ಚಿಂದಿ ಆಯುವವರ ಸೇವೆ ಗುರುತಿಸಿದ ನಗರಸಭೆ

7

ಚಿಂದಿ ಆಯುವವರ ಸೇವೆ ಗುರುತಿಸಿದ ನಗರಸಭೆ

Published:
Updated:
ಚಿಂದಿ ಆಯುವವರ ಸೇವೆ ಗುರುತಿಸಿದ ನಗರಸಭೆ

ಬೀದರ್: ಬೆಳಗಾಗುತ್ತಲೇ ಬೆನ್ನಿಗೆ ಚೀಲ ಹಾಕಿಕೊಂಡು ಪ್ಲಾಸ್ಟಿಕ್‌ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ನೂರು ಜನರನ್ನು ಗುರುತಿಸಿ 94 ಜನರಿಗೆ ಗುರುತಿನ ಚೀಟಿಗಳನ್ನು ಕೊಟ್ಟಿರುವ ನಗರಸಭೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರ ಚೆಂದದ ಬದುಕಿಗೆ ನೆರವಾಗಲು ಯೋಜನೆ ರೂಪಿಸುತ್ತಿದೆ.

ದೀನದಯಾಳ್‌ನಗರ ಹಾಗೂ ವಡ್ಡರ ಕಾಲೊನಿಯಲ್ಲಿ ವಾಸವಾಗಿರುವ ಚಿಂದಿ ಆಯುವವರು ನಗರ ಸ್ವಚ್ಛತೆಗೆ ನೆರವಾಗುತ್ತಿರುವುದರಿಂದ ಅವರಿಗೆ ಸೂರು ಹಾಗೂ ಅವರ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಹ ಸಿದ್ಧತೆ ನಡೆಸಿದೆ.

ನಗರದಲ್ಲಿ ನಿತ್ಯ ಅಂದಾಜು 62 ಟನ್ ಕಸ ಸಂಗ್ರಹವಾಗುತ್ತದೆ. ಅದರಲ್ಲಿ ಕೇವಲ 55 ಟನ್‌ ಕಸವನ್ನು ಮಾತ್ರ ವಿಲೇವಾರಿ ಮಾಡಲು ಸಾಧ್ಯವಾಗುತ್ತಿದೆ. ವಾಣಿಜ್ಯ ಪ್ರದೇಶದಲ್ಲಿ ದಿನಕ್ಕೆ ಎರಡು ಬಾರಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡರೂ ಕಸ ಉಳಿಯುತ್ತಿದೆ. ಇದರಲ್ಲಿನ 4 ರಿಂದ 5 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಚಿಂದಿ ಆಯುವವರೇ ವಿಲೇವಾರಿ ಮಾಡುತ್ತಿದ್ದಾರೆ.

ಕಬ್ಬಿಣ, ಪ್ಲಾಸ್ಟಿಕ್ ಪೇಪರ್, ನೀರಿನ ಬಾಟಲಿ, ಹಾಲಿನ ಪಾಕೇಟ್ ಸಂಗ್ರಹಿಸಿಕೊಂಡು ಹೋಗಿ ಗುಜರಿಗೆ ಮಾರಿಕೊಂಡು ಹಣ ಸಂಪಾದನೆ ಮಾಡಿಕೊಳ್ಳುತ್ತಿದ್ದಾರೆ. ಪ್ಲಾಸ್ಟಿಕ್‌ ತ್ಯಾಜ್ಯ ಒಯ್ಯುತ್ತಿರುವ ಕಾರಣ ಪೌರ ಕಾರ್ಮಿಕರ ಮೇಲಿನ ಸ್ವಚ್ಛತಾ ಕಾರ್ಯದ ಒತ್ತಡವೂ ಕಡಿಮೆ ಆಗಿದೆ.

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮೊದಲ ಹಂತವಾಗಿ ನಗರಸಭೆ ಸಿಬ್ಬಂದಿ ಮೂರು ತಿಂಗಳ ಕಾಲ ಸಮೀಕ್ಷೆ ನಡೆಸಿ 25 ನಿಮಿಷಗಳ ಒಂದು ಸಾಕ್ಷ್ಯಚಿತ್ರ ನಿರ್ಮಿಸಿದೆ.

‘ಬೀದರ್‌ ತಾಲ್ಲೂಕಿನ ಗೋರನಳ್ಳಿ ಸಮೀಪ 28 ಎಕರೆ ಜಾಗದಲ್ಲಿ ಎರಡು ಎಕರೆ ಜಾಗವನ್ನು ಚಿಂದಿ ಆಯುವವರಿಗಾಗಿ ಗುರುತಿಸಲಾಗಿದೆ. ಚೆಂದದ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಇಲ್ಲಿ ಜಿ+3 ಮನೆಗಳನ್ನು ಕಟ್ಟಿ ಒಟ್ಟು 300 ಜನರಿಗೆ ಕೊಡುವ ಉದ್ದೇಶ ಇದೆ’ ಎಂದು ನಗರಸಭೆ ಆಯುಕ್ತ ಮನೋಹರ ಹೇಳುತ್ತಾರೆ.

‘ಚಿಂದಿ ಆಯುವವರಿಂದ ನಗರದ ಜನತೆಗೆ ಒಂದು ರೀತಿಯಲ್ಲಿ ಉಚಿತ ಸೇವೆ ದೊರೆಯುತ್ತಿದೆ. ಪೌರಕಾರ್ಮಿಕರ ಸಮಸ್ಯೆಯನ್ನು ಪರೋಕ್ಷವಾಗಿ ನೀಗಿಸುತ್ತಿದ್ದಾರೆ. ಹೀಗಾಗಿ ಪೌರ ಕಾರ್ಮಿಕರ ಜತೆಗೆ ಚಿಂದಿ ಆಯುವವರಿಗೂ ₹ 9.5 ಲಕ್ಷ ವೆಚ್ಚದಲ್ಲಿ ಸುರಕ್ಷತಾ ಸಾಮಗ್ರಿಗಳನ್ನು ಕೊಡಲು ನಿರ್ಧರಿಸಿದ್ದೇವೆ’ ಎನ್ನುತ್ತಾರೆ.

‘ಅವರ ಮಕ್ಕಳಿಗೆ ವಸತಿ ಶಾಲೆಯಲ್ಲಿ ಪ್ರವೇಶ ಪರೀಕ್ಷೆ ಇಲ್ಲದೇ ನೇರವಾಗಿ ಪ್ರವೇಶ ಪಡೆಯಲು ಅವಕಾಶ ಇದೆ. ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗಿದೆ. ಜಾಗೃತಿ ಮೂಡಿಸುವ ಮೂಲಕ ಮಕ್ಕಳನ್ನು ಶಾಲೆಗೆ ಸೇರಿಸುವ ಪ್ರಯತ್ನಗಳು ನಡೆದಿವೆ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ನೆರವು ಪಡೆಯಲಾಗುವುದು’ ಎಂದು ಅವರು ವಿವರಿಸುತ್ತಾರೆ.

* * 

ಬೀದರ್‌ ನಗರದಲ್ಲಿ ಟ್ರೇಡ್‌ ಲೈಸನ್ಸ್ ಪಡೆದ 40 ಗುಜರಿ ಅಂಗಡಿಗಳಿವೆ. ಈ ಅಂಗಡಿಗಳ ಮಾಲೀಕರೇ ಚಿಂದಿ ಆಯುವವರಿಂದ ಪ್ಲಾಸ್ಟಿಕ್‌ ಹಾಗೂ ಲೋಹ ಖರೀದಿಸುತ್ತಿದ್ದಾರೆ. ಮನೋಹರ

ನಗರಸಭೆ ಆಯುಕ್ತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry