ದಿನಗಣನೆ ಶುರು; ಮಕ್ಕಳಾಟಕ್ಕೆ ಮೈದಾನ ಸಜ್ಜು..!

7

ದಿನಗಣನೆ ಶುರು; ಮಕ್ಕಳಾಟಕ್ಕೆ ಮೈದಾನ ಸಜ್ಜು..!

Published:
Updated:
ದಿನಗಣನೆ ಶುರು; ಮಕ್ಕಳಾಟಕ್ಕೆ ಮೈದಾನ ಸಜ್ಜು..!

ವಿಜಯಪುರ: ವಿಜಯಪುರದ ಆರಾಧ್ಯದೈವ ಸಿದ್ಧೇಶ್ವರರ ಸಂಕ್ರಮಣದ ಜಾತ್ರೆಗೀಗ ಶತಮಾನೋತ್ಸವದ ಸಂಭ್ರಮ. ಜ 11ರಿಂದ ಜಾತ್ರೆ ಆರಂಭಗೊಳ್ಳಲಿದ್ದು ದಿನಗಣನೆ ಶುರುವಾಗಿದೆ. ಸಿದ್ಧೇಶ್ವರ ಸಂಸ್ಥೆ ಜಾತ್ರೆಯ ಮೆರುಗು ಹೆಚ್ಚಿಸಲು ಹಲವು ವಿಭಿನ್ನ ಕಾರ್ಯಕ್ರಮ ಆಯೋಜಿಸಿದ್ದರೆ, ಜಾತ್ರೆಯ ಸಂದರ್ಭ ನೆರೆಯುವ ಅಪಾರ ಮಕ್ಕಳ ಮನತಣಿಸಿ, ಮನಸ್ಸಿಗೆ ಖುಷಿ ನೀಡಲು ಆಟೋಟಗಳ ಪಾರ್ಕ್‌ ದೇಗುಲದಿಂದ ಅನತಿ ದೂರದಲ್ಲಿ ನಿರ್ಮಾಣಗೊಳ್ಳುತ್ತಿದೆ.

ಜಾತ್ರೆ ಸಮೀಪಿಸಿದಂತೆ ಮಕ್ಕಳ ಆಟೋಟಗಳ ಸಾಮಗ್ರಿ ಹೊಂದಿರುವ ತಂಡಗಳು ವಿಜಯಪುರಕ್ಕೆ ಬರುತ್ತಿರುವುದು ಹೆಚ್ಚುತ್ತಿದೆ. ಈಗಾಗಲೇ ಎರಡ್ಮೂರು ತಂಡಗಳು ನಗರದಲ್ಲಿ ಬೀಡುಬಿಟ್ಟಿದ್ದು, ಪಾಟೀಲ ಹೋಂಡಾ ಶೋ ರೂಂ ಹಿಂಬದಿಯ ವಿಶಾಲ ಮೈದಾನದಲ್ಲಿ ಮಕ್ಕಳ ಆಟೋಟಗಳ ಬೃಹತ್‌ ಸಾಮಗ್ರಿ ಅಳವಡಿಸುವಲ್ಲಿ ನಿರತರಾಗಿರುವ ದೃಶ್ಯಾವಳಿ ಭಾನುವಾರ ಗೋಚರಿಸಿತು.

ಗುಡಿಯಿಂದ ತುಸು ದೂರದಲ್ಲೇ ಮನರಂಜನಾ ಪಾರ್ಕ್‌ ನಿರ್ಮಾಣಗೊಳ್ಳುತ್ತಿದೆ. ಜಾಯಿಂಟ್‌ ವ್ಹೀಲ್‌ ಹೆಸರಿನ ಬೃಹತ್ ಎಲೆಕ್ಟ್ರಾನಿಕ್‌ ರಾಟೆ ಜೋಡಿಸಲಾಗಿದೆ. ಪ್ರಾಯೋಗಿಕ ತಿರುಗಿಸುವಿಕೆ ಆರಂಭಗೊಳ್ಳುವುದು ಬಾಕಿಯಿದೆ.

ಟೋರಾ ಟೋರಾ, ಬ್ರೇಕ್ ಡ್ಯಾನ್ಸ್ ಹೆಸರಿನ ನೆಲಮಟ್ಟದ ತಿರುಗಿಸುವಿಕೆಯ ಬೃಹತ್ ಆಟೋಟ ಸಾಮಗ್ರಿ ಅಳವಡಿಸಲಾಗುತ್ತಿದೆ. ಇದರ ಸಮೀಪದಲ್ಲೇ ಜಾದು ಪ್ರದರ್ಶನಕ್ಕೆ ವೇದಿಕೆಯೂ ಸಿದ್ಧವಾಗಿದೆ. ಕುತೂಹಲಭರಿತ ಮಕ್ಕಳು ಸ್ಥಳಕ್ಕೆ ಭೇಟಿ ನೀಡಿ ಎಂದಿನಿಂದ ಆಟಗಳು ಆರಂಭಗೊಳ್ಳುತ್ತವೆ ಎಂಬುದನ್ನು ಕೇಳುತ್ತಿರುವುದು ಸಹಜವಾಗಿದೆ.

‘ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬಾಗೇವಾಡಿಯ ಲಕ್ಷ್ಮೀ ಜಾತ್ರೆ ಮುಗಿಸಿಕೊಂಡು ನೇರವಾಗಿ ಇಲ್ಲಿಗೆ ಬಂದಿದ್ದೇವೆ. ಎರಡ್ಮೂರು ದಿನದಿಂದ ನಮ್ಮ ಆಟಿಕೆ ಸಾಮಗ್ರಿ ಜೋಡಿಸುವಲ್ಲಿ ನಿರತರಾಗಿದ್ದೇವೆ’ ಎಂದು ಮಹಾದೇವ ಚವ್ಹಾಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಚಿರಕಿಗಾಣ, ಹೀರಾಲಾಲ್‌–ಪನ್ನಾಲಾಲ್‌ (ಕತ್ತೆಯ ಆಟ), ಸಾಲಂಬು ಆಟೋಟ ಸಾಮಗ್ರಿ ನಮ್ಮಲ್ಲಿವೆ. ಈ ಮೂರನ್ನು ಪ್ರತ್ಯೇಕವಾಗಿ ಜೋಡಿಸುತ್ತಿದ್ದೇವೆ. 15–16 ಮಂದಿಯ ತಂಡ ಇಲ್ಲೇ ಬೀಡು ಬಿಟ್ಟಿದ್ದೇವೆ. ಇದು ಎರಡನೇ ಜಾತ್ರೆ. ಹೋದ ವರ್ಷ ಭರ್ಜರಿ ವಹಿವಾಟು ನಡೆದಿತ್ತು.

ಹೊಸ ವರ್ಷ ಆರಂಭವಾಗಿದೆ. ಚಲೋ ವಹಿವಾಟು ನಡೆಯಲಿದೆ. ಕೈಗೆ ಸಾಕಷ್ಟು ರೊಕ್ಕ ಸಿಗಲಿವೆ ಎಂಬ ನಿರೀಕ್ಷೆಯಿಂದ ಇಲ್ಲಿಗೆ ಬಂದಿದ್ದೇವೆ. ರಾಜ್ಯದ ಎಲ್ಲೆಡೆ ತಿರುಗಾಡುತ್ತೇವೆ. ಕನಿಷ್ಠ 15 ದಿನ ವಹಿವಾಟು ನಡೆಸುವ ಆಶಯ ನಮ್ಮದು.

ವರ್ಷದಲ್ಲಿ ರಾಜ್ಯದ ವಿವಿಧೆಡೆಯ 15ರಿಂದ 18 ಜಾತ್ರೆಗಳಲ್ಲಿ ನಾವು ಭಾಗಿಯಾಗುತ್ತೇವೆ. ಇದು ದೊಡ್ಡ ಜಾತ್ರೆ. ಹೊರ ರಾಜ್ಯಗಳಿಗೂ ತೆರಳುತ್ತೇವೆ. ಪುಣೆ, ಕೊಲ್ಹಾಪುರ, ಕರಾಡ ಜಾತ್ರೆಗಳಲ್ಲೂ ಪಾಲ್ಗೊಂಡಿದ್ದೇವೆ. ಆದರೆ ಇಲ್ಲಿ ನಮ್ಮ ನಿರೀಕ್ಷೆಯೂ ಹೋದ ವರ್ಷಕ್ಕಿಂತ ಈ ಬಾರಿ ದುಪ್ಪಟ್ಟುಗೊಂಡಿದೆ’ ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

* * 

15 ವರ್ಷದಿಂದ ಜಾತ್ರೆಗಳಲ್ಲಿ ಭಾಗಿಯಾಗಿ ಮಕ್ಕಳ ಆಟೋಟ ಸಾಮಗ್ರಿ ಅಳವಡಿಸಿ ವಹಿವಾಟು ನಡೆಸುತ್ತಿದ್ದೇವೆ. ಸಿದ್ಧೇಶ್ವರ ಜಾತ್ರೆಯಲ್ಲಿ ಭಾಗಿಯಾಗಿರುವುದು ಎರಡನೇ ಬಾರಿ

ಮಹಾದೇವ ಚವ್ಹಾಣ, ಮಕ್ಕಳ ಆಟೋಟ ಸಾಮಗ್ರಿ ಮಾಲೀಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry