ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಂಗ್ರೆಸ್ಸಿಗರು ಮನೆಗಳ್ಳರು, ಬಿಜೆಪಿಯವರು ಮನೆಮುರುಕರು‘

Last Updated 8 ಜನವರಿ 2018, 5:16 IST
ಅಕ್ಷರ ಗಾತ್ರ

ಮೈಸೂರು: ಕಾಂಗ್ರೆಸ್‌ನವರು ಮನೆಗಳ್ಳರು, ಬಿಜೆಪಿಯವರು ಮನೆಮುರುಕರು’ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ ವ್ಯಂಗ್ಯವಾಡಿದರು. ನಗರದಲ್ಲಿ ಭಾನುವಾರ ನಡೆದ ಸಿಪಿಐ 12ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಹಣವನ್ನೇ ಕದಿಯುವ ಮೂಲಕ ಕಾಂಗ್ರೆಸ್ಸಿಗರು ಮನೆಗಳ್ಳರಾದರು. ದೇಶವನ್ನೇ ಮಾರುವ ಮೂಲಕ ಬಿಜೆಪಿಯವರು ಮನೆಮುರುಕರಾಗುತ್ತಿದ್ದಾರೆ. ಜನರ ಹಣವನ್ನು ಕಾರ್ಪೊರೇಟ್ ಕಂಪನಿಗಳಿಗೆ ಸಾಲ ನೀಡಿ ಮನ್ನಾ ಮಾಡುವುದು ದೊಡ್ಡತನವೇ? ಕಾರ್ಮಿಕ, ಕೃಷಿ ವಿರೋಧಿ ನೀತಿ ಜಾರಿಗೊಳಿಸುವುದು ಸೂಕ್ತವೇ? ಠೇವಣಿಗಳನ್ನು ಮುರಿದುಕೊಳ್ಳುವುದು ದೇಶದ್ರೋಹವಲ್ಲವೇ’ ಎಂದು ಪ್ರಶ್ನಿಸಿದರು.

ಕಪ್ಪು ಹಣ ಹೊಂದಿರುವ ಮೋದಿ: ‘ಪನಾಮಾ ಪೇಪರ್ಸ್‌’ ಮೂಲಕ ಸಿಕ್ಕಿರುವ ಪಟ್ಟಿಯಲ್ಲಿ ಕಪ್ಪು ಹಣ ಹೊಂದಿರುವ ದೇಶದ 500 ಮಂದಿಯ ಹೆಸರಿದೆ. ಅದನ್ನು ಉದ್ದೇಶಪೂರ್ವಕವಾಗಿ ಬಹಿರಂಗಪಡಿಸುತ್ತಿಲ್ಲ. ಏಕೆಂದರೆ, ಆ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರೂ ಇದೆ’ ಎಂದು ಆರೋಪಿಸಿದರು.

‘ಕಪ್ಪು ಹಣವನ್ನು ಭಾರತಕ್ಕೆ ತರುತ್ತೇನೆ; ಎಲ್ಲರ ಖಾತೆಗಳಿಗೂ ₹ 15 ಲಕ್ಷ ನೀಡಲಾಗುವುದು’ ಎಂದು ಭರವಸೆ ನೀಡಿದ ಮೋದಿ, ಸುಮ್ಮನೇ ಇರಲು ಇದೇ ಮುಖ್ಯ ಕಾರಣ. ಯಾರ ಕಪ್ಪು ಹಣವೂ ಬ್ಯಾಂಕುಗಳಲ್ಲಿ ಇರಲಿಲ್ಲ. ಬ್ಯಾಂಕಿನಲ್ಲಿದ್ದ ಹಣವೆಲ್ಲಾ ಜನಸಾಮಾನ್ಯರ ದುಡಿಮೆಯ ಫಲ. ಕಪ್ಪು ಹಣ ಯಾರ ಬಳಿಯೂ ಇರುವುದಿಲ್ಲ; ಅದನ್ನು ರಿಯಲ್‌ ಎಸ್ಟೇಟ್‌ನಲ್ಲಿ ತೊಡಗಿಸಲಾಗಿರುತ್ತದೆ. ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಧೈರ್ಯ ಮೋದಿಗಿಲ್ಲ’ ಎಂದು ಕುಟುಕಿದರು.

‘ದೇಶದ ಯಾವ ದೊಡ್ಡ ಉದ್ದಿಮೆಯೂ ಸ್ವಂತ ಹಣದಿಂದ ನಡೆಯುತ್ತಿಲ್ಲ. ಜನರ ಬೆವರಿನ ಹಣವನ್ನು ಉದ್ಯಮಿಗಳಿಗೆ ಸಾಲ ನೀಡಲಾಗಿದೆ. ಸಾವಿರಾರು ಕೋಟಿ ರೂಪಾಯಿಗಳನ್ನು ಸಾಲ ಪಡೆದಿರುವ ಈ ಉದ್ಯಮಗಳು ಸೇವೆ ನೀಡುತ್ತಿರುವುದಾಗಿ ಹೇಳಿಕೊಳ್ಳುತ್ತಿವೆ. ಅದಕ್ಕೆ ಜಿಯೊ ಹಾಗೂ ರಿಲಯನ್ಸ್ ದೊಡ್ಡ ಉದಾಹರಣೆ’ ಎಂದರು.

‘ಭಾರತೀಯ ರೈಲ್ವೆಗೆ ಡೀಸೆಲ್‌ ಸರಬರಾಜು ಮಾಡುತ್ತಿದ್ದ ಇಂಡಿಯನ್ ಆಯಿಲ್‌ ಕಾರ್ಪೊರೇಷನ್‌ ಬದಲಿಗೆ, ರಿಲಯನ್ಸ್‌ಗೆ ಈಗ ಡೀಸೆಲ್‌ ನೀಡುವ ಗುತ್ತಿಗೆ ನೀಡಲಾಗಿದೆ. ಇದಕ್ಕಿಂತ ದೊಡ್ಡ ದೇಶ ದ್ರೋಹ ಬೇರಿಲ್ಲ. ದೇಶವನ್ನು ಖಾಸಗಿ ವ್ಯಕ್ತಿಗಳಿಗೆ ಮಾರುವ ಸಂಚು ಇದು’ ಎಂದು  ಕಿಡಿ ಕಾರಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್‌.ಆರ್‌.ಶೇಷಾದ್ರಿ ಮಾತನಾಡಿ, ‘ಮೈಸೂರಿನಲ್ಲಿರುವ ಅನೇಕ ಕಾರ್ಖಾನೆಗಳನ್ನು ಪಿತೂರಿ ಮಾಡಿ ಮುಚ್ಚಿಸಲಾಗಿದೆ. ಕಾರ್ಖಾನೆ ಮರು ತೆರೆಯದಂತೆ ಆಯಾ ಕಾರ್ಖಾನೆಗಳ ಮಾಲೀಕರು ಸಂಚು ರೂಪಿಸುತ್ತಿರುತ್ತಾರೆ. ಅವರಿಗೆ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳು ಪೂರಕವಾಗಿವೆ’ ಎಂದರು. ಎಐಟಿಯುಸಿ ಜಿಲ್ಲಾ ಅಧ್ಯಕ್ಷ ರಾಜು ಅಧ್ಯಕ್ಷತೆ ವಹಿಸಿದ್ದರು. ಎಐಟಿಯುಸಿ ಕಾರ್ಯಾಧ್ಯಕ್ಷ ಎಚ್‌.ಕೆ.ರಾಮಚಂದ್ರಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT