ಗಂಡನ ಬಿಡಲು ಅತ್ಯಾಚಾರದ ಕತೆ!

7
ತನಿಖೆಯಿಂದ ಬಯಲಾಯ್ತು ನವವಿವಾಹಿತೆಯ ಸಂಚು

ಗಂಡನ ಬಿಡಲು ಅತ್ಯಾಚಾರದ ಕತೆ!

Published:
Updated:

ಬೆಂಗಳೂರು: ಇಷ್ಟವಿಲ್ಲದಿದ್ದರೂ ಪೋಷಕರ ಬಲವಂತಕ್ಕೆ ಮಣಿದು ಮದುವೆಯಾಗಿದ್ದ 20 ವರ್ಷದ ನವವಿವಾಹಿತೆ, ಗಂಡನಿಂದ ದೂರವಾಗಲು ಸಾಮೂಹಿಕ ಅತ್ಯಾಚಾರದ ಕತೆ ಹೆಣೆದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಶುಕ್ರವಾರ ರಾತ್ರಿ 9.30ರ ಸುಮಾರಿಗೆ ತಂದೆ ಜತೆ ಬ್ಯಾಟರಾಯನಪುರ ಠಾಣೆಗೆ ತೆರಳಿದ್ದ ಆ ಮಹಿಳೆ, ‘ನನ್ನನ್ನು ಯಾರೋ ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿದರು’ ಎಂದು ದೂರು ಕೊಟ್ಟಿದ್ದರು. ವಿಶೇಷ ತಂಡ ರಚಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ, ಇದು ಮಹಿಳೆಯೇ ಹೆಣೆದಿರುವ ಕಟ್ಟು ಕತೆ ಎಂಬುದು ಗೊತ್ತಾಗಿದೆ.

‘ನನಗೆ ಈಗಲೇ ಮದುವೆ ಇಷ್ಟವಿರಲಿಲ್ಲ. ಪೋಷಕರ ಬಲವಂತಕ್ಕೆ ಮೂರು ತಿಂಗಳ ಹಿಂದೆ ಯಾರನ್ನೋ ಮದುವೆಯಾದೆ. ಗಂಡ, ಅತ್ತೆ–ಮಾವನ ಜತೆ ಹೊಂದಿಕೊಂಡು ಹೋಗಲು ಆಗಲಿಲ್ಲ. ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಕತೆ ಕಟ್ಟಿದರೆ ಗಂಡ ತಾನಾಗಿಯೇ ಮನೆಯಿಂದ ಹೊರ ಹಾಕುತ್ತಾನೆ. ನಂತರ ನಾನು

ತವರು ಮನೆ ಸೇರಬಹುದು ಎಂದು ನಿರ್ಧರಿಸಿ ಈ ರೀತಿ ಸುಳ್ಳು ದೂರು ಕೊಟ್ಟೆ’ ಎಂದು ಮಹಿಳೆ ಹೇಳಿಕೆ ನೀಡಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ಗೃಹಿಣಿ ಕಟ್ಟಿದ ಕತೆ: ‘ಶುಕ್ರವಾರ ಬೆಳಿಗ್ಗೆ 9.40ಕ್ಕೆ ನಾನು ಬ್ಯಾಟರಾಯನಪುರದ ಟಿಂಬರ್‌ಯಾರ್ಡ್‌ ಲೇಔಟ್‌ ನಲ್ಲಿರುವ ಶಾಲಿನಿ ಗಾರ್ಮೆಂಟ್ಸ್‌ ಮುಂದೆ ನಡೆದು ಹೋಗುತ್ತಿದ್ದೆ. ಈ ವೇಳೆ ರಸ್ತೆ ಬದಿ ನಿಂತಿದ್ದ ಒಬ್ಬಾತ, ‘ನಿಮ್ಮನ್ನು ಯಾರೋ ಕರೆಯುತ್ತಿದ್ದಾರೆ ನೋಡಿ’ ಎಂದು ಹೇಳಿದ. ನಾನು ಅತ್ತ ಕಡೆ ತಿರುಗುತ್ತಿದ್ದಂತೆಯೇ ಬಿಳಿ ಬಣ್ಣದ ಮಾರುತಿ ವ್ಯಾನ್ ನನ್ನ ಪಕ್ಕಕ್ಕೆ ಬಂದು ನಿಂತಿತು.’

‘ನಾನು ವಾಪಸ್ ತಿರುಗುತ್ತಿದ್ದಂತೆಯೇ ಯಾರೋ ಬಾಯಿ ಅದುಮಿ ವ್ಯಾನ್‌ನೊಳಗೆ ಎಳೆದುಕೊಂಡರು. ರಸ್ತೆ ಬದಿ ನನ್ನನ್ನು ಮಾತನಾಡಿಸಿದವನು ಸೇರಿದಂತೆ ನಾಲ್ಕು ಮಂದಿ ವಾಹನದ ಒಳಗಿದ್ದರು. ಕೂಗಾಡಿದರೆ ಕೊಲೆ ಮಾಡುವುದಾಗಿ ಚಾಕು ತೋರಿಸಿ ಬೆದರಿಸಿದ ಅವರು, ನಂತರ ಕೈ–ಕಾಲುಗಳನ್ನು ಕಟ್ಟಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದರು. ಆ ಸ್ಥಳ ಯಾವುದೆಂದು ನನಗೆ ಗೊತ್ತಿಲ್ಲ.’

‘ಅಲ್ಲಿ ನನ್ನನ್ನು ವಾಹನದಿಂದ ಕೆಳಗೆ ತಳ್ಳಿ, ಚಿನ್ನದ ಉಂಗುರ, ಮಾಂಗಲ್ಯ ಸರ ಹಾಗೂ ಕಿವಿ ಓಲೆಗಳನ್ನು ಬಿಚ್ಚಿಕೊಂಡರು. ನಂತರ ಮೂರು ಮಂದಿ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರೆ, ಒಬ್ಬಾತ ನನ್ನ ಕೈ–ಕಾಲುಗಳನ್ನು ಗಟ್ಟಿಯಾಗಿ ಹಿಡಿದು ಕೃತ್ಯಕ್ಕೆ ಸಹಕರಿಸಿದ. ಇದೇ ರೀತಿ ರಾತ್ರಿ 8 ಗಂಟೆವರೆಗೂ ನನ್ನ ಮೇಲೆ ದೌರ್ಜನ್ಯ ಎಸಗಿದ

ಅವರು, ಕೊನೆಗೆ ಕಣ್ಣಿಗೆ ಬಟ್ಟೆ ಕಟ್ಟಿ ಕಲಾಸಿಪಾಳ್ಯ ಬಸ್ ನಿಲ್ದಾಣದ ಬಳಿ ಬಿಟ್ಟು ಹೋದರು. ಅಲ್ಲಿಂದ ಆಟೊ ಹಿಡಿದು ಮನೆಗೆ ತೆರಳಿದೆ. ಎಲ್ಲರೂ 25 ರಿಂದ 30 ವರ್ಷ ವಯೋಮಾನದವರು’ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದರು.

ದೂರಿನ ಅನ್ವಯ ಬ್ಯಾಟರಾಯನಪುರ ಪೊಲೀಸರು ಅಪಹರಣ (ಐಪಿಸಿ 363), ಸಾಮೂಹಿಕ ಅತ್ಯಾಚಾರ (376ಬಿ) ಹಾಗೂ ದರೋಡೆ (397) ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡರು. ಆರೋಪಿಗಳ ಪತ್ತೆಗೆ ಡಿಸಿಪಿ ಎಂ.ಎನ್.ಅನುಚೇತ್ ಅವರು ಕೆಂಗೇರಿ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು.

ರಹಸ್ಯ ಬಯಲಾಗಿದ್ದು ಹೀಗೆ: ‘ಅಪಹರಣಕಾರರು ರಾತ್ರಿ 8 ಗಂಟೆಗೆ ಕಲಾಸಿಪಾಳ್ಯ ಬಸ್‌ ನಿಲ್ದಾಣದ ಬಳಿ ಬಿಟ್ಟು ಹೋದರು ಎಂದು ಮಹಿಳೆ ದೂರಿನಲ್ಲಿ ಹೇಳಿದ್ದರು. ನಿಲ್ದಾಣದ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಆ ಸಮಯದಲ್ಲಿ ಅಂಥ ಯಾವುದೇ ಪ್ರಸಂಗ ನಡೆದಿಲ್ಲ ಎಂಬುದು ಖಚಿತವಾಯಿತು. ನಂತರ ಮಹಿಳೆಯ ಗೆಳತಿಯರು ಹಾಗೂ ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದೆವು. ಮಧ್ಯಾಹ್ನ 1 ಗಂಟೆಗೆ ಇವರನ್ನು ನೋಡಿದ್ದಾಗಿ ಸಂಬಂಧಿಯೊಬ್ಬರು ಹೇಳಿಕೆ ಕೊಟ್ಟರು. ಆಗ ಇದೊಂದು ಸುಳ್ಳು

ಪ್ರಕರಣ ಎಂದು ಸ್ಪಷ್ಟವಾಯಿತು’ ಎಂದು ಡಿಸಿಪಿ ಅನುಚೇತ್ ತಿಳಿಸಿದರು.

***

ಒಡವೆ ಗೆಳತಿಗೆ ಕೊಟ್ಟಿದ್ದರು

ತೆಲುಗು ಸಿನಿಮಾವೊಂದನ್ನು ನೋಡಿ ಈ ರೀತಿ ಸಂಚು ರೂಪಿಸಿದ್ದ ಮಹಿಳೆ, ಹಿಂದಿನ ದಿನವೇ ತಮ್ಮ ಮೈಮೇಲಿನ ಒಡವೆಗಳನ್ನು ಗೆಳತಿಗೆ ಕೊಟ್ಟು ಬಂದಿದ್ದರು. ಅಲ್ಲದೆ, ತಮ್ಮ ಯೋಜನೆಯನ್ನು ಗೆಳತಿಗೂ ವಿವರಿಸಿದ್ದರು. ಈಗ ಇಬ್ಬರನ್ನೂ ಠಾಣೆಗೆ ಕರೆಸಿ ಬುದ್ಧಿ ಹೇಳಿದ್ದೇವೆ. ಬಲವಂತವಾಗಿ ಮದುವೆ ಮಾಡಿದ್ದ ಅವರ ಪೋಷಕರಿಗೂ ತಿಳಿ ಹೇಳಿದ್ದೇವೆ ಎಂದು ಪೊಲೀಸರು ತಿಳಿಸಿದರು.

***

ಸುಳ್ಳು ದೂರು ಕೊಟ್ಟವರ ವಿರುದ್ಧ ಕ್ರಮಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಪೊಲೀಸರ ಸಮಯ ವ್ಯರ್ಥ ಮಾಡಿದ್ದಕ್ಕೆ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ

-ಎಂ.ಎನ್.ಅನುಚೇತ್, ಡಿಸಿಪಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry