ರಾಜ್ಯದ ಜನರ ಹಿತರಕ್ಷಣೆಗೆ ಬದ್ಧ

7

ರಾಜ್ಯದ ಜನರ ಹಿತರಕ್ಷಣೆಗೆ ಬದ್ಧ

Published:
Updated:

ಮುಧೋಳ: ‘ಮುಸ್ಲಿಂ ಹಿತರಕ್ಷಣೆ ನನ್ನಿಂದಲೇ ಎಂದು ಕಾಂಗ್ರೆಸ್‌ನವರು, ಹಿಂದೂಗಳ ಹಿತರಕ್ಷಣೆಗೆ ನಾನು ಎಂದು ಬಿಜೆಪಿಯವರು ಜಿದ್ದಿಗೆ ಬಿದ್ದವರಂತೆ ಮಾತನಾಡುತ್ತಿದ್ದಾರೆ. ಜೆಡಿಎಸ್ ಮಾತ್ರ ರಾಜ್ಯದ 6.5 ಕೋಟಿ ಜನರ ಹಿತರಕ್ಷಣೆ ಬದ್ಧವಾಗಿದೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ನಗರದ ಹೇಮರಡ್ಡಿ ಮಲ್ಲಮ್ಮ ಮೈದಾನದಲ್ಲಿ ಕುಮಾರ ಪರ್ವ ಸಮಾವೇಶವನ್ನು ಶನಿವಾರ ರಾತ್ರಿ ಉದ್ಘಾಟಿಸಿ ಅವರು ಮಾತನಾಡಿದರು. ‘ನನ್ನ 22 ತಿಂಗಳ ಅವಧಿಯಲ್ಲಿ ಒಂದು ಕ್ಷಣವನ್ನು ವ್ಯರ್ಥಮಾಡದೆ ಜನರ ಸೇವೆ ಮಾಡಿದ್ದೇನೆ. ಇಂದು ರೈತರ ಬಗ್ಗೆ ಮಾತನಾಡುವ ಯಡಿಯೂರಪ್ಪ ಅಂದು ಹಣಕಾಸು ಸಚಿವರಾಗಿ ಕಬ್ಬಿಗೆ ಪ್ರತಿ ಹೇಕ್ಟರಿಗೆ ₹25 ಸಾವಿರ ಮುಂದಾದಾಗ ಹಣಕಾಸು ಹೊಂದಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ರಾಜ್ಯದ ಆದಾಯ ₹39 ಸಾವಿರ ಕೋಟಿ ಇದ್ದಾಗ ₹2500 ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇನೆ. ನಾನು ರೈತರ ಸಾಲ ಮನ್ನಾಮಾಡಿದ 25 ದಿನಗಳಲ್ಲಿ ರೈತರ ಖಾತೆಗೆ ಜಮಾ ಮಾಡಿದ್ದೇನೆ. ₹183 ಸಾವಿರ ಕೋಟಿ ಆದಾಯದ ಸರ್ಕಾರ ನಡೆಸುತ್ತಿರುವ ಸಿದ್ದರಾಮಯ್ಯ ರೈತರ ಸಾಲ ಮನ್ನಾ ಮಾಡಿರುವುದಾಗಿ ಹೇಳಿದ್ದಾರೆ ರೈತರಿಗೆ ಒಂದು ರೂಪಾಯಿ ಇನ್ನು ದೊರೆತಿಲ್ಲ. ಇದನ್ನು ಬಿಟ್ಟು ₹ 135 ಸಾವಿರ ಕೋಟಿ ಅಭಿವೃದ್ಧಿ ಹೆಸರಿನಲ್ಲಿ ಸಾಲ ಪಡೆದುಕೊಂಡು ಜನರಿಗೆ ಮೋಸಮಾಡಿದ್ದಾರೆ’ ಎಂದರು.

‘ಸಾಲಮನ್ನಾ ಅಷ್ಟೇ ಅಲ್ಲ, ರೈತರು ಸಾಲ ಮಾಡದಂತೆ ₹28 ಸಾವಿರ ಕೋಟಿಯ ಹೊಸ ಕೃಷಿ ನೀತಿ ಅನುಷ್ಠಾನಗೊಳಿಸುತ್ತೇನೆ. ಕೆಲವು ಟಿವಿ ಚಾನಲ್‌ಗಳು ಜೆಡಿಎಸ್‌ಗೆ 45ರಿಂದ 50 ಸ್ಥಾನ ಬರುತ್ತದೆ ಎನ್ನುತ್ತಿವೆ. ಆದರೆ, ನಾವು ಉತ್ತರ ಕರ್ನಾಟಕದಲ್ಲೇ ಇಷ್ಟು ಸ್ಥಾನ ಗೆಲ್ಲವುದು ಖಚಿತ. ದಯವಿಟ್ಟು ನನಗೆ ಪೂರ್ಣ ಬಹುಮತ ನೀಡಿ ಬಿಜೆಪಿ ಕಾಂಗ್ರೆಸ್ ಬಾಗಿಲ ಕಾಯುವುದನ್ನು ತಪ್ಪಿಸಿ. ಜೆಡಿಎಸ್‌ ಅಭ್ಯರ್ಥಿ ಶಂಕರ ನಾಯಿಕ ಅವರನ್ನು ಬೆಂಬಲಿಸಿ ನನಗೆ ಶಕ್ತಿ ತುಂಬಬೇಕು’ ಎಂದು ಹೇಳಿದರು.

ಮಾಜಿ ಸಂಸದ ಎಚ್.ವಿಶ್ವನಾಥ ಮಾತನಾಡಿ ‘ಕಾಂಗ್ರೆಸ್‌ನವರು ನಾಲ್ಕೂವರೆ ವರ್ಷ ಸುಮ್ಮನೆ ಕುಳಿತು ಈಗ ನವ ಕರ್ನಾಟಕ ನಿರ್ಮಾಣ ಸಮಾವೇಶವನ್ನು ಸರ್ಕಾರಿ ದುಡ್ಡಿನಲ್ಲಿ ಮಾಡುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳು ಇರುವ ವೇದಿಕೆಯಲ್ಲಿ ಇಂಥವರಿಗೆ ಮತಹಾಕಿ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಾಚಿಕೆಯಾಗಬೇಕು. ಎಲ್ಲೆಡೆ ಶಂಕುಸ್ಥಾಪನೆ, ಶಿಲಾನ್ಯಾಸ ಮಾಡುವ ಕಾರ್ಯ ನೋಡಿದರೆ ರಾಜ್ಯವನ್ನು ಶಿಲಾಯುಗಕ್ಕೆ ತಗೆದುಕೊಂಡು ಹೋಗುತ್ತಿದ್ದಾರೆ’ ಎಂದರು.

ಮಾಜಿ ಸಚಿವ ಬಂಡೆಪ್ಪ ಕಾಶಂಪೂರ ಮಾತನಾಡಿ ‘ಯಾರು ಸಾಲ ತುಂಬಬೇಡಿ. ಇನ್ನು 100 ದಿನಗಳಲ್ಲಿ ನಿಮ್ಮ ಎಲ್ಲ ಸಾಲವನ್ನು ಕುಮಾರಸ್ವಾಮಿ ತುಂಬುತ್ತಾರೆ’ ಎಂದು ಹೇಳಿದರು.

ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಅಲ್ತಾಫ್ ಮೋಹಿದ್ ಮಾತನಾಡಿ ‘ಮುಧೋಳದಲ್ಲಿ ಅಲ್ಪಸಂಖ್ಯಾತರ ರಕ್ಷಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ’ ಎಂದರು. ಮುಧೋಳ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಶಂಕರ ನಾಯಿಕ, ಗುರುರಾಜ ಹುಣಸಿಮರದ ಮಾತನಾಡಿದರು. ಜಿಲ್ಲಾ ಜೆಡಿಎಸ್‌ ಘಟಕದ ಅಧ್ಯಕ್ಷ ರವಿ ಹುಣಶ್ಯಾಳ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry