಥಿ ಹೇಳಿದ್ದರು.

 ಪಾಕಿಸ್ತಾನ ತಂಡದ ನಾಯಕ ಸರ್ಫ್‌ರಾಜ್‌ ಅಹಮದ್‌

ದಶಕದ ಹಿಂದೆ ಪಾಕ್ ಕ್ರಿಕೆಟ್ ತಂಡವೂ ಜಾಗತಿಕ ವಲಯದಲ್ಲಿ ಪ್ರಾಮುಖ್ಯತೆ ಹೊಂದಿತ್ತು. ಜಾವೇದ್ ಮಿಯಾಂದಾದ್, ಇಮ್ರಾನ್ ಖಾನ್, ವಸೀಂ ಅಕ್ರಂ, ವಕಾರ್ ಯೂನಿಸ್, ಅಮೀರ್ ಸೋಹೈಲ್,  ಸಕ್ಲೇನ್ ಮುಸ್ತಾಕ್, ಸಯೀದ್ ಅನ್ವರ್, ಅಕೀಬ್ ಜಾವೇದ್ ಅವರಂತಹ ತಾರೆಯರು ಮಿನುಗಿದ್ದರು. ಆದರೆ ಇವತ್ತು ಆ ಪರಿಸ್ಥಿತಿ ಇಲ್ಲ.

ಪಿಸಿಬಿಯು ತನ್ನ ಆಟಗಾರರಿಗೆ ಹೆಚ್ಚು ಸಂಬಳ, ಸಾರಿಗೆ ನೀಡುತ್ತಿಲ್ಲ ಎಂಬ ಆರೋಪಗಳು ಇವೆ. ಆದರೂ ಆಡಲು ಬರುವ ಆಟಗಾರರಲ್ಲಿ ಕೆಲವರನ್ನು ಬುಕ್ಕಿಗಳು ತಮ್ಮ ಬಲೆಗೆ ಹಾಕಿಕೊಳ್ಳುತ್ತಾರೆ. ಐಸಿಸಿಯ ಹದ್ದಿನ ಕಣ್ಣಿಗೆ ಬೀಳುವ ಕಳಂಕಿತ ಆಟಗಾರರಿಂದಾಗಿ ಪಾಕ್ ವರ್ಚಸ್ಸು ಮತ್ತಷ್ಟು ಕುಸಿದಿದೆ.

ಈ ಎಲ್ಲ ಕಾರಣಗಳಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿಯೂ ಪಾಕ್ ತಂಡದ ಆಟಗಾರರಿಗೆ ಕಳೆದ ಐದು ವರ್ಷಳಿಂದ ಅವಕಾಶ ನೀಡಿಲ್ಲ. ಇದು ಕೂಡ ಅಲ್ಲಿಯ ಆಟಗಾರರಿಗೆ ಹಿನ್ನಡೆಯಾಗಿದೆ. 2106 ವಿಶ್ವ ಟ್ವೆಂಟಿ–20 ಟೂರ್ನಿಯ ಸಂದರ್ಭದಲ್ಲಿ ಭಾರತದಲ್ಲಿ ಕಾರ್ಯನಿರ್ವಹಿಸುವುದನ್ನು ಅಲ್ಲಿಯ ಅಂಪೈರ್‌ಗಳು ಮತ್ತು ಟಿ.ವಿ. ವೀಕ್ಷಕ ವಿವರಣೆಗಾರರೂ ಬಹಿಷ್ಕರಿಸಿದ್ದರು. ಆದರೆ ಅದರಿಂದ ನಷ್ಟವಾಗಿದ್ದು ಅವರಿಗೇ ಎಂಬುದು ಸುಳ್ಳಲ್ಲ.

ಪಾಕ್ ನೆಲದಲ್ಲಿಯೂ ವಿರಾಟ್ ಕೊಹ್ಲಿ, ಅಶ್ವಿನ್, ರೋಹಿತ್ ಶರ್ಮಾ, ಭುವನೇಶ್ವರ್ ಕುಮಾರ್ ಅಭಿಮಾನಿಗಳು ಇದ್ದಾರೆ.  ಆ ತಂಡದ ಆಟಗಾರರನ್ನು ಮೆಚ್ಚುವ, ಪ್ರೋತ್ಸಾಹಿಸುವ ವಿಶಾಲ ಹೃದಯಿಗಳು ಇಲ್ಲಿಯೂ ಇದ್ದಾರೆ. ಆದ್ದರಿಂದಲೇ ಉಭಯ ದೇಶಗಳ ನಡುವೆ ಕ್ರಿಕೆಟ್ ಸಂಬಂಧ ಮತ್ತೆ ನೆಲೆಗೊಳ್ಳಬೇಕು ಎಂಬ ಆಶಾವಾದಿಗಳೂ ಇದ್ದಾರೆ. ಆದರೆ, ‘ಒಂದು ಕೈಯಲ್ಲಿ ಬಂದೂಕು, ಇನ್ನೊಂದು ಕೈಯಲ್ಲಿ ಬ್ಯಾಟ್ ಹಿಡಿದುಕೊಂಡು ಸಂಬಂಧ ವೃದ್ಧಿಸಲು ಸಾಧ್ಯವಿಲ್ಲ’ ಎಂದು ಕೆಲವು ವರ್ಷಗಳ ಹಿಂದೆ ಕಪಿಲ್ ದೇವ್ ಹೇಳಿದ ಮಾತು ಇಲ್ಲಿ ಪ್ರಸ್ತುತವಾಗುತ್ತದೆ.

‘ಬಂದೂಕಿನ ನಳಿಗೆಯ ತುದಿಗೆ ಗುಬ್ಬಿಯ ಗೂಡು ಕಟ್ಟಿ ಮೊಟ್ಟೆ ಇಡಬೇಕು’ ಎಂಬ ಕವಿಯ ಆಶಯ ಈಡೇರಿದರೆ ಮಾತ್ರ ಉಭಯ ದೇಶಗಳ ಅಂಗಳದಲ್ಲಿ ಶಾಂತಿಯ ಚೆಂಡು ಪುಟಿಯಬಹುದು. ಅಂತಹದೊಂದು ವಾತಾವರಣ ನೆಲೆಗೊಳಿಸುವ ಶಕ್ತಿ ಕ್ರೀಡೆಗೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.