ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರೆಗಾಂವ್ ಸಂಕಥನ ಹಾಗೂ ಸಾಮಾಜಿಕ ಬದ್ಧತೆ

Last Updated 8 ಜನವರಿ 2018, 19:30 IST
ಅಕ್ಷರ ಗಾತ್ರ

ಮಹಾರಾಷ್ಟ್ರ ಉರಿಯುತ್ತಿದೆ. ಇದು, ವರ್ತಮಾನವು ಚಾತುರ್ವರ್ಣವೆಂಬ ಸಾವಿರಾರು ವರ್ಷಗಳ ಒಳಕಿಂಡಿಯಲ್ಲಿ ಗಾಳಿಯಾಡಿಸಿ ಏಳಿಸುತ್ತಿರುವ ಉರಿ. ಮೊನ್ನೆ ಚಿಕ್ಕಮಗಳೂರಿನಲ್ಲಿ ಗುಜರಾತಿನ ದಲಿತ ಯುವ ಶಾಸಕ ಜಿಗ್ನೇಶ್ ಮೆವಾನಿ ಹೇಳಿದ ಮಾತನ್ನು ಗಮನಿಸಬೇಕು. ‘ಮುಖ್ಯಮಂತ್ರಿ, ಪ್ರಧಾನಮಂತ್ರಿ ಸೇರಿ ಕೆಲವು ಮುಖಂಡರು ಅದೆಷ್ಟೇ ಶಂಖ ಊದಿದರೂ ನಾನು ಇಪ್ಪತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಲು ಈ ಚುನಾವಣೆಯಲ್ಲಿ ದಲಿತರು ಹಾಗೂ ಮುಸ್ಲಿಮರು ಒಂದಾಗಿದ್ದೇ ಕಾರಣ’ ಎನ್ನುತ್ತಾ, ಅಂದೊಮ್ಮೆ ಗುಜರಾತ್ ಹತ್ಯಾಕಾಂಡದಲ್ಲಿ ಮುಸ್ಲಿಮರ ವಿರುದ್ಧ ದಲಿತರು ಮತ್ತು ಹಿಂದುಳಿದವರು ನಿಂತಿದ್ದ ಬಗೆಯನ್ನು ಸಹಾ ವಿವರಿಸಿದರು. ಅಂದರೆ ದೇಶದಲ್ಲಿ ಆದ ತಪ್ಪನ್ನು ತಿದ್ದಿಕೊಂಡ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ಒಗ್ಗೂಡುವ ರೀತಿ ಇದಾಗಿದೆಯೇ?

ಈ ದೇಶದ ಸಾಂಸ್ಕೃತಿಕ ಚರಿತ್ರೆಯ ಆಳ ಅರಿಯುವುದಿರಲಿ, ಈಸ್ಟ್ ಇಂಡಿಯಾ ಕಂಪನಿಯು ವ್ಯಾಪಾರದ ಗಜಕಡ್ಡಿ ಹಿಡಿದು ದೇಶವನ್ನು ಅಳತೆ ಮಾಡುವ ಕಾಲಕ್ಕೆ ಇದನ್ನು ಹಿಡಿದು ನೋಡಿದರೆ ಇಂದಿನ ಮಹಾರಾಷ್ಟ್ರದ ಉರಿಯ ಹಿಂದೆ ಯಾವ ಚರಿತ್ರೆ ಇದೆ ಎಂಬುದನ್ನು ಅರಿಯಬಹುದು.

1757ರ ಪ್ಲಾಸಿ ಕದನದಲ್ಲಿ ಬಂಗಾಳದಲ್ಲಿ ಸಿರಾಜುದ್ದೀನನ್ನು ಸೋಲಿಸಿ ಜಾಗ ಮಾಡಿಕೊಂಡ ಬ್ರಿಟಿಷರಿಗೆ ಈ ದೇಶದ ಶಕ್ತಿಯನ್ನು ಹೇಗೆ ಯುಕ್ತಿಯಾಗಿ ಬಳಸಿಕೊಳ್ಳಬಹುದೆಂಬುದು ಅರಿವಿಗೆ ಬಂತು. ಹಾಗಾಗಿ ಚಿತ್ಪಾವನ ಬ್ರಾಹ್ಮಣ ದೊರೆಗಳಾದ ಪೇಶ್ವೆಗಳನ್ನು ಸೋಲಿಸಲು ಸ್ಥಳೀಯ ಮಹಾರ್ ಜನಕ್ಕೆ ಸೈನಿಕರ ಹುದ್ದೆ ನೀಡಿ ಒಗ್ಗೂಡಿಸಿ ಮರಾಠಾ ಸಾಮ್ರಾಜ್ಯ ಹಿಡಿಯುವುದರೊಡನೆ ಬ್ರಿಟಿಷ್ ಸಾಮಾಜ್ಯಕ್ಕೆ 1818ರಲ್ಲಿ ಅಡಿಗಲ್ಲು ಹಾಕಿದರು. ಅದು ಕೋರೆಗಾಂವ್ ಕಾಳಗ ಎಂದೇ ಪ್ರಸಿದ್ಧಿಯಾಯಿತು.

ಅಂಬೇಡ್ಕರ್ ಹೇಳಿರುವಂತೆ ‘ಇಂಡಿಯಾವನ್ನು ಪರಕೀಯರು ಸೋಲಿಸಿ ತಮ್ಮ ಅಧೀನಕ್ಕೆ ತೆಗೆದುಕೊಳ್ಳಲಿಲ್ಲ. ಇಂಡಿಯಾ ತನ್ನನ್ನು ತಾನೇ ಸೋಲಿಸಿಕೊಂಡಿತು, ಅಷ್ಟೇ’. ಅದೂ ಅಲ್ಲದೆ ಅಂದಿನ ಯುರೋಪಿನ ವಾಟರ್ ಲೂ   ಮುಂತಾದ ಕಾಳಗಗಳು ಈ ದೇಶಕ್ಕೆ ಕಾಲಿರಿಸಿದ್ದ ಯುರೋಪಿಯನ್ನರಿಗೆ ಸಹಾಯ ಒದಗಿಸುವ ಸ್ಥಿತಿಯಲ್ಲಿರಲಿಲ್ಲ. ಮುಂದೆ 1857ರ ಸಿಪಾಯಿ ದಂಗೆಯ ನಂತರ ಮಹಾರ್ ರೆಜಿಮೆಂಟ್ ಸೈನ್ಯ ಪದ್ಧತಿಯನ್ನು ಅತ್ತ ಸರಿಸಿ, ಸಿಖ್‌- ಡೋಗ್ರಾ- ಗೂರ್ಖಾ, ರಜಪೂತ ಇತ್ಯಾದಿ ಸವರ್ಣೀಯರ ತುಕಡಿಗಳನ್ನು ಜೋಡಿಸಿಕೊಂಡ ಬ್ರಿಟಿಷರ ನೀತಿಯು ಈ ದೇಶದ ವರ್ಣ ಪದ್ಧತಿಯನ್ನು ಪೋಷಿಸುತ್ತಾ, ರಾಜಕೀಯ ಲಾಭಕ್ಕಾಗಿ ಅಬಲರನ್ನು ಸೈನ್ಯ ಹಾಗೂ ಸರ್ಕಾರಿ ನೌಕರಿಯಿಂದ ದೂರ ಇಡುತ್ತಾ ಬಂತು.

ಇದಲ್ಲದೆ ಒಡೆದಾಳಲು ಬಡಿಗೆ, ದೊಣ್ಣೆ ನೀಡಿ ಹಿಂದೂ ಮಹಾಸಭಾ ಹಾಗೂ ಮುಸ್ಲಿಂ ಲೀಗ್ ಸಾರಥಿಗಳಿಗೆ ಬ್ರಿಟಿಷರು ಮಣೆ ಹಾಕಿದರು. ಇದರಲ್ಲಿ ಒಂದು, ಮಹಾರಾಷ್ಟ್ರದಲ್ಲಿ ಬುಡ ಭದ್ರ ಮಾಡಿಕೊಂಡರೆ, ಮತ್ತೊಂದು ತನ್ನ ಪಾಲು ತೆಗೆದುಕೊಂಡು ನೆರೆ ದೇಶವಾಯಿತು. ಈ ಮೇಲಿನ ಚರಿತ್ರೆಯ ಪುಟಗಳನ್ನು ಅಂಬೇಡ್ಕರ್ ಹಾಗೂ ಗಾಂಧೀಜಿ ಬಲ್ಲವರಾಗಿದ್ದರು. ಆದರೆ ಒಬ್ಬರು ದಲಿತ ಬೆಂಕಿಯಿಂದ ಬಂದವರಾಗಿದ್ದರು. ಮತ್ತೊಬ್ಬರು ಉರಿಯುತ್ತಿರುವ ಬೆಂಕಿಯನ್ನು ನೋಡಿ ಮರುಗುವವರಾಗಿದ್ದರು. ಈ ಎರಡೂ ಚೇತನಗಳು ಸಹಾ ಏಕಉದ್ದೇಶಕ್ಕಾಗಿಯೇ ಪರಾಧೀನ ಭಾರತದಲ್ಲಿ ಆಳುವ ಹಾಗೂ ವಿರೋಧ ಪಕ್ಷಗಳ ನಾಯಕರಂತೆ ಅಹಿಂಸಾ ಸಮರ ಮಾಡುತ್ತಿದ್ದರು.

ಲೋಹಿಯಾ ಅವರು ಈ ಇಬ್ಬರಿಗೂ ಒಲಿದಿದ್ದವರು. 1955ರ ಡಿ. 10ರಂದು ಅಂಬೇಡ್ಕರ್ ಅವರಿಗೆ ನೇರವಾಗಿ ಪತ್ರ ಬರೆದು ‘ಕನಿಕರವೂ ಕ್ರೋಧವೂ ಜೊತೆಗೂಡಿರಬೇಕು. ನೀವು ಪರಿಶಿಷ್ಟ ಜಾತಿಗಳ ನಾಯಕರಾಗಿರದೆ ಇಡೀ ಭಾರತೀಯರ ನಾಯಕರಾಗಿರಬೇಕೆಂದು ಈಗಲೂ ತುಂಬಾ ಇಚ್ಛಿಸುತ್ತೇನೆ’ ಎಂದು ಹೇಳಿದ್ದರು. ಅಂಬೇಡ್ಕರ್ ನಿಧನಾನಂತರ ಲೋಹಿಯಾ ಅವರು ಮಧು ಲಿಮಯೆ ಅವರಿಗೆ ಬರೆದ ಪತ್ರದಲ್ಲಿ ‘ಕಹಿತನವಿಲ್ಲದ ಸ್ವಾತಂತ್ರ್ಯವನ್ನು ಹೊಂದಿದ, ಹರಿಜನರ ನಾಯಕರಷ್ಟೆ ಎನಿಸದೆ ಅಖಿಲ ಭಾರತೀಯ ನಾಯಕರೆಂದು ಪರಿಗಣಿಸಬಹುದಾದ ಡಾ. ಅಂಬೇಡ್ಕರ್ ಅವರನ್ನು ಗೌರವ ಹಾಗೂ ಅನುಕರಣೆಗಳ ಸಂಕೇತವೆಂದೇ ಪರಿಭಾವಿಸಬೇಕು. ಅದನ್ನು ನಾನು ಬಯಸುತ್ತೇನೆ’ ಎಂದಿದ್ದರು.

ಅಂಬೇಡ್ಕರ್ ಅವರಿಗೆ ಆಗ ಅವಕಾಶಗಳು ಸಿಗದೇ ಇರಲು ಚಾತುರ್ವರ್ಣದ ಸಮೂಹ ಅವರಿಗೆ ಅಡ್ಡಿಯಾದದ್ದೇ ಕಾರಣ. ಈಗ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದಿವೆ. ಆದರೂ ಪರಿಸ್ಥಿತಿ ಬದಲಾದಂತೆ ಕಾಣುತ್ತಿಲ್ಲ. ‘ಸ್ವರಾಜ್ಯವು ಅಸ್ಪೃಶ್ಯರನ್ನು ಬಲಹೀನಗೊಳಿಸಿ, ಹಿಂದೂಗಳಿಗೆ ಹೆಚ್ಚಿನ ಆರ್ಥಿಕ ಶಕ್ತಿ ಒದಗಿಸುವಲ್ಲಿ ಸಹಕಾರಿಯಾಗುತ್ತದೆ’ ಎಂಬ ಅಂಬೇಡ್ಕರ್‌ ಅವರ ಆಗಿನ ಆತಂಕದ ಮಾತು ಈಗಲೂ ನಿಜವಾಗುತ್ತಿದೆ.

ಎರಡು ಶತಮಾನಗಳ ಕೋರೆಗಾಂವ್ ನೆನಪಿನ ಸಡಗರ ಮಹಾರಾಷ್ಟ್ರದಲ್ಲಿ ಈಗ ಯಾಕೆ ಬಂತು, ಯಾಕೆ ಉರಿಗೆ ಪ್ರಚೋದನೆ ನೀಡಿತು ಎಂಬುದಕ್ಕೆ ಉತ್ತರವನ್ನು ಕಂಡುಕೊಳ್ಳಬೇಕೆ ವಿನಾ ಅನ್ಯಥಾ ಭಾವಿಸುವುದರಲ್ಲಿ ಅರ್ಥವಿಲ್ಲ. ದಲಿತ ಸಂಕಥನಗಳನ್ನು ಅರ್ಥ ಮಾಡಿಕೊಳ್ಳುವಾಗ ಈ ದೇಶದಲ್ಲಿ ಆಗಿಹೋದ ಚರಿತ್ರೆಯನ್ನು ತಿದ್ದಿಕೊಳ್ಳಬೇಕಾದುದು ಸಾಮಾಜಿಕ ಬದ್ಧತೆ. ಒಂದು ದೇಶದ ಬಲವೇ ಜನಸಮೂಹ. ಜನರನ್ನು ವಿಭಜಿಸಿದರೆ ದೇಶ ಎಂದೂ ಬಲಿಷ್ಠ ಆಗುವುದಿಲ್ಲ. ರಾಷ್ಟ್ರೀಯತೆ ಎಂಬ ಹುಸಿ ತತ್ವಕ್ಕೂ ದೇಶವನ್ನು ಶಕ್ತಿಶಾಲಿ ಮಾಡುವ ಸಾಮರ್ಥ್ಯ ಇಲ್ಲ.

ಅಂದು ಕೋರೆಗಾಂವ್ ಕಾಳಗ ಮೂಲಕ ದೇಶವನ್ನು ಒಮ್ಮೆ ಪರಂಗಿಯವರಿಗೆ ಒಪ್ಪಿಸಿ ಅಹಿಂಸಾ ಸಮರದಲ್ಲಿ ಪುನಃ ಹಿಂಪಡೆಯಲಾಗಿದೆ. ಅಸ್ಪೃಶ್ಯತೆ ಎಂಬುದು ಈಗಲೂ ವಿಮೋಚನೆಯಾಗದೆ ಉಳಿದಿದೆ ಎಂದರೆ ಅದು ಸಮಾಜಕ್ಕೆ, ದೇಶಕ್ಕೆ ಕೇಡು. ಲೋಹಿಯಾ ಸೂಚಿಸಿರುವಂತೆ ಅಖಿಲ ಭಾರತೀಯ ನಾಯಕರೆಂದು ಪರಿಗಣಿಸುವ ದಲಿತ ನಾಯಕರನ್ನು ಗೌರವಿಸುವುದು ಪ್ರಜಾಪ್ರಭುತ್ವದ ಕರ್ತವ್ಯವಾಗಿದೆ. ಈ ದೇಶಕ್ಕೆ ಅಹಿಂಸೆ ಎಂಬುದೊಂದು ತತ್ವ. ಅದು ಬುದ್ಧನ ತತ್ವ. ಗಾಂಧೀಜಿ ಆರಿಸಿಕೊಂಡ ಜಗತ್ ತತ್ವ. ಅಂಬೇಡ್ಕರ್ ಎಷ್ಟೇ ಉರಿಯನ್ನು ಹೊಟ್ಟೆ ಒಳಗೆ ಅಡಗಿಸಿಕೊಂಡಿದ್ದರೂ ಹಿಂಸೆಯ ಮಾರ್ಗವನ್ನು ಬೋಧಿಸಲಿಲ್ಲ. ಅವರು ಅನುಸರಿಸಿದ್ದು ಬುದ್ಧನ ಮಾರ್ಗ.

ಕೋರೆಗಾಂವ್ ಕಾಳಗದ ನೆನಪು ಒಂದು ಅಸ್ತ್ರ. ದೇಶದ ಒಳಗಿನ ಪಿಡುಗನ್ನು ಎದುರಿಸಬಲ್ಲೆವು ಎಂಬುದರ ಸಂಕೇತ. ಅದೇ ಹೊತ್ತಿನಲ್ಲಿ ವಿದೇಶಿಯರ ಹುನ್ನಾರಕ್ಕೆ ಬಲಿಯಾದ ಸಂಕೇತವೂ ಹೌದು. ಆಧುನಿಕ ಶಿಕ್ಷಣ ಮತ್ತು ಆಧುನಿಕ ಬದುಕಿನ ರೀತಿ–ನೀತಿಗಳೆಲ್ಲವೂ ಚಾತುರ್ವರ್ಣದ ರೀತಿ–ನೀತಿಗಳಿಗೆ, ಕಂದಾಚಾರಗಳಿಗೆ ಬಲಿಯಾಗುತ್ತಿರುವುದು ಸಹಾ ಕೇಡು ಎಂಬುದನ್ನು ದಲಿತರಾದಿಯಾಗಿ ಎಲ್ಲರೂ ಅರಿತು ಬಾಳಬೇಕು. ‘ಮಾನವ ಜಾತಿ ತಾನೊಂದೆ ವಲಂ’ ಎಂಬ ವಿಶ್ವಮಾನವ ನಡೆ ಮಾತ್ರ ಭಾರತವನ್ನು ರಕ್ಷಿಸಬಲ್ಲದು. ಅಂತಹ ನಡೆಯ ಯುವ ಸಮೂಹವನ್ನು ಸೃಷ್ಟಿಸುವತ್ತ ದೇಶವು ಜಾತಿ– ಮತ ಮೀರಿ ಆಲೋಚಿಸಲೇಬೇಕಿದೆ. ಅದೇ ನಿಜವಾದ ಪ್ರಜಾಪ್ರಭುತ್ವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT