ಮುಂಡರಗಿ: ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ

7

ಮುಂಡರಗಿ: ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ

Published:
Updated:
ಮುಂಡರಗಿ: ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ

ಮುಂಡರಗಿ: ತಾಲ್ಲೂಕಿನ ಸಿಂಗಟಾಲೂರ ಗ್ರಾಮದಲ್ಲಿ ದಲಿತ ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಭಾನುವಾರ ಪಟ್ಟಣದ ಪೊಲೀಸ ಠಾಣೆ ಎದುರು ಮಹಿಳೆಯ ಶವವಿಟ್ಟು ಕೆಲ ಕಾಲ ಪ್ರತಿಭಟನೆ ನಡೆಸಿದರು.

ಗದಗದಿಂದ ಶವಪರೀಕ್ಷೆಯ ನಂತರ ಮಹಿಳೆಯ ಶವ ತೆಗೆದುಕೊಂಡು ಬರಲಾಗುತ್ತಿದೆ ಎನ್ನುವುದು ತಿಳಿಯುತ್ತಿದ್ದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ದಲಿತ ಸಂಘಟನೆಗಳ ಕಾರ್ಯಕರ್ತರು ಪೊಲೀಸ್‌ ಠಾಣೆ ಬಳಿ ಸೇರಿದರು. ಶವ ಹೊತ್ತ ವಾಹನ ಬರುತ್ತಿದ್ದಂತೆ ವಾಹನದಿಂದ ಶವವನ್ನು ಕೆಳಗಿಳಿಸುವಂತೆ ಒತ್ತಾಯಿಸಿದರು. ವಾಹನದಿಂದ ಶವ ಕೆಳಗಿಳಿಸಲು ಪೊಲೀಸರು ನಿರಾಕರಿಸಿದರು. ಶವವನ್ನು ಕೆಳಗಿಳಸಲೇಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಒತ್ತಡಕ್ಕೆ ಮಣಿದ ಪೊಲೀಸರು ಶವವನ್ನು ಕೆಳಗಿಳಿಸಿದರು. ನಂತರ ಪ್ರತಿಭಟನಾಕಾರರು ರಸ್ತೆಯ ಮೇಲೆ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ದಲಿತ ಮುಖಂಡ ಮೋಹನ ಅಲಮೇಲಕರ ಮಾತನಾಡಿ, ‘ದಲಿತ ಮಹಿಳೆ ಆತ್ಮಹತ್ಯೆಗೆ ಕಾರಣವಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅದಕ್ಕೆ ಸಂಬಂಧಪಟ್ಟವರನ್ನು ತಕ್ಷಣ ಬಂಧಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಲಿತ ಮಹಿಳೆಯ ಕುಟುಂಬದವರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಒತ್ತಾಯಿಸಿದರು.

‘ಸ್ಥಳೀಯ ಪೊಲೀಸ ಠಾಣೆಯ ಸಿಪಿಐ ಮಂಜುನಾಥ ನಡುವಿನಮನಿ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದು, ಅವರನ್ನು ತಕ್ಷಣ ಬೇರೆಡೆ ವರ್ಗಾವಣೆ ಮಾಡಬೇಕು. ಆತ್ಮಹತ್ಯೆ ಮಾಡಿಕೊಂಡಿರುವ ದಲಿತ ಮಹಿಳೆಯ ಕುಟುಂಬಕ್ಕೆ ಸೂಕ್ತ ಪರಿಹಾರ ವಿತರಿಸಬೇಕು’ ಎಂದು ಆಗ್ರಹಿಸಿದರು.

ನಂತರ ಪೊಲೀಸ ಬಿಗಿ ಭದ್ರತೆಯಲ್ಲಿ ಮಹಿಳೆಯ ಶವವನ್ನು ಸಿಂಗಟಾಲೂರ ಗ್ರಾಮಕ್ಕೆ ತಗೆದುಕೊಂಡು ಹೋಗಲಾಯಿತು. ಘಟನೆಯಿಂದ ಸಿಂಗಟಾಲೂರ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರ ಸಮಕ್ಷಮದಲ್ಲಿ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಮುಖಂಡರಾದ ಸತೀಶ ಪಾಸಿ, ಲಕ್ಷ್ಮಣ ತಗಡಿನಮನಿ, ಸಂತೋಷ ಹಿರೇಮನಿ, ದೇವರಾಜ ಕಟ್ಟಿಮನಿ, ಚಂದ್ರು ಹರಿಜನ, ಮುತ್ತು ಭಾವಿಮನಿ, ಎಚ್.ಎಂ.ಗುಡಗೇರಿ, ಮಲ್ಲೇಶ ಸಜ್ಜನ, ದುರುಗಪ್ಪ ವಿಠಲಾಪುರ, ಸೋಮಪ್ಪ ಹೈತಾಪುರ, ಅಶೋಕ ಹೊಸಮನಿ, ಶಿವಪುತ್ತಪ್ಪ ಚಿಕ್ಕವಡ್ಡಟ್ಟಿ, ಚಂದ್ರಕಾಂತ ಕಾದರಳ್ಳಿ, ಮಾತ್ರಾಂಡಪ್ಪ ಹಾದಿಮನಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry