‘ಸಮ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯ ಅಗತ್ಯ’

7

‘ಸಮ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯ ಅಗತ್ಯ’

Published:
Updated:
‘ಸಮ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯ ಅಗತ್ಯ’

ಬೆಂಗಳೂರು: ‘ನನಗೆ ವಚನ ಚಳವಳಿ ಮೇಲೆ ಅದಮ್ಯ ನಂಬಿಕೆ ಇದೆ. ದೇಶಕ್ಕೆ ಅಗತ್ಯವಿರುವ, ಸಮ ಸಮಾಜ ನಿರ್ಮಾಣದ ಆಶಯವನ್ನು ಹೊಂದಿರುವ ಏಕೈಕ ಚಳವಳಿ ಇದು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌. ಜಿ.ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.

ಭಾನುವಾರ ಇಲ್ಲಿ ನಡೆದ ‘ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಚನಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ನಮ್ಮೊಳಗಿನ ಗೊಂದಲ, ತಾರತಮ್ಯ, ಅಸಮಾನತೆ, ಬೇಧಭಾವಗಳು ನಿವಾರಣೆ ಆಗುತ್ತವೆ.  ವಚನಗಳನ್ನು ಓದುವ ಮೂಲಕ ನಮ್ಮಲ್ಲಿನ ಕೊಳಕನ್ನು ತೊಳೆದುಕೊಳ್ಳಬೇಕು’ ಎಂದರು.

ಧರ್ಮವನ್ನು ರಕ್ಷಿಸುವವರನ್ನು ಧರ್ಮವೇ ರಕ್ಷಿಸುತ್ತದೆ ಎಂಬ ನಾಣ್ಣುಡಿ ಬಲು ಅಪಾಯಕಾರಿ. 90ರಷ್ಟು ದುಡಿಯುವ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ತುಳಿಯುತ್ತಿರುವುದೇ ಧರ್ಮ. ಶಾಸ್ತ್ರಗಳು, ಶಸ್ತ್ರಗಳನ್ನು ಹಿಡಿತದಲ್ಲಿಟ್ಟುಕೊಂಡಿರುತ್ತವೆ ಎಂದು ಹಿರಿಯ ಪತ್ರಕರ್ತ ರಂಜಾನ್‌ ದರ್ಗಾ ಬೇಸರ ವ್ಯಕ್ತಪಡಿಸಿದರು.

ಬಸವ ಕಲ್ಯಾಣದ ಸಿದ್ದರಾಮ ಬೆಲ್ದಾಳ ಶರಣರು ಮಾತನಾಡಿ, ‘ನಮಗೆ ಸುಭದ್ರ ಮತ್ತು ಸಮೃದ್ಧ ಭಾರತ ಬೇಕು. ಬಸವಣ್ಣನವರು ಪ್ರತಿಪಾದಿಸಿದ ಕಾಯಕವೇ ಕೈಲಾಸ ತತ್ವವನ್ನು ಪಾಲಿಸಿದರೆ ದೇಶ ಸಮೃದ್ಧವಾಗುತ್ತದೆ’ ಎಂದರು.

‘ಬಸವಣ್ಣನವರ ಅನುಯಾಯಿಗಳನ್ನು ರಾಷ್ಟ್ರಮಟ್ಟದಲ್ಲಿ ಸಂಘಟಿಸುವುದು ಮತ್ತು ಅವರ ಆಶಯಗಳನ್ನು ಅನುಷ್ಠಾನಗೊಳಿಸುವುದು ಈ ಒಕ್ಕೂಟದ ಮುಖ್ಯ ಉದ್ದೇಶ. ಮಹಿಳೆಯರಿಗೆ ರಕ್ಷಣೆ ಹಾಗೂ ಅಂತರಧರ್ಮ, ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುತ್ತೇವೆ’ ಎಂದು ಒಕ್ಕೂಟದ ಗೌರವಾಧ್ಯಕ್ಷ ಸಂಗಮೇಶ ಬಾದವಾಡಗಿ ತಿಳಿಸಿದರು.

ಒಕ್ಕೂಟದ ವೆಬ್‌ಸೈಟ್‌ ಅನ್ನು ನಿವೃತ್ತ ಐಎಎಸ್‌ ಅಧಿಕಾರಿ ಮಲ್ಲಿಕಾರ್ಜುನ ದ್ಯಾಬೇರಿ ಉದ್ಘಾಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry