ಎಚ್‌ಡಿಕೆ ಹೇಳಿಕೆ ತಿರುಚಿದ ಕಾಂಗ್ರೆಸ್‌

7

ಎಚ್‌ಡಿಕೆ ಹೇಳಿಕೆ ತಿರುಚಿದ ಕಾಂಗ್ರೆಸ್‌

Published:
Updated:
ಎಚ್‌ಡಿಕೆ ಹೇಳಿಕೆ ತಿರುಚಿದ ಕಾಂಗ್ರೆಸ್‌

ಹಾಸನ: ‘ಬಯಲುಸೀಮೆ ಜಿಲ್ಲೆಗಳಿಗೆ ನೀರು ಪೂರೈಸುವ ಎತ್ತಿನ ಹೊಳೆ ಯೋಜನೆಗೆ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ವಿರೋಧ ಮಾಡಿಲ್ಲ. ಆದರೆ, ಅವರ ಹೇಳಿಕೆ ತಿರುಚಿ ಪಕ್ಷದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಶಾಸಕ ಎಚ್‌.ಡಿ.ರೇವಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

‘ಅರಸೀಕೆರೆಯಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಯೋಜನೆಗೆ ಜೆಡಿಎಸ್‌ ವಿರೋಧ ವ್ಯಕ್ತಪಡಿಸಿದೆ ಎಂದು ಸಿ.ಎಂ ಹೇಳಿದ್ದಾರೆ. ಯೋಜನೆ ವಿರೋಧಿಸಿಲ್ಲ ಎಂಬುದನ್ನು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಜನರಿಗೆ ನೀರು ಸಿಕ್ಕಿದರೆ ಸಾಕು. ಪ್ಯಾಕೇಜ್‌ ಮಾಡಿ ಹಣ ಎತ್ತುವ ಕೆಲಸ ಮಾಡಬಾರದು’ ಎಂದು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.

ಸದಾನಂದಗೌಡರು ಮುಖ್ಯಮಂತ್ರಿ ಯಾಗಿದ್ದಾಗ ₹ 8,360 ಕೋಟಿ ಯೋಜನೆಗೆ ಆಡಳಿತಾತ್ಮಕ ಅನುಮತಿ ನೀಡಿದ್ದರು. 1ನೇ ಹಂತದಲ್ಲಿ ₹ 2,700 ಕೋಟಿಗೆ ಟೆಂಡರ್‌ ಕರೆದು ಐದು ಪ್ಯಾಕೇಜ್‌ ಮಾಡಲಾಯಿತು. ಆದರೆ, 2013ರಲ್ಲಿ ಕಾಂಗ್ರೆಸ್‌ ಸರ್ಕಾರ, ತಾಂತ್ರಿಕ ಉಪ ಸಮಿತಿ ಸರಿಯಾಗಿ ಅನುಮೋದನೆ ನೀಡಿಲ್ಲವೆಂಬ ಕಾರಣ ನೀಡಿ ಟೆಂಡರ್‌ ರದ್ದುಗೊಳಿಸಿತು. ಮತ್ತೆ ವಿಸ್ತೃತ ಯೋಜನಾ ವರದಿ ತಯಾರಿಸಿ, ₹ 13,292 ಕೋಟಿಗೆ ಪರಿಷ್ಕೃತ ಆಡಳಿತಾತ್ಮಕ ಮಂಜೂರಾತಿ ನೀಡಿತು. ಆರು ಪ್ಯಾಕೇಜ್‌ ಮಾಡಿ, ವಿವಿಧ ಕಂಪೆನಿಗಳಿಗೆ ಗುತ್ತಿಗೆ ನೀಡಲಾಯಿತು ಎಂದು ವಿವರಿಸಿದರು.

ಇಷ್ಟು ದಿನ ಸಿ.ಎಂ ಸುಮ್ಮನೆ ಇದ್ದು, ಚುನಾವಣೆ ಸಮೀಪಿಸುತ್ತಿದ್ದಂತೆ ಸುಳ್ಳು ಹೇಳುತ್ತಿದ್ದಾರೆ. ಯೋಜನೆಗೆ ಮೊದಲು ಅನುಮತಿ ನೀಡಿದ್ದು ಬಿಜೆಪಿ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.

‘ಇನ್ನೂ 0.55 ಕಿ.ಮೀ ನಾಲೆ ತೆಗೆಯಬೇಕು. ತುಮಕೂರು ಜಿಲ್ಲೆಯಲ್ಲಿ 11 ಹಳ್ಳಿಗಳು ಮುಳುಗಡೆ ಆಗಲಿವೆ. ಅಣೆಕಟ್ಟು ನಿರ್ಮಿಸಬೇಕು. 24.1 ಟಿಎಂಸಿ ನೀರು ಸಿಗುತ್ತದೆ. ಮೇ ಅಂತ್ಯಕ್ಕೆ ನೀರು ಪೂರೈಕೆ ಮಾಡಲಾಗುವುದು ಎಂದಿದ್ದಾರೆ. ಇದು ಹೇಗೆ ಸಾಧ್ಯ. ಜನರಿಗೆ ತಪ್ಪು ಸಂದೇಶ ನೀಡಬಾರದು’ ಎಂದು ಸಲಹೆ ನೀಡಿದರು.

ಅರಸೀಕೆರೆಯಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ₹ 1400 ಕೋಟಿ ಕೊಟ್ಟಿದ್ದೇನೆ ಎಂದು ಸಿ.ಎಂ ಹೇಳಿದರು. ಈ ಕೋಟಿಗಳ ಬಗ್ಗೆ ವಿವರ ನೀಡಲಿ. ಬಿಜೆಪಿ ಸರ್ಕಾರ ಕುಡಿಯುವ ನೀರಿಗಾಗಿ ₹ 160 ಕೋಟಿ ವೆಚ್ಚದ ಕಾಮಗಾರಿ ಗುತ್ತಿಗೆಯನ್ನು ಜಿಂದಾಲ್‌ ಕಂಪೆನಿಗೆ ನೀಡಿತ್ತು. ಕಾಂಗ್ರೆಸ್‌ ಸರ್ಕಾರ ಅದನ್ನು ರದ್ದುಗೊಳಿಸಿ, 3 ವರ್ಷದ ಬಳಿಕ ಮರು ಟೆಂಡರ್‌ ಕರೆಯಿತು ಎಂದು ಹೇಳಿದರು.

ಜಿಲ್ಲೆಯ 7 ಲಕ್ಷ ಹೆಕ್ಟೇರ್‌ ನೀರಾವರಿ ಪ್ರದೇಶದಲ್ಲಿ ಮೂರು ವರ್ಷದಿಂದ ರೈತರು ಬೆಳೆ ಬೆಳೆದಿಲ್ಲ. 60 ಟಿಎಂಸಿ ನೀರಿನ ಅವಶ್ಯಕತೆ ಇದೆ. ಆದರೆ ದೊರಕಿದ್ದು 38 ಟಿಎಂಸಿ. ಯಗಚಿ, ಹೇಮಾವತಿ ಜಲಾಶಯ ಭರ್ತಿಯಾಗಿಲ್ಲ. ಆದರೂ ತಮಿಳುನಾಡಿಗೆ 30 ಟಿಎಂಸಿ ನೀರು ಬಿಡಲಾಯಿತು. ಬೆಳೆ ಇಲ್ಲದೆ ರೈತರ ಮನೆ ಹಾಳು ಮಾಡಿರುವ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ತರಾಟೆಗೆ ತೆಗೆದುಕೊಂಡರು.

ಡಿ.ಸಿ ಬಳಿ ಕಡತ ತೆಗೆದುಕೊಂಡು ಹೋಗಿಲ್ಲ

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಪರವಾಗಿ ಕೆಲಸ ಮಾಡುತ್ತಿಲ್ಲ. ಕಾನೂನು ಪ್ರಕಾರ ಮಾಡುತ್ತಿದ್ದಾರೆ. ಮಸ್ತಕಾಭಿಷೇಕ ಕಾಮಗಾರಿ ಚುರುಕುಗೊಳಿಸಿದ್ದಾರೆ. ಅವರನ್ನು ವರ್ಗಾವಣೆ ಮಾಡುವ ವಿಚಾರ ಗೊತ್ತಿಲ್ಲ ಎಂದು ರೇವಣ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಡಿ.ಸಿ ಬಳಿ ನಾನು ಕಡತ ತೆಗೆದುಕೊಂಡು ಹೋಗಿಲ್ಲ. ಹಾಸನಾಂಬ ದೇವಸ್ಥಾನದ ಅರ್ಚಕ ಅಣಪ್ಪ ಭಟ್ಟ ನೇಮಕ ಸಂಬಂಧ ಮಾತನಾಡಿದ್ದೆ. ಕಾನೂನು ಪ್ರಕಾರ ನಡೆದುಕೊಂಡರು. ದೇವಿ ದರ್ಶನಕ್ಕೆ ₹ 1,000 ಟಿಕೆಟ್‌ ಕೊಂಡು ಹೋಗಿದ್ದೇನೆ’ ಎಂದರು.

ಜೆಡಿಎಸ್‌ ಕಂಡರೆ ಕಾಂಗ್ರೆಸ್‌ಗೆ ಭಯ

ಜೆಡಿಎಸ್‌ ಕಂಡರೆ ಕಾಂಗ್ರೆಸ್‌ಗೆ ಭಯ. ಅದಕ್ಕಾಗಿಯೇ 25 ಸ್ಥಾನಕ್ಕಿಂತ ಹೆಚ್ಚು ಪಡೆಯುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೊಂಡು ಓಡಾಡುತ್ತಿದ್ದಾರೆ. 1994ರ ಫಲಿತಾಂಶ ಪುನರಾವರ್ತನೆ ಆಗಲಿದೆ ಎಂದು ರೇವಣ್ಣ ಭವಿಷ್ಯ ನುಡಿದರು.

ನಾಲ್ಕುವರೆ ವರ್ಷ ಜನರಿಗೆ ಅನ್ಯಾಯ ಮಾಡಿ ಈಗ ಸಾಧನೆ ಸಮಾವೇಶ ಆಯೋಜಿಸಿ ಮತ ಕೇಳುತ್ತಾರೆ. ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಬಳಿಕ ದೇವೇಗೌಡರಿಗೆ ಸಿ.ಎಂ ಕೃತಜ್ಞತೆ ಸಲ್ಲಿಸಿದರು. ಈಗ ಜೆಡಿಎಸ್‌ ವಿಶ್ವಾಸ ದ್ರೋಹಿಗಳು ಎನ್ನುವ ಮೂಲಕ ಕಾಂಗ್ರೆಸ್‌ ದ್ರೋಹ ಬಗೆಯುತ್ತಿದೆ ಎಂದು ಕಿಡಿಕಾರಿದರು.

ಎತ್ತಿನಹೊಳೆ ಯೋಜನೆ ನೀರು ಹಂಚಿಕೆ

ಕೋಲಾರ– 5 ಟಿಎಂಸಿ

ಚಿಕ್ಕಬಳ್ಳಾಪುರ– 5 ಟಿಎಂಸಿ

ಬೆಂಗಳೂರು ಗ್ರಾಮಾಂತರ– 4 ಟಿಎಂಸಿ

ತುಮಕೂರು– 4.5 ಟಿಎಂಸಿ

ಕುಡಿಯುವ ನೀರಿಗೆ– 14 ಟಿಎಂಸಿ

527 ಕೆರೆ ತುಂಬಿಸುವುದು

* * 

ಕೇಂದ್ರದಲ್ಲಿ ಬೆಂಬಲ ನೀಡಿದ್ದ ಸಿಪಿಎಂಗೆ ಚೂರಿ ಹಾಕಿದ ಕಾಂಗ್ರೆಸ್‌ನವರು, ಇನ್ನು ಜೆಡಿಎಸ್‌ನವರಿಗೆ ಹಾಕದೇ ಇರುತ್ತಾರೆಯೇ?

ಎಚ್‌.ಡಿ.ರೇವಣ್ಣ, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry