ಬುಧವಾರ, ಜೂಲೈ 8, 2020
23 °C

ತಾಜಾ ಶರಬತ್ತಿನ ಹಣ್ಣು

ಶ್ರೀಪಡ್ರೆ Updated:

ಅಕ್ಷರ ಗಾತ್ರ : | |

ತಾಜಾ ಶರಬತ್ತಿನ ಹಣ್ಣು

‘ಅಳಿಲು ಮತ್ತು ಗಿಳಿ ತಿಂದು ಉಳಿದ ಹಣ್ಣಷ್ಟೇ ನನಗೆ ಸಿಗುತ್ತಿದೆ. ಆದರೂ ಬೇಸರವಿಲ್ಲ. ಬದುಕಿನ ಮುಸ್ಸಂಜೆಯಲ್ಲಿ ಇದು ದೈವ ಕೊಟ್ಟ ಬಹುಮಾನ’- ಈ ಮಾತು ಹೇಳುವ ಗೃಹಿಣಿ ಕೇರಳದ ಕಾಯಂಕುಳಂನ ಮೀರಾ ಬೆನ್. ವಯಸ್ಸು 62. ಗಂಡಹೆಂಡಿರದು ನಿವೃತ್ತ ಜೀವನ. ಇಪ್ಪತ್ತು ಸೆಂಟ್ಸ್‌ನ ಮನೆ ಆವರಣ. ಇವರಿಗೆ ‘ಬಹುಮಾನ’ ಎನಿಸಿದ ಹಣ್ಣು ಯಾವುದು ಗೊತ್ತೇ? ಪ್ಯಾಶನ್ ಫ್ರೂಟ್‌. ಕೆಲವೆಡೆ ಇದನ್ನು ಶರಬತ್ತಿನ ಕಾಯಿ ಎಂದೂ ಕರೆಯುವುದಿದೆ.

ಮೀರಾ ಬೆನ್ ಅವರಿಗೆ ಈ ಹಣ್ಣು ಸಂತಸ ತಂದು ಕೊಟ್ಟದ್ದೇಕೆ? ‘ನಾನು ಅದಕ್ಕಾಗಿ ಒಂದಿಷ್ಟೂ ಶ್ರಮಪಡಲಿಲ್ಲ. ನೀರು ಹೊಯ್ಯಲಿಲ್ಲ; ಗೊಬ್ಬರ ಉಣಿಸಲಿಲ್ಲ. ಹೋಗಲಿ, ಕೊನೆಗೆ ಕೊಯ್ಯಬೇಕಾಗಿಯೂ ಬರಲಿಲ್ಲ’, ಅವರು ವಿವರಿಸುತ್ತಾರೆ.

ಪ್ಯಾಶನ್ ಫ್ರೂಟ್ ಬಳ್ಳಿಯಲ್ಲಿ ಬೆಳೆಯುವ ಹಣ್ಣು. ಕೇರಳದ ಸಾವಿರಾರು ಮನೆಗಳಲ್ಲಿದೆ. ಅನಾಯಾಸವಾಗಿ ಸಿಕ್ಕಿದ ಹಣ್ಣಿನ ಶರಬತ್ತು ಮಾಡಿ ಕುಡಿಯುವವರೂ ಇದ್ದಾರೆ. ಕೆಲವರು ಮಂದರಸ (ಸ್ಕ್ವಾಶ್) ಮಾಡಿಟ್ಟು ಬೇಕಾದಾಗ ಬಳಸುವುದೂ ಇದೆ. ಜ್ಯಾಮ್ ಮಾಡಬಹುದು. ಒಳ್ಳೆಯ ಪರಿಮಳ, ಬಣ್ಣ. ಇದನ್ನು ಯಾರೂ ವಾಣಿಜ್ಯ ದೃಷ್ಟಿಯಿಂದ ಈಚೆವರೆಗೂ ಬೆಳೆಯುತ್ತಿರಲಿಲ್ಲ. ಅದೇಕೆ, ಕೃಷಿ ಕೂಡ ಮಾಡಿದವರಿಲ್ಲ – ಹಲಸಿನದೇ ತರಹ.

ಎರ್ನಾಕುಲಂ ಜಿಲ್ಲೆಯ ವಾಳಕ್ಕುಳಂನಲ್ಲಿ ಕೇರಳ ಕೃಷಿ ವಿ.ವಿಯ ಅನಾನಸು ಸಂಶೋಧನಾ ಕೇಂದ್ರವಿದೆ. ಏಕ ವಿಜ್ಞಾನಿಯ ಸಂಶೋಧನಾ ಕೇಂದ್ರವಿದು. ಈ ಕೇಂದ್ರ ಪ್ಯಾಶನ್ ಫ್ರೂಟ್ ಬಗ್ಗೆ ಅಧ್ಯಯನ– ಪ್ರಚಾರ ಮಾಡುವ ಕೆಲಸದಲ್ಲಿ ನಿರತವಾಗಿದೆ. ಈಚೆಗೆ ಮೂರ್ನಾಲ್ಕು ವರ್ಷಗಳಿಂದ ಕೇರಳದ ಮಾಧ್ಯಮಗಳಲ್ಲಿ ಪ್ಯಾಶನ್ ಫ್ರೂಟ್ ಕಾಣಿಸತೊಡಗಿದೆ. ಜನರಲ್ಲಿ ಆಸಕ್ತಿ ಹುಟ್ಟತೊಡಗಿದೆ. ಮಧುಮೇಹಿಗಳಿಗೆ ಈ ಹಣ್ಣು ಉತ್ತಮ ಎನ್ನುವ ನಂಬಿಕೆ ಇದೆ.

ಕೇರಳದಲ್ಲಿ ತಾಜಾ ಪ್ಯಾಶನ್ ಫ್ರೂಟ್ ಮೊತ್ತ ಮೊದಲಿಗೆ ಮಾರುಕಟ್ಟೆ ಏರಿದ್ದು ವಾಳಕ್ಕುಳಂನಲ್ಲಿ ದಶಕದ ಹಿಂದೆ. ಕಳೆದ ವರ್ಷ ಡೆಂಗಿ ಜ್ವರ ವ್ಯಾಪಕವಾಗಿ ಬಂತಲ್ಲಾ. ಆಗ ಅದು ಹೇಗೋ ಈ ಜ್ವರ ಬಾಧಿತರಿಗೆ ಪ್ಯಾಶನ್ ಫ್ರೂಟ್ ಅತಿ ಒಳ್ಳೆ ಆಹಾರ, ಅದರಿಂದಾಗಿ ಇಳಿದುಹೋದ ಪ್ಲೇಟ್‌ಲೆಟ್ ಕೌಂಟ್ ಹೆಚ್ಚುತ್ತದೆ ಎಂಬ ಸುದ್ದಿ ಹರಡಿತು. ಜನ ಬಳಸಲೂ ತೊಡಗಿದರು. ವಯನಾಡಿನ ಅಂಬಲವಯಲಿನಲ್ಲಿ ಆ ಕಾಲದಲ್ಲಿ ಮೊತ್ತ ಮೊದಲು ಕಾಣಿಸಿಕೊಂಡ ಪ್ಯಾಶನ್ ಫ್ರೂಟ್ ಈಗ ಸೀಸನ್ ಪೂರ್ತಿ ಸಿಗುತ್ತಿದೆ. ‘ಹೆಚ್ಚಿನ ಪೇಟೆಗಳಲ್ಲೂ ಆಸ್ಪತ್ರೆಗೆ ಹತ್ತಿರವಿರುವ ಹಣ್ಣಿನಂಗಡಿಗಳಲ್ಲೇ ಇದು ಹೆಚ್ಚಾಗಿ ಕಾಣಿಸತೊಡಗಿದೆ’ ಎನ್ನುತ್ತಾರೆ ಕೇಂದ್ರದ ಡಾ. ಜೋಯ್.

ಮೀರಾ ಬೆನ್ ಕತೆಗೆ ಮರಳೋಣ. ಹಿಂದಿನಿಂದಲೇ ಇದ್ದ ಬಳ್ಳಿಯಿಂದಾಗಿ ಕಾಂಪೌಂಡು ತುಂಬಾ ಇದರ ಗಿಡ ಬೆಳೆದಿತ್ತು. ಮೀರಾ ಚಿಕ್ಕಬಳ್ಳಿಗಳನ್ನು ಮರಗಳಿಗೆ ಹಬ್ಬಿಸಿಬಿಟ್ಟರು. ಅವೆಲ್ಲಾ ಬೆಳೆದಾಗ ಹಣ್ಣೋ ಹಣ್ಣು. ಪ್ಯಾಶನ್ ಫ್ರೂಟ್‌ನಲ್ಲೊಂದು ವಿಶೇಷವಿದೆ. ಮಾಗಿದ ಕೂಡಲೇ ತೊಟ್ಟು ಕಳಚಿ ಬಿದ್ದುಬಿಡುತ್ತದೆ. ಇವರದು ಸ್ಥಳೀಯ ಹಳದಿ ಬಣ್ಣದ ತಳಿ. ಬಿದ್ದ ಹಣ್ಣನ್ನು ಮುಂಜಾನೆ ಬುಟ್ಟಿಬುಟ್ಟಿ ಹೆಕ್ಕುವಾಗ ಮೀರಾ ಅವರಿಗೊಂದು ಹೊಸ ಐಡಿಯಾ! ಏಕೆ ಸಮೀಪದ ಹಣ್ಣಿನ ಅಂಗಡಿಯಲ್ಲಿ ಕೊಳ್ಳುತ್ತೀರೇನು ಎಂದು ಕೇಳಬಾರದು?

ಹಣ್ಣು ಹಿಡಕೊಂಡೇ ನೆರೆಯ ಅಂಗಡಿಗೆ ಹೋದರು. ‘ನಾನೂ ಈ ಬಗ್ಗೆ ಕೇಳಿದ್ದೇನೆ. ಈವರೆಗೆ ಮಾರಿಲ್ಲ. ನೋಡೋಣ. ಇಟ್ಟುಹೋಗಿ’ ಎಂದರವರು. ಮರು ದಿನವೇ ಫೋನ್. ‘ಇನ್ನೂ ಇದ್ದರೆ ತನ್ನಿ’ ವಾರದೊಳಗೆ ಈ ಮಾತು ‘ಇದ್ದಷ್ಟು ತನ್ನಿ’ ಎಂದು ಬದಲಾಯಿತು.

ಇವರದು ವಿಶೇಷ ಸಾಕಣೆಯ ಹಣ್ಣಲ್ಲ. ಕಿಲೋ ಆಗಬೇಕಾದರೆ 10–12 ಬೇಕು. ಅಂಗಡಿಯವರು ಮೊದಲ ದಿನ ಕಿಲೋಗೆ ಇಪ್ಪತ್ತು ಕೊಟ್ಟರು. ನಂತರ 30ಕ್ಕೆ ಏರಿಸಿದರು. ಈಗ ಒಂದೆರಡು ದಿನ ಎಡೆ ಬಿಟ್ಟು ಬುಟ್ಟಿ ತುಂಬಾ ಒಯ್ದು ಮಾರುತ್ತಾರೆ. ಮೊನ್ನೆಮೊನ್ನೆವರೆಗೂ ಒಂದೊಂದು ಭೇಟಿಯಲ್ಲೂ ನೂರು ರೂಪಾಯಿ ಸಿಗುತ್ತಿತ್ತು. ‘ಸರಿಯಾದ ಲೆಕ್ಕ ಇಟ್ಟಿಲ್ಲ. ಈಗ ಬೆಳೆ ಕಮ್ಮಿಯಾಯಿತು. ಜೂನಿನಿಂದ ಈವರೆಗೆ ಏನಿದ್ದರೂ 5000 ರೂಪಾಯಿ ಬಂದಿರಬಹುದು’ ಎನ್ನುತ್ತಾರೆ.

ವಾಸ್ತವವೆಂದರೆ ಇವರು ಹೆಕ್ಕುವುದಕ್ಕಿಂತಲೂ ಹೆಚ್ಚು ಹಣ್ಣು ಅಳಿಲು-ಗಿಳಿಗಳಿಗೆ ಸಮರ್ಪಣೆಯಾಗುತ್ತದೆ. ಅಂಗಡಿಯವರ ಮಾರು ಬೆಲೆ ಎಷ್ಟೆಂದು ಇವರಿಗೆ ಗೊತ್ತಿಲ್ಲ.

‘ಇರಲಿ. ಬೇಸರವಿಲ್ಲ. ಕೊಟ್ಟ ಕೂಡಲೇ ನಗದು ಪಾವತಿಸುತ್ತಾರೆ. ಅಳಿಲು ಮತ್ತು ನಾವು ಬೆಳೆದ ಹಣ್ಣನ್ನು ಹಂಚಿ ಕೊಳ್ಳುತ್ತೇವೆ. ನಿವೃತ್ತಿಯ ಬದುಕು ನಮ್ಮದು. ಇದೊಂದಿಷ್ಟು ಅನಾಯಾಸವಾಗಿ ಬರುವ ಪಾಕೆಟ್ ಮನಿ’ ಮೀರಾ ಬೆನ್ ಮತ್ತೆ ಖುಷಿಪಡುತ್ತಾರೆ. ‘ಒಂದು ವೇಳೆ ಮರ ಏರಿಯೇ ಕೊಯ್ಯಬೇಕಿದ್ದರೆ ನಾವು ಕೊಯ್ಯುವ ಮಾತು ಎಲ್ಲಿತ್ತು?’ ಎಂದು ಪ್ರಶ್ನಿಸುತ್ತಾರೆ.

ಕೇರಳದ ಉಳಿದೆಡೆ ಇದೇ ಹಣ್ಣಿಗೆ ಕಿಲೋಗೆ 40 ರಿಂದ 80 ರೂಪಾಯಿ ಸಿಗುತ್ತಿದೆ. ಗ್ರಾಹಕರ ಕಣ್ಣೆದುರೇ ತಾಜಾ ಶರಬತ್ತು ಮಾಡಿ ಲೋಟವೊಂದಕ್ಕೆ 30ರಿಂದ 40 ರೂಪಾಯಿಗೆ ಮಾರುತ್ತಾರೆ.

ಏಕಬೆಳೆಯಾಗಿ ಬೆಳೆಯುವಾಗ ಬಾಧಿಸುವ ಫ್ಯುಸೇರಿಯಂ ಶಿಲೀಂಧ್ರ ರೋಗ ಬಿಟ್ಟರೆ ಬೇರೆ ಗಂಭೀರ ಕೀಟರೋಗ ಬಾಧೆಯಿಲ್ಲ. ಮನೆ ಅಂಗಳದಲ್ಲಿ ಎರಡು ಮೂರು ಬಳ್ಳಿ ಬೆಳೆಸಲು ಯಾವ ಅಡ್ಡಿಯೂ ಇಲ್ಲ. ಚಪ್ಪರ ಹಾಕಿಕೊಟ್ಟರೆ ಬೆಳೆ ಜಾಸ್ತಿ. ಸ್ವಲ್ಪ ಗೊಬ್ಬರ ಕೊಟ್ಟರೆ ಇನ್ನೂ ಜಾಸ್ತಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.