ಅನುಕೂಲಸಿಂಧು ನಡೆ

7

ಅನುಕೂಲಸಿಂಧು ನಡೆ

Published:
Updated:

‘ಸಂವಿಧಾನ ಬದಲಾವಣೆ, ಜಾತ್ಯತೀತತೆ’ ಮುಂತಾದ ವಿಷಯಗಳ ಕುರಿತು ಚರ್ಚೆಗಳು ಬಿರುಸು ಪಡೆದಿವೆ. ಸ್ವಾತಂತ್ರ್ಯಪೂರ್ವದಲ್ಲಿ ನಮ್ಮ ದೇಶದಲ್ಲಿ ಸಂವಿಧಾನವೂ ಇರಲಿಲ್ಲ. ಜಾತ್ಯತೀತತೆ, ಸಮಾಜವಾದ ಎಂಬ ತತ್ವಗಳೂ ಇರಲಿಲ್ಲ. ಆಳರಸರು ತಮಗೆ ಬೇಕಾದಂತೆ ಆಡಳಿತ ನಡೆಸುತ್ತಿದ್ದರು. ಸ್ವಾತಂತ್ರ್ಯಾನಂತರದಲ್ಲಿ ಡಾ. ಅಂಬೇಡ್ಕರ್ ಪ್ರಣೀತ ಸಂವಿಧಾನದಲ್ಲಿ ಕೂಡ ಈ ಪದಗಳು ಇರಲಿಲ್ಲ. 1975–76ರಲ್ಲಿ ತುರ್ತು ಪರಿಸ್ಥಿತಿ ಹೇರಿ ಜನರ ಸ್ವಾತಂತ್ರ್ಯವನ್ನೇ ಕಸಿದ ಇಂದಿರಾ ಗಾಂಧಿ ತಮ್ಮ ವರ್ಚಸ್ಸು ಉಳಿಸಿಕೊಳ್ಳಲು 42ನೇ ತಿದ್ದುಪಡಿ ಮೂಲಕ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಎಂಬ ಪದಗಳನ್ನು ಸಂವಿಧಾನದ ಮುನ್ನುಡಿಯಲ್ಲಿ ತುರುಕಿದರು. ಅಂದಿನ ಭಯಭೀತ ವಾತಾವರಣದಲ್ಲಿ ಕಾಂಗ್ರೆಸ್ ಸದಸ್ಯರು ಇದಕ್ಕೆ ಒಪ್ಪಿಗೆಯ ಮುದ್ರೆ ಒತ್ತದೆ ಬೇರೆ ದಾರಿಯೇ ಇರಲಿಲ್ಲ.

ಪಂಡಿತ್ ನೆಹರೂ ಮತ್ತು ಇಂದಿರಾ ಅವರ ಸಮಾಜವಾದಿ ನೀತಿಗಳಿಂದ ದೇಶ ದಿವಾಳಿ ಎದ್ದಾಗ 1990ರ ದಶಕದಲ್ಲಿ ಪಿ.ವಿ. ನರಸಿಂಹರಾಯರು ಸಮಾಜವಾದವನ್ನು ಬದಿಗೆ ತಳ್ಳಿ ಆರ್ಥಿಕ ಉದಾರೀಕರಣಕ್ಕೆ ದಾರಿ ಮಾಡಿ ದೇಶದ ಅರ್ಥವ್ಯವಸ್ಥೆಯನ್ನು ಕಾಪಾಡಿದರು. ಇವತ್ತು ’ಸಮಾಜವಾದಿ’ ಎಂಬ ಪದ ನೆಪಮಾತ್ರಕ್ಕೆ ಸಂವಿಧಾನದಲ್ಲಿದೆ. ಅದನ್ನು ಕಿತ್ತು ಹಾಕಿದರೆ ನಷ್ಟವೇನು?

ಇನ್ನು ಜಾತ್ಯತೀತತೆ ಎಂಬ ತತ್ವ ಸರ್ವಸಮ್ಮತವಾದದ್ದೇನೂ ಅಲ್ಲ. ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ‘ಜಾತ್ಯತೀತತೆ’ ಇಲ್ಲ ಮತ್ತು ಅಂತಹ ರಾಷ್ಟ್ರಗಳಲ್ಲಿ ಸಿಗುವ ತೈಲಕ್ಕಾಗಿ ಅವುಗಳೊಂದಿಗೆ ಸ್ನೇಹ ಕಾಪಾಡಿಕೊಳ್ಳಲು ಮತ್ತು ಭಾರತದಲ್ಲಿ ಮುಸ್ಲಿಂ ಮತ ಬ್ಯಾಂಕ್ ಉಳಿಸಿಕೊಳ್ಳಲು ನಮ್ಮ ಸರ್ಕಾರ ತಿಪ್ಪರಲಾಗ ಹಾಕಿರುವುದನ್ನು ನೋಡಿದ್ದೇವೆ. ರಾಹುಲ್ ಗಾಂಧಿಯವರು ಚುನಾವಣೆ ಸಮಯದಲ್ಲಿ ದೇವಾಲಯ ಪ್ರದಕ್ಷಿಣೆ ಶುರು ಹಚ್ಚಿರುವುದು ನೋಡಿದರೆ, ಜಾತ್ಯತೀತ ತತ್ವ ಕೇವಲ ಅನುಕೂಲಸಿಂಧು ಎಂಬುದು ಸ್ಪಷ್ಟವಾಗುತ್ತದೆ.

ಧರ್ಮ ಗ್ರಂಥಗಳಲ್ಲಿ ಯಾವುದೇ ಬದಲಾವಣೆ ಕೂಡದು ಎಂದು ಪುರೋಹಿತಶಾಹಿಗಳು ವಾದಿಸುವಂತೆ ಸಂವಿಧಾನದಲ್ಲಿ ಯಾವುದೇ ಬದಲಾವಣೆ ಬೇಡ ಎಂದು ಕೆಲವರು ವಾದಿಸುತ್ತಿರುವುದು ಜನತಂತ್ರ ವಿರೋಧಿ ಕ್ರಮವಾಗುತ್ತದೆ. ಮೀಸಲಾತಿ ಕೇವಲ ಹತ್ತು ವರ್ಷಗಳಿಗೆ ಸೀಮಿತವಾಗಲಿ ಎಂದು ಸಂವಿಧಾನದಲ್ಲಿ ಅಂಬೇಡ್ಕರ್ ನಮೂದಿಸಿದ್ದರು. ಆದರೆ ಆನಂತರ ಪದೇ ಪದೇ ತಿದ್ದುಪಡಿ ಮಾಡಿ ಎಪ್ಪತ್ತು ವರ್ಷಗಳ ನಂತರವೂ ಅದನ್ನು ಮುಂದುವರೆಸುತ್ತಿದ್ದಾರಲ್ಲಾ, ಇದು ಅಂಬೇಡ್ಕರ್‌ಗೆ ಬಗೆದ ಅಪಚಾರವಲ್ಲವೇ? ಸಂವಿಧಾನವನ್ನೇ ಇಡಿಯಾಗಿ ಬುಡಮೇಲು ಮಾಡಿ, ಬಂದೂಕಿನ ಆಡಳಿತ ಹೇರಬೇಕೆಂದು ಹೋರಾಡುತ್ತಿರುವ ನಕ್ಸಲೀಯರನ್ನು ಬೆಂಬಲಿಸುವ ಎಡಪಂಥೀಯ ಬುದ್ಧಿಜೀವಿಗಳು, ಸಂವಿಧಾನ ಬದಲಾವಣೆಯನ್ನು ವಿರೋಧಿಸುವುದು ಏಕೋ?

ಜನತಂತ್ರದಲ್ಲಿ ಚರ್ಚೆ ನಡೆಯಬೇಕು. ಬಾಯಿ ಮುಚ್ಚಿಸುವುದರಿಂದ, ನಾಲಗೆ ಕತ್ತರಿಸುವುದರಿಂದ, ಕ್ಷಮಾಪಣೆ ಕೇಳಿಸುವುದರಿಂದ ಜನತಂತ್ರ ಬೆಳೆಯದು ಅಥವಾ ಈ ದೇಶದ ಸಂವಿಧಾನದಲ್ಲಿ ಎಡಪಂಥೀಯರಿಗೆ ಮಾತ್ರ ವಾಕ್ ಸ್ವಾತಂತ್ರ್ಯ ಕೊಡಲಾಗಿದೆಯೇ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry