ಕಾರ್ಖಾನೆ ಜಪ್ತಿ ಮಾಡುವುದಾಗಿ ಬ್ಲ್ಯಾಕ್‌ಮೇಲ್

7
ಮಾನವ ಹಕ್ಕುಗಳ ಹೋರಾಟಗಾರರ ಸೋಗಿನಲ್ಲಿ ಸುಲಿಗೆಗೆ ಯತ್ನ

ಕಾರ್ಖಾನೆ ಜಪ್ತಿ ಮಾಡುವುದಾಗಿ ಬ್ಲ್ಯಾಕ್‌ಮೇಲ್

Published:
Updated:
ಕಾರ್ಖಾನೆ ಜಪ್ತಿ ಮಾಡುವುದಾಗಿ ಬ್ಲ್ಯಾಕ್‌ಮೇಲ್

ಬೆಂಗಳೂರು: ಮಾನವ ಹಕ್ಕುಗಳ ಹೋರಾಟಗಾರರ ಸೋಗಿನಲ್ಲಿ ವ್ಯಾನಿಟಿ ಬ್ಯಾಗ್ ತಯಾರಿಕಾ ಘಟಕಕ್ಕೆ ನುಗ್ಗಿ, ₹ 2 ಲಕ್ಷ ನೀಡುವಂತೆ ಘಟಕದ ಮಾಲೀಕ ಹಾಗೂ ಅವರ ಕುಟುಂಬ ಸದಸ್ಯರನ್ನು ಕೂಡಿ ಹಾಕಿದ್ದ ಕುಖ್ಯಾತ ರೌಡಿ ಸೇರಿ ಆರು ಮಂದಿಯನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಇಂದಿರಾನಗರದ ಸಂತೋಷ್ (34), ರೌಡಿಶೀಟರ್ ರಾಮಚಂದ್ರ (29), ಪ್ರವೀಣ್ (23), ಪುಟ್ಟರಾಜು (26), ಐಟಿಐ ವಿದ್ಯಾರ್ಥಿ ನಿಖಿಲ್ ಒಲಿವರ್ (23) ಹಾಗೂ ಹಲಸೂರಿನ ಕಾರ್ತಿಕ್ (28) ಎಂಬುವರನ್ನು ಬಂಧಿಸಿದ್ದೇವೆ. ಆರೋಪಿಗಳಿಂದ ಒಂದು ಕಾರು, ‘ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ’ ಹೆಸರಿನಲ್ಲಿದ್ದ ಗುರುತಿನ ಚೀಟಿಗಳು ಹಾಗೂ ವಿಸಿಟಿಂಗ್ ಕಾರ್ಡ್‌ಗಳನ್ನು ಜಪ್ತಿ ಮಾಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬ ಸಮೇತ ಹಲವು ವರ್ಷಗಳಿಂದ ಸಾರಾಯಿಪಾಳ್ಯದಲ್ಲಿ ನೆಲೆಸಿರುವ ಬಿಹಾರದ ಷಹಬಾಜ್, ಮನೆ ಪಕ್ಕದಲ್ಲೇ ಬ್ಯಾಗ್ ತಯಾರಿಕಾ ಘಟಕ ಹೊಂದಿದ್ದಾರೆ. ಅಲ್ಲಿ ಸ್ಥಳೀಯ ಇಬ್ಬರು ಯುವಕರು ಹಾಗೂ ಷಹಬಾಜ್‌ ಕುಟುಂಬ ಸದಸ್ಯರು ಕೆಲಸ ಮಾಡುತ್ತಾರೆ.

ಶನಿವಾರ ಸಂಜೆ 4.30ರ ಸುಮಾರಿಗೆ ‘ಹುಂಡೈ ಐ–20’ ಕಾರಿನಲ್ಲಿ ಅಲ್ಲಿಗೆ ತೆರಳಿದ್ದ ಆರೋಪಿಗಳು, ‘ನಾವು ಮಾನವ ಹಕ್ಕುಗಳ ಆಯೋಗದಿಂದ ಬಂದಿದ್ದೇವೆ. ನೀವು ಮಕ್ಕಳಿಂದ ದುಡಿಮೆ ಮಾಡಿಸಿಕೊಳ್ಳುತ್ತಿರುವುದಾಗಿ ‌ದೂರು ಬಂದಿದೆ’ ಎಂದು ಹೇಳಿದ್ದಾರೆ. ಆಗ ಷಹಬಾಜ್, ‘ನಮ್ಮ ಘಟಕದಲ್ಲಿ ಬಾಲ ಕಾರ್ಮಿಕರು ಯಾರೂ ಇಲ್ಲ’ ಎಂದಿದ್ದಾರೆ. ಸ್ವಲ್ಪ ಸಮಯದ ನಂತರ ಆರೋಪಿಗಳು ಘಟಕದ ಬಾಗಿಲು ಮುಚ್ಚಿ ಕಿರುಚಾಡದಂತೆ ಎಚ್ಚರಿಸಿದ್ದಾರೆ.

ಹೀಗೆ, ರಾತ್ರಿ 7.30ರವರೆಗೂ ಕೂರಿಸಿಕೊಂಡು ಕೊನೆಗೆ ₹ 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದರೆ ಘಟಕಕ್ಕೆ ಬೀಗ ಜಡಿದು, ಎಲ್ಲ ಬ್ಯಾಗ್‌ಗಳನ್ನೂ ಜಪ್ತಿ ಮಾಡುವುದಾಗಿಯೂ ಬೆದರಿಸಿದ್ದಾರೆ. ಮೂರು ತಾಸು ಕಳೆದರೂ ಘಟಕದಿಂದ ಯಾರೂ ಹೊರಬಾರದಿದ್ದಾಗ ಅನುಮಾನಗೊಂಡ ಸ್ಥಳೀಯರು, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

‘ಆಯೋಗದವರೇ ದಾಳಿ ನಡೆಸಿರಬಹುದೆಂದು ಸ್ಥಳಕ್ಕೆ ಹೋದೆವು. ಆರೋಪಿಗಳು ಸಹ ಆರಂಭದಲ್ಲಿ ತಮ್ಮನ್ನು ಆಯೋಗದ ಸದಸ್ಯರು ಎಂದೇ ಹೇಳಿಕೊಂಡರು. ಗುರುತಿನ ಚೀಟಿಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂಬುದು ಗೊತ್ತಾಯಿತು. ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡರು’ ಎಂದು ಸಂಪಿಗೆಹಳ್ಳಿ ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry