ಕನ್ನಡ ಜಾಗೃತಿಗೆ ಸಮ್ಮೇಳನ ದಾರಿ

7

ಕನ್ನಡ ಜಾಗೃತಿಗೆ ಸಮ್ಮೇಳನ ದಾರಿ

Published:
Updated:

ಶ್ರೀನಿವಾಸಪುರ: ‘ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವುದರ ಮೂಲಕ ಗಡಿ ಪ್ರದೇಶದಲ್ಲಿ ಕನ್ನಡ ಜಾಗೃತಿ ಉಂಟುಮಾಡಬೇಕು’ ಎಂದು ಮುಖಂಡ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು. ಇಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕನ್ನಡ ಭಾಷೆ ಮತ್ತು ಸಾಹಿತ್ಯ ನಾಡಿನ ಹೆಮ್ಮೆ. ನಮ್ಮೆಲ್ಲರ ಆರಾಧ್ಯ ದೈವ. ಅದಕ್ಕೆ ಯಾವುದೇ ಕುಂದಾಗದಂತೆ ನೋಡಿಕೊಳ್ಳಬೇಕು. ನಾಡು ನುಡಿ ಸೇವೆ ಸೌಭಾಗ್ಯ ಎಂದು ತಿಳಿಯಬೇಕು’ ಎಂದು ಹೇಳಿದರು.

‘ತಾಲ್ಲೂಕಿನಲ್ಲಿ ತೆಲುಗು ಆಡು ಭಾಷೆಯಾದರೂ ಕನ್ನಡ ಪ್ರೀತಿಗೆ ಕೊರತೆಯಿಲ್ಲ. ಇಲ್ಲಿನ ಲೇಖಕರು ಕನ್ನಡ ಭಾಷೆಯ ಸೊಗಡನ್ನು ಹರಡುತ್ತಿದ್ದಾರೆ. ಹಿಂದಿನ ಲೇಖಕರು ತೆಲುಗು ಕೃತಿಗಳನ್ನು ರಚಿಸಿ ಹೆಸರು ಮಾಡಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ ಅರ್ಪಿಸಬೇಕು’ ಎಂದರು.

‘ಕನ್ನಡ ಭಾಷೆಯ ಅಭಿವೃದ್ಧಿಗೆ ಆರೋಗ್ಯ ಪೂರ್ಣವಾದ ಸ್ಪರ್ಧೆ ಇರಬೇಕು. ಕನ್ನಡ ಕಾರ್ಯಕ್ರಮಗಳನ್ನು ಒಟ್ಟಾಗಿ ಆಚರಿಸಬೇಕು. ನೆಲ ಜಲ ರಕ್ಷಣೆ ಕನ್ನಡಿಗರ ಹೊಣೆ. ಅದನ್ನು ಸಮರ್ಥವಾಗಿ ನಿರ್ವಹಿಸಬೇಕು’ ಎಂದರು.

ಸಾಹಿತಿ ಪ್ರೊ.ಮುನಿರತ್ನಪ್ಪ ಸಮಾರೋಪ ಭಾಷಣ ಮಾಡಿ, ‘ದ್ವಿಭಾಷಾ ಪ್ರದೇಶವಾದ ಶ್ರೀನಿವಾಸಪುರದಲ್ಲಿ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ. ಇದು ಇಲ್ಲಿನ ಜನರ ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿದೆ’ ಎಂದು ಹೇಳಿದರು.

‘ಮಾವಿಗೆ ಹೆಸರಾದ ತಾಲ್ಲೂಕಿನಲ್ಲಿ ಮಾವಿನ ಮನಸ್ಸಿನ ಜನರಿದ್ದಾರೆ. ನಾಡು ನುಡಿ ಸೇವೆ ಮಾಡುತ್ತಿರುವ ಯುವ ಸಮುದಾಯವಿದೆ. ಕನ್ನಡ ಭಾಷೆ ಹಾಗೂ ಸಾಹಿತ್ಯದ ರಥ ಎಳೆಯುವ ಮನಸ್ಸುಗಳಿವೆ. ಕನ್ನಡ ಭಾಷೆ ಉಳಿಯಲು ಹಾಗೂ ಬೆಳೆಯಲು ಅಗತ್ಯವಾದ ವಾತಾವರಣ ಇಲ್ಲಿದೆ. ವಿದ್ಯಾವಂತ ಯುವ ಸಮುದಾಯ ಕನ್ನಡ ಭಾಷಾ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಬೇಕು’ ಎಂದು ಹೇಳಿದರು.

‘ಕನ್ನಡ ಭಾಷಾ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಹಿರಿದು. ಅವರು ಮನೆಯಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡಿದರೆ, ಭಾಷೆಯ ಕಲಿಕೆ ಸುಗಮವಾಗುತ್ತದೆ. ಕನ್ನಡ ಶಾಲೆ ಉಳಿಯಲು ಪೂರಕ ವಾತಾವರಣ ನಿರ್ಮಾಣ ಮಾಡಬೇಕಾದ ಹೊಣೆ ಸರ್ಕಾರದ ಮೇಲಿದೆ. ಪೋಷಕರ ಸ್ಪಂದನ ಅಗತ್ಯವಾಗಿದೆ’ ಎಂದರು.

ಸಮ್ಮೇಳನಾಧ್ಯಕ್ಷ ವೈ.ವಿ.ವೆಂಕಟಾಚಲ, ಜಿಲ್ಲಾ ಪಂಚಾಯಿತಿ ಸದಸ್ಯ ತೂಪಲ್ಲಿ ಆರ್‌, ನಾರಾಯಣಸ್ವಾಮಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಬೇರಗೌಡ, ನಿವೃತ್ತ ಉಪನ್ಯಾಸಕ ಜಿ.ವಿ.ಕೃಷ್ಣಪ್ಪ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.

ಸಿ.ಬೈರೇಗೌಡ ತಾಂತ್ರಿಕ ಮಹಾ ವಿದ್ಯಾಲಯದ ಕಾರ್ಯದರ್ಶಿ ಸಿ.ಹೊಸೂರು ಕೃಷ್ಣಾರೆಡ್ಡಿ, ಜಿಲ್ಲಾ ಕಸಾಪ ಅಧ್ಯಕ್ಷ ನಾಗಾನಂದ ಕೆಂಪರಾಜ್‌, ಗೌರವ ಕಾರ್ಯದರ್ಶಿಗಳಾದ ಆರ್‌.ಅಶ್ವತ್‌, ಟಿ.ಚಂದ್ರಪ್ಪ, ಕೋಲಾರ ನಗರ ಕಸಾಪ ಅಧ್ಯಕ್ಷ ಆರ್‌.ಎಂ.ವೆಂಕಟಸ್ವಾಮಿ, ತಾಲ್ಲೂಕು ಕಸಾಪ ಕಾರ್ಯದರ್ಶಿ ಚಲಪತಿ, ಉಪನ್ಯಾಸಕರಾದ ಎಂ.ವಿ.ರಂಗಪ್ಪ, ಜಾವೀದ್‌, ನಟರಾಜ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry