ಸೋಮವಾರ, ಆಗಸ್ಟ್ 3, 2020
26 °C

ಒಲುಮೆಯ ಬೆಸುಗೆಗೆ ಪ್ರೀತಿಯ ನೋಟ

ಕೆ.ಎಸ್.ರಾಜಾರಾಮ್ Updated:

ಅಕ್ಷರ ಗಾತ್ರ : | |

ಒಲುಮೆಯ ಬೆಸುಗೆಗೆ ಪ್ರೀತಿಯ ನೋಟ

ಜೋತುಬಿದ್ದ ಚರ್ಮದ ಹೊದಿಕೆಯ ಉದ್ದ ಕೊಕ್ಕಿನ ನೀರುಹಕ್ಕಿಗಳ ಒಂದು ಜಾತಿ, Pelecanidae  ಪ್ರಭೇಧಕ್ಕೆ ಸೇರಿದ್ದು , ವಿಶ್ವದನೇಕ ಕಡೆ ಎಂಟು ವೈವಿದ್ಯತೆಯಲ್ಲಿ  ಜೀವಿಸುತ್ತಿವೆ. ಅದರಲ್ಲಿ ಒಂದು, ಅಳಿವಿನಂಚು ತಲುಪುತ್ತಿರುವSpot Billed Pelican “ಸ್ಪಾಟ್ ಬಿಲ್ಡ್  ಪೆಲಿಕನ್”  Pelecanus  Philippensis ಎಂದು ಗುರುತಿಸಲ್ಪಟ್ಟ 4-5 ಅಡಿ ಉದ್ದದ ಸುಮಾರು  ನಾಲ್ಕು ಕೆ.ಜಿ. ತೂಕದ ಗಾಂಭೀರ್ಯದ ಈ ಸುಂದರ ಪಕ್ಷಿ , ಭಾರತದ, ಪಾಕಿಸ್ತಾನ, ಇಂಡೋನೇಷಿಯ ದೇಶಗಳಲ್ಲಿ  ನೀರಿನ ತಾಣಗಳ ಬದಿಯ ದೊಡ್ಡ  ಗಿಡ ಮರಗಳ ಆಶ್ರಯ ಪಡೆದು ಜೀವಿಸುತ್ತವೆ. ನೀರಿನ ಮೇಲೆ ಗಾಂಭೀರ್ಯದಲ್ಲಿ ತೇಲುತ್ತಾ  ಮೇಲ್ತರದಲ್ಲೇ  ಈಜುವ ಮೀನುಗಳನ್ನು ಸುಲಭವಾಗಿ ತೆರೆದ ಬಾಯಿಯ “ ಚೀಲ”ದಲ್ಲೇ ಸಂಗ್ರಹಿಸಿ ಬಿಡುವ ಜಾಣತನ ಈ ಪೆಲಿಕನ್ ಗಳದ್ದು.

ಹೆಚ್ಚು ದೂರ ಒಮ್ಮೆಲೇ  ಕ್ರಮಿಸಲು ಸಾಹಸ ಮಾಡದ ಈ ಪಕ್ಷಿಗಳು ವಲಸೆ ಜಾತಿಗೆ ಸೇರಲಾರವು., ಊರು ಕೆರೆ, ಸರೋವರ, ಜಲಾಶಯ, ನದಿ ನೀರಿನ ನಡುಗಂಟು, ರಂಗನತಿಟ್ಟಿನಂತಹ  ಪಕ್ಷಿ ಪ್ರೇಮಿ ಜನ ವಸತಿಯಿರುವ ಜಾಗಗಳು  ಇವುಗಳ ನೆಚ್ಚಿನ ವಾಸ ಸ್ತಳಗಳು. ಬೆಂಗಳೂರಿನ ಅನೇಕ ಕೆರೆ- ಸರೋವರಗಳಲ್ಲಿ ಇವು ಸ್ವಚ್ಚಂದವಾಗಿ ವಿಹರಿಸುತ್ತವೆ.

ಈ ಪೆಲಿಕನ್ ಗಳಿಗೂ, ಪಕ್ಷಿವೀಕ್ಷಕರಿಗೂ ಅಂತಹದೊಂದು ಆಕರ್ಷಣೆಯ ಜಾಗ, ಬಿ.ಟಿ.ಎಂ  ಲೇಕ್,  ಅಥವಾ ಮಡಿವಾಳ ಕೆರೆ.. ಅಲ್ಲಿ, ಜೆ.ಪಿ.ನಗರದ 6ನೇ ಹಂತದ ವಾಸಿ, ಸುಬ್ರಹ್ಮಣ್ಯ. ಹೆಚ್.ಎಸ್. ಆರು ತಿಂಗಳ ಹಿಂದೊಂದು ಮುಂಜಾನೆ ಸೂರ್ಯನ ಬೆಳಕಿಗೆ ವಿರುದ್ಧವಾಗಿ ಕ್ಯಾಮೆರಾದಲ್ಲಿ ಈ ದೃಶ್ಯವನು ಸೆರೆಹಿಡಿದಿದ್ದಾರೆ .

ಟೆಕ್ ಯ್ಯಾಕ್ಟಿವ್ ಸಂಸ್ಥೆಯಲ್ಲಿ ಅಸೋಸಿಯೇಟ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದು, 4 ವರ್ಷಗಳಿಂದ ಪ್ರಕೃತಿ, ವನ್ಯಜೀವಿ ಛಾಯಾಗ್ರಹಣದಲ್ಲಿ ತೊಡಗಿರುವ ಮತ್ತು ಈಚೆಗೆ ಕ್ಯಾಂಡಿಡ್, ಈವೆಂಟ್ಸ್ ಚಿತ್ರ ಗ್ರಹಣದಲ್ಲೂ ಆಸಕ್ತಿ ತೋರುತ್ತಿದ್ದಾರೆ.

ಈ ಚಿತ್ರವನ್ನು ತೆಗೆಯಲು ಬಳಸಿದ ಕ್ಯಾಮೆರಾ ಕೆನಾನ್ 1200 D, ಜೊತೆಗೆ 55 – 250 ಎಂ.ಎಂ. ಜೂಂ; ಎಕ್ಸ್ ಪೋಶರ್ ವಿವರ ಇಂತಿವೆ :- 250 ಎಂ.ಎಂ. ಪೋಕಲ್ ಲೆಂಗ್ತ್ , ಅಪರ್ಚರ್ f 5.6 , ಶಟರ್ ವೇಗ 1/400 ಸೆಕೆಂಡ್, ಮತ್ತು ಐ.ಎಸ್.ಒ. 200. ಟ್ರೈಪಾಡ್ ಬಳಸಿಲ್ಲ.

ಈ ಚಿತ್ರವನ್ನು ವಿಶ್ಲೇಷಣಾ ಕೋನದಲ್ಲಿ ನೋಡಿದಾಗ ಉಲ್ಲೇಖಿಸಬಹುದಾದ ತಾಂತ್ರಿಕ ಮತ್ತು ಕಲಾತ್ಮಕ ಅಂಶಗಳು ಇಂತಿವೆ :

* ಈ ಛಾಯಾಗ್ರಹಣವನ್ನು  ವನ್ಯಜೀವಿ ವಿಭಾಗವೆಂದೇ ಪರಿಗಣಿಸಲು ಕಾರಣವೆಂದರೆ, ಸಾಕು ಪಕ್ಷಿಗಳಿಗೆ ಅಥವಾ ಜನರ ಮದ್ಯೆಯೇ ಜೀವಿಸುವ ಕಾಗೆ , ಪಾರಿವಾಳ, ಇತ್ಯಾದಿಗಳಿಗೆ ಜನಗಳ ವರ್ತನೆ, ತರಬೇತಿ, ಪ್ರೀತಿ ಆದರಗಳು ಅಭ್ಯಾಸವಾಗಿ ಬಿಟ್ಟಿದ್ದು, ಅವುಗಳ ಸಹಜ ಗುಣಗಳಿಗೆ ಏನೋ ಲೇಪ ಬಳಿದಂತೆ ಆಗುವುದು ಸಾದ್ಯ ತಾನೇ? ವನ್ಯ ಪಕ್ಷಿಗಳು ಜನರಿಂದ ಸಾಕಷ್ಟು ದೂರವನ್ನೇ ಕಾಯ್ದಿಟ್ಟುಕೊಳ್ಳುವುದೂ ಇದಕ್ಕೆ ಕಾರಣ.   ಅಂತೆಯೇ, ವನ್ಯ ಪಕ್ಷಿ ಛಾಯಾಗ್ರಹಣ ಕ್ಲಿಷ್ಟಕರವೇ ಹೌದು. ಅವು ಸಿಕ್ಕಲ್ಲೇ, ತುಂಬಾ ಸಮರ್ಪಕವಾಗಿ  ಕ್ಯಾಮೆರಾದಲ್ಲಿ ಸೆರೆಹಿಡಿಯಲು , ಛಾಯಾಗ್ರಹಣದ ತಾಂತ್ರಿಕ ಕೌಶಲ್ಯ ಮತ್ತು ಉಪಕರಣ ಛಾಯಾಗ್ರಾಹಕರಿಗೆ  ಅತಿ ಮುಖ್ಯ. ಪಿಕ್ಟೋರಿಯಲ್ ( ಜನಜೀವನ, ಕ್ಯಾಂಡಿಡ್, ಲ್ಯಾಂಡ್ ಸ್ಕೇಪ್, ಪೋರ್ ಟ್ರೈಟ್, ಜಡ ವಸ್ತು,  ಇತ್ಯಾದಿ ) ವಿಭಾಗದಲ್ಲಿ ಕೂಡಾ ತಾಂತ್ರಿಕ ಗುಣಮಟ್ಟವೂ  ಮುಖ್ಯ ಆದರೂ, ಅಲ್ಲಿ ಭಾವನಾತ್ಮಕ ಅಥವಾ ಕಲಾತ್ಮಕ ಕೌಶಲ್ಯವೇ  ಚೌಕಟ್ಟಿನ  ಮೌಲ್ಯವನ್ನು ಹೆಚ್ಚಿಸುತ್ತದೆಯಾದ್ದರಿಂದ, ತಾಂತ್ರಿಕವಾಗಿ ಸ್ವಲ್ಪ ಹೊಂದಾಣಿಕೆ ( ಕಾಂಪ್ರಮೈಸ್ ) ನೆಡೆಯುತ್ತದೆ.

* ಮೇಲಿನ ಮುನ್ನುಡಿಗೆ ಕಾರಣವೆಂದರೆ, ಈ ಚಿತ್ರದ ತಾಂತ್ರಿಕ ಅಂಶಗಳ ತುಲನೆ... ವನ್ಯಜೀವಿ ಛಾಯಾಗ್ರಹಣದಲ್ಲಿ  ಮುಖ್ಯ ವಸ್ತುವಿಗೆ ಅತಿ ಸಮರ್ಪಕ ಫೋಕಸ್ ಮತ್ತು ಮತ್ತು ಹಿನ್ನೆಲೆಗೆ ಪೂರಕ  ಸಂಗಮ ವಲಯ ( ಡೆಪ್ತ್ ಆಫ್ ಫೀಲ್ಡ್) ಇರಲೇಬೇಕು. ಇಲ್ಲಿ ನೀರಿನ ಮೇಲೆ ಚಲಿಸುತ್ತಿರುವ ಪಕ್ಷಿಗಳು ಮತ್ತು ನೀರಿನ ಮೇಲ್ಮೆಯ ಅಲೆಗಳು ಸ್ವಲ್ಪ ಗೊಂದಲವಾಗಿ ಕಾಣಿಸುತ್ತಿವೆ. ಚಿತ್ರವನ್ನು ದೊಡ್ಡದಾಗಿಸಿದಾಗ ಪಿಕೆಲ್ಸ್ ಗಳು ಹಾಗೂ ಕೊಂಚ ಹಳದಿ ಬಣ್ಣದ ಅಂಚು ಕಂಡುಬರುತ್ತವೆ. ಸಣ್ಣ  ಅಳತೆಯ ಮುದ್ರಣದಲ್ಲಿ ಈ ಕೊರತೆ ಗೊತ್ತಾಗುವುದಿಲ್ಲ ಅನ್ನಿ. ಅದಕ್ಕೆ ಕಾರಣ, ಮೊದಲನೆಯದಾಗಿ, ಎದುರು ಮುಂಜಾನೆಯ ಬೆಳಕು ಇಡೀ ನೀರಿನ ಮೇಲ್ಮೆಯನ್ನು ಕನ್ನಡಿಯಂತೆ ಪ್ರತಿಫಲನಗೊಳ್ಳಿಸಿ ಕ್ಯಾಮೆರಾ ಲೆನ್ಸ್ ಮೇಲೆ ಬಿದ್ದಿರುತ್ತದೆ. ಮುಖ್ಯವಸ್ತುವು ಕಾಂತಿ ಭೇದದ ವತಿಯಿಂದ ( ಕಾಂಟ್ರಾಸ್ಟ್) ಬಣ್ಣಗೆಡುವುದು ಮತ್ತು ಕಂದುವುದು ಸಹಜ. ಎರಡನೆಯದಾಗಿ,   ಎಕಪೋಶರ್ ಐ.ಎಸ್.ಒ. 400  ನಲ್ಲಿ ದಾಖಲಾಗಿದೆ. ಚಿತ್ರ ಇನ್ನಷ್ಟು  ಉತ್ತಮವಾಗಿ ಬರಬೇಕಿದ್ದರೆ, ಒಟ್ಟಾರೆ ಎಕ್ಸ್ ಪೋಶರ್ ವ್ಯಾಲ್ಯೂ ಇಳಿಸಬೇಕಿತ್ತು, ಅಂದರೆ  ಟ್ರೈಪಾಡ್ ಬಳಸಿ , ಐ.ಎಸ್.ಒ. 200 ಕ್ಕಿಂತ ಕಡಿಮೆ  ಮತ್ತು ಅಪರ್ಚರ್  f 8 ಇಟ್ಟು, ಶಟರ್ ವೇಗ  1/ 250 ಸೆಕೆಂಡ್ ನಲ್ಲಿ  ಕ್ಯಾಮೆರಾದ ಲೆನ್ಸ್ ಹುಡ್ ಅನ್ನು ಸರಿಯಾಗಿ ಬಳಸಿ  ಬೆಳಕಿನ “ ಗ್ಲೇರ್‍’ ನ್ನು ಸರಿಪಡಿಸಿ   ಕ್ಲಿಕ್ಕಿಸಿದ್ದರೆ  ಒಳಿತಿತ್ತು.

* ಕಲಾತ್ಮಕವಾಗಿ ಇದೊಂದು ಅಪರೂಪದ ಚಿತ್ರ. ಪೆಲಿಕಾನ್ ಪಕ್ಷಿಗಳು ಸಹಚರರೊಂದಿಗೆ, ಮರಿಗಳೊಂದಿಗೆ ಪ್ರೀತಿಯಿಂದ ಬದುಕುವ ಜೀವಿಗಳು. ಎರಡೂ ಪಕ್ಷಿಗಳು ಆದರದಿಂದಲೇ ಒಂದನ್ನೊಂದು ಮುದ್ದಿಸಲು ತೇಲಿಬಂದು, ಎರಡರ ನೋಟಗಳೂ ಸಂದಿಸುವ ಅನನ್ಯ ಕ್ಷಣವನ್ನು, ಕ್ಯಾಮೆರಾದಲ್ಲಿ ದೂರದಿಂದ ಸೆರೆಹಿಡಿದಿರುವುದು ತುಂಬಾ ಮೋಹಕವಾಗಿದೆ.

* ಚಿತ್ರ ಸಂಯೋಜನೆಯಲ್ಲೂ ಪಕ್ಷಿಗಳೆರಡರ ವಿನ್ಯಾಸ ಚೌಕಟ್ಟನ್ನು ಸುಂದರ ಚಿತ್ರಣವಾಗಿಸಿದೆ, ವರ್ಣಸಾಮರಸ್ಯ ಮತ್ತು  ಎರಡರ ಕೊಕ್ಕುಗಳು ಹೃದಯಾಕಾರದಲ್ಲಿ ಪ್ರೀತಿಯ ಮತ್ತು ಭಾವನಾತ್ಮಕತೆಯ ಸಂಕೇತವಾಗಿ ರೂಪಗೊಂಡಿರುವುದು, “ಇದು ಬರಿದೇ ಫೋಟೋ ಅಲ್ಲಾ ಅಣ್ಣಾ.. ಮತ್ತೇನೋ ಅದಾ.. “ಎಂದೆನಿಸದಿರದು ಅಲ್ಲವೇ.; ಅದೇ ಉತ್ತಮ ಛಾಯಾಗ್ರಾಹಕರ ಕೈಚಳಕ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.