ಐದನೇ ಆ್ಯಷಸ್‌ ಟೆಸ್ಟ್‌ ಪಂದ್ಯ: ಸೋಲಿನ ಭೀತಿಯಲ್ಲಿ ಇಂಗ್ಲೆಂಡ್‌ ತಂಡ

7

ಐದನೇ ಆ್ಯಷಸ್‌ ಟೆಸ್ಟ್‌ ಪಂದ್ಯ: ಸೋಲಿನ ಭೀತಿಯಲ್ಲಿ ಇಂಗ್ಲೆಂಡ್‌ ತಂಡ

Published:
Updated:
ಐದನೇ ಆ್ಯಷಸ್‌ ಟೆಸ್ಟ್‌ ಪಂದ್ಯ: ಸೋಲಿನ ಭೀತಿಯಲ್ಲಿ ಇಂಗ್ಲೆಂಡ್‌ ತಂಡ

ಸಿಡ್ನಿ : ನಾಲ್ಕನೇ ದಿನದಾಟದಲ್ಲಿ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡಿರುವ ಇಂಗ್ಲೆಂಡ್‌ ತಂಡ ಆಸ್ಟ್ರೇಲಿಯಾ ಎದುರಿನ ಆ್ಯಷಸ್‌ ಟೆಸ್ಟ್‌ ಸರಣಿಯ ಐದನೇ ಪಂದ್ಯದಲ್ಲಿ ಸೋಲಿನ ಭೀತಿ ಎದುರಿಸಿದೆ.

ಸಿಡ್ನಿ ಓವಲ್‌ ಕ್ರೀಡಾಂಗಣದಲ್ಲಿ 4 ವಿಕೆಟ್‌ಗೆ 479ರನ್‌ಗಳಿಂದ ಭಾನುವಾರ ಆಟ ಮುಂದುವರಿಸಿದ ಆಸ್ಟ್ರೇಲಿಯಾ, ಮೊದಲ ಇನಿಂಗ್ಸ್‌ನಲ್ಲಿ 193 ಓವರ್‌ಗಳಲ್ಲಿ 7 ವಿಕೆಟ್‌ಗೆ 649ರನ್‌ ಗಳಿಸಿ ಡಿಕ್ಲೇರ್ಡ್‌ ಮಾಡಿಕೊಂಡಿದೆ.

303ರನ್‌ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಶುರು ಮಾಡಿರುವ ಆಂಗ್ಲರ ನಾಡಿನ ತಂಡ ದಿನದಾಟದ ಅಂತ್ಯಕ್ಕೆ 46 ಓವರ್‌ಗಳಲ್ಲಿ 4 ವಿಕೆಟ್‌ಗೆ 93ರನ್‌ ಗಳಿಸಿದೆ. ಜೋ ರೂಟ್‌ ಪಡೆ ಇನ್ನು 210ರನ್‌ಗಳ ಹಿನ್ನಡೆಯಲ್ಲಿದೆ.

ನಡೆಯದ ಕುಕ್‌, ಸ್ಟೋನ್‌ಮನ್‌ ಆಟ: ದ್ವಿತೀಯ ಇನಿಂಗ್ಸ್‌ ಶುರು ಮಾಡಿದ ಆಂಗ್ಲರ ನಾಡಿನ ತಂಡ ಆರಂಭಿಕರಾದ ಅಲಸ್ಟೇರ್‌ ಕುಕ್‌ ಮತ್ತು ಮಾರ್ಕ್‌ ಸ್ಟೋನ್‌ಮನ್‌ (0) ವಿಕೆಟ್‌ ಬೇಗನೆ ಕಳೆದುಕೊಂಡಿತು.

ಇನಿಂಗ್ಸ್‌ನ ಮೂರನೇ ಓವರ್‌ ಬೌಲ್‌ ಮಾಡಿದ ಮಿಷೆಲ್‌ ಸ್ಟಾರ್ಕ್‌ ಆರನೇ ಎಸೆತದಲ್ಲಿ ಸ್ಟೋನ್‌ಮನ್‌ ಅವರನ್ನು ಎಲ್‌ಬಿಡಬ್ಲ್ಯು ಬಲೆಯಲ್ಲಿ ಬಂಧಿಸಿದರು. ನಾಲ್ಕನೇ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದ ಕುಕ್‌, 10ರನ್‌ ಗಳಿಸಿ ಸ್ಪಿನ್ನರ್‌ ನೇಥನ್‌ ಲಿಯಾನ್‌ಗೆ ವಿಕೆಟ್‌ ನೀಡಿದರು. ಜೇಮ್ಸ್‌ ವಿನ್ಸ್‌ (18) ಮತ್ತು ಡೇವಿಡ್‌ ಮಲಾನ್‌ (5) ಆಟ ಕೂಡ ನಡೆಯಲಿಲ್ಲ.

ಈ ಹಂತದಲ್ಲಿ ನಾಯಕ ರೂಟ್‌ (ಬ್ಯಾಟಿಂಗ್‌ 42; 124ಎ) ಮತ್ತು ವಿಕೆಟ್‌ ಕೀಪರ್‌ ಜಾನಿ ಬೇಸ್ಟೋವ್‌ (ಬ್ಯಾಟಿಂಗ್‌ 17; 45ಎ, 3ಬೌಂ) ತಾಳ್ಮೆಯ ಇನಿಂಗ್ಸ್‌ ಕಟ್ಟಿದರು. ಇವರು ಮುರಿಯದ ಐದನೇ ವಿಕೆಟ್‌ ಪಾಲುದಾರಿಕೆಯಲ್ಲಿ 25ರನ್‌ ಗಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ.

ಮಾರ್ಷ್‌ ಸಹೋದರರ ಮೋಡಿ: ಇದಕ್ಕೂ ಮುನ್ನ ಬ್ಯಾಟಿಂಗ್‌ ಆರಂಭಿಸಿದ ಕಾಂಗರೂಗಳ ನಾಡಿನ ತಂಡ ಸಹೋದರರಾದ ಶಾನ್‌ ಮಾರ್ಷ್‌ (156; 291ಎ, 18ಬೌಂ) ಮತ್ತು ಮಿಷೆಲ್‌ ಮಾರ್ಷ್‌ (101; 141ಎ, 15ಬೌಂ, 2ಸಿ) ಅವರ ಆಕರ್ಷಕ ಶತಕಗಳ ಬಲದಿಂದ ಮೊದಲ ಇನಿಂಗ್ಸ್‌ನಲ್ಲಿ ಬೃಹತ್‌ ಮೊತ್ತ ಪೇರಿಸಿತು.

ಇಂಗ್ಲೆಂಡ್‌ ಬೌಲರ್‌ಗಳ ತಾಳ್ಮೆಗೆ ಸವಾಲಾದ ಈ ಜೋಡಿ ಐದನೇ ವಿಕೆಟ್‌ಗೆ 169ರನ್‌ ಕಲೆಹಾಕಿತು.

ಮಿಷೆಲ್‌ ಮಾರ್ಷ್‌ ಔಟಾದ ನಂತರ ಶಾನ್‌ ಮಾರ್ಷ್‌, ಟಿಮ್‌ ಪೇನ್‌  ಜೊತೆಗೂಡಿ ತಂಡದ ಇನಿಂಗ್ಸ್‌ ಬೆಳೆಸಿದರು. ಆರನೇ ವಿಕೆಟ್‌ಗೆ 52ರನ್‌ ಸೇರಿಸಿದ್ದರಿಂದ ಮೊತ್ತ 590ರ ಗಡಿ ದಾಟಿತು. ಮಿಷೆಲ್‌ ಸ್ಟಾರ್ಕ್‌ (11) ಮತ್ತು ಪ್ಯಾಟ್‌ ಕಮಿನ್ಸ್‌ (ಔಟಾಗದೆ 24; 16ಎ, 4ಬೌಂ) ಕೂಡ ಅಬ್ಬರಿಸಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌: ಮೊದಲ ಇನಿಂಗ್ಸ್‌: 112.3 ಓವರ್‌ಗಳಲ್ಲಿ 346 ಮತ್ತು 46 ಓವರ್‌ಗಳಲ್ಲಿ 4 ವಿಕೆಟ್‌ಗೆ 93 (ಅಲಸ್ಟೇರ್‌ ಕುಕ್‌ 10, ಜೇಮ್ಸ್‌ ವಿನ್ಸ್‌ 18, ಜೋ ರೂಟ್‌ ಬ್ಯಾಟಿಂಗ್‌ 42, ಜಾನಿ ಬೇಸ್ಟೋವ್‌ ಬ್ಯಾಟಿಂಗ್‌ 17; ಮಿಷೆಲ್‌ ಸ್ಟಾರ್ಕ್‌ 17ಕ್ಕೆ1, ನೇಥನ್‌ ಲಿಯೊನ್‌ 31ಕ್ಕೆ2, ಪ್ಯಾಟ್‌ ಕಮಿನ್ಸ್‌ 12ಕ್ಕೆ1).

ಆಸ್ಟ್ರೇಲಿಯಾ: ಪ್ರಥಮ ಇನಿಂಗ್ಸ್‌: 193 ಓವರ್‌ಗಳಲ್ಲಿ 7 ವಿಕೆಟ್‌ಗೆ 649 ಡಿಕ್ಲೇರ್ಡ್‌ (ಶಾನ್‌ ಮಾರ್ಷ್‌ 156, ಮಿಷೆಲ್‌ ಮಾರ್ಷ್‌ 101, ಟಿಮ್‌ ಪೇನ್‌ ಔಟಾಗದೆ 38, ಮಿಷೆಲ್‌ ಸ್ಟಾರ್ಕ್‌ 11, ಪ್ಯಾಟ್‌ ಕಮಿನ್ಸ್‌ ಔಟಾಗದೆ 24; ಜೇಮ್ಸ್‌ ಆ್ಯಂಡರ್‌ಸನ್‌ 56ಕ್ಕೆ1, ಸ್ಟುವರ್ಟ್‌ ಬ್ರಾಡ್‌ 121ಕ್ಕೆ1, ಮೋಯಿನ್‌ ಅಲಿ 170ಕ್ಕೆ2, ಟಾಮ್‌ ಕರನ್‌ 82ಕ್ಕೆ1).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry