ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ ದರ ಇಳಿಕೆ ಎಚ್ಚರಿಕೆ ಗಂಟೆಯಾಗಲಿ

Last Updated 7 ಜನವರಿ 2018, 19:30 IST
ಅಕ್ಷರ ಗಾತ್ರ

ಮಾರ್ಚ್‌ ಅಂತ್ಯಕ್ಕೆ ಕೊನೆಗೊಳ್ಳಲಿರುವ ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ವೃದ್ಧಿ ದರವು (ಜಿಡಿಪಿ) ನಾಲ್ಕು ವರ್ಷಗಳಲ್ಲಿಯೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಇರಲಿದೆ. ಹಿಂದಿನ ವರ್ಷದ ಶೇ 7.1ಕ್ಕೆ ಹೋಲಿಸಿದರೆ, ಈ ಬಾರಿ ಶೇ 6.5ಕ್ಕೆ ಇಳಿಯಲಿದೆ ಎಂದು ಅಂದಾಜಿಸಿರುವುದು ನಿರಾಶಾದಾಯಕ ಸಂಗತಿಯಾಗಿದೆ. ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿಯ ಪ್ರಭಾವದಿಂದ ಅರ್ಥ ವ್ಯವಸ್ಥೆಯು ಇನ್ನೂ ಹೊರಬರದಿರುವುದು ಮತ್ತು ಜಿಎಸ್‌ಟಿ ಕೂಡ ಪ್ರಗತಿಗೆ ಅಡ್ಡಗಾಲು ಹಾಕಿರುವುದು ಇದರಿಂದ ವೇದ್ಯವಾಗುತ್ತದೆ. ತಯಾರಿಕಾ ವಲಯ ಮತ್ತು ಕೃಷಿ ವಲಯದಲ್ಲಿನ ಮಂದಗತಿಯು ಒಟ್ಟಾರೆ ಆರ್ಥಿಕ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಕೇಂದ್ರೀಯ ಸಾಂಖ್ಯಿಕ ಕಚೇರಿಯೇ (ಸಿಎಸ್‌ಒ) ಈ ವರದಿ ಬಿಡುಗಡೆ ಮಾಡಿದೆ. ಹೀಗಾಗಿ ಈ ಅಂದಾಜಿಗೆ ಸಹಜವಾಗಿಯೇ ಖಚಿತತೆ ಪ್ರಾಪ್ತವಾಗಿದೆ. ಜತೆಗೆ, ಅರ್ಥ ವ್ಯವಸ್ಥೆ ಕುಂಠಿತಗೊಂಡಿರುವುದೂ ಅನುಮಾನಕ್ಕೆ ಎಡೆ ಇಲ್ಲದಂತೆ ಸಾಬೀತಾಗಿದೆ. ಈ ಪರಿಸ್ಥಿತಿಯು ಇನ್ನಷ್ಟು ವಿಷಮಗೊಳ್ಳದಂತೆ ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳಬೇಕಾಗಿದೆ. ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ರೂಪದಲ್ಲಿ ಅಳೆಯುವ ಆರ್ಥಿಕ ಬೆಳವಣಿಗೆಯು ಸದ್ಯದ ಮಟ್ಟಿಗಂತೂ ಆರ್ಥಿಕತೆಯ ಪ್ರಮುಖ ವಲಯಗಳಲ್ಲಿ ಆಶಾಭಾವನೆಯನ್ನೇನೂ ಮೂಡಿಸಿಲ್ಲ. ತಯಾರಿಕಾ ವಲಯಕ್ಕೆ ಸಂಬಂಧಿಸಿದಂತೆ ವರ್ಷದ ಮೊದಲ ತ್ರೈಮಾಸಿಕಗಳಲ್ಲಿನ ಕುಸಿತವು ವರ್ಷಾಂತ್ಯದಲ್ಲಿಯೂ ಮುಂದುವರೆದಿದೆ. ಖಾಸಗಿ ವಲಯದ ವೆಚ್ಚ ಕೂಡ ಹಿಂದಿನ ವರ್ಷಕ್ಕಿಂತ (ಶೇ 8.7) ಈ ಬಾರಿ ಕಡಿಮೆಯಾಗಿರುವುದು (ಶೇ 6.3) ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ.

ಏನೆಲ್ಲಾ ಕಸರತ್ತು ಮಾಡಿದರೂ ಸರ್ಕಾರಿ ಮತ್ತು ಖಾಸಗಿ ಬಂಡವಾಳ ಹೂಡಿಕೆ ಹೆಚ್ಚಳಗೊಳ್ಳುತ್ತಿಲ್ಲ. ಇದರಿಂದ ಹೊಸದಾಗಿ ಉದ್ಯೋಗ ಅವಕಾಶಗಳೂ ಸೃಷ್ಟಿಯಾಗುತ್ತಿಲ್ಲ. ರಫ್ತು ವಹಿವಾಟೂ ಏರಿಕೆಯಾಗುತ್ತಿಲ್ಲ. ಸ್ಥಗಿತಗೊಂಡಿರುವ ಯೋಜನೆಗಳ ವೆಚ್ಚ ಹೆಚ್ಚುತ್ತಿದೆ. ಹಣದುಬ್ಬರ ನಿಯಂತ್ರಣಕ್ಕೆ ಸಿಗುತ್ತಿಲ್ಲ. ರೈತರೂ ಒಳಗೊಂಡಂತೆ ಗ್ರಾಮೀಣ ಪ್ರದೇಶದ ಸಂಕಷ್ಟಗಳೂ ಏರುಗತಿಯಲ್ಲಿಯೇ ಇವೆ. ವಾಸ್ತವ ಸ್ಥಿತಿ ಹೀಗಿರುವಾಗ ಅರ್ಥ ವ್ಯವಸ್ಥೆಯು ಚೇತರಿಕೆಯ ಹಾದಿ ಕಂಡುಕೊಳ್ಳಲಿದೆ ಎಂದು ಕೆಲವರು ಪ್ರತಿಪಾದಿಸುವುದು ಜಾಣತನದ ನಿರ್ಧಾರ ಎನಿಸದು. ಖಾಸಗಿ ಹೂಡಿಕೆ ಪ್ರಮಾಣ ಏಳೆಂಟು ವರ್ಷಗಳಲ್ಲಿಯೇ ಕಡಿಮೆ ಮಟ್ಟದಲ್ಲಿ ಇದೆ. ಬ್ಯಾಂಕ್‌ಗಳ ಸಾಲ ನೀಡಿಕೆ ಪ್ರಮಾಣವೂ ಕುಸಿದಿದೆ.  ಹಲವಾರು ಉದ್ದಿಮೆಗಳಿಂದ ಸಾಲ ವಸೂಲಿಗೆ ದಿವಾಳಿ ಸಂಹಿತೆಯಡಿ ಕ್ರಮ ಕೈಗೊಂಡಿರುವುದು ಉದ್ದಿಮೆಗಳು ಬಾಗಿಲು ಹಾಕಲು ಮತ್ತು ಉದ್ಯೋಗ ಅವಕಾಶ ಕಡಿತಕ್ಕೂ ಅವಕಾಶ ಮಾಡಿಕೊಡಲಿದೆ. ಈ ಎಲ್ಲ ಕಾರಣಗಳಿಂದಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ನಾಲ್ಕು ವರ್ಷ ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿನ ಒಟ್ಟಾರೆ ಅರ್ಥ ವ್ಯವಸ್ಥೆಯ ಚಿತ್ರಣ ಭರವಸೆದಾಯಕವಾಗಿ ಕಾಣುತ್ತಿಲ್ಲ. ಮಾತಿನಲ್ಲಿಯೇ ಮಂಟಪ ಕಟ್ಟುವುದಕ್ಕೂ ವಾಸ್ತವ ಸ್ಥಿತಿಗೂ ಅಜಗಜಾಂತರ ಇರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು ಹೆಚ್ಚುತ್ತಲೇ ಸಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯೂ ಏರಿಕೆ ಕಾಣುತ್ತಿದೆ. ಜಿಎಸ್‌ಟಿ  ಸಂಗ್ರಹವೂ ತಿಂಗಳಿನಿಂದ ತಿಂಗಳಿಗೆ ಕಡಿಮೆಯಾಗುತ್ತಿದೆ. ಕೃಷಿ ವಲಯದ ಚೇತರಿಕೆಯ ಲಕ್ಷಣಗಳೇ ಕಂಡುಬರುತ್ತಿಲ್ಲ. ಇಂತಹ ಪ್ರತಿಕೂಲ ವಿದ್ಯಮಾನಗಳನ್ನು ಮೆಟ್ಟಿ ನಿಲ್ಲುವ ಹೊಸ ಸವಾಲುಗಳು ಸರ್ಕಾರಕ್ಕೆ ಎದುರಾಗಿವೆ. ದೇಶಿ ಆರ್ಥಿಕ ಬೆಳವಣಿಗೆಯ ಭರವಸೆದಾಯಕ ಪಯಣದ ಬಗ್ಗೆ ಭಾರತದ ಮಾನದಂಡವನ್ನು ಮೂಡೀಸ್‌ ಇನ್‌ವೆಸ್ಟರ್ಸ್‌ ಸರ್ವಿಸಸ್‌ ಕೆಲ ದಿನಗಳ ಹಿಂದಷ್ಟೇ ಮೇಲ್ದರ್ಜೆಗೆ ಏರಿಸಿತ್ತು. ಅರ್ಥವ್ಯವಸ್ಥೆಯ ಪ್ರಗತಿ ಕುಂಠಿತಗೊಂಡಿರುವುದು ವಾಸ್ತವ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಜಿಡಿಪಿ ಬೆಳವಣಿಗೆ ದರವು ಈ ಮುಂಚಿನ ಅಂದಾಜಿಗಿಂತ ಕಡಿಮೆ ಇರುವುದು ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿರಬೇಕಾಗಿದೆ. ಇದು ಫೆಬ್ರುವರಿಯಲ್ಲಿ ಮಂಡನೆಯಾಗಲಿರುವ ಮುಂದಿನ ಹಣಕಾಸು ವರ್ಷದ (2018–19) ಬಜೆಟ್‌ನಲ್ಲಿ ಪ್ರತಿಫಲನಗೊಳ್ಳಲಿದೆ ಎಂದು ಬಹುವಾಗಿ ನಿರೀಕ್ಷಿಸಬಹುದು. ವಿತ್ತೀಯ ಕೊರತೆಗೆ ಕಡಿವಾಣ ಹಾಕುವುದರ ಜತೆಗೆ ಚೇತರಿಕೆ ಹಾದಿ ಸುಗಮಗೊಳಿಸಲು ಬಂಡವಾಳ ಹೂಡಿಕೆ ಹೆಚ್ಚಿಸುವ ಕ್ರಮಗಳನ್ನು ಸಮನ್ವಯಗೊಳಿಸಲು ಸರ್ಕಾರ ಸಾಕಷ್ಟು ಕಸರತ್ತು ಮಾಡಬೇಕಾಗಿ ಬರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT