ಮಡಿಕೇರಿಯಲ್ಲೊಂದು ‘ರೈತ ಸಂತೆ’

7

ಮಡಿಕೇರಿಯಲ್ಲೊಂದು ‘ರೈತ ಸಂತೆ’

Published:
Updated:
ಮಡಿಕೇರಿಯಲ್ಲೊಂದು ‘ರೈತ ಸಂತೆ’

ಮಡಿಕೇರಿ: ಕೊಡಗು ಜಿಲ್ಲೆಯ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ತಾಲ್ಲೂಕು ಎಪಿಎಂಸಿ ಆಡಳಿತ ಮಂಡಳಿಯ ಯೋಜನೆ ಸಾಕಾರಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಅದುವೇ ‘ರೈತ ಸಂತೆ’.‌ ರೈತ ಸಂತೆಯೂ, ನಗರದ ಕೆಎಸ್‌ಆರ್‌ಟಿಸಿ ಡಿಪೊ ಬಳಿಯಿರುವ ಎಪಿಎಂಸಿ ಕೇಂದ್ರದಲ್ಲಿ ನಡೆಯಲಿದ್ದು, ಇದೇ 12ಕ್ಕೆ ಚಾಲನೆ ಸಿಗಲಿದೆ.

ರೈತರು ಹಣ್ಣು, ತರಕಾರಿ ಅಲ್ಲದೆ, ಜಾನುವಾರು, ಕೋಳಿ, ಹಂದಿ, ಆಡು–ಕುರಿ, ಮೀನು ಮಾರಾಟಕ್ಕೂ ಅವಕಾಶವಿದೆ. ರೈತರು ಮುಕ್ತವಾಗಿ ವ್ಯಾಪಾರ, ವಹಿವಾಟು ನಡೆಸಬಹುದು. ಪ್ರತಿ ಶುಕ್ರವಾರ ರೈತಸಂತೆ ನಡೆಯಲಿದೆ. ಎಪಿಎಂಸಿಯ 2 ಎಕರೆ ಜಾಗದಲ್ಲಿ ರೈತ ಸಂತೆಗೆ ಪೂರಕವಾಗಿ ಕಟ್ಟಡಗಳು ನಿರ್ಮಾಣಗೊಂಡಿದೆ. ಶೌಚಾಲಯ, ಕುಡಿಯುವ ನೀರಿನ ಘಟಕವಿದೆ.

ಮತ್ತೊಂದು ಮಾರುಕಟ್ಟೆ: ‌ನಗರದಲ್ಲಿ ಈಗಾಗಲೇ ಶುಕ್ರವಾರ ಮಹದೇವ ಪೇಟೆಯಲ್ಲಿ ನಡೆಯುವ ಸಾರ್ವತ್ರಿಕ ಸಂತೆ ಜನಜಂಗುಳಿಯಿಂದ ಕೂಡಿರುತ್ತದೆ. ಇಲ್ಲಿ, ಪುಟ್ಟಸ್ಥಳದಲ್ಲಿ ರೈತರು ಉತ್ಪನ್ನಗಳನ್ನು ಮಾರಾಟ ಮಾಡ ಬೇಕಿತ್ತು. ಈಗ ವಿಶಾಲ ಪ್ರದೇಶದಲ್ಲಿ ಸಂತೆ ನಡೆವ ಕಾರಣಕ್ಕೆ ಗ್ರಾಹಕರು ಹಾಗೂ ವ್ಯಾಪಾರಸ್ಥರಿಗೆ ಅನುಕೂಲ ಎನ್ನುತ್ತಾರೆ ಸಮಿತಿ ಸದಸ್ಯರು. ‌

ಪಾರ್ಕಿಂಗ್ ಸೌಲಭ್ಯ: ಎಪಿಎಂಸಿ ಆವರಣದಲ್ಲಿ ವಾಹನಗಳ ನಿಲುಗಡೆಗೆ ಸುಸಜ್ಜಿತ ಹಾಗೂ ವಿಶಾಲವಾದ ಪಾರ್ಕಿಂಗ್ ಸೌಲಭ್ಯವಿದೆ. ವಾಹನಗಳ ಆಗಮನ ಮತ್ತು ನಿರ್ಗಮನಕ್ಕಾಗಿ ಪ್ರತ್ಯೇಕ ದ್ವಾರಗಳಿವೆ. ಇಲ್ಲಿ ವಾಹನ ದಟ್ಟಣೆಯ ಕಿರಿಕಿರಿ, ಪಾರ್ಕಿಂಗ್‌ನ ಸಮಸ್ಯೆ ಉಂಟಾಗಲಾರದು.‌

ಸಿಬ್ಬಂದಿ ಕೊರತೆ: ಇಬ್ಬರು ಕಾಯಂ ಸಿಬ್ಬಂದಿ ಹಾಗೂ 3 ಮಂದಿ ಗುತ್ತಿಗೆ ಆಧಾರಿತ ಸಿಬ್ಬಂದಿ ಇದ್ದಾರೆ. ಆದರೆ, ಒಬ್ಬ ಕಾರ್ಯದರ್ಶಿ ಮಾತ್ರ ಇದ್ದು ಅವರೂ ಕೂಡ ಮಂಡ್ಯ ಹಾಗೂ ಮೈಸೂರಿನಲ್ಲಿ ಹೆಚ್ಚುವರಿ ಹುದ್ದೆ ನಿರ್ವಹಿಸುತ್ತಿದ್ದಾರೆ. ಅಗತ್ಯ ಸಿಬ್ಬಂದಿ ಒದಗಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಸಿಬ್ಬಂದಿ ನೇಮಿಸುವ ಪ್ರಯತ್ನ ಮಾಡಬೇಕು ಎಂದು ಸಮಿತಿ ಸದಸ್ಯ ಮೇದಪ್ಪ ಆಗ್ರಹಿಸುತ್ತಾರೆ.

ನೋಂದಣಿಗೊಂಡ ರೈತರಿಗೆ ಅವಕಾಶ

ಮಡಿಕೇರಿ ತಾಲ್ಲೂಕು ವ್ಯಾಪ್ತಿಯಲ್ಲಿ 20 ಸಾವಿರ ರೈತರು ನೋಂದಣಿಯಾಗಿದ್ದು, ದೂರದ ಊರುಗಳಿಂದ ಬರುವ ರೈತರಿಗೆ ಗುರುವಾರ ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಇರಲಿದೆ. ಕೃಷಿ ಉತ್ಪನ್ನಗಳಷ್ಟೇ ಅಲ್ಲದೆ, ಜಾನುವಾರು ಮಾರಾಟಕ್ಕೂ ಅವಕಾಶವಿದೆ. ಹೆಚ್ಚಿನ ರೈತರು ಆಸಕ್ತರಾಗಿದ್ದಾರೆ ಎಂದು ಸದಸ್ಯ ಮೇದಪ್ಪ ವಿವರಿಸುತ್ತಾರೆ.

ದಲ್ಲಾಳಿಗಳಿಗೆ ಅವಕಾಶವಿಲ್ಲ: ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ ಇದೆ. ದಲ್ಲಾಳಿಗಳಿಗೂ ಪಾಲು ನೀಡಬೇಕು. ಇದರಿಂದ ರೈತರನ್ನು ರಕ್ಷಿಸಲು ದಲ್ಲಾಳಿಗಳಿಗೆ ಇಲ್ಲಿ ಅವಕಾಶ ಇರುವುದಿಲ್ಲ ಎಂದು ಕಾಂಗೀರ ಸತೀಶ್ ಹೇಳುತ್ತಾರೆ

* * 

ರೈತಸಂತೆಯಲ್ಲಿ ಪಾಲ್ಗೊಳ್ಳಲು ಎಪಿಎಂಸಿಯಲ್ಲಿ ಹೆಸರು ನೋಂದಣಿ ಮಾಡಿಸಬೇಕು. ರೈತರ ಹಿತದೃಷ್ಟಿಯಿಂದ ಈ ಸಂತೆ ಆರಂಭಿಸಲು ನಿರ್ಧರಿಸಲಾಗಿದೆ.

ಕಾಂಗೀರ ಸತೀಶ್, ಅಧ್ಯಕ್ಷ, ಎಪಿಎಂಸಿ

ವಿಕಾಸ್‌ ಬಿ.ಪೂಜಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry