ದೂರು ವಾಪಾಸ್‌ ಪಡೆಯಲು ಗೃಹ ಸಚಿವರಿಗೆ ಮನವಿ

7

ದೂರು ವಾಪಾಸ್‌ ಪಡೆಯಲು ಗೃಹ ಸಚಿವರಿಗೆ ಮನವಿ

Published:
Updated:

ರಾಣೆಬೆನ್ನೂರು: ‘ತಾಲ್ಲೂಕಿನ ಮುದೇನೂರು ಗ್ರಾಮದ ರೈತರಿಬ್ಬರ ಮೇಲೆ ಉಪವಿಭಾಗಾಧಿಕಾರಿ (ಎ.ಸಿ.) ಪಿ.ಎನ್‌.ಲೋಕೇಶ್ ಹಲ್ಲೆ ಮಾಡಿ, ಒದ್ದಿದ್ದಲ್ಲದೇ ಅವರ ಮೇಲೆ ಕೇಸ್‌ ದಾಖಲಿಸಿದ್ದಾರೆ. ರೈತರ ಮೇಲಿನ ಕೇಸ್‌ನ್ನು ಕೂಡಲೇ ವಾಪಾಸ್‌ ಪಡೆದು ಎ.ಸಿ. ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕು ಮಾಕನೂರು ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಶನಿವಾರ ಗೃಹ ಸಚಿವರನ್ನು ಭೇಟಿ ಮಾಡಿ, ಅವರು ಮನವಿ ಸಲ್ಲಿಸಿದರು. ಮುಖಂಡ ಈರಣ್ಣ ಹಲಗೇರಿ ಮಾತನಾಡಿ, ಮುದೇನೂರು ಬಳಿಯ ತುಂಗಭದ್ರಾ ನದಿಯಲ್ಲಿ ನಿರ್ಮಿತಿ ಕೇಂದ್ರದಿಂದ ಜೆಸಿಬಿ, ಹಿಟಾಚಿಗಳಿಂದ ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಇದರ ವಿರುದ್ಧ ಗ್ರಾಮದ ರೈತರು ಪ್ರತಿಭಟನೆ ನಡೆಸಿ ಬಂದ್‌ ಮಾಡಿಸಿದ್ದರು.

ಕೆಲ ದಿನಗಳ ಬಳಿಕ ಉಪವಿಭಾಗಾಧಿಕಾರಿ ಪಿ.ಎನ್‌.ಲೋಕೋಶ ಮತ್ತೆ ಮರಳು ಅಕ್ರಮ ಸಾಗಾಣಿಕೆಗೆ ಮುಂದಾದಾಗ, ಅದನ್ನು ಪ್ರಶ್ನಿಸಿದ ಅದೇ ಗ್ರಾಮದ ಶಂಕರಗೌಡ ಗಂಗನಗೌಡ್ರ ಎಂಬ ರೈತನಿಗೆ ಉಪವಿಭಾಗಾಧಿಕಾರಿ ಬೂಟುಗಾಲಿನಿಂದ ಒದ್ದು ಜೈಲಿಗೆ ಹಾಕಿದ್ದಾರೆ ಎಂದು ಸಚಿವರ ಎದುರು ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿ ಗೃಹ ಸಚಿವರು, ರೈತರ ಮೇಲಿನ ದೂರು ವಾಪಸ್‌ ಪಡೆಯುವ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮೇಘರಾಜ ಕರಬಸಳ್ಳವರ, ಶಂಭುಲಿಂಗ ಒಡೇರಹಳ್ಳಿ, ಗಣೇಶ ಒಡೇರಹಳ್ಳಿ, ಸುರೇಶ ಮಲ್ಲಪ್ಪ, ನಾಗಪ್ಪ, ಕರಬಸಪ್ಪ ಅಗಸೀಬಾಗಿಲ, ಹರೀಶ ನಾಗೇನಹಳ್ಳಿ ಹಾಗೂ ಸುನೀತಾ ಗಂಗನಗೌಡ್ರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry